Tuesday, June 25, 2024

ಸತ್ಯ | ನ್ಯಾಯ |ಧರ್ಮ

ಅಘೋಷಿತ ತುರ್ತುಪರಿಸ್ಥಿತಿಯ ಅಗಣಿತ ರೂಪಗಳು

ಜಗತ್ತಿನ ಎಲ್ಲ ಸರ್ವಾಧಿಕಾರಿಗಳೂ ಅಧಿಕಾರಕ್ಕೆ ಏರುವುದು ಪ್ರಜಾತಂತ್ರದ ಮೂಲಕವೇ, ನ್ಯಾಯಸಮ್ಮತ ಚುನಾವಣೆಯ ಮೂಲಕವೇ. ಚುನಾವಣೆಯ ಮೂಲಕವೇ ಅಧಿಕಾರ ಹಿಡಿಯುವ ಈ ಸರ್ವಾಧಿಕಾರಿಗಳು ಅಧಿಕಾರ ಕಳೆದುಕೊಳ್ಳುವ ಭಯದಿಂದ ಮುಂದೆ ಚುನಾವಣೆಯನ್ನೇ ದ್ವೇಷಿಸತೊಡಗುತ್ತಾರೆ; ಚುನಾವಣೆಯನ್ನು ಮ್ಯಾನಿಪ್ಯುಲೇಟ್ ಮಾಡತೊಡಗುತ್ತಾರೆ; ಕೆಲವೊಮ್ಮೆ ಚುನಾವಣೆಯೇ ನಡೆಯದಂತೆ ನೋಡಿಕೊಳ್ಳುತ್ತಾರೆ – ಶ್ರೀನಿವಾಸ ಕಾರ್ಕಳ

‘ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಣೆ’ ಎಂಬ ದೊಡ್ಡ ಅಕ್ಷರಗಳ ಶೀರ್ಷಿಕೆ ಪತ್ರಿಕೆಯಲ್ಲಿ ಕಣ್ಣಿಗೆ ಬಿತ್ತು. ಅವು 1975 ರ ದಿನಗಳು. ಇಂದಿರಾ ಗಾಂಧಿಯವರ ಸರಕಾರ ಕೇಂದ್ರದಲ್ಲಿತ್ತು. ನಾನಾಗ ಹೈಸ್ಕೂಲಿನಲ್ಲಿ ಓದುತ್ತಿದ್ದೆ. ಮನೆಗೆ ಉದಯವಾಣಿ ಪತ್ರಿಕೆ ಬರುತ್ತಿತ್ತು. ರೇಡಿಯೋ ಹೊರತು ಪಡಿಸಿದರೆ, ಹೊರಗಿನ ಮಾಹಿತಿ ಪಡೆಯಲು ಬೇರೆ ಯಾವ ಸಾಧನಗಳೂ ಇರದಿದ್ದುದರಿಂದ, ನಾನು ಪತ್ರಿಕೆಯನ್ನು ಇಷ್ಟಪಟ್ಟು ಓದುತ್ತಿದ್ದೆ. ಅಂತಹ ಒಂದು ದಿನ ಈ ಸುದ್ದಿ ಶೀರ್ಷಿಕೆ ಕಣ್ಣಿಗೆ ಬಿದ್ದಿತ್ತು.

ತುರ್ತುಪರಿಸ್ಥಿತಿ ಎಂದರೆ ಏನು? ಯಾರಿಗೆ ಗೊತ್ತು! ಅದನ್ನು ವಿವರಿಸಿ ಹೇಳುವ ಹಿರಿಯರೂ ಇರಲಿಲ್ಲ. ಹಿರಿಯರಿಗೂ ಅದು ಗೊತ್ತಿದ್ದರಲ್ಲವೇ? ಯಾಕೆಂದರೆ ಸ್ವತಂತ್ರ ಭಾರತದಲ್ಲಿ ಮೊದಲ ಬಾರಿ ಅದು ಘೋಷಣೆಯಾದುದು. ಪತ್ರಿಕೆಯಲ್ಲಿ ಹೆಚ್ಚಿನ ಮಾಹಿತಿಗಳು ಸಿಗುತ್ತಿರಲಿಲ್ಲ (ಇದಕ್ಕೆ ಪತ್ರಿಕಾ ಸೆನ್ಸರ್ ಶಿಪ್ ಕಾರಣ ಎಂಬುದು ಮುಂದೆ ತಿಳಿಯಿತು). ರೇಡಿಯೋ ಹೇಗೂ ಸರಕಾರದ ನಿಯಂತ್ರಣದಲ್ಲಿದ್ದುದರಿಂದ ಅದರಲ್ಲಿ ಸರಕಾರದ ಮಾತುಗಳು ಮಾತ್ರ ಕೇಳಿ ಬರುತ್ತಿದ್ದವು.

ಆದರೆ, ಸಾಂವಿಧಾನಿಕ ಹಕ್ಕುಗಳನ್ನು ಅಮಾನತಿನಲ್ಲಿಟ್ಟಿದ್ದಾರಂತೆ, ವಿರೋಧ ಪಕ್ಷಗಳ ನಾಯಕರನ್ನೆಲ್ಲ ಬಂಧಿಸಿ ಜೈಲಿನಲ್ಲಿಟ್ಟಿದ್ದಾರಂತೆ, ಪತ್ರಿಕೆಗಳಿಗೂ ಸ್ವಾತಂತ್ರ್ಯವಿಲ್ಲವಂತೆ, ಅವರು ಪ್ರಕಟಣೆಗೆ ಮುನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ತೋರಿಸ ಬೇಕಂತೆ, ಹೀಗೆ ಅಂತೆ ಕಂತೆಗಳ ವದಂತಿಗಳು ಕಿವಿಗೆ ಬೀಳುತ್ತಿದ್ದವು. ಇವನ್ನೆಲ್ಲ ಕೇಳುವಾಗ ದೇಶದಲ್ಲಿ ಏನೋ ಆಗುತ್ತಿದೆ ಎಂಬ ಒಂದು ಅಸ್ಪಷ್ಟ ಚಿತ್ರ ಮನಸಿನಲ್ಲಿ ಮೂಡುತ್ತಿತ್ತು.

ಅದೇ ಹೊತ್ತಿನಲ್ಲಿ ಇದಕ್ಕೆಲ್ಲ ಕಾರಣ ಇಂದಿರಾ ಗಾಂಧಿಯಾದುದರಿಂದ, ಸುತ್ತೆಲ್ಲ ಇಂದಿರಾ ವಿರೋಧಿ ಅಲೆಯೊಂದು ಕಾಣಿಸತೊಡಗಿತ್ತು. ಇನ್ನೂ ಹದಿಹರೆಯದಲ್ಲಿರುವ ನಾವು ನಮಗೆ ಗೊತ್ತೇ ಇಲ್ಲದ ರೀತಿಯಲ್ಲಿ ಇಂದಿರಾರನ್ನು ವಿರೋಧಿಸತೊಡಗಿದೆವು; ದ್ವೇಷಿಸತೊಡಗಿದೆವು. ಇಷ್ಟೆಲ್ಲ ಕೋಲಾಹಲಗಳ ನಡುವೆಯೂ ಸಾಮಾನ್ಯರ ಜನಜೀವನ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಸಾಗಿತ್ತು.

ಎರಡು ವರ್ಷಗಳ ಬಳಿಕ ತುರ್ತುಪರಿಸ್ಥಿತಿ ಹಿಂದೆಗೆಯಲಾಯಿತು. ಚುನಾವಣೆ ನಡೆಯಿತು. ಇಂದಿರಾ ಸೋತರು. ಜನತಾ ಪಕ್ಷ ಅಧಿಕಾರಕ್ಕೆ ಬಂತು. ಇಂದಿರಾ ಬಂಧನವಾಯಿತು. ಇಂದಿರಾ ಚಿಕ್ಕಮಗಳೂರು ಚುನಾವಣೆಯಲ್ಲಿ ನಿಂತು ಗೆದ್ದರು. ಕೇವಲ ಎರಡೇ ವರ್ಷಗಳಲ್ಲಿ ಮತ್ತೆ ಇಂದಿರಾ ಪ್ರಧಾನಿಯಾದರು.

ಈ ತುರ್ತುಪರಿಸ್ಥಿತಿಯ ದಿನಗಳಲ್ಲಿ ನಡೆಸಲಾದ ಅತಿರೇಕಗಳು, ಸಂಜಯ್ ಗಾಂಧಿಯ ನಸ್ ಬಂದಿ, ತುರ್ಕ್ ಮನ್ ಗೇಟ್ ಹಗರಣ, ಪೊಲೀಸರ ಕ್ರೌರ್ಯ, ಸಾವು, ನಾಪತ್ತೆಗಳು ಮಾತ್ರವಲ್ಲ ತುರ್ತುಪರಿಸ್ಥಿತಿಯನ್ನು ಎದುರಿಸಿದ ಸಾಹಸದ ಕತೆಗಳೂ ಒಂದೊಂದಾಗಿ ಆನಂತರದ ದಿನಗಳಲ್ಲಿ ಬಯಲಿಗೆ ಬಂದವು. ಒಟ್ಟಿನಲ್ಲಿ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ನಡೆದ ದಾಳಿಯೇ ಆದರೂ ಈ ಕರಾಳ ದಿನಗಳೂ ಭಾರತದ ರಾಜಕೀಯ ಇತಿಹಾಸದ ಪುಸ್ತಕಕ್ಕೆ ರೋಚಕ ಸಂಗತಿಗಳ ಒಂದು ಪುಟವನ್ನು ಸೇರಿಸಿದವು.

ಆನಂತರದ ದಿನಗಳಲ್ಲಿ ಅಗಾಗ ಮತ್ತು ಪ್ರತೀ ವರ್ಷ ಜೂನ್ ತಿಂಗಳಲ್ಲಿ ತುರ್ತುಪರಿಸ್ಥಿತಿಯನ್ನು ನೆನೆಯುವುದು, ಇದಕ್ಕೆ ಕಾರಣರಾದ ಇಂದಿರಾರನ್ನು ಟೀಕಿಸುವುದು ಸಾಮಾನ್ಯವಾಯಿತು. ಇದರಲ್ಲಿ ಭಾರತೀಯ ಜನತಾಪಕ್ಷ ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದರು. ಈಗಲೂ ಮೋದಿಯವರು ತುರ್ತುಪರಿಸ್ಥಿತಿಯನ್ನು ಆಗಾಗ ಉಲ್ಲೇಖಿಸುತ್ತಾ ಅದನ್ನು ಮರೆಯದಂತೆ ನೋಡಿಕೊಳ್ಳುತ್ತಿದ್ದಾರೆ. ನೆನಪಿರಲಿ, ಈಗಿನ ಬಿಜೆಪಿಯ ಅನೇಕ ನಾಯಕರು ಅಂದು ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಜೈಲು ಸೇರಿದ್ದವರು ಮತ್ತು ಸಾಂವಿಧಾನಿಕ ಹಕ್ಕುಗಳ ಪರವಾಗಿ ಗಂಟಲು ಹರಿಯುವಂತೆ ಮಾತನಾಡುತ್ತಿದ್ದವರು.

ಅಘೋಷಿತ ತುರ್ತುಪರಿಸ್ಥಿತಿ

ಇದು ಘೋಷಿತ ತುರ್ತುಪರಿಸ್ಥಿತಿಯ ಕತೆ. ಇನ್ನು ಅಘೋಷಿತ ತುರ್ತುಪರಿಸ್ಥಿತಿ ಹೇಗಿರುತ್ತದೆ? ಅಲ್ಲಿ ತುರ್ತುಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸುವುದಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದ ಎಲ್ಲವೂ ಘೋಷಿತ ತುರ್ತುಪರಿಸ್ಥಿತಿ ಕಾಲದಲ್ಲಿ ಇದ್ದಂತೆಯೇ ಇರುತ್ತದೆ. ಕೆಲವೊಮ್ಮೆ ಇನ್ನೂ ಕರಾಳವಾಗಿರಬಹುದು. ಸಾಂವಿಧಾನಿಕ ಹಕ್ಕುಗಳ ಮೇಲೆ ದಾಳಿ ನಡೆಸಲು ಇದು ಆಳುವವರಿಗೆ ಸುಲಭ ಮತ್ತು ಸುರಕ್ಷಿತ ದಾರಿ ಕೂಡಾ.

ಅಲ್ಲಿ ‘ಮೆಗಲೋಮೇನಿಯಾಕ್’ ಅಂತಾರಲ್ಲ ಅಂತಹ ಒಬ್ಬ ನಾಯಕ ಮೆರೆಯುತ್ತಿರುತ್ತಾನೆ. ಭಾರೀ ಬಹುಮತದ ಸರಕಾರವೊಂದು ಆಡಳಿತ ನಡೆಸುತ್ತಿರುತ್ತದೆ. ಅದಕ್ಕೆ ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ, ಸಂವಾದಗಳಲ್ಲಿ, ಸತ್ ಸಂಪ್ರದಾಯಗಳಲ್ಲಿ ಕಿಂಚಿತ್ತೂ ನಂಬಿಕೆ ಇರುವುದಿಲ್ಲ. ತಮ್ಮ ಮೇಲೆ ಅಂಕೆಹೊಂದಿರುವ ಯಾವ ವ್ಯವಸ್ಥೆಯೂ ಅಸ್ತಿತ್ವದಲ್ಲಿ ಇರಬಾರದು ಎನ್ನುವುದು ಅದರ ಇರಾದೆಯಾಗಿರುತ್ತದೆ. ಭಿನ್ನ ಅಭಿಪ್ರಾಯವನ್ನು ಅದು ದ್ವೇಷಿಸುತ್ತದೆ. ವಿಪಕ್ಷಗಳು ಇರಲೇಬಾರದು ಎಂಬುದು ಅದರ ಸುಪ್ತ ಬಯಕೆ. ಜನಚಳುವಳಿಗಳು, ಜನಪ್ರತಿಭಟನೆಗಳು ಇರಬಾರದು (ಪೊಲೀಸ್ ಬಲ ಬಳಸಿಕೊಂಡು ಜನ ಹೋರಾಟಗಳನ್ನು ಬರ್ಬರವಾಗಿ ಹತ್ತಿಕ್ಕುತ್ತದೆ), ನಿರಂಕುಶ ಪ್ರಭುತ್ವ ಇರಬೇಕು ಎನ್ನುವುದು ಅದರ ಆಸೆಯಾಗಿರುತ್ತದೆ. ಇದನ್ನು ಕಾರ್ಯರೂಪಕ್ಕೆ ತರಲು ಅದು ಒಂದೊಂದೇ ಹೆಜ್ಜೆ ಇರಿಸುತ್ತಾ ಹೋಗುತ್ತದೆ.

ಮಾಧ್ಯಮಗಳ ನಿಯಂತ್ರಣ

ಅದು ಮೊದಲು ಮಾಡುವುದು ಮಾಧ್ಯಮಗಳ ನಿಯಂತ್ರಣ. ಯಾಕೆಂದರೆ ಮಾಧ್ಯಮಗಳು ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿಪಕ್ಷ ಇದ್ದಂತೆ. ಅವು ಸರಕಾರವನ್ನು ಪ್ರಶ್ನಿಸುತ್ತಲೇ ಇರುತ್ತವೆ; ಇಕ್ಕಟ್ಟಿಗೆ ಸಿಲುಕಿಸುತ್ತಲೇ ಇರುತ್ತವೆ; ಸರಕಾರ ಸರ್ವಾಧಿಕಾರದ ಹಾದಿ ಹಿಡಿಯದಂತೆ ನೋಡಿಕೊಳ್ಳುತ್ತಿರುತ್ತವೆ. ಇದಕ್ಕೆ ಅದು ಅನುಸರಿಸುವ ವಿಧಾನ ಮುಖ್ಯವಾಗಿ ಎರಡು. ಒಂದು ಜಾಹೀರಾತುಗಳಂತಹ ಆಮಿಷಗಳು. ಎರಡನೆಯದಾಗಿ ಸರಕಾರಿ ಏಜನ್ಸಿಗಳ ಮೂಲಕದ ದಾಳಿಗಳ ಬೆದರಿಕೆ.

ತನ್ನ ವಿರುದ್ಧ ಇರುವ ಮಾಧ್ಯಮಗಳ ವಿರುದ್ಧ ಜಾಹೀರಾತುದಾರರ ಮೇಲೆ ಪ್ರಭಾವ ಬೀರಿ ಜಾಹೀರಾತುಗಳು ಸಿಗದಂತೆ ಮಾಡಿ ಅವು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುವುದು. ಮಾಧ್ಯಮಗಳಲ್ಲಿರುವ ವಿರೋಧಿ ಪತ್ರಕರ್ತರನ್ನು ಕೆಲಸದಿಂದ ಹೊರಹಾಕಿಸುವುದು. ಸಂಪಾದಕರನ್ನೇ ಬದಲಾಯಿಸಿ ತಮ್ಮ ತಾಳಕ್ಕೆ ಕುಣಿಯುವವರನ್ನು ಆ ಸ್ಥಾನದಲ್ಲಿ ಕೂರಿಸುವುದು. ಇದರ ಮೂಲಕವೂ ಬಗ್ಗದ ಮಾಧ್ಯಮ ಸಂಸ್ಥೆಯನ್ನು ಆಪ್ತ ಉದ್ಯಮಿಯ ಮೂಲಕ ಖರೀದಿಸಿ ಬಿಡುವುದು. ಪತ್ರಕರ್ತರಿಗೆ ಸರಕಾರಿ ಪ್ರಶಸ್ತಿ ನಾನಾ ಸ್ಥಾನಮಾನಗಳ ಮೂಲಕ ಅವರು ಆಳುವವರ ಭಕ್ತರಾಗುವಂತೆ ಚೀರ್ ಲೀಡರ್ ಗಳಾಗುವಂತೆ ಮಾಡುವುದು. ಆಕಾಶವಾಣಿ ದೂರದರ್ಶನವನ್ನು ಸಂಪೂರ್ಣವಾಗಿ ಆಳುವವರ ಮುಖವಾಣಿಯಾಗಿಸುವುದು- ಹೀಗೆ ಒಂದು ಪ್ರಮುಖ ವಿರೋಧದ ದನಿಯನ್ನು ಹೊಸಕಿ ಹಾಕುವುದು.

ಸಿಬಿಐ, ಐಟಿ, ಈಡಿ, ಸಿವಿಸಿ, ಸಿಐಸಿ, ಸಿಎಜಿ, ಲೋಕಸಭಾಧ‍್ಯಕ್ಷ, ರಾಜ್ಯ ಸಭಾಧ್ಯಕ್ಷ, ರಾಜ್ಯಪಾಲರು ಹೀಗೆ ಎಲ್ಲ ಸಂಸ್ಥೆಗಳಲ್ಲಿಯೂ ತಮ್ಮ ಪರ ಇರುವವರನ್ನು ಕೂರಿಸುವುದು. ಅವರು ಸರಕಾರವನ್ನು ಪ್ರಶ್ನಿಸದೆ ತಮ್ಮ ಪರವಾಗಿ ಕೆಲಸ ಮಾಡುವಂತೆ ಮಾಡುವುದು. ನ್ಯಾಯಾಂಗವನ್ನೂ ತಮ್ಮ ತಾಳಕ್ಕೆ ಕುಣಿಯುವಂತೆ ಮಾಡುವುದು. ಇದಕ್ಕಾಗಿ ತಮ್ಮ ಪರ ಒಲವು ಉಳ್ಳವರನ್ನು ನ್ಯಾಯಾಧೀಶರನ್ನಾಗಿ ಮಾಡುವುದು, ತಮ್ಮ ವಿರುದ್ಧ ಇದ್ದಾರೆ ಅನಿಸುವ ನ್ಯಾಯಾಧೀಶರಿಗೆ ಪರೋಕ್ಷ ಬೆದರಿಕೆ ಒಡ್ಡಿ ಅವರೂ ‘ದಾರಿಗೆ ಬರುವಂತೆ’ ಮಾಡುವುದು.

ಸರಕಾರವನ್ನು ವಿರೋಧಿಸುವ ಎನ್ ಜಿ ಒ ಗಳ ಪರವಾನಗಿ ರದ್ದುಪಡಿಸುವುದು, ಅವರ ಆರ್ಥಿಕ ಮೂಲಗಳನ್ನು ಕತ್ತರಿಸುವುದು. ವಿಪಕ್ಷಗಳ ನಾಯಕರ ಮೇಲೆ ಸರಕಾರಿ ಏಜನ್ಸಿಗಳ ಮೂಲಕ ದಾಳಿ ನಡೆಸುವುದು, ಅವರು ಜೈಲು ಸೇರುವಂತೆ ಮಾಡುವುದು, ವಿರೋಧದ ಪ್ರತಿಯೊಂದು ದನಿಗಳನ್ನು ಸುಳ್ಳು ಆರೋಪದ ಮೇಲೆ ಜೈಲಿಗೆ ಹಾಕುವುದು, ‘ಪ್ರಕ್ರಿಯೆಯೇ ಶಿಕ್ಷೆ’ಯೆನಿಸುವ ಮೂಲಕ ವಿರೋಧಿಸುವ ಕೆಲಸದಿಂದ ಅವರೆಲ್ಲರೂ ದೂರ ಉಳಿಯುವಂತೆ ಮಾಡುವುದು.

ಸಂಸತ್‍ ನ ಪ್ರಕ್ರಿಯೆಗಳ ಮಹತ್ವವನ್ನೇ ಇಲ್ಲವಾಗಿಸುವುದು. ಪ್ರಶ್ನೆ ಕೇಳಲು ಅವಕಾಶ ನೀಡದಿರುವುದು, ವಿಪಕ್ಷ ನಾಯಕರು ಮಾತನಾಡುವಾಗ ಅಡ್ಡಿ ಪಡಿಸುವುದು, ಯಾವುದೂ ಆಗದೇ ಹೋದಾಗ ಆ ನಾಯಕನ ಮೇಲೆ ಕೇಸು ಹಾಕಿಸಿ ಆತ ಸಂಸತ್ ನಿಂದ ಹೊರಬೀಳುವಂತೆ ಮಾಡುವುದು. ಒಟ್ಟಾರೆಯಾಗಿ ಅವರಿಗೆ ಚುನಾವಣೆ, ಸಂಸತ್ತು, ಪ್ರಜಾತಂತ್ರ, ಸಂವಿಧಾನ ಎಲ್ಲವೂ ತಮ್ಮ ಕೆಲಸಕ್ಕೆ ಒಂದು ಅಡ್ಡಿಯಂತೆಯೇ ಗೋಚರಿಸುತ್ತಿರುತ್ತದೆ. ಆ ಎಲ್ಲವನ್ನೂ ‘ಇದ್ದೂ ಇಲ್ಲದಂತೆ’ ಮಾಡುವ ಎಲ್ಲ ಯತ್ನಗಳನ್ನೂ ಬಹುತೇಕ ಯಶಸ್ವಿಯಾಗಿ ಮಾಡುತ್ತಿರುತ್ತಾರೆ. ಈ ಎಲ್ಲ ಕಾರಣಗಳಿಂದ ಅಘೋಷಿತ ತುರ್ತುಪರಿಸ್ಥಿತಿ ಘೋಷಿತ ತುರ್ತುಪರಿಸ್ಥಿತಿಗಿಂತ ಹೆಚ್ಚು ಅಪಾಯಕಾರಿ.

ಎಲ್ಲವೂ ಕಾನೂನು ಪ್ರಕಾರವೇ!!

ನೆನಪಿರಲಿ, ಜಗತ್ತಿನ ಎಲ್ಲ ಸರ್ವಾಧಿಕಾರಿಗಳೂ ಅಧಿಕಾರಕ್ಕೆ ಏರುವುದು ಪ್ರಜಾತಂತ್ರದ ಮೂಲಕವೇ, ನ್ಯಾಯಸಮ್ಮತ ಚುನಾವಣೆಯ ಮೂಲಕವೇ. ಚುನಾವಣೆಯ ಮೂಲಕವೇ ಅಧಿಕಾರ ಹಿಡಿಯುವ ಈ ಸರ್ವಾಧಿಕಾರಿಗಳು ಅಧಿಕಾರ ಕಳೆದುಕೊಳ್ಳುವ ಭಯದಿಂದ ಮುಂದೆ ಚುನಾವಣೆಯನ್ನೇ ದ್ವೇಷಿಸತೊಡಗುತ್ತಾರೆ; ಚುನಾವಣೆಯನ್ನು ಮ್ಯಾನಿಪ್ಯುಲೇಟ್ ಮಾಡತೊಡಗುತ್ತಾರೆ; ಕೆಲವೊಮ್ಮೆ ಚುನಾವಣೆಯೇ ನಡೆಯದಂತೆ ನೋಡಿಕೊಳ್ಳುತ್ತಾರೆ.

ಪ್ರಜಾತಂತ್ರದ ಪ್ರತಿಯೊಂದು ಸಂಸ್ಥೆಯನ್ನೂ ಕಳಚಿ ಹಾಕುತ್ತಾ ಹೋಗುತ್ತಾರೆ. ಸಂವಿಧಾನ ಕೇವಲ ಪುಸ್ತಕದ ಬದನೆ ಕಾಯಿಯಾಗಿರುತ್ತದೆ. ಎಲ್ಲ ಕಾನೂನು ಬಾಹಿರ ಕೆಲಸಗಳೂ ‘ಕಾನೂನು ಪ್ರಕಾರವೇ’ ನಡೆಯುತ್ತವೆ. ತುರ್ತುಪರಿಸ್ಥಿತಿ ಅಧಿಕೃತವಾಗಿ ಜಾರಿಯಲ್ಲಿರುವುದಿಲ್ಲ. ಆದರೆ ಅಧಿಕೃತ ತುರ್ತುಪರಿಸ್ಥಿತಿಗಿಂತ ಕರಾಳವಾಗಿರುತ್ತದೆ ಮತ್ತು ದೀರ್ಘಕಾಲ ಇರುತ್ತದೆ. ಘೋಷಿತ ತುರ್ತುಪರಿಸ್ಥಿತಿ ಒಂದೆರಡು ವರ್ಷದಲ್ಲಿ ಮುಗಿದರೆ ಇದು ದಶಕ ಕಳೆದರೂ ಮುಗಿಯುವುದಿಲ್ಲ.

ಇದನ್ನು ಓದುವಾಗ ನಿಮಗೆ ಆಪರೇಶನ್ ಕಮಲ, ಚುನಾಯಿತ ಸರಕಾರಗಳ ಉರುಳಿಸುವಿಕೆ, ಚುನಾವಣಾ ಬಾಂಡ್, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ವಿಪಕ್ಷ ನಾಯಕರ ಬಂಧನ, ‘ಒಂದು ದೇಶ.. ಒಂದು.. ಒಂದು.. ಒಂದು..’ಗಳ ಹೇರಿಕೆ, ಎನ್ ಜಿ ಒ ಗಳು, ಆಮ್ನೆಸ್ಟಿ ಇಂಟರ್ ನ್ಯಾಶನಲ್, ಗ್ರೀನ್ ಪೀಸ್, ರಾಜ್ಯಪಾಲರು, ಚುನಾವಣಾ ಆಯೋಗ, ನ್ಯಾಯಾಂಗ, ಸಿಬಿಐ, ಈಡಿ, ಐಟಿ, ಎನ್ ಡಿ ಟಿ ವಿ, ಜೆ ಎನ್ ಯು, ಸ್ಟಾನ್ ಸ್ವಾಮಿ, ತೀಸ್ತಾ ಸೆಟಲ್ ವಾಡ್, ಸುಧಾ ಭಾರದ್ವಾಜ್, ಆನಂದ ತೇಲ್ತುಂಬ್ಡೆ, ಸಿದ್ದಿಖಿ ಕಪ್ಪನ್, ಉಮರ್ ಖಾಲೀದ್, ಸಂಸತ್ತು, ರಾಹುಲ್ ಸಂಸದ ಸ್ಥಾನ ವಜಾ, ಎಲ್ಲ ನೆನಪಾಗುತ್ತಿದೆಯೇ? ನೆನಪಾಗುತ್ತಿದೆಯಾದರೆ ಅದು ಕೇವಲ ಕಾಕತಾಳೀಯ, ಅಷ್ಟೇ!

ಶ್ರೀನಿವಾಸ ಕಾರ್ಕಳ

ಚಿಂತಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

Related Articles

ಇತ್ತೀಚಿನ ಸುದ್ದಿಗಳು