ಸನಾತನ ಕುರಿತ ಉದಯನಿಧಿ ಸ್ಟಾಲಿನ್ ಹೇಳಿಕೆ ಟಿಎಮ್‌ಸಿ ಮತ್ತು ಡಿಎಂಕೆ ಪಕ್ಷಗಳ ಮನಸ್ಥಿತಿಗೆ ಹಿಡಿದ ಕನ್ನಡಿ: ಬಿಜೆಪಿ

ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಇದನ್ನು “ಸನಾತನ ದ್ವೇಷ” ಮತ್ತು ವೋಟ್ ಬ್ಯಾಂಕ್ ರಾಜಕಾರಣ ಎಂದು ಬಿಜೆಪಿ ಮಂಗಳವಾರ ತೀವ್ರವಾಗಿ ಖಂಡಿಸಿದೆ.

ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ತಮ್ಮ ಚೊಚ್ಚಲ ಭಾಷಣ ಮಾಡಿದ ಉದಯನಿಧಿ, “ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ಖಂಡಿತವಾಗಿಯೂ ನಿರ್ಮೂಲನೆ ಮಾಡಬೇಕು” ಎಂದು ಪುನರುಚ್ಚರಿಸಿದರು. ಇದು 2023ರ ಸೆಪ್ಟೆಂಬರ್‌ನಲ್ಲಿ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯ ಮುಂದುವರಿದ ಭಾಗವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದರೂ ಉದಯನಿಧಿ ತಮಗೆ ರೂಢಿಯಿರುವ ಸನಾತನ ಧರ್ಮದ ಅವಹೇಳನ ಮತ್ತು ದ್ವೇಷ ಹರಡುವ ಕೆಲಸಕ್ಕೆ ಮರಳಿದ್ದಾರೆ ಎಂದು ಕಿಡಿಕಾರಿದ್ದಾರೆ.

“ಸನಾತನವನ್ನು ನಾಶಪಡಿಸಬೇಕು ಎಂದು ಅವರು ಈಗ ವಿಧಾನಸಭೆಯಲ್ಲೇ ಹೇಳಿದ್ದಾರೆ. ಕಳೆದ ಬಾರಿ ಅವರು ಇಂತಹದ್ದೇ ಹೇಳಿಕೆ ನೀಡಿದಾಗ ಸುಪ್ರೀಂ ಕೋರ್ಟ್ ಕೂಡ ಅದನ್ನು ‘ದ್ವೇಷದ ಭಾಷಣ’ ಎಂದು ಬಣ್ಣಿಸಿತ್ತು,” ಎಂದು ಪೂನಾವಾಲಾ ನೆನಪಿಸಿದ್ದಾರೆ.

ಸನಾತನ ಧರ್ಮವನ್ನು ಅವಮಾನಿಸುವುದು ವಿರೋಧ ಪಕ್ಷಗಳ ರಾಜಕೀಯ ಮಾದರಿಯಾಗಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆಗಳು ವೋಟ್ ಬ್ಯಾಂಕ್‌ಗಾಗಿ ಇಂತಹ ಕೃತ್ಯ ಎಸಗುತ್ತಿವೆ. ತಮಿಳುನಾಡಿನ ಜನರು ಇವರನ್ನು ಕ್ಷಮಿಸುವುದಿಲ್ಲ ಎಂದು ಗುಡುಗಿದ್ದಾರೆ.

ಇದೇ ವೇಳೆ ತಮಿಳು ಭಾಷೆಯ ಕುರಿತು ಮಾತನಾಡಿದ ಉದಯನಿಧಿ, ರಾಜ್ಯ ಗೀತೆ ‘ತಮಿಳು ತಾಯಿ ವಾಳ್ತು’ ಅನ್ನು ಕಡೆಗಣಿಸುವ ಯಾವುದೇ ಪ್ರಯತ್ನವನ್ನು ನಾವು ಅನುಮತಿಸುವುದಿಲ್ಲ. ತಮಿಳುನಾಡಿನ ಯಾವುದೇ ಕಾರ್ಯಕ್ರಮದಲ್ಲಿ ರಾಜ್ಯ ಗೀತೆಗೆ ಮೊದಲ ಸ್ಥಾನ ನೀಡಬೇಕು ಎಂದು ಪ್ರತಿಪಾದಿಸಿದರು.

Related Articles

ಇತ್ತೀಚಿನ ಸುದ್ದಿಗಳು