‘ಕೆಲಸ ಯಾಕೆ ಬೇಕು? ಇ-ರಿಕ್ಷಾ ಓಡಿಸಿ’: ನಿರುದ್ಯೋಗಿ ಯುವಜನತೆಗೆ ಯುಪಿ ಡಿಸಿಎಂ ಬ್ರಜೇಶ್ ಪಾಠಕ್ ಸಲಹೆ, ಭಾರಿ ಆಕ್ರೋಶ

ಲಖನೌ: ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ನಿರುದ್ಯೋಗಿ ಯುವಜನತೆಯನ್ನುದ್ದೇಶಿಸಿ ನೀಡಿರುವ ಹೇಳಿಕೆಯೊಂದು ಭಾರಿ ವಿವಾದಕ್ಕೆ ಕಾರಣವಾಗಿದೆ. ಆರು ತಿಂಗಳಲ್ಲಿ ಒಂದು ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗಷ್ಟೇ 3,000 ಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರ ವಿತರಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಉಪ ಮುಖ್ಯಮಂತ್ರಿ ನೀಡಿರುವ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬ್ರಜೇಶ್ ಪಾಠಕ್, “ಕೇವಲ ಉದ್ಯೋಗದ ಬೆನ್ನುಬೀಳುವ ಬದಲು ಇ-ರಿಕ್ಷಾಗಳನ್ನು ಓಡಿಸುವುದು ಒಳಿತು. ದಿನಕ್ಕೆ ಕೇವಲ ನಾಲ್ಕು ಗಂಟೆಗಳ ಕಾಲ ರಿಕ್ಷಾ ಓಡಿಸಿ, ಮಧ್ಯಾಹ್ನದ ಸಮಯವನ್ನು ನಿಮ್ಮ ಮಕ್ಕಳೊಂದಿಗೆ ಕಳೆಯಿರಿ,” ಎಂದು ನಿರುದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ. ಸೆಪ್ಟೆಂಬರ್ 23 ರಂದು ಲಖನೌದಲ್ಲಿ ನಡೆದ ‘ಭಾರತ್ ಟ್ಯಾಕ್ಸಿ’ ಸೇವೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಸ್ವಯಂ ಉದ್ಯೋಗದ ಮಹತ್ವವನ್ನು ಪ್ರತಿಪಾದಿಸುವ ಭರದಲ್ಲಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೆಟ್ಟಿಗರು ಹಾಗೂ ಪ್ರತಿಪಕ್ಷಗಳ ತೀವ್ರ ಆಕ್ರೋಶ

ಪಾಠಕ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. “ನಿರುದ್ಯೋಗಿ ಯುವಕರಿಗೆ ನೀವು ನೀಡುವ ರಚನಾತ್ಮಕ ಸಲಹೆ ಇದೇನಾ?” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. “ಸಾಮಾನ್ಯ ಯುವಜನತೆ ಉದ್ಯೋಗಕ್ಕಾಗಿ ಪರದಾಡುತ್ತಿದ್ದರೆ, ರಾಜಕೀಯ ನಾಯಕರು ಮಾತ್ರ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಓದಿಸುತ್ತಾರೆ,” ಎಂದು ಹಲವರು ಟೀಕಿಸಿದ್ದಾರೆ.

ಪ್ರತಿಪಕ್ಷ ಸಮಾಜವಾದಿ ಪಕ್ಷದ ಮುಖಂಡ ಪುಷ್ಪೇಂದ್ರ ಸರೋಜಾ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಪಾಠಕ್ ಅವರ ಹೇಳಿಕೆಗೆ ತೀವ್ರ ತಿರುಗೇಟು ನೀಡಿದ್ದು, ರಾಜ್ಯ ಸರ್ಕಾರದ ಉದ್ಯೋಗ ನೀತಿಗಳ ವೈಫಲ್ಯವನ್ನು ಈ ಹೇಳಿಕೆ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು