ಉಡುಪಿ: ‘ಸಮಾಧಾನ ಮಹೋತ್ಸವ’ಕ್ಕೆ ಅಡ್ಡಿಪಡಿಸಲು ಯತ್ನ; ಹಿಂದೂ ಜಾಗರಣ ವೇದಿಕೆಯ ಶ್ರೀಕಾಂತ್ ಶೆಟ್ಟಿ ಸೇರಿ 38 ಮಂದಿ ಬಂಧನ

ಉಡುಪಿ: ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಅಡ್ಡಿಪಡಿಸಲು ಯತ್ನಿಸಿದ ಆರೋಪದ ಮೇಲೆ ಹಿಂದೂ ಸಂಘಟನೆಗಳ 38 ಕಾರ್ಯಕರ್ತರನ್ನು ಉಡುಪಿ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ. ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಪ್ರತಿಭಟನಾಕಾರರು ಕಾರ್ಯಕ್ರಮದತ್ತ ನುಗ್ಗಲು ಯತ್ನಿಸಿದಾಗ ಈ ಕ್ರಮ ಕೈಗೊಳ್ಳಲಾಗಿದೆ.

ಮಣಿಪಾಲ ಪೊಲೀಸ್ ನಿಲ್ದಾಣದ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರು ನೀಡಿರುವ ದೂರಿನ ಅನ್ವಯ, ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದಂತೆ ಅವರು ಉಡುಪಿ ನಗರ ಪೊಲೀಸ್ ನಿಲ್ದಾಣದ ಹೆಚ್ಚುವರಿ ಉಸ್ತುವಾರಿಯಲ್ಲಿದ್ದರು. ಉಡುಪಿಯ ಜಿಲ್ಲಾ ಚರ್ಚ್‌ಗಳ ಒಕ್ಕೂಟದ (Fellowship of Udupi District Churches) ವತಿಯಿಂದ ಉಡುಪಿ ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮಾರ್ಚ್ 20 ರಿಂದ 22 ರವರೆಗೆ ಮೂರು ದಿನಗಳ ‘ಸಮಾಧಾನ ಮಹೋತ್ಸವ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಪಡೆಯಲಾಗಿತ್ತು.

ಆಯೋಜಕರು ಈ ಕಾರ್ಯಕ್ರಮಕ್ಕೆ ಕ್ರಿಶ್ಚಿಯನ್ ಪ್ರಚಾರಕ ಮೋಹನ್ ಸಿ. ಲಾಜರಸ್ ಅವರನ್ನು ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ವ್ಯಕ್ತವಾಗುವ ಸಾಧ್ಯತೆಯನ್ನು ಮನಗಂಡು ಆಯೋಜಕರು ಕರ್ನಾಟಕ ಹೈಕೋರ್ಟ್‌ನಿಂದ ರಕ್ಷಣೆ ಕೋರಿ ಆದೇಶ ಪಡೆದಿದ್ದರು. ಅದರಂತೆ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಮಾರ್ಚ್ 20 ರಂದು ಸಂಜೆ 5 ಗಂಟೆಯ ಸುಮಾರಿಗೆ ಹಿಂದೂ ಜಾಗರಣ ವೇದಿಕೆಯ ಶ್ರೀಕಾಂತ್ ಶೆಟ್ಟಿ ನೇತೃತ್ವದ 38 ಪ್ರತಿಭಟನಾಕಾರರ ತಂಡವು ಗೋವಿಂದ ಕಲ್ಯಾಣ ಮಂಟಪದಿಂದ ಕಾರ್ಯಕ್ರಮ ನಡೆಯುತ್ತಿದ್ದ ಮೈದಾನದತ್ತ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಹೊರಟಿತು. ಈ ಕಾರ್ಯಕ್ರಮದಲ್ಲಿ ಮತಾಂತರ ನಡೆಯುವ ಸಾಧ್ಯತೆಯಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಕಾರ್ಯಕ್ರಮದ ಸ್ಥಳಕ್ಕೆ ನುಗ್ಗಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ ಇದೆ ಮತ್ತು ಮುಂದೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಎಚ್ಚರಿಸಿದರೂ, ಪ್ರತಿಭಟನಾಕಾರರು ಮುನ್ನುಗ್ಗಲು ಪ್ರಯತ್ನಿಸಿದರು. ಈ ಹಂತದಲ್ಲಿ ಪೊಲೀಸರು ಎಲ್ಲ 38 ವ್ಯಕ್ತಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಬಂಧಿಸಿದರು. ಈ ಸಂಬಂಧ ಉಡುಪಿ ನಗರ ಪೊಲೀಸ್ ನಿಲ್ದಾಣದಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 189(2) ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 112 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು