Monday, June 17, 2024

ಸತ್ಯ | ನ್ಯಾಯ |ಧರ್ಮ

ಅಧಿಕಾರಿಗಳ ಅನಪೇಕ್ಷಿತ ಆದೇಶ; ಕಲೆ ಸಂಸ್ಕೃತಿಗೆ ಮಾರಕ

ಕಲೆ ಮತ್ತು ಕಲಾವಿದರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂತಾ ಒಂದಿದೆ. ಕನ್ನಡ ಭಾಷೆ ಕಲೆ ಸಾಹಿತ್ಯ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದೇ ಆ ಇಲಾಖೆಯ ಉದ್ದೇಶ. ಆದರೆ ಇಲಾಖೆಯ ಮೂಲ ಉದ್ದೇಶಕ್ಕೆ ವಿರುದ್ದವಾದ ಕೆಲಸಗಳೇ ಇಲ್ಲಿ ನಡೆಯುತ್ತಾ ಬಂದಿರುವುದು ಹಾಗೂ ಅಧಿಕಾರಿಗಳ ದರ್ಪ ಮತ್ತು ಸ್ವಾರ್ಥಕ್ಕೆ ಇಲಾಖೆಯ ಹೆಸರೇ ಹಾಳಾಗಿರುವುದು ಖೇದಕರ ಸಂಗತಿ.

ಇಂತಿಪ್ಪ ಇಲಾಖೆಗೆ ಏಳೆಂಟು ತಿಂಗಳಿಂದಾ ಬಂದು ಒಕ್ಕರಿಸಿದ ನಿರ್ದೇಶಕರ ಹೆಸರೇ ವಿಶ್ವನಾಥ ಪಿ ಹಿರೇಮಠ. ಸಂಘ ಪರಿವಾರದ ಪರ ಇರುವ ಈ ವ್ಯಕ್ತಿಯನ್ನು ಬಿಜೆಪಿ ಸರಕಾರವೇ ಸಂಸ್ಕೃತಿ ಇಲಾಖೆಗೆ ನಿರ್ದೇಶಕರನ್ನಾಗಿಸಿ ಸಂಘಿ ಸಂಸ್ಕೃತಿಯನ್ನು ಕಾಪಾಡಲು ನೇಮಿಸಿತು. ಕಲೆ ಸಾಹಿತ್ಯದ ಗಂಧ ಗಾಳಿ ಇಲ್ಲದ ಈ ಹಿರೇಮಠರು ಸಂಸ್ಕೃತಿ ಇಲಾಖೆಯನ್ನು ತಮ್ಮದೇ ಮಠ ಎಂದುಕೊಂಡು ಜಗದ್ಗುರುವಿನ ಹಾಗೆ ತನ್ನಿಚ್ಚೆಯಂತೆ ಆದೇಶಗಳನ್ನು ಜಾರಿಮಾಡತೊಡಗಿದರು.

ಎರಡು ತಿಂಗಳ ಹಿಂದೆ ಈ ಹಿರೇಮಠರ ಕೆಂಗಣ್ಣು ಪ್ಲೆಕ್ಸ್ ಕಟೌಟ್ ಮೇಲೆ ಬಿತ್ತು. ಕೂಡಲೇ ಕಲಾಕ್ಷೇತ್ರದ ಮ್ಯಾನೇಜರ್ ಬಾಬುರವರನ್ನು ಕರೆಸಿ ಕಲಾಕ್ಷೇತ್ರ ಹಾಗೂ ನಯನ ರಂಗಮಂದಿರಗಳಲ್ಲಿ ಇರುವ ಎಲ್ಲಾ ಪ್ಲೆಕ್ಸ್ ಫ್ರೇಮ್ ಗಳನ್ನು ಒಡೆಸಿ ಹಾಕಿಸಿದರು. ‘ಯಾಕ್ರೀ ಸಾಹೇಬರೆ ಹಿಂಗೆ ಮಾಡಿದ್ರಿ?’ ಎಂದು ಕೇಳಿದವರಿಗೆ ಹೈಕೋರ್ಟ್ ಆರ್ಡರ್ ಇದೆ ಅಂತಾ ಸಬೂಬು ಹೇಳತೊಡಗಿದರು. ಏನಪ್ಪಾ ಅದು ಕೋರ್ಟ್ ಆದೇಶ ಅಂತಾ ಪರಿಶೀಲಿಸಿದರೆ ಅದು ಪ್ಲೆಕ್ಸ್ ಬ್ಯಾನರ್ ಬ್ಯಾನ್ ಮಾಡಲಾಗಿದ್ದು ಬರೀ ಬಟ್ಟೆ ಬ್ಯಾನರ್ ಮಾತ್ರ ಬಳಸಬೇಕು ಅಂತಾ ಇತ್ತು. ರಾಜಕೀಯ ಕಾರ್ಯಕ್ರಮಗಳನ್ನು ಹೊರತು ಪಡಿಸಿ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವವರು ಬಟ್ಟೆ ಬ್ಯಾನರ್ ಬಳಸುವುದನ್ನು ರೂಢಿಸಿಕೊಂಡು ಕೆಲವಾರು ವರ್ಷಗಳೇ ಆಗಿವೆ. ಬ್ಯಾನರ್ ಕುರಿತ ಆದೇಶಕ್ಕೂ ಬ್ಯಾನರ್ ಕಟ್ಟುವ ಪ್ರೇಮಗಳ ನಾಶಕ್ಕೂ ಏನಿದೆ ಸಂಬಂಧ?.

ಅದೇನೆಂದರೆ ರವೀಂದ್ರ ಕಲಾಕ್ಷೇತ್ರ ಹಾಗೂ ನಯನ ರಂಗಮಂದಿರದ ಕೆಲವು ಕೆಳಹಂತದ ಸಿಬ್ಬಂದಿಗಳು ಫ್ರೇಮ್ ಗೆ ಕಾರ್ಯಕ್ರಮದ ಬ್ಯಾನರ್ ಹೊಡೆಯಲು ಹಣ ಪಡೆಯುತ್ತಾರೆ ಎಂಬುದು ನಿರ್ದೇಶಕರಿಗೆ ಬಂದ ದೂರು. ಹಾಗೆ ದೂರು ಬಂದರೆ ಸಿಬ್ಬಂದಿಗೆ ತಾಕೀತು ಮಾಡುವುದನ್ನು ಬಿಟ್ಟು ಫ್ರೇಮ್ ಗಳನ್ನೆಲ್ಲಾ ಒಡೆಸಿ ಹಾಕಿದ್ದಾದರೂ ಯಾಕೆ? ನೆಗಡಿಯಾದರೆ ವಾಸಿ ಮಾಡುವ ನೆಪದಲ್ಲಿ ನೆಗಡಿಗೆ ಮಾಧ್ಯಮವಾದ ಮೂಗನ್ನೇ ಕೊಯ್ಯುವುದನ್ನು ಎಲ್ಲಾದರೂ ನೋಡಿದ್ದೇವಾ? ಅಂತಹ ಕೆಲಸವನ್ನು ಹಿರೇಮಠರು ಬಲು ಮುತುವರ್ಜಿವಹಿಸಿ ಮಾಡಿಸಿ ಸಿಬ್ಬಂದಿಗಳ ನೆಪದಲ್ಲಿ ಕಲಾವಿದರ ಮೇಲೆ ಪ್ರಹಾರ ಮಾಡಿದ್ದಾರೆ.

ಯಾಕೆಂದರೆ, ಅಲ್ಲಿದ್ದ ಫ್ರೇಮ್ ಗಳು ಇಲಾಖೆಯ ಸ್ವತ್ತೇನಲ್ಲ. ಯಾವುಯಾವುದೋ ಕಾರ್ಯಕ್ರಮ ಮಾಡಿದವರು ತಮ್ಮ ಪ್ರೋಗ್ರಾಂ ನಂತರ ಬೇರೆಯವರಿಗೆ ಉಪಯೋಗವಾಗಲಿ ಅಂತಾ ಸದುದ್ದೇಶದಿಂದ ರಂಗಮಂದಿರದಲ್ಲೇ ಬಿಟ್ಟು ಹೋದ ಬೇರೆ ಬೇರೆ ಅಳತೆಯ ಕಟೌಟುಗಳವು. ಹೊಸದಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಆಯೋಜಕರು ಬಟ್ಟೆ ಬ್ಯಾನರ್ ಪ್ರಿಂಟಾಕಿಸಿಕೊಂಡು ಬಂದು ಸಿಬ್ಬಂದಿಗೆ ಕೊಟ್ಟರೆ ಆತ ಫ್ರೇಮ್ ಗೆ ಹೊಡೆದು, ಪ್ಲಾಟ್ಪಾರ್ಮಿಗೆ ಜೋಡಿಸಿ ಕಾರ್ಯಕ್ರಮಕ್ಕೆ ಸಿದ್ದವಾಗಿಸುತ್ತಿದ್ದ. ಅದಕ್ಕೆ ಪ್ರತಿಫಲವಾಗಿ ಆಯೋಜಕರು ಐನೂರೋ ಇಲ್ಲಾ ಸಾವಿರವೋ ಹಣ ಕೊಟ್ಟು ಧನ್ಯವಾದ ಹೇಳುತ್ತಿದ್ದರು. ಇಷ್ಟಕ್ಕೂ ಈ ಸಿ ದರ್ಜೆಯ ಸಿಬ್ಬಂದಿಗೇನೂ ಈ ಅಧಿಕಾರಿಗಳ ಹಾಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಹಾಗೂ ಅದಕ್ಕೂ ಹೆಚ್ಚು ಗಿಂಗಳವೆನೂ ಬರುವುದಿಲ್ಲ. ಕೂಲಿಯಾಳಿನಂತೆ ಕೆಲಸ ಮಾಡಿ ಮಾಡಿದ್ದಕ್ಕಷ್ಟೇ ಕೂಲಿ ಪಡೆದು ಬದುಕುವ ಶ್ರಮಜೀವಿಗಳು. ನಿಯಮಗಳ ನೆಪ ಹೇಳಿ ಶ್ರಮಜೀವಿಗಳ ಹೊಟ್ಟೆ ಮೇಲೆ ಹೊಡೆದ ಈ ಅಧಿಕಾರಿಗಳು ಅನಧಿಕೃತವಾಗಿ ಪಡೆಯುವ ಕಮಿಷನ್ ಹಣದ ಲೆಕ್ಕ ಇಟ್ಟವರು ಯಾರು? ಹೋಗಲಿ ಹಿರೇಮಠರನ್ನೂ ಒಳಗೊಂಡಂತೆ ಇಲಾಖೆಯ ಅಧಿಕಾರಿಗಳು ಹಾಗೂ ಆಡಳಿತ ವಿಭಾಗದವರು ಎದೆ ಮೇಲೆ ಕೈ ಇಟ್ಟುಕೊಂಡು ಹೇಳಲಿ ಯಾರೂ ಲಂಚ ಪಡೆದಿಲ್ಲವೆಂದು. ಬಹುತೇಕರು ಕಳ್ಳ ಮಾರ್ಗದ ಫಲಾನುಭವಿಗಳೇ ಆಗಿದ್ದರೂ ತಮ್ಮ ಡ್ಯೂಟಿ ಸಮಯದ ನಂತರ ರಾತ್ರಿ ಫ್ರೇಮಿಗೆ ಬ್ಯಾನರ್ ಹೊಡೆದು ಪರಿಶ್ರಮಕ್ಕೆ ತಕ್ಕ ಪುಡಿಗಾಸು ಪಡೆಯುವವರ ಮೇಲೆ ಈ ಹಿರೇಮಠರ ಕೆಂಗಣ್ಣು ಬಿದ್ದಿರುವುದು ಸಮರ್ಥನೀಯವಲ್ಲ. ಹೋಗಲಿ ಮೊದಲು ಇಲಾಖೆಯ ಹುಲುಸಾದ ಹುಲ್ಲುಗಾವಲಿನಲ್ಲಿ ಮಿಂದೆದ್ದು ಮೇಯುತ್ತಿರುವವರನ್ನು ನಿಯಂತ್ರಿಸುವ ಬದಲು ಈ ನಿರ್ದೇಶಕರು ಗುಬ್ಬಚ್ಚಿಯಂತಹ ಬಡ ಕೆಲಸಗಾರ ಸಿಬ್ಬಂದಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿದ್ದು ಖಂಡಿತಾ ಖಂಡನೀಯ.

ಈ ಅನಗತ್ಯ ಆದೇಶದಿಂದ ಅನಾನುಕೂಲವಾಗಿರುವುದು ಕಲಾವಿದರಿಗೆ, ಸಂಘಟಕರಿಗೆ ಮತ್ತು ಆಯೋಜಕರಿಗೆ. ಮೊದಲೇ ಇಲಾಖೆಯ ಅನುದಾನವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡಿತಗೊಳಿಸಲಾಗಿದೆ ಇಲ್ಲವೇ ನಿಲ್ಲಿಸಲಾಗಿದೆ. ಆದರೂ ಅದು ಹೇಗೋ ರಂಗಮಂದಿರಕ್ಕೆ ದುಬಾರಿ ಬಾಡಿಗೆ ಕಟ್ಟಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಘಟಕರಿಗೆ ಈಗ ಬ್ಯಾನರ್ ಕಟ್ಟಲು ಹೊಸದಾಗಿ ಕಟೌಟ್ ಮಾಡಿಸಬೇಕಾದ ಹೊರೆ ಹೆಚ್ಚುವರಿಯಾಗಿ ಬಿದ್ದಿದೆ. 12’X6′ ಅಳತೆಯ ಮಧ್ಯಮ ಗಾತ್ರದ ಕಟ್ಟಿಗೆಯ ಫ್ರೇಮ್ ಮಾಡಿಸಿ ಬ್ಯಾನರ್ ಅಳವಡಿಸಲು ಎರಡೂವರೆ ಸಾವಿರ ರೂಪಾಯಿ ಖರ್ಚಾಗುತ್ತದೆ. ( ಬ್ಯಾನರ್ ಖರ್ಚು ಪ್ರತ್ಯೇಕ). ಸ್ಟೀಲ್ ಫ್ರೇಮ್ ಮಾಡಿಸಬೇಕೆಂದರೆ ಎಂಟು ಸಾವಿರದಷ್ಟು ಹಣ ಬೇಕಾಗುತ್ತದೆ. ಬಡ ಕಲಾವಿದರಿಗೆ, ರಂಗಸಂಘಟಕರಿಗೆ ಈ ಮೊತ್ತವೂ ಹೆಚ್ಚಾಗಿದೆ. ಮೊದಲು ಐನೂರು ರೂಪಾಯಿಯಲ್ಲಿ ಆಗುವ ಕೆಲಸಕ್ಕೆ ಈ ಹುಚ್ಚು ಆದೇಶದಿಂದಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಿದೆ. ಕಲಾವಿದರ ಹಾಗೂ ಸಂಘಟಕರ ಸಂಕಷ್ಟಗಳ ಅರಿವಿರದ ಇಂತಹ ಅಧಿಕಾರಿಗಳು ಈ ಸಂಸ್ಕೃತಿ ಇಲಾಖೆಯಲ್ಲಿ ಇರಲು ಖಂಡಿತಾ ಯೋಗ್ಯರಲ್ಲ.

ಹೋಗಲಿ ಕಟೌಟುಗಳಿಗೆ ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡಲು ಅಧಿಕಾರಿಗಳಿಗೇನು ರೋಗ. ಇಲಾಖೆಯೇ ಬೇರೆ ಬೇರೆ ಅಳತೆಯ ಫ್ರೇಮ್ ಗಳನ್ನು ಮಾಡಿಸಲಿ. ರಂಗಮಂದಿರದ ಬಾಡಿಗೆ ವಸೂಲಿ ಮಾಡುವಾಗಲೇ ಈ ಕಟೌಟ್ ಗಳ ಬಾಡಿಗೆಯನ್ನೂ ಸೇರಿಸಲಿ. ಒಟ್ಟಿನ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರಿಗೆ ತೊಂದರೆ ಆಗದಿರಲಿ.

ಇತ್ತೀಚೆಗೆ ಮಾಜಿ ಅಧಿಕಾರಿಯಾಗಿದ್ದ ಸುಗಮ ಸಂಗೀತ ಗಾಯಕ ಮುದ್ದುಕೃಷ್ಣರವರು ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಅವರ ಬ್ಯಾನರ್ ಫಿಕ್ಸ್ ಮಾಡಲು ಪ್ರೇಮ್ ಇಲ್ಲದ್ದು ತಿಳಿದು ಆತಂಕಗೊಂಡು ಹಿರೇಮಠರನ್ನು ಪ್ರಶ್ನಿಸಿದರು. ಕಲಾಕ್ಷೇತ್ರದ ಮ್ಯಾನೇಜರ್ ಬಾಬುವನ್ನು ಕರೆದು ಬೈದಂತೆ ಮಾಡಿದ ನಿರ್ದೇಶಕರು ತಾವು ಒಳ್ಳೆಯವರಾಗುವ ನಾಟಕವಾಡಿದರು. ಇದೆಲ್ಲಾ ಬೇಕಿತ್ತಾ?. ಅಧಿಕಾರಿಯೊಬ್ಬರ ಕಲಾವಿರೋಧಿ ಧೋರಣೆಯನ್ನು ಪ್ರತಿಭಟಿಸಬೇಕಾದ ಕಲಾವಿದರು ಅದ್ಯಾಕೆ ಮೌನವಾಗಿದ್ದಾರೋ ಗೊತ್ತಿಲ್ಲ. ಎಲ್ಲಿ ತಮಗೆ ಬರಬಹುದಾದ ಇಲಾಖೆಯ ಅನುದಾನ ನಿಲ್ಲಿಸಲಾಗುತ್ತದೆಯೊ ಎಂಬ ಆತಂಕವೂ ಅವರಿಗೆ ಕಾಡುತ್ತಿರಬಹುದು. ರಂಗಭೂಮಿಯ ಹಿರಿಯರಾದರೂ ಹೋಗಿ ಕೇಳಬಹುದಾಗಿತ್ತು, ಇದೆಲ್ಲಾ ತಮಗ್ಯಾಕೆ ಎನ್ನುವ ಉದಾಸೀನತೆ ಅವರನ್ನು ಕಾಡುತ್ತಿರಬಹುದು. ಇಂತಹ ಅನಾನುಕೂಲಕರ ಅಘೋಷಿತ ಆದೇಶವನ್ನು ರಂಗಕರ್ಮಿ ಕಲಾವಿದರು ವಿರೋಧಿಸಲೇ ಬೇಕಿದೆ. ಸಂಸ್ಕೃತಿ ಇಲಾಖೆಯ ಸಚಿವರ ಗಮನಕ್ಕೆ ತರಬೇಕಿದೆ. ರಂಗ ವಿರೋಧಿ, ಕಲಾಕಂಟಕ ಅಧಿಕಾರಿಗಳನ್ನು ಮೊದಲು ಎತ್ತಂಗಡಿ ಮಾಡಿಸಲು ಒತ್ತಾಯಿಸಬೇಕಿದೆ.

ನಾಲ್ಕಾರು ತಿಂಗಳ ಹಿಂದೆ ಇದೇ ರೀತಿಯ ಇನ್ನೊಂದು ಸಾಂಸ್ಕೃತಿಕ ವಿರೋಧಿ ಆದೇಶವೊಂದು ಜಾರಿಯಾಗಿತ್ತು. ಕಲಾಕ್ಷೇತ್ರದ ಆವರಣದಲ್ಲಿ (ಕ್ಯಾಂಟೀನ್ ಹೊರತುಪಡಿಸಿ) ಯಾವುದೇ ಕಾರ್ಯಕ್ರಮವಿದ್ದರೂ ಕಲಾವಿದರಿಗೆ ಹಾಗೂ ಪ್ರೇಕ್ಷಕರಿಗೆ ಆಹಾರವನ್ನು ವಿತರಿಸುವಂತಿಲ್ಲ ಎಂಬ ಅನಧಿಕೃತ ಆಜ್ಞೆಯನ್ನು ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿಯವರು ಹೊರಡಿಸಿದ್ದರು. ಮೊದಲಿನಿಂದಲೂ ಕಲಾವಿದರ ವಿರೋಧಿಯಾದ ಅಂಗಡಿಯಮ್ಮನವರ ಈ ಆದೇಶ ಸಂಘಟಕರನ್ನು ಸಂಕಷ್ಟಕ್ಕೀಡುಮಾಡಿತು. ಕ್ಯಾಟರಿಂಗ್ ಸಪ್ಲೈ ನಿಲ್ಲಿಸಿದ್ದರಿಂದ ರಂಗಕಲಾವಿದರಿಗೂ ಕಲಾಕ್ಷೇತ್ರದಲ್ಲಿ ಊಟ ಉಪಹಾರ ನಿಷೇಧಿಸಲಾಯ್ತು. (ಸರಕಾರಿ ಕಾರ್ಯಕ್ರಮಗಳಿಗೆ ಮಾತ್ರ ಈ ನಿಯಮದಿಂದ ರಿಯಾಯತಿ ಕೊಡಲಾಗಿತ್ತು.) ಈ ನಿಷೇಧ ಎರಡು ತಿಂಗಳುಗಳ ಕಾಲ ಮುಂದುವರೆಯಿತು. ಅದೊಂದು ಪುಸ್ತಕದ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಸಾಹಿತಿ ಮಲ್ಲೇಪುರ ವೆಂಕಟೇಶರವರಿಗೆ ಈ ನಿಷೇಧದ ವಿಷಯ ಗೊತ್ತಾಗಿದ್ದೇ ತಡ ನೇರವಾಗಿ ಮಂತ್ರಿಗಳಿಗೆ ಪೋನ್ ಮಾಡಿದರು. ಆ ಮಂತ್ರಿಗಳು ಅಂಗಡಿಯಮ್ಮಳಿಗೆ ಬೈದು ಬೆವರಿಳಿಸಿದ ಮೇಲೇಯೇ ಆ ಕರಾಳ ಆದೇಶ ರದ್ದಾಯಿತು. ಸಂಘಟಕರು ಹಾಗೂ ಕಲಾವಿದರು ನೆಮ್ಮದಿಯಾಗಿ ಆಹಾರ ಸೇವಿಸುವಂತಾಯಿತು. ಕೆಲವು ಮತಿಗೆಟ್ಟ ಅಧಿಕಾರಿಗಳು ಕಾಲಕಾಲಕ್ಕೆ ಇಂತಹ ತಲೆಕೆಟ್ಟ ಆದೇಶಗಳನ್ನು ಜಾರಿ ಮಾಡುತ್ತಲೇ ಇರುತ್ತಾರೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಲೆ ಹಾಗೂ ಕಲಾವಿದರಿಗೆ ತೊಂದರೆ ಕೊಡುತ್ತಲೇ ಇರುತ್ತಾರೆ. ಸಂಸ್ಕೃತಿ ರಕ್ಷಣೆಯ ಜವಾಬ್ದಾರಿಯನ್ನು ಕೊಟ್ಟರೆ ಇವರು ಸಾಂಸ್ಕೃತಿಕ ಕಾಯಕದಲ್ಲಿ ಅಡೆತಡೆಗಳನ್ನು ಒಡ್ಡುತ್ತಲೇ ಇರುತ್ತಾರೆ. ಆಗಾಗ ಕಲಾವಿದರುಗಳು ಪ್ರತಿರೋಧಿಸುವ ಮೂಲಕ ಇಂತವರಿಗೆ ಅವರ ಹೊಣೆಗಾರಿಕೆಯನ್ನು ನೆನಪಿಸುತ್ತಿರಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಜೊತೆಗೆ ಕಲಾವಿದರ ಅನುಕೂಲ ಹಾಗೂ ಹಕ್ಕಿಗಾಗಿ ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ಇಲ್ಲದೇ ಹೋದರೆ ಈ ಬೇಲಿಗಳೇ ಎದ್ದು ಹೊಲ ಮೇಯುತ್ತವೆ. ಬೆಳೆ ಬೆಳೆಯುವ ಕೃಷಿಕರ ಕಾಲಿಗೆ ಮುಳ್ಳಾಗಿ ಚುಚ್ಚುತ್ತವೆ.

  • ಶಶಿಕಾಂತ ಯಡಹಳ್ಳಿ, ರಂಗಕರ್ಮಿ

Related Articles

ಇತ್ತೀಚಿನ ಸುದ್ದಿಗಳು