Saturday, June 15, 2024

ಸತ್ಯ | ನ್ಯಾಯ |ಧರ್ಮ

ಸಮಾನ ನಾಗರಿಕ ಸಂಹಿತೆ |  ಮಹಿಳೆಯರೂ ಪುರುಷರಷ್ಟೇ ಸಮಾನರು ಎಂಬ ಮಾನಸಿಕತೆಯನ್ನು ಮೊದಲು ತಲಪಬೇಕು – ಅಖಿಲಾ ವಿದ್ಯಾಸಂದ್ರ

ಮಂಗಳೂರು : ನಮಗೇನು ಬೇಕು ಎಂಬುದನ್ನು ತೀರ್ಮಾನಿಸಿದ ಬಳಿಕ UCC ತರುವಂತಹ ಮಾನಸಿಕತೆಗೆ ಸಿದ್ಧರಾಗಿದ್ದರೆ ಮೊದಲು ಮಹಿಳಾ ಮಸೂದೆ ಜಾರಿಯಾಗಿರುತ್ತಿತ್ತು. ಲೋಕಸಭೆಯಲ್ಲಿ ಪಕ್ಕದ ಸೀಟನ್ನು ಮಹಿಳೆಯರಿಗೆ ಬಿಟ್ಟುಕೊಡದವರು, LGBTQ ಗಳನ್ನು ಸಹಿಸದವರು  ತಮ್ಮ ಕುಟುಂಬಗಳಲ್ಲಿ ಸಮಾನ ಆಸ್ತಿ ಹಕ್ಕನ್ನು ನೀಡಲು ಸಿದ್ಧರಿದ್ದಾರೆಯೇ ? LGBTQ ಗಳಿಗೆ ದತ್ತು ಸ್ವೀಕಾರದ ಹಕ್ಕು ಇರುವುದಿಲ್ಲ. ಎಲ್ಲರಿಗೂ ಸಮಾನ ಹಕ್ಕು ಅಂತಾದರೆ ಅವರಿಗೂ ದತ್ತು ಹಕ್ಕನ್ನು UCC  ರೂಪಿಸುವವರು ನೀಡಲು ಸಿದ್ಧರಿದ್ದಾರೆಯೇ  ಎಂದು ಬೆಂಗಳೂರಿನ ವಕೀಲೆ ಅಖಿಲ ವಿದ್ಯಾಸಂದ್ರ ಖಾರವಾಗಿ ಪ್ರಶ್ನಿಸಿದರು.

ಅವರು ಕರಾವಳಿ ಲೇಖಕಿ ವಾಚಕಿಯರ ಸಂಘ, ಡೀಡ್ಸ್‌ ಮತ್ತು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಆಶ್ರಯದಲ್ಲಿ ನಡೆದ ಸಮಾನ ನಾಗರಿಕ ಸಂಹಿತೆ- ಒಳ ಹೊರಗು ವಿಚಾರಸಂಕಿರಣದಲ್ಲಿ ಮಾತಾಡುತ್ತಿದ್ದರು.

ಮಹಿಳೆಯರ ಹಕ್ಕುಗಳನ್ನು ಸುಧಾರಿಸಲು ಹೊರಟಿದ್ದೇವೆ ಎನ್ನುತ್ತಾರೆ. ಹಿಂದೂ ಅವಿಭಕ್ತ ಕುಟುಂಬದಲ್ಲಿ ಆಸ್ತಿ ಹಂಚಿಕೆ ಎಷ್ಟೊಂದು ಜಟಿಲವಾಗಿದೆಯೆಂದರೆ ಅದನ್ನು ಅಧ್ಯಯನ ಮಾಡಲು ಎರಡು ವರ್ಷಗಳೇ ಸಾಲವು. ಹೀಗಿರುವಾಗ ಏನನ್ನು ಜ್ಯಾರಿಗೆ ತರಲು ಇವರು ಹೊರಟಿದ್ದಾರೆ? ಮಹಿಳೆಯರಿಗೆ ಮೌಲವಿಗಳಾಗಲು, ಪಾದ್ರಿಗಳಾಗಲು, ಪೂಜಾರಿಗಳಾಗಲು ಇದರಲ್ಲಿ ಅವಕಾಶ ಇದೆಯೇ? ಬುಡಕಟ್ಟು ಜನಾಂಗದವರಲ್ಲಿ ಹುಡುಗ ಹುಡುಗಿ ಇಷ್ಟಪಟ್ಟರೆ ಮೊದಲು ಕಾಡೊಳಗೆ ಹೋಗುತ್ತಾರೆ. ದೈಹಿಕವಾಗಿ, ಮಾನಸಿಕವಾಗಿ ಪರಸ್ಪರ ಜತೆಯಾಗಿರಬಹುದೆಂಬ ನಂಬಿಕೆ ಅವರಿಗೆ ಬಂದರೆ ಮಾತ್ರ ಅವರು ಮದುವೆಯಾಗುತ್ತಾರೆ. ಇಂತಹ ಸಂಪ್ರದಾಯವನ್ನು UCC ಒಳಗಡೆ ಹೇಗೆ ತರುವುದು? ಎಂಬಿತ್ಯಾದಿ ಹಲವಾರು ಪ್ರಶ್ನೆಗಳನ್ನು ಎತ್ತಿದರು. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಾನರು ಎಂಬ ಭಾವನೆ ಮೊದಲು ಮೂಡಬೇಕು. ಜತೆಗೆ ಮಹಿಳೆಯರೂ ನಾವು ಪುರುಷರಿಗೆ ಸಮಾನರು ಎಂಬ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಮಾನ ನಾಗರಿಕ ಸಂಹಿತೆ – ಆಡಳಿತಾತ್ಮಕ ನೆಲೆಯ ಬಗ್ಗೆ ಮಾತಾಡಿದ ಖ್ಯಾತ ವಕೀಲ ದಿನೇಶ್‌ ಹೆಗ್ಡೆ ಉಳೇಪಾಡಿ ಬಹುತ್ವಕ್ಕೆ ಅದರದ್ದೇ ಆದ  ವೈಶಿಷ್ಟ್ಯಗಳಿವೆ.  ನಾವು ಅವುಗಳಿಗೆ ತೊಂದರೆ ಮಾಡಬಹುದೇ? ನೆಮ್ಮದಿಯ ಜೀವನದಲ್ಲಿ ಒಂದು ಸಂಪ್ರದಾಯ ಇದೆ ಅಂತಾದರೆ UCC ಯ ಹೆಸರಿನಲ್ಲಿ ಅದನ್ನು ಕಲುಷಿತ ಗೊಳಿಸಬಹುದೇ? ತೊಂದರೆಗಳನ್ನು ನಿವಾರಿಸುವ ಹಾಗೆ ಕಾನೂನುಗಳನ್ನು ರೂಪಿಸಬೇಕೇ ಹೊರತು ತೊಂದರೆಗಳು ಆಗುವ ಹಾಗೆ ಮಾಡಬಾರದು. ಸಂಪ್ರದಾಯಗಳು ಕಾಲಕ್ರಮೇಣ ನಾಗರೀಕತೆಗೆ ಒಗ್ಗಿಕೊಳ್ಳುತ್ತವೆ. ಹಾಗೆ ಒಗ್ಗಿಕೊಳ್ಳುವವರೆಗೆ ನಾವು ಕಾಯಬೇಕು ಎಂದರು.

ಶಾಬಾನು ಪ್ರಕರಣವನ್ನು ಉಲ್ಲೇಖಿಸಿದ ಅವರು ಹಕ್ಕುಗಳಿಗೆ ತೊಂದರೆಯಾಗುತ್ತಿದೆಯಾದರೆ ಆ ಸಮುದಾಯಗಳು ಈ ಬಗ್ಗೆ ಮಾತಾಡಬೇಕು, ಡಿಬೇಟ್‌ ಮಾಡಬೇಕು, ಒಂದು ಒಮ್ಮತಕ್ಕೆ ಬಂದಮೇಲೆ ಅದನ್ನು ಮುನ್ನೆಲೆಗೆ ತರಬೇಕು. ಬಳಿಕ ಅದು ಸರಕಾರವನ್ನು ತಲಪಿ ಕಾನೂನು ರಚನೆಯಾಗಬೇಕು. ಹಿಂದು ಯುವಕರು ಮತ್ತು ಹಿಂದೂತ್ವವಾದಿಗಳು ಯೋಚನೆ ಮಾಡಬೇಕಾದ ವಿಚಾರ ಇದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾನ ನಾಗರಿಕ ಸಂಹಿತೆ ಮತ್ತು ಬಹುತ್ವದ ಬಗ್ಗೆ ಮಾತಾಡಿದ ಪ್ರಜಾವಾಣಿಯ ಯು ಟಿ ಫರ್ಝಾನ ಆಶ್ರಫ್‌ ಭಾರತ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಹಿನ್ನಡೆಯನ್ನು ತೋರಿಸುತ್ತಿರುವ ಈ ದಿನಗಳಲ್ಲಿ UCC ಯಂತಹ ಚರ್ಚೆಯನ್ನು ಸರಕಾರವು ಮುನ್ನೆಲೆಗೆ ತಂದಿರುವುದು ಸರಿಯಲ್ಲ ಎಂದು ಹೇಳುತ್ತಾ ವೈಯಕ್ತಿಕ ಕಾನೂನಿನ ಒಳಗಿರುವ ನ್ಯೂನತೆಗಳನ್ನು ನಾವೇ ವಿಮರ್ಶೆಗೆ ಒಡ್ಡಿಕೊಂಡು ಸುಧಾರಣೆಗೆ ಪ್ರಯತ್ನಿಸಬೇಕು. ಇಲ್ಲವಾದರೆ ಆಡುವ ಮಾತುಗಳು ಆತ್ಮವಂಚನೆಯಾಗುತ್ತದೆ ಎಂದು ಹೇಳಿದರು.  ಮುಸ್ಲಿಮರಲ್ಲಿರುವ ಬಹುಪತ್ನಿತ್ವ ಹೆಣ್ಣಿನ ಘನತೆಗೆ ಪೂರಕವಾದುದಲ್ಲ ನಿಜ. ಆದರೆ ಬಹು ಪತ್ನಿತ್ವ ಮುಸ್ಲಿಮರಲ್ಲಿ ಮಾತ್ರವೇ ಇರದೆ ಅದು ಹಿಂದೂಗಳಲ್ಲೂ ಇದೆ ಎಂಬುದಕ್ಕೆ1961ರ ಅಂಕಿ ಅಂಶಗಳನ್ನು ಉಲ್ಲೇಖಿಸಿ ಮುಸ್ಲಿಮರಲ್ಲಿ 5.7% ಇದ್ದರೆ ಹಿಂದೂಗಳಲ್ಲಿ 5.8% ಇದೆ ಎಂದರು. ಎಲ್ಲ ಧರ್ಮದೊಳಗಿನ ಚಿಕ್ಕ ಚಿಕ್ಕ ಹುಳುಕುಗಳನ್ನು ಗುರುತಿಸಿಕೊಂಡು ಎಲ್ಲ ಧರ್ಮದೊಳಗಿನ ಒಳಿತುಗಳನ್ನು ಸೇರಿಸಿ ಈ ಸರಕಾರ UCC  ಮಾಡಲಾರದು ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಕಾನೂನಿನ ಒಳಗಡೆ, ಧರ್ಮದ ಒಳಗಡೆ ಇರುವ ಲಿಂಗತಾರತಮ್ಯವನ್ನು ನಿವಾರಿಸುವುದು ಬಹ ಮುಖ್ಯ. ಆದರೆ ಲವ್‌ ಜಿಹಾದ್‌ ಹೆಸರಿನಲ್ಲಿ ಸಂಗಾತಿ ಆಯ್ಕೆಯ ನಿರಾಕರಣೆಯಾಗಿದೆ. ಟ್ರಿಪಲ್‌ ತಲಾಖ್‌ ನಿಷೇಧದ  ಮೂಲಕ ಗಂಡುಮಕ್ಕಳನ್ನು ಕ್ರಿಮಿನಲ್‌ ಮಾಡಿ ಜೈಲಿಗೆ ತಳ್ಳಿ ಅವರ ಹೆಂಡತಿಯರನ್ನು ಅತಂತ್ರಗೊಳಿಸಲಾಗಿದೆ. ಹೀಗೆ, ಮಹಿಳೆಯರಿಗಾದ ಅನ್ಯಾಯವನ್ನು ಸರಿಪಡಿಸಲು ಆಸಕ್ತಿವಹಿಸದ ಸರಕಾರ  ಈಗ ನ್ಯಾಯ ಒದಗಿಸುವುದೇ ಎಂದು ವಿಚಾರ ಸಂಕಿರಣದ ಅಧ್ಯಕ್ಷರಾಗಿದ್ದ ಡೀಡ್ಸ್‌ ಸಂಸ್ಥೆಯ ಮರ್ಲಿನ್‌ ಮಾರ್ಟಿಸ್‌ ತಮ್ಮ ಆತಂಕವನ್ನು ತೆರೆದಿಟ್ಟರು.

ಕ.ಲೇ.ವಾ.ಸಂ.ದ ಅಧ್ಯಕ್ಷೆ  ಜ್ಯೋತಿ ಚೇಳ್ಯಾರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಮಂಜುಳಾ ಸುನಿಲ್‌ ಧನ್ಯವಾದ ಸಮರ್ಪಿಸಿದರು. ಶುಭಾ ಮತ್ತು ಲಗ್ಮಾ ಸಂವಿಧಾನ ಪ್ರಸ್ತಾವನೆಯನ್ನು ಹಾಡಿದರು. ಚಿತ್ರಾ ಫಾಲ್ಗುಣಿ ನಿರ್ವಹಣೆ ಮಾಡಿದರು.     

Related Articles

ಇತ್ತೀಚಿನ ಸುದ್ದಿಗಳು