Friday, June 14, 2024

ಸತ್ಯ | ನ್ಯಾಯ |ಧರ್ಮ

ಊಹೆಗೂ ನಿಲುಕದ ಬೋಪಯ್ಯನ ನಡೆ

(ಈ ವರೆಗೆ..)

ಬೋಪಯ್ಯನ ಮೊದಲ ಹೆಂಡತಿಯನ್ನು ಮದುವೆಗೆ ಕರೆಯಲು ಹೋದ ಅವ್ವನನ್ನು  ಆಕೆ  ಸಮಾಧಾನಿಸಿ ಮದುವೆಯ ಕೊನೆಯ ದಿನ ಬರುವುದಾಗಿ ತಿಳಿಸುತ್ತಾಳೆ.  ಆಕೆಗೆ ಹಿಂದಿನ ನೆನಪುಗಳೆಲ್ಲ ಧುತ್ತನೆ ಎದುರಾಗುತ್ತವೆ. ತಾನು ತನ್ನ ಮಾವ ರಾಚಪ್ಪನೊಡನೆ ಮಂಚದಲ್ಲಿರುವಾಗ ದಿಢೀರನೆ ಮನೆಗೆ ಬಂದ ಬೋಪಯ್ಯನಿಗೆ  ಆದ ಶಾಕ್‌ ನಿಂದ ಆತ ಚೇರಿಸಿಕೊಳ್ಳಲೇ ಇಲ್ಲ. ಒಂದೇ ಮನೆಯಲ್ಲಿದ್ದರೂ ಹೆಂಡತಿಯೊಡನೆ ಯಾವ ಸಂಪರ್ಕವೂ ಆ ಮೇಲೆ ಇರಲಿಲ್ಲ. ಮುಂದೆ ಅವರ ಸಂಸಾರ ಸರಿಯಾಯಿತೇ? ಓದಿ ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಇಪ್ಪತ್ತಾರನೆಯ ಕಂತು.

ಇತ್ತೀಚಿಗೆ ಬೋಪಯ್ಯನ ಅವ್ವ ನರಸಮ್ಮ ” ನಂಗೂ ವಯಸ್ಸಾಯ್ತು ಕಣ್ಲಾ ಬೋಪ. ಅಡ್ಗೆ ಕ್ವೊಣೆ ಒಳಗೆ ಬೇಯಕಾಗಕಿಲ್ಲ. ಕ್ವಾಟೆ ಗೆದ್ದೊ ಕ್ವಾಣೆ ಗೆದ್ದೊ ಅನ್ನೊಂಗಾಗೈತೆ. ಈ ಹಟನೆಲ್ಲಾ ಬುಟ್ಟು ನಿನ್ನ ಹೆಂಡ್ರು ಮಾಡ್ಹಾಕಿದ್ದು ಉಣ್ಣು” ಎಂದು ವರಾತ ತೆಗೆದುಕೊಂಡು ಕುಳಿತಿದ್ದಳು. ಗಾಣದೆತ್ತಿನಂತೆ ಹಗಲು ರಾತ್ರಿ ಎನ್ನದೆ ಹೊಲದಲ್ಲಿ ದುಡಿಯುತ್ತಾ ತನ್ನ ಸಂಕಟ ಮರೆಯುತ್ತಿದ್ದ ಬೋಪಯ್ಯನಿಗೆ ಹೊಟ್ಟೆಗೆ ಅಡವಾಗಿ ಕೂಳು ಬೀಳದೆ ಮೈ ಕಸುವೆಲ್ಲಾ ಇಂಗ ತೊಡಗಿತ್ತು. 

ಒಂದು ದಿನ ಇದ್ದಕ್ಕಿದ್ದಂತೆ ಬೋಪಯ್ಯ ಯಾವ ಸುಳಿವು ಕೊಡದೆ ದೂರದ ಅಂಬರಪುರದ ಸಾಕಮ್ಮನಿಗೆ ತಾಳಿ ಕಟ್ಟಿ ಕೊಂಡು  ಬಂದು ಅಪ್ಪ ಅವ್ವನ ಮುಂದೆ ನಿಲ್ಲಿಸಿದ. ಮುಸ್ಸಂಜೆ ದೀಪ ಹತ್ತಿಸುವ ಹೊತ್ತು. ಘಮ್ಮೆನ್ನುತ್ತಿದ್ದ ಕೊರಳಿನ ಹಾರ ಸಮೇತ ಹೀಗೆ ಪ್ರತ್ಯಕ್ಷನಾದ ಮಗನನ್ನು ಕಂಡು ದಂಗುಬಡಿದ  ರಾಚಪ್ಪಯ್ಯ, ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಂಡದ್ದರಿಂದ ಮಾತು ಸತ್ತವನಂತೆ ಮೂಕವಾಗಿ ಬೆನ್ನು ತಿರುಗಿಸಿ ಒಳ ಕೋಣೆಗೆ ನಡೆದ. ಅವ್ವ ನರಸಮ್ಮ ಮಾತ್ರ ಬೋರಾಡಿ ಗೋರಾಡಿ ಒಂದಷ್ಟು ಬೊಬ್ಬೆಹಾಕಿ ಕಣ್ಣೀರಿಟ್ಟು ಹಜಾರದ ಮೂಲೆ ಹಿಡಿದು ಕೂತಳು. ತನ್ನ ಊಹೆಗೂ ನಿಲುಕದ ಗಂಡನ ಈ ನಡೆಯಿಂದ ಸ್ತಂಭೀಭೂತಳಾದ ದೇವಿರಮ್ಮ, ತಾನು ಮಾಡಿದ ಅನ್ಯಾಯಕ್ಕೆ ತಕ್ಕ ಶಾಸ್ತಿಯಾಯಿತು ಎಂದು ತನಗೆ ತಾನೇ ಶಪಿಸಿಕೊಳ್ಳುತ್ತಾ ದುಃಖದಿಂದ ಮಡುಗಟ್ಟಿದ್ದ ಎದೆಯ ಭಾರವನ್ನು ತೋರಗೊಡದೆ, ಹೊಸ್ತಿಲ ಬಳಿ ಅಕ್ಕಿ ತುಂಬಿದ ಸೇರನ್ನಿಟ್ಟು, ಆರತಿ ಎತ್ತಿ ತಂಗಿಯನ್ನು ಒಳ ಕರೆದು ಕೊಂಡಳು.

ಈ ಅಂಬರಪುರದ ಸಾಕಮ್ಮ ಎಣ್ಣೆ ಗೆಂಪಿನ ಕಟ್ಟು ಮಸ್ತಾದ ಆಳು. ಈಕೆ ಸುಮಾರು ಆರೇಳು ವರ್ಷದ ಆಡುವ ಮಗುವಾಗಿದ್ದಾಗಲೇ ಬಾಲ್ಯ ವಿವಾಹ ಮಾಡಿದ್ದರಂತೆ. ಹೀಗೆ ವಿವಾಹವಾದ ವರ್ಷದಲ್ಲೇ ಗಂಡ ಎನ್ನಿಸಿಕೊಂಡ ಸಣ್ಣ ಕೂಸು ಪ್ಲೇಗಿಗೆ ಬಲಿಯಾಗಿ ಪ್ರಾಣ ಬಿಟ್ಟಿತ್ತು. ಇದ್ಯಾವುದರ ಅರಿವೇ ಇಲ್ಲದಂತೆ ಗದ್ದೆ ಬಯಲು ದನ ಕುರಿಗಳೊಂದಿಗೆ ಎಗ್ಗಿಲ್ಲದೆ ಆಡುತ್ತಾ, ಮೈ ಕೈ ತುಂಬಿಕೊಂಡು ದುಂಡಾಗಿ ಬೆಳೆದ ಸಾಕಮ್ಮನನ್ನು ಊರಿನ ಹಲವು ಸಿರಿವಂತ  ಚಪಲಗಾರ ಚನ್ನಿಗರು ಗುಟ್ಟಾಗಿ  ಕೂಡಾವಳಿ ಮಾಡಿಕೊಳ್ಳಲು ಕೇಳಿದ್ದರು. 

ಅರಿವು ಮೂಡುವ ಮುನ್ನವೆ ಗಂಡನನ್ನು ಕಳೆದುಕೊಂಡು ವಿಧವೆಯ ಪಟ್ಟ ಕಟ್ಟಿಕೊಂಡಿದ್ದ  ಮಗಳು, ಹೀಗೆ ಗುಟ್ಟಾಗಿ ಇಟ್ಟುಕೊಂಡವಳಂತೆ  ಬದುಕುವುದನ್ನು ನೋಡಲಿಚ್ಚಿಸದ ಸಾಕಮ್ಮನ  ಅವ್ವ ಅಪ್ಪ, ಒಂದೇ ಊರಿನಲ್ಲಿ ನಂಟು ಬೆಳೆಸುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರು. ಹಾಗಾಗಿ ಮದುವೆಯ ವಯಸ್ಸು ಮೀರುತ್ತಾ ಬಂದರೂ ಮಗಳನ್ನು ಮನೆಯಲ್ಲಿಯೇ ಇಟ್ಟು ಕೊಂಡು ಯೋಗ್ಯ ವರನಿಗಾಗಿ  ಹುಡುಕಾಟ ನಡೆಸಿದ್ದರು. 

ಅಂಬರಪುರದಲ್ಲಿಯೇ ವಾಸವಾಗಿದ್ದ ಬೋಪಯ್ಯನ ಸ್ನೇಹಿತ ಕರುಂಬಯ್ಯ, ಇತ್ತೀಚಿಗಷ್ಟೇ ಹೊಸ ನಾರಿಪುರದ ಹೊಟೇಲಿನಲ್ಲಿ ಉಣ್ಣುತ್ತಾ ಕುಳಿತಿದ್ದ ಬೋಪಯ್ಯನಿಗೆ ಸಿಕ್ಕಿದ್ದ. ಅದು ಇದು ಮಾತನಾಡುತ್ತಾ ತನ್ನೂರಿನ ಸಾಕಮ್ಮನ ವಿಷಯವನ್ನು ಪ್ರಸ್ತಾಪಿಸಿದ್ದ. ಮಾತಿನ ನಡುವೆ ಹೀಗೆ ಅಚಾನಕವಾಗಿ ಬಂದು ನುಸುಳಿದ ಸಾಕಮ್ಮನ ಬಗ್ಗೆ ಕೂಲಂಕಶವಾಗಿ ವಿಚಾರಿಸಿಕೊಂಡ ಬೋಪಯ್ಯ, ತಡ ಮಾಡದೆ ಒಂದು ದಿನ ನಿಗದಿ ಮಾಡಿಕೊಂಡು ಕರುಂಬಯ್ಯನೊಂದಿಗೆ ಹೋಗಿ, ಆ ಹುಡುಗಿಯನ್ನು ನೋಡಿ ಮಾತುಕತೆ ನಡೆಸಿ ಬಂದಿದ್ದ. ಅಂದಿನ ಮಾತಿನಂತೆ ಬೋಪಯ್ಯ ಹುಡುಗಿಯ ಮನೆಯವರಿಗೆ ಒಂದು ಹಾಲು ಕರೆಯುವ ಹಸುವನ್ನು, ಐದು ತೊಲ ಬಂಗಾರಕ್ಕಾಗುವಷ್ಟು ದುಡ್ಡನ್ನು ವಧು ದಕ್ಷಿಣೆಯಾಗಿ ಕೊಟ್ಟು, ಕೂಡಾವಳಿಯ ಕೆಲವು ಶಾಸ್ತ್ರವನ್ನು ಮುಗಿಸಿ ಮನೆಗೆ ಕರೆದುಕೊಂಡು ಬಂದಿದ್ದ.

ಸಾಕಮ್ಮ ಮನೆ ಸೇರಿದ ಆ ರಾತ್ರಿಯೇ, ದೇವಿರಮ್ಮ ಅಟ್ಟದ ಮೇಲಿನ  ತನ್ನ ಕೋಣೆಯಲ್ಲಿದ್ದ  ಬಟ್ಟೆ ಬರೆಗಳನ್ನೆಲ್ಲ ಗಂಟು ಕಟ್ಟಿ  ತಂದು  ದೊಡ್ಡ ಬಿದಿರಿನ ಬುಟ್ಟಿಗೆ ತುಂಬಿ ಪಡಸಾಲೆಯ ಮಂಚದ ಕೆಳಕ್ಕೆ ನೂಕಿದಳು. ದುಸ್ವಪ್ನದಂತೆ ನಡೆದು ಹೋದ ಆ ಘಟನೆಯ ನಂತರ ಬೋಪಯ್ಯ ರಾತ್ರಿ ಹೊತ್ತು ಮನೆಯಲ್ಲಿ ಮಲಗುವುದನ್ನೇ ಬಿಟ್ಟು ಬಿಟ್ಟಿದ್ದ. ಹೆಚ್ಚಾಗಿ ಹೊಲದ ಗುಡಿಸಲಿನಲ್ಲೇ ಕಾಲ ಹಾಕತೊಡಗಿದ್ದ. ಇದನ್ನು ಕಂಡು ಕರುಳು ಕಿತ್ತು ಬರುವಂತೆ ಬೆಂದು ಹೋಗುತ್ತಿದ್ದ ದೇವಿರಮ್ಮ, ಇನ್ನು ಮುಂದಾದರು ಗಂಡ  ಮನೆಯಲ್ಲಿ ಮಲಗುವಂತಾಯಿತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಳು. ಅಂದೇ ಕೊನೆ ಇನ್ನೆಂದು ಅವಳು ಅಟ್ಟ ಹತ್ತಿ ಗಂಡನ ಕೋಣೆಗೆ ಹೋಗಲೇ ಇಲ್ಲ.

ಹೀಗೆ ಮನೆ ಸೇರಿದ ಸಾಕಮ್ಮನನ್ನು ದೇವಿರಮ್ಮ ಬಲು ಬೇಗ ಹಚ್ಚಿಕೊಂಡುಬಿಟ್ಟಳು. ಬೋಪಯ್ಯನ ಮೇಲಿನ ತನ್ನ ಪ್ರೀತಿಯನ್ನೆಲ್ಲಾ ತಂಗಿಯಾಗಿ ಮನೆಗೆ ಕಾಲಿಟ್ಟ ಈ ಸಾಕಮ್ಮನ ಮೇಲೆ ಧಾರೆಯೆರೆಯ ತೊಡಗಿದಳು. ಮಾತೆತ್ತಿದರೆ ಸಾಕಿ ಸಾಕಿ ಎನ್ನುವ ಸೊಲ್ಲಿನ ಹೊರತು ದೇವಿರಮ್ಮನ ಬಾಯಿಂದ ಬೇರೆ ಮಾತೇ ಹೊರಡುತ್ತಿರಲಿಲ್ಲ. ಸಾಕಮ್ಮ ಕೂಡ ತನಗೆ ಸಿಗುತ್ತಿರುವ ಗಂಡನ ಪ್ರೀತಿ ಕಿಂಚಿತ್ತಾದರೂ  ಅಕ್ಕ ದೇವಿರಮ್ಮನಿಗೆ ಸಿಗಲೆಂದು ರಾಜಿ ಮಾಡಿಸಲು ಹಲವಾರು ಆಟಗಳನ್ನು ಹೂಡಿದ್ದಳು. ಹೀಗೆ ಸಾಕಮ್ಮ ಇವರಿಬ್ಬರನ್ನು ಒಂದು ಗೂಡಿಸಲು ಪ್ರಯತ್ನಿಸಿದಷ್ಟು, ಬೋಪಯ್ಯನ ಎದೆ ಮಾತ್ರ ಬಂಡೆಯಂತೆ ಕಲ್ಲಾಗುತ್ತಲೇ ಹೋಯಿತು. 

ದೇವಿರಮ್ಮನಿಗಾಗುತ್ತಿದ್ದ ಅನ್ಯಾಯವನ್ನು ಸಹಿಸದ ಬೋಪಯ್ಯನ ಅವ್ವ ನರಸಮ್ಮ, ದಿನ ಬೆಳಗಾದರೆ ಮಗನೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲತೊಡಗಿದ್ದಳು. ಮಗನನ್ನು ಕೆಣಕಿಯೇ ತೀರಬೇಕೆಂದು ಎಷ್ಟೋ ಬಾರಿ ಮಗನ ಮುಂದೆಯೇ ಸಾಕಮ್ಮನನ್ನು ಹಿಡಿದು ಎಳೆದಾಡಿ ಹೊಡೆಯುವ ಪ್ರಸಂಗಗಳು ನಡೆದು ಹೋದವು. ಬೋಪಯ್ಯ ಮಾತ್ರ ಇದ್ಯಾವುದಕ್ಕೂ ಹರಾ ಶಿವ ಎನ್ನಲಿಲ್ಲ. 

ತನ್ನಿಂದಾಗುತ್ತಿರುವ ಈ ಎಲ್ಲಾ ಅವಾಂತರಗಳಿಂದ ಕುಗ್ಗಿ ಹೋದ ದೇವಿರಮ್ಮ ಒಂದು ದಿನ ಗಟ್ಟಿ ಮನಸ್ಸು ಮಾಡಿಕೊಂಡು ಮಗಳು ಮಂಜುಳೆಯನ್ನು ಅಲ್ಲಿಯೇ ಬಿಟ್ಟು  ತವರು ಸೇರಿಕೊಂಡು ಬಿಟ್ಟಳು. ಹೀಗೆ ತಾವು ಮೆಚ್ಚಿ ತಂದ ಸೊಸೆ ಮನೆ ಬಿಟ್ಟು ಹೋಗಿದ್ದನ್ನು ಸಹಿಸದ ಬೋಪಯ್ಯನ ಅಪ್ಪ ಅವ್ವ ಕೆರಳಿ ನಿಂತರು. “ನಮ್ಮ ಪಾಲಿಗೆ ನೀನು ಸತ್ತೆ” ಎಂದು ಹೇಳಿ, ಇದ್ದ ಘನವಾದ ಆಸ್ತಿಯಲ್ಲಿ ಒಂದು ತುಣುಕನ್ನು ಮಾತ್ರ ಬೋಪಯ್ಯನ ಮೂತಿಗೆ ಒರೆಸಿ, ಮಗ ಸೊಸೆಯನ್ನು ಕೊಟ್ಟಿಗೆ ಮನೆಗೆ ನೂಕಿದರು. ಮಿಕ್ಕ ಬಹುಪಾಲು ಆಸ್ತಿಯನ್ನು ಮೆಚ್ಚಿನ ಮಗಳು ತುಂಗೆಯ ಹೆಸರಿಗೆ ಬರೆಸಿ ಕೈ ತೊಳೆದು ಕೊಂಡರು.

ತಾನು ಹಗಲು ರಾತ್ರಿ ಕಷ್ಟಪಟ್ಟು ದುಡಿದು ವಿಸ್ತರಿಸಿದ್ದ ಅಷ್ಟು ಆಸ್ತಿ ಕೈ ತಪ್ಪಿದರು ಕೂಡ ಎದೆಗುಂದದ ಬೊಪಯ್ಯ, ಇದನ್ನು ಒಂದು ಸವಾಲಾಗಿ  ಸ್ವೀಕರಿಸಿ ಹೆಂಡತಿ ಸಾಕಿಯನ್ನು ಬೆನ್ನಿಗೆ  ಹಾಕಿಕೊಂಡು ಚಂದವಾಗಿಯೇ ಸಂಸಾರಕಟ್ಟಿ ನಿಲ್ಲಿಸಿದ. ಮಂಜುಳೆ ಮಾತ್ರ ಎರಡು ಮನೆಗಳಲ್ಲು ತಿಂದುಟ್ಟು ಹೆತ್ತವ್ವನ ನೆನಪೇ ಇಲ್ಲದಂತೆ ಸುಖವಾಗಿಯೇ ಬೆಳೆಯತೊಡಗಿದ್ದಳು.

ಹತ್ತಾಳಿಗೆ ಸಮಾನಾಗಿ ಗೈಮೆ ಮಾಡುತ್ತಿದ್ದ ಮಗನ ಭುಜ ಬಲವಿಲ್ಲದೆ  ರಾಚಪ್ಪಯ್ಯ ತುಸು ಕಂಗಾಲಾದ. ಆದರು ತಾನು ಹೆತ್ತ ಮಗನೆದುರು ಸೋಲಬಾರದೆಂದು ನಿರ್ಧರಿಸಿ, ಊರೂರು ಸುತ್ತಿ ತನ್ನ ಮಗಳನ್ನು ಮದುವೆ ಮಾಡಿ ಕೊಡುವುದಾಗಿ ನಂಬಿಸಿ ವಯಸ್ಸಿನ ಹುಡುಗರನ್ನು ಕರೆದುಕೊಂಡು ಬಂದು ಹೊಲಗದ್ದೆಯ ಕೆಲಸಕ್ಕೆ ಹಾಕಿಕೊಳ್ಳ ತೊಡಗಿದ. ಹೀಗೆ ಕೆಲವಾರು ತಿಂಗಳು ಅವರನ್ನು ಚೆನ್ನಾಗಿ ದುಡಿಸಿ ಕೆಲಸ ಮುಗಿದದ್ದೆ ತಡ ನಾಯಿ ಅಟ್ಟುವಂತೆ ಅಟ್ಟಿ ಬಿಡುತ್ತಿದ್ದ.  ರಾಚಪ್ಪಯ್ಯನ ಈ ನೀಚತನದಿಂದ  ರೋಸಿ ಹೋದ ಹಲವು ಹುಡುಗರು ಬೋಪಯ್ಯನಲ್ಲಿ ತಮ್ಮ ದುಃಖ ತೋಡಿಕೊಂಡು ಊರುಗಳಿಗೆ ವಾಪಸ್ಸಾಗಿದ್ದರು.

ತಂಗಿಯ ಬಗ್ಗೆ ತಲೆಗೊಂದೊಂದು ಮಾತಾಡುತ್ತಿದ್ದ ಊರಿನವರ ಎದುರು ತಲೆ ಎತ್ತಿ ಓಡಾಡಲಾರದಂತಾದ ಬೋಪಯ್ಯ, ಇದಕ್ಕೊಂದು ಅಂತ್ಯ ಕಾಣಿಸಲೇಬೇಕೆಂದು ನಿರ್ಧರಿಸಿದ. ಇದೇ ಆಮಿಷಕ್ಕೆ ಕಟ್ಟು ಬಿದ್ದು ಕೆಲವು ವರ್ಷಗಳಿಂದ ಗಾಣದೆತ್ತಿನಂತೆ ದುಡಿಯುತ್ತಿದ್ದ ಮಂಡಿಕೊಪ್ಪಲ ಮಾರಯ್ಯನನ್ನು ಪಂಚಾಯ್ತಿಯವರ ಸಮ್ಮುಖದಲ್ಲಿ ತಂಗಿಗೆ ಮದುವೆ ಮಾಡಿಸಿಯೇ ಬಿಟ್ಟ. ಅಷ್ಟಾಗಿ ವ್ಯವಹಾರ ಜ್ಞಾನವಿಲ್ಲದ ಮಾರಯ್ಯನನ್ನು ಹೆಡ್ಡನಂತೆ ನಡೆಸಿಕೊಳ್ಳುತ್ತಿದ್ದ ಮನೆಯವರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು