2020ರ ಫೆಬ್ರುವರಿಯಲ್ಲಿ ನಡೆದ ಗಲಭೆಯ ಹಿಂದಿನ ಪಿತೂರಿಗೆ ಸಂಬಂಧಿಸಿದ ಯುಎಪಿಎ ಪ್ರಕರಣದಲ್ಲಿ ಜಾಮೀನು ಕೋರಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಸಲ್ಲಿಸಿರುವ ಮನವಿಯನ್ನು ಜುಲೈ 24ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದ್ರೇಶ್ ಅವರ ಪೀಠದ ಮುಂದೆ ನಡೆದ ವಿಚಾರಣೆಯ ವೇಳೆ ದೆಹಲಿ ಪೊಲೀಸರು ಅರ್ಜಿಗೆ ಪ್ರತಿಕ್ರಿಯಿಸಲು ಸಮಯ ಕೋರಿದರು.
ದೆಹಲಿ ಪೊಲೀಸರ ಪರ ವಾದ ಮಂಡಿಸಿದ ವಕೀಲ ರಜತ್ ನಾಯರ್, ಈ ಪ್ರಕರಣದಲ್ಲಿ ಪ್ರತಿವಾದಿಗೆ ಅಫಿಡವಿಟ್ ಸಲ್ಲಿಸಲು ಒಂದಿಷ್ಟು ಕಾಲಾವಕಾಶ ನೀಡುವಂತೆ ಪೀಠವನ್ನು ಒತ್ತಾಯಿಸಿದರು.
“ಜಾಮೀನು ವಿಷಯದಲ್ಲಿ ಯಾವ ಕೌಂಟರ್ ಸಲ್ಲಿಸಬೇಕಿದೆ. ಆ ವ್ಯಕ್ತಿ ಎರಡು ವರ್ಷ 10 ತಿಂಗಳ ಕಾಲ ಒಳಗೆ ಇದ್ದಾನೆ” ಎಂದು ಖಾಲಿದ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು.
ಈ ವಿಷಯದಲ್ಲಿ ಕೌಂಟರ್ ಸಲ್ಲಿಸಲು ಸ್ವಲ್ಪ ಸಮಯವನ್ನು ನೀಡುವಂತೆ ಪ್ರಾರ್ಥಿಸುತ್ತಿದ್ದೇನೆ ಎಂದು ನಾಯರ್ ಹೇಳಿದರು.
“ದೋಷಾರೋಪ ಪಟ್ಟಿಯು ಬಹಳ ದೊಡ್ಡದಾಗಿದ್ದು, ಸಾವಿರಾರು ಪುಟಗಳನು ಹೊಂದಿದೆ.” ಹೀಗಾಗಿ ಒಂದಷ್ಟು ಸಮಯವನ್ನು ನೀಡುವಂತೆ ಕೋರಿ ನ್ಯಾಯಪೀಠವನ್ನು ವಿನಂತಿಸಿದರು.
“ಅದು ಇಂದೇ ಸಿದ್ಧವಾಗಬೇಕಿತ್ತು” ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ವಿಚಾರಣೆಯನ್ನು ಜುಲೈ ೨೪ ಕ್ಕೆ ಮುಂದೂಡಿತು.
ಖಾಲಿದ್ ಅವರ ಮನವಿಯ ಬಗ್ಗೆ ಮೇ 18ರಂದು ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರ ಪ್ರತಿಕ್ರಿಯೆಯನ್ನು ಕೇಳಿತ್ತು.
ಈ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಖಾಲಿದ್ ತಮ್ಮ ಮೇಲ್ಮನವಿಯಲ್ಲಿ ಪ್ರಶ್ನಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ 18ರಂದು, ಅವರು ಇತರ ಸಹ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಮತ್ತು ಅವರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ನಿಜ ಎಂದು ಕಂಡುಬರುತ್ತಿದೆಯೆಂದು ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಆರೋಪಿಗಳ ಕ್ರಮಗಳು ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ “ಭಯೋತ್ಪಾದಕ ಕೃತ್ಯ” ಎಂದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಖಾಲಿದ್, ಶರ್ಜೀಲ್ ಇಮಾಮ್ ಮತ್ತು ಇತರರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಫೆಬ್ರವರಿ 2020ರ ಗಲಭೆಯ “ಮಾಸ್ಟರ್ ಮೈಂಡ್‌ಗಳು” ಎಂದು ಆರೋಪಿಸಲಾಗಿದೆ. ಈ ಘಟನೆಯಲ್ಲಿ 53 ಜನರು ಸಾವನ್ನಪ್ಪಿದ್ದರು ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಸಿಎಎ ಮತ್ತು ಎನ್ಆರ್‌ಸಿ ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
2020ರ ಸೆಪ್ಟೆಂಬರ್ ತಿಂಗಳಿನಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಖಾಲಿದ್, ಹಿಂಸಾಚಾರದಲ್ಲಿ ಯಾವುದೇ ಕ್ರಿಮಿನಲ್ ಪಾತ್ರವಿಲ್ಲ ಅಥವಾ ಪ್ರಕರಣದ ಇತರ ಯಾವುದೇ ಆರೋಪಿಗಳೊಂದಿಗೆ ತಾನು ಯಾವುದೇ ಪಿತೂರಿಯ ಸಂಪರ್ಕವನ್ನು ಹೊಂದಿಲ್ಲ ಎಂಬ ಆಧಾರದ ಮೇಲೆ ಜಾಮೀನು ಕೋರಿದ್ದರು.
ಖಾಲಿದ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಪೊಲೀಸರು ಹೈಕೋರ್ಟ್ ಮುಂದೆ ವಿರೋಧಿಸಿದ್ದರು, ಅವರು ಮಾಡಿದ ಭಾಷಣವು “ತುಂಬಾ ಲೆಕ್ಕಾಚಾರದಿಂದ ಕೂಡಿದೆ” ಮತ್ತು ಬಾಬರಿ ಮಸೀದಿ, ತ್ರಿವಳಿ ತಲಾಖ್, ಕಾಶ್ಮೀರ, ಮುಸ್ಲಿಮರ ದಮನ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದೆ ಎಂದಿದ್ದರು.