Thursday, June 20, 2024

ಸತ್ಯ | ನ್ಯಾಯ |ಧರ್ಮ

ಉಡುಪಿ | ಯಥೇಚ್ಛವಾಗಿ ಹಿಂದೂತ್ವ ಬಳಸಿ ಗೆದ್ದ ಬಿಜೆಪಿ

ಉಡುಪಿ, ದ.ಕ ಜಿಲ್ಲೆಗಳಲ್ಲಿ ಬಿಜೆಪಿಯವರು ಒಂದು ಗುಮ್ಮ ಸೃಷ್ಟಿ ಮಾಡಿ ಅದಕ್ಕೆ ಮುಸ್ಲೀಮರು ಎಂಬ ಹೆಸರಿಟ್ಟು ಅದನ್ನು ಜಿಲ್ಲೆಯ ಜನರೆದುರಿಗಿಟ್ಟು ಹೆದರಿಸಿ ಮತದಾರರ ಭಾವನೆಗಳ ದುರ್ಲಾಭ ಪಡೆದರು – ದಿನೇಶ್‌ ಕಿಣಿ

ರಾಜ್ಯದೆಲ್ಲೆಡೆ ಅಧಿಕಾರ ವಿರೋಧಿ ಅಲೆ ಇದ್ದಾಗ್ಯೂ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನದು ಶೂನ್ಯ ಸಂಪಾದನೆ. 5ರಲ್ಲಿ ಸೊನ್ನೆ ಮಾರ್ಕು. ಹಾಗೆ ನೋಡುವುದಾದರೆ ಕಳೆದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಜಿಲ್ಲೆಯಲ್ಲಿ ಯಾವುದೇ ಸೀಟು ಗೆಲ್ಲಲು ವಿಫಲವಾಗಿತ್ತು.‌ ಆದರೆ ಕಾಂಗ್ರೆಸ್ ಈ ಬಾರಿ ಶೂನ್ಯ ಸಂಪಾದನೆ ಮಾಡಿದ ಏಕೈಕ ಜಿಲ್ಲೆಯೆಂದರೆ ಉಡುಪಿ ಮಾತ್ರ!

ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಪಕ್ಷಕ್ಕೆ ಪುನಶ್ಚೇತನ ನೀಡಿದ್ದು, ಅದ್ಭುತವಾದ ಗ್ಯಾರಂಟಿ ಯೋಜನೆಗಳು, ಕೆಪಿಸಿಸಿ ಕಡೆಯಿಂದ ಗ್ಯಾರಂಟಿ ಕಾರ್ಡ್ ವಿತರಣೆಯ ಮಾನಿಟರಿಂಗ್, ತಕ್ಕ ಮಟ್ಟಿಗೆ ಉತ್ತಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದು, ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಾರ್ಯಕರ್ತರಿಗೆ ತುಸು ಉತ್ತಮವಾದ ಆರ್ಥಿಕ ಬೆಂಬಲ ಇತ್ಯಾದಿಗಳ ಹೊರತಾಗಿಯೂ ಶೂನ್ಯ ಸಾಧನೆಗೆ ಕಾರಣಗಳು ಇಲ್ಲದಿಲ್ಲ.

ಆರ್‌ಎಸ್‌ಎಸ್ ಪ್ರತಿಪಾದಿಸುವ ಹಿಂದುತ್ವದ ಅಮಲಿನಲ್ಲಿ ಯುವ ಸಮುದಾಯದ ಒಂದು ವರ್ಗ ತೇಲಾಡುತ್ತಿದ್ದರೆ, ರಾಜಕೀಯ ಲಾಭಕ್ಕಾಗಿಯೇ ಹಿಂದುಗಳನ್ನು ಮುಸ್ಲಿಮರ ವಿರುದ್ಧ ನಿರಂತರ ಎತ್ತಿಕಟ್ಟಿದ್ದು, ಉಡುಪಿ ಜಿಲ್ಲೆಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವಿಗೆ ಕಾರಣವಾಗಿದೆ. ಇದರ ಸುಳಿವು ಆರಂಭದಲ್ಲಿ ಕುಂದಾಪುರ ಕ್ಷೇತ್ರದಲ್ಲಿ ದೊರೆತರೂ, ಬೈಂದೂರು, ಕಾಪು, ಉಡುಪಿ ಮತ್ತು ಕಾರ್ಕಳ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಹಿಂದುತ್ವವನ್ನು  ಯಥೇಚ್ಛವಾಗಿ ಬಳಸಿಕೊಂಡಿದ್ದಾರೆ.

ಕಾಪು ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಇರಲಿಲ್ಲವೇನೋ. ಅದಕ್ಕಾಗಿಯೇ ಮತದಾನದ ಮರುದಿನ ಅವರು ತಮ್ಮ ಆಪ್ತ ವಲಯದಲ್ಲಿ “ವಿನಯ ಕುಮಾರ್ ಸೊರಕೆ ಅವರು ಏನಿದ್ದರೂ ಅನುಭವೀ ರಾಜಕಾರಣಿ; ಅವರಿಗೆ ಹಲವಾರು ಚುನಾವಣೆಗಳನ್ನು  ಎದುರಿಸಿ  ಗೊತ್ತುಂಟು” ಎಂಬುದಾಗಿ ಪ್ರತಿಕ್ರಿಯಿಸಿದ್ದರಂತೆ! ಒಟ್ಟಾರೆ ಕಾಂಗ್ರೆಸ್ ಸೋಲು ಸೊರಕೆ ಅವರಿಗೆ ರಾಜಕೀಯ ನಿವೃತ್ತಿಯ ಬಗ್ಗೆ ಚಿಂತಿಸಲು ಬಲವಂತ ಮಾಡಿದ್ದಂತೂ ಸತ್ಯ.

ಕಾರ್ಕಳದಲ್ಲಿ ದೊಡ್ಡ ಸದ್ದು ಮಾಡುವ ನಿರೀಕ್ಷೆಯಲ್ಲಿದ್ದ ಮುತಾಲಿಕ್ ಪಟಾಕಿ ಕೇವಲ ಮೂರ್ನಾಲ್ಕು ಸಾವಿರ ಮತಗಳನ್ನು ಪಡೆದು ಠುಸ್ಸಾದದ್ದರಿಂದ ಸುನಿಲ್ ಕುಮಾರ್ ವಿರೋಧಿ ಮತಗಳು ವಿಭಜನೆಗೊಂಡು ಕಾಂಗ್ರೆಸ್ ಅಭ್ಯರ್ಥಿಗೆ ನಷ್ಟವೇ ಆದದ್ದು ವಿನಃ  ಯಾವುದೇ ಲಾಭವಾಗಿಲ್ಲ.

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರ ತಟಸ್ಥ ನಿಲುವು, ಬಿಜೆಪಿಯಿಂದ ಕಾಂಗ್ರೆಸ್‌ಗೆ ಭಾರೀ ಸಂಖ್ಯೆಯ ಕಾರ್ಯಕರ್ತರ ಸೇರ್ಪಡೆ, ಸಾಮಾಜಿಕ ಜಾಲ ತಾಣಗಳ ಸಮರ್ಪಕ ಬಳಕೆ ಹಾಗೂ ಗೋಪಾಲ ಪೂಜಾರಿ ಪರ ಅನುಕಂಪದ ಅಲೆಯೂ ಸೇರಿಕೊಂಡು ಗೆಲುವು ಗ್ಯಾರಂಟಿ ಎಂದು ಕಾಂಗ್ರೆಸ್ ಲೆಕ್ಕ ಹಾಕಿದ್ದ ಬೈಂದೂರು ಕ್ಷೇತ್ರದಲ್ಲಿ ಮತದಾರರಿಗೆ ಮೊನ್ನೆ ಮೊನ್ನೆ ಪರಿಚಿತರಾದ ಗುರುರಾಜ ಗಂಟಿಹೊಳಿ ಗೆಲ್ಲಲು ಹಿಂದುತ್ವದ ಹೊರತಾದ ಬೇರೆ ಕಾರಣಗಳೇ ಕಾಣುತ್ತಿಲ್ಲ. 

ಉಡುಪಿಯಲ್ಲಿ ರಘುಪತಿ ಭಟ್ಟರಾದರೂ ಆಗಬಹುದಿತ್ತು, ಯಶಪಾಲ್ ಅಲ್ಲ ಎಂಬ ಮಾತನ್ನು ಖುದ್ದು ಕಾಂಗ್ರೆಸಿಗರೇ ಆಡಿಕೊಳ್ಳುತ್ತಿದ್ದರು. ಅದರ ಅರ್ಥ ಯಶಪಾಲಗೆ ನೆಗೆಟಿವ್ ಅಲೆ ಇತ್ತು. ಆದರೆ ಅದನ್ನು ಎನ್‌ಕ್ಯಾಶ್ ಮಾಡುವ ರಾಜಕೀಯ ಪಟ್ಟುಗಳನ್ನು ಬಳಸಲು ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹಿಂಜರಿದರು. ಆದರೂ ಪ್ರಗತಿಪರ ವರ್ಗವೊಂದು ಆ ಪ್ರಯತ್ನ ಮಾಡಿದರೂ, ಅದು ಮುಟ್ಟ ಬೇಕಾದಲ್ಲಿ ಮುಟ್ಟದೇ ಹೋಯ್ತು‌.

ಕಾಂಗ್ರೆಸ್ ಪಕ್ಷವನ್ನು ಕಾಡಿದ ಇನ್ನೊಂದು ಸಮಸ್ಯೆಯೆಂದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಪಕವಾಗಿ ಸಂಭಾಳಿಸುವ ನಾಯಕನಿರದೇ ಹೋದದ್ದು. ಕಳೆದ ಮೂರು ದಶಕಗಳಿಂದ  ಆಸ್ಕರ್ ಫರ್ನಾಂಡೀಸ್ ಅವರು ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಆ ಕೆಲಸ ನಿರ್ವಹಿಸುತ್ತಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರಾಗಲೀ, ಸಾಮರ್ಥ್ಯವಿದ್ದ ಹಿರಿಯ ನಾಯಕರುಗಳಾದ ಪ್ರತಾಪಚಂದ್ರ ಶೆಟ್ಟಿ ಹಾಗೂ ವಿನಯ ಕುಮಾರ್ ಸೊರಕೆ ಅವರಾಗಲೀ ಆ ಮಟ್ಟಕ್ಕೆ ಏರಲೇ ಇಲ್ಲ.

ದಿನೇಶ್‌ ಕಿಣಿ, ಉಡುಪಿ

ಇದನ್ನೂ ಓದಿ-https://peepalmedia.com/bjp-v-somanna-sad/ ಚಿನ್ನದಂತ ಕ್ಷೇತ್ರ ಕಿತ್ತುಕೊಂಡು ನನ್ನನ್ನು ನಿರುದ್ಯೋಗಿ ಮಾಡಿದ್ದಾರೆ : ವಿ ಸೋಮಣ್ಣ ಬೇಸರ

Related Articles

ಇತ್ತೀಚಿನ ಸುದ್ದಿಗಳು