ಅಮ್ರೋಹಾ: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಫಾರ್ಮ್ಹೌಸ್ವೊಂದರಲ್ಲಿ ಹರ್ಯಾಣ ಮೂಲದ 24 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಇಬ್ಬರು ಹಾಗೂ ಸಿಆರ್ಪಿಎಫ್ನ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯು ಸೆಪ್ಟೆಂಬರ್ 22 ರ ರಾತ್ರಿ ಹಸನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬಂಧಿತರನ್ನು ಉತ್ತರ ಪ್ರದೇಶ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಜಯ್ ತೋಮರ್, ಹೆಡ್ ಕಾನ್ಸ್ಟೆಬಲ್ ಪ್ರಮೋದ್, ಸಿಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ಮೋಹಿತ್ ಮತ್ತು ಸಿಆರ್ಪಿಎಫ್ ಹೆಡ್ ಕಾನ್ಸ್ಟೆಬಲ್ ಲಾಲಾರಾಮ್ ಯಾದವ್ ಎಂದು ಗುರುತಿಸಲಾಗಿದೆ.
ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಲಖನ್ ಸಿಂಗ್ ಯಾದವ್ ನೀಡಿರುವ ಮಾಹಿತಿಯ ಪ್ರಕಾರ, ಹರ್ಯಾಣದ ಫತೇಹಾಬಾದ್ ನಿವಾಸಿಯಾದ ಯುವತಿಯನ್ನು ಪರಿಚಿತ ಮಹಿಳೆಯೊಬ್ಬರು ಸೆಪ್ಟೆಂಬರ್ 20 ರಂದು ಸಂಪರ್ಕಿಸಿ, ಅಮ್ರೋಹಾದ ಧಾರ್ಮಿಕ ಸ್ಥಳಗಳ ದರ್ಶನಕ್ಕೆ ಕರೆದೊಯ್ಯುವುದಾಗಿ ತಿಳಿಸಿ ಸಿಆರ್ಪಿಎಫ್ ಸಿಬ್ಬಂದಿ ಮೋಹಿತ್ ಅವರನ್ನು ಭೇಟಿಯಾಗುವಂತೆ ಹೇಳಿದ್ದರು. ಅದರಂತೆ ಸೆಪ್ಟೆಂಬರ್ 21 ರಂದು ಸೋನಿಪತ್ನಲ್ಲಿ ಯುವತಿ ಮೋಹಿತ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲಿಂದ ಇಬ್ಬರೂ ಮೀರತ್ಗೆ ತೆರಳಿದ್ದು, ಅಲ್ಲಿಗೆ ಮೋಹಿತ್ ಅವರ ಸಹೋದ್ಯೋಗಿ, ಸಿಆರ್ಪಿಎಫ್ ಹೆಡ್ ಕಾನ್ಸ್ಟೆಬಲ್ ಲಾಲಾರಾಮ್ ಯಾದವ್ ಕೂಡ ಬಂದಿದ್ದಾರೆ.
ಸೆಪ್ಟೆಂಬರ್ 22 ರ ಸಂಜೆ ಇಬ್ಬರು ಸಿಆರ್ಪಿಎಫ್ ಸಿಬ್ಬಂದಿ ಯುವತಿಯನ್ನು ಕಾರಿನಲ್ಲಿ ಹಸನ್ಪುರಕ್ಕೆ ಕರೆದೊಯ್ದಿದ್ದಾರೆ. ಮಾರ್ಗಮಧ್ಯೆ ಯುಪಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂಜಯ್ ತೋಮರ್ ಅವರನ್ನು ಕಾರಿಗೆ ಹತ್ತಿಸಿಕೊಂಡಿದ್ದಾರೆ.ನಂತರ ಅತ್ರಾಸಿ-ಹಸನ್ಪುರ ರಸ್ತೆಯಲ್ಲಿರುವ ಫಾರ್ಮ್ಹೌಸ್ಗೆ ಕರೆದೊಯ್ದು ಎರಡು ಕೊಠಡಿಗಳನ್ನು ಬಾಡಿಗೆಗೆ ಪಡೆದಿದ್ದಾರೆ.ಯುಪಿ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಪ್ರಮೋದ್ ಅವರು ಇವರಿಗಾಗಿ ಆಹಾರ ಮತ್ತು ಮದ್ಯದ ವ್ಯವಸ್ಥೆ ಮಾಡಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಕೊಠಡಿಯಲ್ಲಿದ್ದ ಮೋಹಿತ್, ಲಾಲಾರಾಮ್ ಯಾದವ್ ಮತ್ತು ಸಂಜಯ್ ತೋಮರ್ ಯುವತಿಯ ಮೇಲೆ ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ಎಸಗಿದ್ದಾರೆ.ನಂತರ ಪ್ರಮೋದ್ ಕೂಡ ಕೊಠಡಿಗೆ ಬಂದು ಅತ್ಯಾಚಾರಕ್ಕೆ ಯತ್ನಿಸಿದ್ದು, ಆತನನ್ನು ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡ ಯುವತಿ, ಆನ್ಲೈನ್ನಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆಯನ್ನು ಹುಡುಕಿ ಸೆಪ್ಟೆಂಬರ್ 23 ರ ಮುಂಜಾನೆ 6 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಲುಪುತ್ತಿದ್ದಂತೆ ಹಸನ್ಪುರ ಮತ್ತು ರಜಬ್ಪುರ ಠಾಣೆಯ ಪೊಲೀಸ್ ತಂಡಗಳು ಫಾರ್ಮ್ಹೌಸ್ಗೆ ಧಾವಿಸಿ ಯುವತಿಯನ್ನು ರಕ್ಷಿಸಿದ್ದು, ಸ್ಥಳದಲ್ಲಿದ್ದ ನಾಲ್ವರನ್ನೂ ಬಂಧಿಸಿವೆ.ಸಂತ್ರಸ್ತೆಯ ದೂರಿನ ಆಧಾರದ ಮೇಲೆ ನಾಲ್ವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸಂಬಂಧಿತ ಸೆಕ್ಷನ್ಗಳಡಿ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಆರೋಪಿ ಸಬ್ ಇನ್ಸ್ಪೆಕ್ಟರ್ ಸಂಜಯ್ ತೋಮರನನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದ್ದು, ಇಬ್ಬರು ಸಿಆರ್ಪಿಎಫ್ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ.ಘಟನೆ ನಡೆದ ಫಾರ್ಮ್ಹೌಸ್ ಉತ್ತರಾಖಂಡದ ಪಕ್ಷೇತರ ಶಾಸಕರೊಬ್ಬರಿಗೆ ಸೇರಿದ್ದು ಎನ್ನಲಾಗಿದ್ದು, ಆಸ್ತಿ ವ್ಯವಸ್ಥಾಪಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಪೊಲೀಸ್ ಮತ್ತು ಅರೆಸೇನಾ ಪಡೆಗಳ ಸಿಬ್ಬಂದಿಯೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಪೊಲೀಸ್ ಇಲಾಖೆಗೆ ಅಳಿಸಲಾಗದ ‘ಕಳಂಕ’ ಎಂದು ಟೀಕಿಸಿದ್ದು, ತಪ್ಪಿತಸ್ಥರ ವಿರುದ್ಧ ಐತಿಹಾಸಿಕ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
