Home ರಾಜ್ಯ ಉಡುಪಿ ಶ್ರೀಕೃಷ್ಣ ಮಠದ ಬಳಿಯ ವಸತಿಗೃಹದಲ್ಲಿ ಮುಸ್ಲಿಂ ಮಹಿಳೆಗೆ ಕೊಠಡಿ ನಿರಾಕರಣೆ ಆರೋಪ: ಸಿಪಿಐ(ಎಂ) ಆಕ್ರೋಶ

ಉಡುಪಿ ಶ್ರೀಕೃಷ್ಣ ಮಠದ ಬಳಿಯ ವಸತಿಗೃಹದಲ್ಲಿ ಮುಸ್ಲಿಂ ಮಹಿಳೆಗೆ ಕೊಠಡಿ ನಿರಾಕರಣೆ ಆರೋಪ: ಸಿಪಿಐ(ಎಂ) ಆಕ್ರೋಶ

0

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದ ಸಮೀಪವಿರುವ ವಸತಿಗೃಹವೊಂದರಲ್ಲಿ ಮುಸ್ಲಿಂ ಮಹಿಳೆಯೊಬ್ಬರಿಗೆ ಉಳಿದುಕೊಳ್ಳಲು ಕೊಠಡಿ ನೀಡಲು ನಿರಾಕರಿಸಲಾಗಿದೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ – CPI(M)) ಗಂಭೀರ ಆರೋಪ ಮಾಡಿದೆ. ಗುರುತಿನ ಚೀಟಿ ಪರಿಶೀಲಿಸಿದ ಬಳಿಕ ಆಕೆ ಮುಸ್ಲಿಂ ಸಮುದಾಯದವರೆಂದು ತಿಳಿದು ವಸತಿ ನಿರಾಕರಿಸಲಾಗಿದೆ ಎಂದು ಪಕ್ಷ ಆರೋಪಿಸಿದ್ದು, ಈ ವಿಚಾರ ಇದೀಗ ಕರಾವಳಿ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಅವರು ನೀಡಿರುವ ಮಾಹಿತಿಯ ಪ್ರಕಾರ, ಬಳ್ಳಾರಿ ಮೂಲದ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಗೆಳತಿ ಶಕುಂತಲಾ ಮತ್ತು ಆಕೆಯ ಕುಟುಂಬದೊಂದಿಗೆ ಉಡುಪಿ ಪ್ರವಾಸಕ್ಕೆ ಆಗಮಿಸಿದ್ದರು. ಅಕ್ಟೋಬರ್ 3 ರಂದು ರಾತ್ರಿ ಸುಮಾರು 8 ಗಂಟೆಗೆ ಶ್ರೀಕೃಷ್ಣ ಮಠದ ಸಮೀಪವಿರುವ ಬಿರ್ಲಾ ಛತ್ರಕ್ಕೆ (ವಸತಿಗೃಹ) ತೆರಳಿ ಉಳಿದುಕೊಳ್ಳಲು ಕೊಠಡಿ ಕೇಳಿದ್ದಾರೆ.

ಈ ವೇಳೆ ಸಿಬ್ಬಂದಿ ಎಲ್ಲರ ಆಧಾರ್ ಗುರುತಿನ ಚೀಟಿಗಳನ್ನು ಪರಿಶೀಲಿಸಿದ್ದು, ಮಹಿಳೆ ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ಗೊತ್ತಾದ ತಕ್ಷಣ ಕೊಠಡಿ ನೀಡಲು ನಿರಾಕರಿಸಿದ್ದಾರೆ ಎಂದು ದೂರಲಾಗಿದೆ. ಅಪರಿಚಿತ ನಗರದಲ್ಲಿ ರಾತ್ರಿ ವೇಳೆ ಮಹಿಳೆಯನ್ನು ಒಂಟಿಯಾಗಿ ಎಲ್ಲಿಗೆ ಕಳುಹಿಸುವುದು, ಆಕೆಯನ್ನು ನಮ್ಮೊಂದಿಗೆ ಇರಲು ಬಿಡಿ ಎಂದು ಜತೆಯಲ್ಲಿದ್ದ ಹಿಂದೂ ಕುಟುಂಬಸ್ಥರು ಪರಿಪರಿಯಾಗಿ ಮನವಿ ಮಾಡಿದರೂ ವಸತಿಗೃಹ ಸಿಬ್ಬಂದಿ ಒಪ್ಪಲಿಲ್ಲ ಎನ್ನಲಾಗಿದೆ.

ಬಳಿಕ ಆ ಮಹಿಳೆ ಉಡುಪಿಯ ಸಿಪಿಐ(ಎಂ) ಕಾರ್ಯಕರ್ತರನ್ನು ಸಂಪರ್ಕಿಸಿದ್ದು, ಪಕ್ಷದ ಕಾರ್ಯಕರ್ತರೊಬ್ಬರ ಮನೆಯಲ್ಲಿ ಆಕೆಗೆ ವಾಸ್ತವ್ಯ ಕಲ್ಪಿಸಲಾಯಿತು.

ಈ ಘಟನೆಯನ್ನು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೆ. ಪ್ರಕಾಶ್ ಹಾಗೂ ಜಿಲ್ಲಾ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಉಡುಪಿ ಮತ್ತು ಕೃಷ್ಣ ಮಠಕ್ಕೆ ಧಾರ್ಮಿಕ ಸಾಮರಸ್ಯದ ಸುದೀರ್ಘ ಇತಿಹಾಸವಿದೆ ಎಂದು ನೆನಪಿಸಿದ ಕಲ್ಲಾಗರ, “ಹಿಂದೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಮುಸ್ಲಿಂ ಚಾಲಕರನ್ನು ಹೊಂದಿದ್ದರು ಹಾಗೂ ಇಫ್ತಿಯಾರ್ ಕೂಟಗಳನ್ನು ಆಯೋಜಿಸುತ್ತಿದ್ದರು. ದಾನಿ ಹಾಜಿ ಅಬ್ದುಲ್ಲಾ ಸಾಹೇಬರು ದೀಪೋತ್ಸವಕ್ಕೆ ಎಣ್ಣೆ ನೀಡಿ ನೆರವಾಗಿದ್ದರು. ಇಂತಹ ಪರಂಪರೆ ಇರುವ ಊರಿನಲ್ಲಿ ಧರ್ಮದ ಆಧಾರದಲ್ಲಿ ವಸತಿ ನಿರಾಕರಿಸುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಇಂತಹ ತಾರತಮ್ಯ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

ಆರೋಪ ತಳ್ಳಿಹಾಕಿದ ಮಠದ ಆಡಳಿತ ಮಂಡಳಿ:

ಸಿಪಿಐ(ಎಂ) ಮಾಡಿದ ಆರೋಪವನ್ನು ಪರ್ಯಾಯ ಶೀರೂರು ಮಠದ ಆಡಳಿತ ಮಂಡಳಿ ಸಾರಾಸಾಗಟಾಗಿ ತಳ್ಳಿಹಾಕಿದೆ. ಶ್ರೀ ಕೃಷ್ಣ ಮಠದ ಪ್ರಸ್ತುತ ಉಸ್ತುವಾರಿ ವಹಿಸಿಕೊಂಡಿರುವ ಪರ್ಯಾಯ ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ಅವರು ಪ್ರತಿಕ್ರಿಯಿಸಿ, “ಸಿಪಿಐ(ಎಂ) ಉಲ್ಲೇಖಿಸಿರುವ ಬಿರ್ಲಾ ಛತ್ರವು ಶ್ರೀ ಕೃಷ್ಣ ಮಠದ ನಿಯಂತ್ರಣದಲ್ಲಾಗಲಿ ಅಥವಾ ಆಡಳಿತ ವ್ಯಾಪ್ತಿಯಲ್ಲಾಗಲಿ ಇಲ್ಲ. ಅದು ಖಾಸಗಿ ಟ್ರಸ್ಟ್ ಒಂದರಿಂದ ನಿರ್ವಹಿಸಲ್ಪಡುತ್ತಿದೆ. ಈ ಘಟನೆಗೂ ಕೃಷ್ಣ ಮಠಕ್ಕೂ ಯಾವುದೇ ಸಂಬಂಧವಿಲ್ಲ. ಶ್ರೀ ಕೃಷ್ಣ ಮಠದ ಹೆಸರಿಗೆ ಮಸಿ ಬಳಿಯುವ ದುರುದ್ದೇಶದಿಂದ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.

You cannot copy content of this page

Exit mobile version