Saturday, November 22, 2025

ಸತ್ಯ | ನ್ಯಾಯ |ಧರ್ಮ

ಉಡುಪಿ | ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ: ಆರೋಪಿ ಬೆಳಗಾವಿಯಲ್ಲಿ ಪೊಲೀಸ್‌ ವಶಕ್ಕೆ

ಉಡುಪಿ/ಬೆಳಗಾವಿ: ಉಡುಪಿ ಜಿಲ್ಲೆಯ ನೇಜಾರು ಬಳಿಯ ತೃಪ್ತಿ ಲೇಜೌಟ್‌ನಲ್ಲಿ ನವೆಂಬರ್‌ 12ರಂದು ನಡೆದಿದ್ದ ಒಂದೇ ಕುಟುಂಬದ ನಾಲ್ವರ ಕೊಲೆಗೆ ಸಂಬಂಧಿಸಿದಂತೆ ಆರೋಪಿ ಪೊಲೀಸರ ಬಲೆ ಬಿದ್ದಿರುವುದಾಗಿ ವರದಿಯಾಗುತ್ತಿದೆ.

ಹಂತಕ ಪ್ರವೀಣ್‌ ಅರುಣ್‌ ಚೌಗಲೆ CISF ಸಿಬ್ಬಂದಿಯಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಆತನಿಗೆ ಕೊಲೆಯಾದ ಕುಟುಂಬದ ಅಯ್ನಾಜಳ ಪರಿಚಯವಾಗಿತ್ತು. ಅಯ್ನಾಜ್‌ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು, ಹಂತಕ ಚೌಗಲೆ ಆಕೆಯ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ ಎನ್ನಲಾಗಿದ್ದು, ಆಕೆ ಆರಂಭದಲ್ಲಿ ಆತನ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರೂ ಬಳಿಕ ದೂರಾಗಿದ್ದಳು ಎನ್ನಲಾಗಿದೆ. ಈ ಹಂತದಲ್ಲಿ ದ್ವೇಷ ಬೆಳೆಸಿಕೊಂಡ ಚೌಗಲೆ ಆಕೆಯ ಕುಟುಂಬವನ್ನೇ ಸರ್ವನಾಶ ಮಾಡಲು ಮುಂದಾಗಿದ್ದಾನೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.

ಆರೋಪಿಯನ್ನು ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯ ಪ್ರವೀಣ್ ಅರುಣ್ ಚೌಗಲೆ(35) ಎಂದು ಹೇಳಲಾಗುತ್ತಿದ್ದ, ಈತ ಮೂಲತಃ ಮಹಾರಾಷ್ಟ್ರದ ಸಾಂಗ್ಲಿಯವನು ಎಂದು ತಿಳಿದುಬಂದಿದೆ.

ಬೆಳಗಾವಿಯ ಕುಡಚಿಯಲ್ಲಿ ಆರೋಪಿ ಅರುಣ್ ಚೌಗಲೆ ಪೊಲೀಸರ ಬಲೆಗೆ ಬಿದ್ದಿರುವುದಾಗಿ ತಿಳಿದು ಬಂದಿದೆ. ಆರೋಪಿ ಅರುಣ್ ಬೆಳಗಾವಿಯಲ್ಲಿ ಇರುವ ಬಗ್ಗೆ ಮಾಹಿತಿ ಉಡುಪಿ ಡಿವೈಎಸ್ಪಿ ನೇತೃತ್ವದ ತಂಡಕ್ಕೆ ಸಿಕ್ಕಿದ್ದು, ಈ ಕುರಿತು ಮಾಹಿತಿಯನ್ನು ಬೆಳಗಾವಿ ಪೊಲೀಸರಿಗೆ ತಲುಪಿಸಲಾಗಿತ್ತು. ಆರೋಪಿ ಅರುಣ್ ಮನೆಯೊಂದರಲ್ಲಿ ಇರುವುದು ಖಚಿತವಾಗಿತ್ತು. ಸುಳಿವು ಸಿಕ್ಕ ಕೂಡಲೇ ಬೆಳಗಾವಿ ಪೊಲೀಸರು ಮಫ್ತಿಯಲ್ಲಿ ಮನೆ ಸುತ್ತುವರಿದಿದ್ದರು.

ಇನ್ನೊಂದು ಕಡೆಯಿಂದ ಆರೋಪಿಯ ಬಂಧನಕ್ಕೆ ಉಡುಪಿಯಿಂದ ಹೊರಟಿದ್ದ ತಂಡವೂ ಕುಡುಚಿ ತಲುಪಿ ಅಲ್ಲಿ ಬೆಳಗಾವಿ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಆ ಬೆಳಗಾವಿಯಿಂದ ಬೇರೆಡೆ ತೆರಳಲು ಸಜ್ಜಾಗಿದ್ದ ಆರೋಪಿ ಅರುಣ್ ಚೌಗಲೆಯನ್ನು ಪೊಲೀಸರು ವಶಕ್ಕೆ ಪಡೆದು ಉಡುಪಿಗೆ ಕರೆತರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಧನ ಕುರಿತಂತೆ ಉಡುಪಿ ಪೊಲೀಸರು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಘಟನೆ ಕುರಿತು ಓದಲು ಈ ವರದಿಯನ್ನು ನೋಡಿ:

ಉಡುಪಿ: ಒಂದೇ ಮನೆಯ ನಾಲ್ವರ ಕಗ್ಗೊಲೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page