Thursday, June 13, 2024

ಸತ್ಯ | ನ್ಯಾಯ |ಧರ್ಮ

ಉತ್ತರಾಖಂಡದಲ್ಲಿ ಇಂದು ಏಕರೂಪ ನಾಗರಿಕ ಸಂಹಿತೆ ಜಾರಿ: ಎಲ್ಲ ಧರ್ಮದವರಿಗೂ ಒಂದೇ ಕಾನೂನು

ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು ಮಂಗಳವಾರ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಡಿಸಿದರು. ಕೆಲವರು ಶಾಸಕರು ಜೈ ಶ್ರೀರಾಮ ಘೋಷಣೆಯ ಮೂಲಕ ಮಸೂದೆಯನ್ನು ಸದನದಲ್ಲಿ ಸ್ವಾಗತಿಸಿದರು.
ನಿನ್ನೆ ಮಸೂದೆ ಕುರಿತು ಮಾತನಾಡಿದ್ದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಮಸೂದೆ ರಾಜ್ಯದ ಎಲ್ಲಾ ವರ್ಗಗಳ ಒಳಿತಿಗಾಗಿ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮತ್ತು ‘ಏಕ್ ಭಾರತ್, ಶ್ರೇಷ್ಠ ಭಾರತ್’ ದೃಷ್ಟಿಯನ್ನು ಬೆಂಬಲಿಸುವುದಕ್ಕಾಗಿ ಎಂದರು.


ಈ ಮಸೂದೆಯಲ್ಲಿ ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹದ ಸಂಪೂರ್ಣ ನಿಷೇಧಿಸಲಾಗಿದೆ. ಎಲ್ಲಾ ಜಾತಿ, ಧರ್ಮಗಳ ಹುಡುಗಿಯರಿಗೆ ಪ್ರಮಾಣಿತ ವಿವಾಹದ ವಯಸ್ಸು ಮತ್ತು ವಿಚ್ಛೇದನಕ್ಕೆ ಏಕರೂಪದ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ. ಲಿಂಗ ಸಮಾನತೆ ಮತ್ತು ಸಾಮಾಜಿಕ ಒಗ್ಗಟ್ಟು ಪ್ರತಿಪಾದಿಸಲಾಗಿದೆ. ನಿನ್ನೆ ಆರಂಭವಾದ ನಾಲ್ಕು ದಿನಗಳ ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ಈ ವಿಚಾರಗಳು ಚರ್ಚೆಯಾಗಲಿವೆ ಎಂದು ದಾಮಿ ಹೇಳಿಕೊಂಡಿದ್ದಾರೆ.


ವರದಿಗಳ ಪ್ರಕಾರ, ಯುಸಿಸಿ ಅನುಷ್ಠಾನ ಸಂಬಂಧ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದಲ್ಲಿ ಸರ್ಕಾರ ನೇಮಿಸಿದ್ದ ಸಮಿತಿಯು ನಾಲ್ಕು ಸಂಪುಟಗಳ 749 ಪುಟಗಳ ವರದಿಯನ್ನು ಸಲ್ಲಿಸಿತ್ತು. ಇದಕ್ಕೂ ಮುನ್ನ ಸಮಿತಿಯು ಆನ್‌ಲೈನ್‌ನಲ್ಲಿ 2.33 ಲಕ್ಷ ಲಿಖಿತ ಅಭಿಪ್ರಾಯಗಳನ್ನು ಸಂಗ್ರಹಿಸಿದೆ ಮತ್ತು 70ಕ್ಕೂ ಹೆಚ್ಚು ಸಾರ್ವಜನಿಕ ವೇದಿಕೆಗಳ ಮೂಲಕ ಜನರ ಪ್ರತಿಕ್ರಿಯೆ ಪಡೆದಿದೆ. ಕರಡು ಮಸೂದೆ ಸಿದ್ದಪಡಿಸಲು ಸಮಿತಿ ಸದಸ್ಯರು ಸರಿಸುಮಾರು 60,000 ಜನರ ಸಹಾಯ ಪಡೆದುಕೊಂಡಿದ್ದಾರೆ.
ಯುಸಿಸಿ ಕರಡು ಮಸೂದೆ ನಾಗರಿಕ ಜೀವನದ ವಿವಿಧ ಅಂಶಗಳನ್ನು ಒಳಗೊಂಡಿದೆ. ಉತ್ತರಾಧಿಕಾರ ಹಕ್ಕುಗಳು, ಕಡ್ಡಾಯ ವಿವಾಹ ನೋಂದಣಿ, ಮತ್ತು ಮದುವೆಯ ಮೊದಲು ಅವರ ಶಿಕ್ಷಣದ ಅನ್ವೇಷಣೆಗೆ ಅನುಕೂಲವಾಗುವಂತೆ ಹುಡುಗಿಯರಿಗೆ ಮದುವೆಯ ವಯಸ್ಸನ್ನು ಹೆಚ್ಚಿಸುವ ಶಿಫಾರಸು. ತಮ್ಮ ವಿವಾಹಗಳನ್ನು ನೋಂದಾಯಿಸಲು ವಿಫಲರಾದ ದಂಪತಿಗಳಿಗೆ ಸರ್ಕಾರಿ ಸೌಲಭ್ಯಗಳ ನಿರಾಕರಣೆ ಇತ್ಯಾದಿ ಮಸೂದೆಯಲ್ಲಿ ಸೇರಿವೆ ಎಂದು ತಿಳಿದು ಬಂದಿದೆ.


ಯುಸಿಸಿ ಕರಡು ಮಸೂದೆ ಸಾರ್ಜವಜನಿಕರಿಗೆ ಲಭ್ಯವಾಗದಿದ್ದರೂ, ಇದು ಧಾರ್ಮಿಕ ಸಂಬಂಧಗಳ ಹೊರತಾಗಿಯೂ ಮದುವೆ, ವಿಚ್ಛೇದನ,ಆಸ್ತಿ ಮತ್ತು ಪಿತ್ರಾರ್ಜಿತ ವಿಷಯಗಳನ್ನು ಒಳಗೊಂಡಿರುವ ಕಾನೂನು ಚೌಕಟ್ಟನ್ನು ಸ್ಥಾಪಿಸಲಿದೆ. ಯುಸಿಸಿಯನ್ನು ಅಳವಡಿಸಿಕೊಂಡ ಸ್ವಾತಂತ್ರ್ಯೋತ್ತರ ಭಾರತದ ಮೊದಲ ರಾಜ್ಯ ಉತ್ತರಾಖಂಡವಾಗಿದೆ.

Related Articles

ಇತ್ತೀಚಿನ ಸುದ್ದಿಗಳು