Monday, June 17, 2024

ಸತ್ಯ | ನ್ಯಾಯ |ಧರ್ಮ

ಉಕ್ರೇನ್, ಪ್ಯಾಲೆಸ್ಟೈನ್: ಪಶ್ಚಿಮದ ಇಬ್ಬಗೆಯ ನೀತಿ

ಭಾರತವು ತನ್ನ ಸ್ವಾತಂತ್ರ್ಯದ ದಿನಗಳಿಂದಲೂ ತನ್ನದೇ ಆದ ವಿದೇಶ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ನೊಂದವರ ಸಹಾಯಕ್ಕೆ ನಿಲ್ಲುವ ತನ್ನ ನೀತಿಯ ಭಾಗವಾಗಿ ಪ್ಯಾಲೆಸ್ಟೈನ್ ಪರವಾಗಿ ಸದಾ ಕಾಲ ಬೆಂಬಲ ನೀಡುತ್ತ ಬಂದಿತ್ತು. ಬುದ್ಧ, ಮಹಾವೀರ, ಗಾಂಧಿಯಂತಹ ಅಹಿಂಸಾಪರ, ಶಾಂತಿಪ್ರಿಯ ಮತ್ತು ಶಾಂತಿಪರ ದೇಶ ಮೊನ್ನೆ ಶಾಂತಿ ಪ್ರಸ್ತಾವವನ್ನು ಬೆಂಬಲಿಸದೆ ಅಪಾಯಕಾರಿ ಹೆಜ್ಜೆ ಇರಿಸಿತು. ಅಮೆರಿಕದ ಅಡಿಯಾಳಿನಂತೆ ವರ್ತಿಸುವುದರಿಂದ  ಮುಂದಿನ ದಿನಗಳಲ್ಲಿ ಭಾರತ ದೊಡ್ಡ ಬೆಲೆ ತೆರಬೇಕಾಗುತ್ತದೆ. ಸರಕಾರಗಳು ಬದಲಾಗಬಹುದು. ಆದರೆ ತಾತ್ಕಾಲಿಕ ಲಾಭಕ್ಕಾಗಿ ದೇಶದ ದೀರ್ಘಕಾಲೀನ ವಿದೇಶಾಂಗ ನೀತಿ ಬದಲಾಗಬಾರದು. ಇದನ್ನು ಮೋದಿ ಸರಕಾರ ಅರ್ಥಮಾಡಿಕೊಳ್ಳದಿರುವುದು ವಿಷಾದದ ಸಂಗತಿ- ಶ್ರೀನಿವಾಸ ಕಾರ್ಕಳ

ಉಕ್ರೇನ್ ಮೇಲೆ ರಶ್ಯಾ ಧಾಳಿ ನಡೆಸಿ, ಆ ಎರಡು ದೇಶಗಳ ನಡುವೆ ಯುದ್ಧ ಆರಂಭವಾಗಿ, ಸುಮಾರು ಒಂದೂವರೆ ವರ್ಷದ ಮೇಲಾಯಿತು. ಅಪಾರ ಸಾವು ನೋವು, ಆಸ್ತಿಪಾಸ್ತಿ ನಷ್ಟ ಸಂಭವಿಸಿದವು. ಈಗಲೂ ಯುದ್ಧ ಮುಂದುವರಿದೇ ಇದೆ.

ಉಕ್ರೇನ್ ಮೇಲೆ ರಶ್ಯಾ ಧಾಳಿ ಆರಂಭಿಸುತ್ತಲೇ ವಿಶ್ವದ ಬಲಾಢ್ಯ ರಾಷ್ಟ್ರಗಳು, ವಿಶೇಷವಾಗಿ ನ್ಯಾಟೋ ದೇಶಗಳು ಒಂದಾಗಿ ರಶ್ಯಾದ ಕ್ರಮವನ್ನು ಉಗ್ರವಾಗಿ ಖಂಡಿಸಿದವು. ವಿಶ್ವಸಂಸ್ಥೆಯಲ್ಲಿ ರಶ್ಯಾ ವಿರುದ್ಧ ನಿರ್ಣಯ ಅಂಗೀಕಾರಗೊಳ್ಳುವಂತೆ ಮಾಡಿದವು. ರಶ್ಯಾದ ಮೇಲೆ ವ್ಯಾಪಾರ ದಿಗ್ಬಂಧನಗಳನ್ನು ವಿಧಿಸಿದವು. ಉಕ್ರೇನ್ ಗೆ ಮಿಲಿಟರಿ ಸಹಿತ ಎಲ್ಲ ನೆರವನ್ನೂ ಘೋಷಿಸಿದವು. ಉಕ್ರೇನ್ ನಲ್ಲಿ ನಾಗರಿಕರಿಗೆ ಮೂಲಭೂತ ಸವಲತ್ತುಗಳು ಸಿಗದಂತೆ ಮಾಡಿದ್ದನ್ನು ಯುದ್ಧಾಪರಾಧ ಎಂದು ಹೇಳಿದವು. ನಾಗರಿಕರ ಸಾವು ನೋವಿಗೆ ನಿರಂತರ ಕಣ್ಣೀರು ಸುರಿಸಿದವು.

ಈ ಎಲ್ಲ ಕ್ರಮಗಳು ಸರಿಯಾಗಿಯೇ ಇವೆ. ದುರ್ಬಲರು, ಶೋಷಿತರು, ತುಳಿತಕ್ಕೀಡಾದವರ ವಿರುದ್ಧ ಜಗತ್ತು ನಿಲ್ಲಬೇಕು. ಅದು ಮಾನವರಾಗಿ, ನಾಗರಿಕರಾಗಿ ಎಲ್ಲರೂ ಮಾಡಲೇಬೇಕಾದ ಕೆಲಸ.

ಪ್ಯಾಲೆಸ್ಟೈನ್ ಸಮಸ್ಯೆ

ಪ್ಯಾಲೆಸ್ಟೈನ್ ಜನರು ತಮ್ಮ ಸ್ವಾತಂತ್ರ್ಯ ಕಳೆದುಕೊಂಡು, ತಮಗೊಂದು ಸಾರ್ವಭೌಮ ದೇಶವೇ ಇಲ್ಲದೆ, ಇಸ್ರೇಲ್ ನಿಂದ ನಿರಂತರ ಶೋಷಣೆಗೆ, ಧಾಳಿಗೆ ಈಡಾಗಿ ಸರಿ ಸುಮಾರು ಎಪ್ಪತ್ತೈದು ವರ್ಷಗಳಾದವು. ಪ್ಯಾಲೆಸ್ತೀನ್ ನಾಯಕರು ವಿಶ್ವದ ಪ್ರತಿಯೊಂದು ದೇಶದ ಬಾಗಿಲನ್ನು ತಟ್ಟಿ ನ್ಯಾಯ ದೊರಕಿಸಿಕೊಡಲು ಆಗ್ರಹಿಸುತ್ತಲೇ ಇದ್ದಾರೆ. ವಿಶ‍್ವಸಂಸ್ಥೆಯೂ ಈ ನಿಟ್ಟಿನಲ್ಲಿ ನಿರ್ಣಯ ಅಂಗೀಕರಿಸಿದೆ. ಆದರೆ ಪ್ಯಾಲೆಸ್ತೀನಿಯನ್ನರಿಗೆ ನ್ಯಾಯ ಇಂದಿಗೂ ದೊರಕಿಲ್ಲ. ಇದು ಅಲ್ಲಿನ ಜನರಲ್ಲಿ ಅಪಾರ ಅಸಹನೆಗೆ ಕಾರಣವಾಗಿದ್ದು, ಉಗ್ರಗಾಮಿ ಚಟುವಟಿಕೆಗಳು ಆರಂಭಗೊಳ್ಳಲೂ ಕಾರಣವಾಗಿವೆ. ಶೋಷಕನನ್ನು ನೇರ ಎದುರಿಸಲು ಅಗತ್ಯ ಸಾಮರ್ಥ್ಯ ಇಲ್ಲದೆ ಹೋದಾಗ, ಪರೋಕ್ಷ ದಾರಿಗಳನ್ನು ಕಂಡುಕೊಳ್ಳುವುದು ಮಾನವ ಸಹಜ ಗುಣ.

ಇದರ ಮುಂದುವರಿದ ಭಾಗವೇ ಎಂಬಂತೆ ಕಳೆದ ಅಕ್ಟೋಬರ್ 7 ರಂದು ಗಾಜಾದ ಹಮಾಸ್ ಸಂಘಟನೆ ಇಸ್ರೇಲ್ ಮೇಲೆ ಹಠಾತ್ ಎರಗಿತು. ಇಸ್ರೇಲ್ ನಂತಹ ಇಸ್ರೇಲ್ ದೇಶವೇ ಬೆಚ್ಚಿಬೀಳುವ ರೀತಿಯಲ್ಲಿ ಪ್ರಹಾರಗೈದು ಅನೇಕರನ್ನು ಕೊಂದು ಹಾಕಿತು. ಕೆಲವರನ್ನು ಸೆರೆಹಿಡಿಯಿತು. ಇಸ್ರೇಲ್ ಹೇಳುವ ಪ್ರಕಾರ ಅಂದಾಜು 1400 ಮಂದಿಯ ಸಾವು ಸಂಭವಿಸಿದೆ ಮತ್ತು 200 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ.

ಇಸ್ರೇಲ್ ಮೇಲೆ ಧಾಳಿ ನಡೆಸಿದ್ದು ಹಮಾಸ್ ಸಂಘಟನೆ. ಆದರೆ ಆಮೇಲೆ ಇಸ್ರೇಲ್ ನೀಡತೊಡಗಿದ್ದು ಗಾಜಾದ 23 ಲಕ್ಷ ನಾಗರಿಕರಿಗೆ ಸಾಮೂಹಿಕ ಶಿಕ್ಷೆ. ಭಯಂಕರ ಮಿಲಿಟರಿ ಶಕ್ತಿಯಾದ ಇಸ್ರೇಲ್ ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಮೊದಲಾದ ದೇಶಗಳ ಬೆಂಬಲದೊಂದಿಗೆ ಗಾಜಾದಲ್ಲಿ ನಡೆಸಿದ್ದು ಅಕ್ಷರಶಃ ಮಾರಣ ಹೋಮ. ಉತ್ತರ ಗಾಜಾದಿಂದ ಸುಮಾರು 13 ಲಕ್ಷ ಮಂದಿಗೆ ದಕ್ಷಿಣ ಗಾಜಾಕ್ಕೆ ಕೆಲವೇ ಗಂಟೆಗಳಲ್ಲಿ ತೆರಳಲು ಆದೇಶಿಸಿದ ಅದು ಆನಂತರ ಆರಂಭಿಸಿದ್ದು ಕಂಡು ಕೇಳರಿಯದ ನರಮೇಧ!

Photo- Getty

ಒಂದನ್ನೂ ಬಿಡದಂತೆ ವಸತಿ ಕಟ್ಟಡಗಳನ್ನೂ ನೆಲಸಮ ಗೊಳಿಸಲಾಯಿತು. ಶಾಲೆಗಳು, ಪ್ರಾರ್ಥನಾ ಮಂದಿರಗಳು, ನಿರಾಶ್ರಿತ ಶಿಬಿರಗಳು, ಕೊನೆಗೆ ಆಸ್ಪತ್ರೆಯನ್ನೂ ಬಿಡಲಿಲ್ಲ. ಇಂದಿನ ತನಕ ಇಸ್ರೇಲ್ ಬಾಂಬು ದಾಳಿಗೆ ಗಾಜಾದಲ್ಲಿ ಸತ್ತವರು 8000 ಕ್ಕೂ ಅಧಿಕ ಮಂದಿ. ಇವರಲ್ಲಿ 3000 ಕ್ಕೂ ಅಧಿಕ ಮಂದಿ ಹಸುಳೆಗಳು ಮತ್ತು ಮಕ್ಕಳು. 100 ಕ್ಕೂ ಅಧಿಕ ಮಂದಿ ವೈದ್ಯಕೀಯ ಸಿಬ್ಬಂದಿ ಜೀವ ಕಳೆದುಕೊಂಡಿದ್ದಾರೆ. 35 ಮಂದಿ ಪತ್ರಕರ್ತರನ್ನೂ ಕೊಲ್ಲಲಾಗಿದೆ.

ಕದನ ವಿರಾಮಕ್ಕೆ ವಿರೋಧ!

ಗಾಜಾದ ಮಂದಿಗೆ ಆಹಾರ, ನೀರು, ವಿದ್ಯುತ್, ಇಂಧನ ಎಲ್ಲವನ್ನೂ ನಿರಾಕರಿಸಲಾಗಿದೆ. ಈಗ ಇಂಟರ್ ನೆಟ್, ಮೊಬೈಲ್ ಸಂಪರ್ಕವೂ ಇಲ್ಲದಂತೆ ಮಾಡಲಾಗಿದೆ. ಹಮಾಸ್ ಮೇಲಣ ಸಿಟ್ಟನ್ನು ಅಮಾಯಕ ನಾಗರಿಕರ ಮೇಲೆ ತೀರಿಸಬಾರದು, ಯುದ್ಧಾಪರಾಧ ನಡೆಸಕೂಡದು ಎಂಬ ಆಗ್ರಹ ಕಿವುಡು ಕಿವಿಯ ಮೇಲೆ ಬಿದ್ದಂತಾಗಿದೆ. ವಿಶ್ವಸಂಸ್ಥೆಯಲ್ಲಿ ಯುದ್ಧವಿರಾಮದ ನಿರ್ಣಯಗಳನ್ನು ಅಮೆರಿಕಾ ದೇಶವೇ ತಿರಸ್ಕರಿಸುತ್ತದೆ.

ಮೊನ್ನೆಯಷ್ಟೇ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಯುದ್ಧವಿರಾಮದ ನಿರ್ಣಯಕ್ಕೆ 120 ದೇಶಗಳು ಬೆಂಬಲ ಸೂಚಿಸಿದರೆ, ಅಮೆರಿಕ ಸಹಿತ 14 ರಾಷ್ಟ್ರಗಳು ವಿರೋಧ ಸೂಚಿಸಿವೆ! ಭಾರತ ಸಹಿತ 45 ರಾಷ್ಟ್ರಗಳು ಗೈರು ಹಾಜರಾಗಿವೆ. ಜಗತ್ತು ಬೇರೇನನ್ನೂ ಆಗ್ರಹಿಸುತ್ತಿಲ್ಲ; ನಾಗರಿಕರನ್ನು ಕೊಲ್ಲಬೇಡಿ, ಜನರಿಗೆ ಆಹಾರ ಮತ್ತಿತರ ಅಗತ್ಯ ಸಾಮಗ್ರಿ ತಲಪಿಸಲು ಅವಕಾಶ ಕೊಡಿ ಎಂದಷ್ಟೇ. ಆದರೆ ಇಸ್ರೇಲ್ ಯಾವ ಆಗ್ರಹಕ್ಕೂ ಮಣೆ ಹಾಕುತ್ತಿಲ್ಲ.

ಮಿಲಿಟರಿ ದೃಷ್ಟಿಯಿಂದ ಉಕ್ರೇನ್ ಬಲಾಢ್ಯ ರಾಷ್ಟ್ರವೇ. ಹಾಗಾಗಿ ರಶ್ಯಾಕ್ಕೆ ಅದು ತಕ್ಕ ಉತ್ತರವನ್ನು ನೀಡುತ್ತಿದೆ. ಉಕ್ರೇನ್ ಮತ್ತು ರಶ್ಯಾ ನಡುವೆ ನಡೆಯುತ್ತಿರುವುದು ಯುದ್ಧ. ಯುದ್ಧ ಎಂದರೆ ಎರಡು ದೇಶಗಳ, ತರಬೇತುಗೊಂಡ ಮಿಲಿಟರಿಗಳ ನಡುವೆ ನಡೆಯುವ ಕದನ. ರಶ್ಯಾ ಬಳಿ ಸೈನಿಕರು, ಬಾಂಬು, ಟ್ಯಾಂಕ್, ಯುದ್ಧ ವಿಮಾನಗಳಿದ್ದರೆ ಉಕ್ರೇನ್ ಬಳಿಯಲ್ಲೂ ಅವೆಲ್ಲ ಇವೆ. ಉಕ್ರೇನ್ ನ ಸೈನಿಕರು ಸತ್ತಿದ್ದರೆ ರಶ್ಯಾದ ಸೈನಿಕರೂ ಸತ್ತಿದ್ದಾರೆ. ಎರಡೂ ಕಡೆಯಿಂದ ಸಮಬಲದ ಹೋರಾಟ ನಡೆಯುತ್ತಿರುವುದರಿಂದ ಯುದ್ಧ ನಿಲ್ಲುತ್ತಿಲ್ಲ. ಉಕ್ರೇನ್ ನಲ್ಲಿ ರಶ್ಯಾವು ಆಸ್ಪತ್ರೆಗಳು, ಶಾಲೆಗಳು, ನಿರಾಶ್ರಿತರ ಶಿಬಿರಗಳ ಮೇಲೆ ಬಾಂಬು ಹಾಕಿದ ಉದಾಹರಣೆ ಇಲ್ಲ.

ಆದರೆ, ಪ್ಯಾಲೆಸ್ತೀನಿಯನ್ನರ ಗಾಜಾ ಮತ್ತು ಪಶ್ಚಿಮ ದಂಡೆಯದ್ದು ಹಾಗಲ್ಲ. ಇದು ಸ್ವತಂತ್ರ ರಾಷ್ಟ್ರವೂ ಅಲ್ಲ. ಅದಕ್ಕೆ ಅದರದ್ದೇ ಆದ ಸರಕಾರವೂ ಇಲ್ಲ. ಮಿಲಿಟರಿಯೂ ಇಲ್ಲ. ಗಾಜಾವನ್ನಂತೂ ಭೂಮಿಯ ಮೇಲಣ ಅತಿದೊಡ್ಡ ಸೆರೆಮನೆ ಎನ್ನಲಾಗಿದೆ. ಆ ರೀತಿಯಲ್ಲಿ ಇಸ್ರೇಲ್ ಅದನ್ನು ದಿಗ್ಬಂಧನದಲ್ಲಿರಿಸಿದೆ. 10 ಚದರ ಕಿಲೋಮೀಟರ್ ಭೂಭಾಗದಲ್ಲಿ 23 ಲಕ್ಷ ಮಂದಿ ಬದುಕುತ್ತಿದ್ದಾರೆ. ಅವರು ಬಹುತೇಕ ಬದುಕುವುದು ಹೊರಗಿನ ದೇಶಗಳ ನೆರವಿನ ಮೂಲಕ.

ಇಸ್ರೇಲ್ ಮಿಲಿಟರಿ ದೃಷ್ಟಿಯಿಂದ ಅತ್ಯಂತ ಬಲಾಢ್ಯ ದೇಶ. ಅತ್ಯಾಧುನಿಕ ಭೂಸೇನೆ, ವಾಯುಸೇನೆ ಅದರ ಬಳಿ ಇದೆ. ಜಗತ್ತನ್ನು ನಾಶಪಡಿಸಲು ಸಾಲುವಷ್ಟು ಬಾಂಬುಗಳು, ಕ್ಷಿಪಣಿಗಳೂ ಅದರ ಬಳಿ ಇವೆ. ಬಾಂಬುಗಳು ಕಡಿಮೆ ಬಿದ್ದರೆ ಅಮೆರಿಕಾ ಸರಬರಾಜು ಮಾಡುತ್ತದೆ. ಹಾಗಾಗಿ ಅನೇಕ ಪಟ್ಟಭದ್ರ ಹಿತಾಸಕ್ತಿಯ ಮಾಧ್ಯಮಗಳು ಮತ್ತು ರಾಷ್ಟ್ರಗಳು ಹೇಳುವಂತೆ ಅಲ್ಲಿ ನಡೆಯುತ್ತಿರುವುದು ಯುದ್ಧ ಅಲ್ಲ. ಏಕಮುಖ ಧಾಳಿ. ಇಸ್ರೇಲ್ ನ ವಾಯುಪಡೆ ಮನಬಂದಂತೆ ಹಾರಿಬಂದು ಪ್ರತಿರೋಧವೇ ಇಲ್ಲದೆ ಬಾಂಬಿನ ಮಳೆಗರೆದು ಹೋಗುತ್ತವೆ. ಗಾಜಾದ ಜನರಿಗೆ ಅನ್ನಾಹಾರ ಸಿಗದಂತೆ ನೋಡಿಕೊಳ್ಳುತ್ತದೆ. ಗಾಜಾದಿಂದ ಹೊರಹೋಗಲು ಅವಕಾಶ ಇಲ್ಲ. ಗಾಜಾದೊಳಗೆ ಇರುವಂತೆಯೂ ಇಲ್ಲ!

ಜಗತ್ತು ಯಾರ ಪರ ನಿಲ್ಲಬೇಕು?

ಇಂತಹ ಹೊತ್ತಿನಲ್ಲಿ ನಾಗರಿಕ ಎನಿಸಿಕೊಳ್ಳುವ ಜಗತ್ತು ಯಾರ ಪರ ನಿಲ್ಲಬೇಕು? ದುರ್ಬಲರು ಮತ್ತು ತೊಂದರೆಯಲ್ಲಿರುವವರ ಜತೆಯಲ್ಲವೇ? ರಶ್ಯಾದ ದಬ್ಬಾಳಿಕೆಗೆ ಗುರಿಯಾದ ಉಕ್ರೇನ್ ಜತೆ ನಿಲ್ಲುವ ರೀತಿಯಲ್ಲಿಯೇ, ಇಸ್ರೇಲ್ ನಿಂದ ಮುಕ್ಕಾಲು ಶತಮಾನದಿಂದ ಮತ್ತು ಮೊನ್ನೆ ಅಕ್ಟೋಬರ್ 7 ರಿಂದ ಭಯಾನಕ ರೀತಿಯಲ್ಲಿ ದೌರ್ಜನ್ಯಕ್ಕೆ ಈಡಾಗಿರುವ ಪ್ಯಾಲೆಸ್ಟೈನ್ ಜತೆಗೆ ನಿಲ್ಲಬೇಕಲ್ಲವೇ? ಗಾಜಾದಲ್ಲಿ ಬಾಂಬು ಮಳೆಗೆ ಧ್ವಂಸಗೊಂಡ ಕಟ್ಟಡಗಳು, ಆಸ್ಪತ್ರೆಗಳು, ಕ್ಷಣ ಕ್ಷಣವೂ ಸಾಯುತ್ತಿರುವ ಹಸುಳೆಗಳು ಇವನ್ನೆಲ್ಲ ನೋಡಿ ಈ ಶಕ್ತಿಗಳ  ಮನ ಕರಗಬೇಕಿತ್ತಲ್ಲವೇ?

ಇಲ್ಲ, ಗಾಜಾದ ಸಂಪೂರ್ಣ ಜನತೆಯನ್ನು ನಾಶಪಡಿಸುವ ರೀತಿಯಲ್ಲಿ ಇಸ್ರೇಲ್ ಮಾತನಾಡುತ್ತಿದೆ. ಎರಡನೆ ಹಂತದ ಕಾರ್ಯಾಚರಣೆಯಾಗಿ ಭೂಕಾರ್ಯಾಚರಣೆ ನಡೆಸುವುದಾಗಿ ಅದು ಹೇಳುತ್ತಿದೆ. ಇಸ್ರೇಲ್ ಪರ ಇರುವ ಅಮೆರಿಕಾ ಮತ್ತಿತರ ದೇಶಗಳು ಕೂಡಾ ಇಸ್ರೇಲ್ ಭಾಷೆಯಲ್ಲಿಯೇ ಮಾತನಾಡುತ್ತಿವೆ. ನಾಗರಿಕರ ರಕ್ಷಣೆಗೆ, ನಾಗರಿಕರಿಗೆ ಅಗತ್ಯ ನೆರವನ್ನು ಪೂರೈಸುವ ಉದ್ದೇಶಕ್ಕೆ ‘ಮಾನವೀಯ ನೆಲೆಯ ಯುದ್ಧವಿರಾಮ’ ಘೋಷಣೆಯನ್ನೂ 14 ರಾಷ್ಟ್ರಗಳು ವಿರೋಧಿಸುತ್ತವೆ, 45 ರಾಷ್ಟ್ರಗಳು ಅದರ ಪರ ಮತ ಚಲಾಯಿಸುವುದಿಲ್ಲ ಎಂದರೆ ಏನರ್ಥ?

ಇದು ನೋಡಿ ಪಶ್ಚಿಮದ ದೇಶಗಳ ಇಬ್ಬಗೆಯ ನೀತಿ! ಅವರಿಗೆ ತಮ್ಮ ಹಿತಾಸಕ್ತಿ ರಕ್ಷಣೆ ಮಾತ್ರ ಮುಖ್ಯ. ಆ ಹಿತಾಸಕ್ತಿ ರಕ್ಷಣೆಗಾಗಿ ಅವರು ಯಾರನ್ನು ಬಲಿಗೊಡಲೂ ಸಿದ್ಧ. ಅಮೆರಿಕಾ ಮತ್ತದರ ಮಿತ್ರ ರಾಷ್ಟ್ರಗಳ ಇಂತಹ ಅಪಾಯಕಾರಿ ನೀತಿಯಿಂದಾಗಿ ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸದಂತಾಗಿದೆ. ತಮ್ಮ ಸರಹದ್ದಿನೊಳಗೆ ಇರಬೇಕಾದ ಈ ದೇಶಗಳು ಜಗತ್ತಿನ ಪ್ರತಿಯೊಂದು ಭೂಭಾಗದ ರಾಜಕೀಯದಲ್ಲೂ ಕೈ ಹಾಕುತ್ತವೆ. ಇದೇ ಅಮೆರಿಕಾ ವಿಯೆಟ್ನಾಂ, ಇರಾಕ್, ಅಫ್ಘಾನಿಸ್ತಾನ, ಲಿಬಿಯ ಮೊದಲಾದ ದೇಶಗಳಲ್ಲಿ ಕೊಂದುದಾದರೂ ಎಷ್ಟು ಲಕ್ಷ ಮಂದಿಯನ್ನು? ಉಕ್ರೇನ್ ನ ಜನರ ಜೀವನ ಅಮೂಲ್ಯವಾದುದಾದರೆ ಪ್ಯಾಲೆಸ್ತೀನಿಯನ್ನರ ಜೀವವೂ ಅಮೂಲ್ಯ ಅಲ್ಲವೇ? ಅವರೂ ಮನುಷ್ಯರೇ ಅಲ್ಲವೇ? ಅವರ ವಿಷಯದಲ್ಲಿ ಇಬ್ಬಗೆಯ ನೀತಿ ಯಾಕೆ?

ಭಾರತ ಹಿಡಿಯುತ್ತಿರುವ ಅಪಾಯಕಾರಿ ಹಾದಿ

UAE

ಅಮೆರಿಕಾ ಒಂದು ಮಿಲಿಟರಿ ಮಹಾಶಕ್ತಿ. ಅದು ಬೇರೆ ದೇಶಗಳನ್ನು ಅವಲಂಬಿಸಿಕೊಂಡಿರಬೇಕಾಗಿಲ್ಲ. ಆದರೆ, ಭಾರತ ಹಾಗಲ್ಲ. ಲಕ್ಷಾಂತರ ಭಾರತೀಯರು ಹೊಟ್ಟೆಪಾಡಿಗಾಗಿ ಜಗತ್ತಿನ ಪ್ರತಿಯೊಂದು ದೇಶಗಳಲ್ಲಿ ಹರಡಿಕೊಂಡಿದ್ದಾರೆ. ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ಅಸಂಖ್ಯ ಮಂದಿ ದುಡಿಯುತ್ತಿದ್ದಾರೆ. ಕೋಟ್ಯಂತರ ಡಾಲರ್ ಹಣ ಭಾರತಕ್ಕೆ ಕಳುಹಿಸುತ್ತಿದ್ದಾರೆ. ಈ ಎಲ್ಲ ದೇಶಗಳು ಇಸ್ರೇಲ್ ನ ದೌರ್ಜನ್ಯದ ವಿರುದ್ಧ ನಿಂತಿವೆ. ಇಂತಹ ಹೊತ್ತಿನಲ್ಲಿ ಇಸ್ರೇಲ್ ಪರ ನಿಲ್ಲುವುದು ಎಂದರೆ ಈ ಎಲ್ಲ ಕೊಲ್ಲಿ ದೇಶಗಳ ವಿರುದ್ಧ ನಿಂತಂತೆ. ನೆರೆಹೊರೆಯವರನ್ನೆಲ್ಲ ಎದುರುಹಾಕಿಕೊಂಡಂತೆ. ಇದರ ಪರಿಣಾಮ?! ಈಗ ಭಾರತದ ಜತೆ ಯಾರಿದ್ದಾರೆ? ನೆರೆಯ ಪಾಕಿಸ್ತಾನ, ನೇಪಾಳ, ಬಾಂಗ್ಲಾ, ಭೂತಾನ್, ಲಂಕಾ, ಮಾಲ್ದೀವ್ಸ್ ಎಲ್ಲವೂ ಭಾರತದ ಸ್ನೇಹದಿಂದ ದೂರ ಸರಿದಿವೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತಕ್ಕಾಗಲಿರುವ ನಷ್ಟ ಎಣಿಕೆಗೆ ಸಿಗದ್ದು.

ಈ ವಾಸ್ತವವನ್ನು ಭಾರತದಂತಹ ದೇಶಗಳು ಅರ್ಥಮಾಡಿಕೊಂಡು, ಯುದ್ಧಕೋರ ಅಮೆರಿಕಾದಂತಹ ದೇಶಗಳ ನಿಲುವುಗಳಿಂದ ದೂರ ಇರಬೇಕು. ಭಾರತವು ತನ್ನ ಸ್ವಾತಂತ್ರ್ಯದ ದಿನಗಳಿಂದಲೂ ತನ್ನದೇ ಆದ ವಿದೇಶ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ಬಣಗಳಾಗಿ ಒಡೆದು ಹೋದ ಜಗತ್ತಿನಲ್ಲಿ ಅದು ಎರಡೂ ಬಣಕ್ಕೆ ಸೇರದೆ ಅಲಿಪ್ತ ಚಳುವಳಿಯ ಹರಿಕಾರನಾಗಿ ಹೆಸರು ಪಡೆದಿತ್ತು. ನೊಂದವರ ಸಹಾಯಕ್ಕೆ ನಿಲ್ಲುವ ತನ್ನ ನೀತಿಯ ಭಾಗವಾಗಿ ಪ್ಯಾಲೆಸ್ಟೈನ್ ಪರವಾಗಿ ಸದಾ ಕಾಲ ಬೆಂಬಲ ನೀಡುತ್ತ ಬಂದಿತ್ತು. ಬುದ್ಧ, ಮಹಾವೀರ, ಗಾಂಧಿಯಂತಹ ಅಹಿಂಸಾಪರ, ಶಾಂತಿಪ್ರಿಯ ಮತ್ತು ಶಾಂತಿಪರ ದೇಶ ಮೊನ್ನೆ ಶಾಂತಿ ಪ್ರಸ್ತಾವವನ್ನು ಬೆಂಬಲಿಸದೆ ಅಪಾಯಕಾರಿ ಹೆಜ್ಜೆ ಇರಿಸಿತು. ಜಾಗತಿಕ ದಕ್ಷಿಣದ ನಾಯಕ ಅನಿಸಿಕೊಂಡಿದ್ದ ಭಾರತ ಮೊನ್ನೆ ಏಕಾಂಗಿಯಾಗಿ ಹೋಯಿತು.

ಸ್ವತಂತ್ರ ವಿದೇಶ ನೀತಿಗೆ ವಿದಾಯ ಹೇಳಿ, ಅಮೆರಿಕದ ಅಡಿಯಾಳಿನಂತೆ ವರ್ತಿಸುವುದರಿಂದ  ಮುಂದಿನ ದಿನಗಳಲ್ಲಿ ಭಾರತ ದೊಡ್ಡ ಬೆಲೆ ತೆರಬೇಕಾಗುತ್ತದೆ. ಸರಕಾರಗಳು ಬದಲಾಗಬಹುದು. ಆದರೆ ತಾತ್ಕಾಲಿಕ ಲಾಭಕ್ಕಾಗಿ ದೇಶದ ದೀರ್ಘಕಾಲೀನ ವಿದೇಶಾಂಗ ನೀತಿ ಬದಲಾಗಬಾರದು. ಇದನ್ನು ಮೋದಿ ಸರಕಾರ ಅರ್ಥಮಾಡಿಕೊಳ್ಳದಿರುವುದು ವಿಷಾದದ ಸಂಗತಿ.

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ  ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಇದನ್ನೂ ಓದಿ-ಸುಳ್ಳು ಸುದ್ದಿಗಳ ಮಹಾಸಾಗರ

Related Articles

ಇತ್ತೀಚಿನ ಸುದ್ದಿಗಳು