Home ದೇಶ ನಿಜವಾದ ಅಖಿಲೇಶ್‌ ಯಾದವ್‌ ಆರೋಪ | ಅಯೋಧ್ಯೆ ರಾಮಮಂದಿರದ ಉದ್ಯೋಗಿ ಮನೆಯಲ್ಲಿ ನಗದು ಜಪ್ತಿ; ತನಿಖೆಗೆ...

ನಿಜವಾದ ಅಖಿಲೇಶ್‌ ಯಾದವ್‌ ಆರೋಪ | ಅಯೋಧ್ಯೆ ರಾಮಮಂದಿರದ ಉದ್ಯೋಗಿ ಮನೆಯಲ್ಲಿ ನಗದು ಜಪ್ತಿ; ತನಿಖೆಗೆ ಯುಪಿ ಸರ್ಕಾರದಿಂದ ‘SIT’ ರಚನೆ!

0

ಅಯೋಧ್ಯೆ: ರಾಮಮಂದಿರಕ್ಕೆ ಭಕ್ತರು ನೀಡುತ್ತಿರುವ ದೇಣಿಗೆ ಹಣದ ದುರುಪಯೋಗ ಮತ್ತು ಆರ್ಥಿಕ ನಿರ್ವಹಣೆಯಲ್ಲಿನ ಲೋಪದೋಷಗಳ ಕುರಿತಾದ ಆರೋಪಗಳು ದೇಶಾದ್ಯಂತ ತೀವ್ರ ರಾಜಕೀಯ ಸಂಚಲನ ಮೂಡಿಸಿವೆ. ಈ ಹಗರಣದ ಸತ್ಯಾಸತ್ಯತೆಯನ್ನು ಹೊರತರಲು ಉತ್ತರ ಪ್ರದೇಶ ಸರ್ಕಾರವು ಶನಿವಾರ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದ ಮೇರೆಗೆ ಈ ಎಸ್‌ಐಟಿ ರಚನೆಯಾಗಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮನವಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮಂದಿರದ ವರ್ಚಸ್ಸಿಗೆ ಧಕ್ಕೆ ತರಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿದ್ದು, ಸುಳ್ಳು ವದಂತಿಗಳನ್ನು ತಡೆದು ಸತ್ಯವನ್ನು ಸಾರ್ವಜನಿಕರ ಮುಂದೆ ಇಡುವುದು ಅತ್ಯಗತ್ಯ ಎಂದು ಟ್ರಸ್ಟ್ ಹೇಳಿದೆ.

ಮಂದಿರದ ಉದ್ಯೋಗಿ ಮನೆಯಲ್ಲಿ ಭಾರಿ ನಗದು ಪತ್ತೆ: ಈ ವಿವಾದದ ನಡುವೆಯೇ ಪೊಲೀಸರು ಅಯೋಧ್ಯೆಯ ರುದೌಲಿ ಎಂಬಲ್ಲಿ ಮಂದಿರದ ಉದ್ಯೋಗಿಯೊಬ್ಬರ ನಿವಾಸದ ಮೇಲೆ ದಾಳಿ ನಡೆಸಿ ಸುಮಾರು 10 ರಿಂದ 12 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಮಂದಿರದ ಆಡಳಿತ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ಲವಕುಶ್ ಮಿಶ್ರಾ ಎಂಬುವವರ ಮನೆಯಲ್ಲಿ ಈ ನಗದು ಪತ್ತೆಯಾಗಿದೆ.

ಈ ಹಿಂದೆ ಕಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಲವಕುಶ್, ನಂತರ ಮಂದಿರದ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ. ಇದಲ್ಲದೆ, ಮಂದಿರದ ಕಾಣಿಕೆ ಹಣವನ್ನು ಎಣಿಸುವ ಜವಾಬ್ದಾರಿ ಹೊತ್ತಿದ್ದ, ಕೇವಲ 18 ರಿಂದ 20 ಸಾವಿರ ರೂಪಾಯಿ ಮಾಸಿಕ ಸಂಬಳ ಪಡೆಯುತ್ತಿದ್ದ ಇಬ್ಬರು ಉದ್ಯೋಗಿಗಳನ್ನು ಟ್ರಸ್ಟ್ ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೋಟಿಗಟ್ಟಲೆ ಕಾಣಿಕೆ ನಾಪತ್ತೆ: ಅಖಿಲೇಶ್ ಯಾದವ್ ತೀವ್ರ ಆಕ್ರೋಶ: ಸಮಾಜವಾದಿ ಪಕ್ಷದ ಮಾಜಿ ಸಚಿವ ಪವನ್ ಪಾಂಡೆ ಅವರು ಜೂನ್ 7 ರಂದು ಮಂದಿರದ ಸುಮಾರು 5 ರಿಂದ 7.5 ಕೋಟಿ ರೂಪಾಯಿ ಕಾಣಿಕೆ ಹಣ ದುರುಪಯೋಗವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿ, “ಇದು ಜಗತ್ತಿನಾದ್ಯಂತ ಇರುವ ಕೋಟ್ಯಂತರ ರಾಮಭಕ್ತರ ಆಳವಾದ ನಂಬಿಕೆಗೆ ಧಕ್ಕೆ ತರುವ ಅತ್ಯಂತ ಸೂಕ್ಷ್ಮ ಮತ್ತು ಆಘಾತಕಾರಿ ವಿಷಯವಾಗಿದೆ.

ಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ಹಣ ನಾಪತ್ತೆಯಾಗಿರುವುದು ಟ್ರಸ್ಟ್‌ಗೆ ಅತ್ಯಂತ ನಾಚಿಕೆಗೇಡಿನ ಸಂಗತಿ. ಆದರೆ ಈ ಬಗ್ಗೆ ಯಾವುದೇ ವಿವರಣೆ ನೀಡಲು ಯಾರೂ ಮುಂದೆ ಬರುತ್ತಿಲ್ಲ,” ಎಂದು ಕಿಡಿಕಾರಿದ್ದಾರೆ. ಈ ಇಡೀ ವಿಷಯದಲ್ಲಿ ಸರ್ಕಾರದ ಮೌನವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜಾಗತಿಕ ಮಟ್ಟದಲ್ಲಿ ಸನಾತನ ಸಮಾಜದ ಭಾವನೆಗಳು ಇದಕ್ಕೆ ನೇರವಾಗಿ ಬೆಸೆದುಕೊಂಡಿರುವುದರಿಂದ, ಮಾನ್ಯ ನ್ಯಾಯಾಲಯವು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ (Suo Motu) ಪರಿಗಣಿಸಿ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಭಗವಾನ್ ರಾಮನಿಗೆ ಅರ್ಪಿಸಿದ ಕಾಣಿಕೆ ಕಳ್ಳತನವಾಗಿರುವ ಪ್ರಕರಣವನ್ನು ಕೇವಲ ಕೆಲವು ಸರ್ಕಾರಿ ಅಧಿಕಾರಿಗಳು ತನಿಖೆ ನಡೆಸುವುದು ನಮ್ಮ ಧರ್ಮಕ್ಕೆ ಮತ್ತು ಮಂದಿರಕ್ಕೆ ಬಂದ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಮ್ಮ ಧರ್ಮವನ್ನು ಮುನ್ನಡೆಸುತ್ತಿರುವವರನ್ನು ಕೇವಲ ಅಧಿಕಾರಿಗಳು ತನಿಖೆ ನಡೆಸಬೇಕೇ? ಸನಾತನ ಧರ್ಮಕ್ಕೆ ಇದಕ್ಕಿಂತ ದೊಡ್ಡ ದುರ್ದೈವ ಮತ್ತೊಂದಿಲ್ಲ. ಪ್ರಭು ಶ್ರೀರಾಮನ ಕಾಣಿಕೆಯಲ್ಲಿ ಏನಾದರೂ ವ್ಯತ್ಯಾಸವಾಗಿದ್ದರೆ, ದಯವಿಟ್ಟು ಕ್ಯಾಮೆರಾಗಳನ್ನು ಆಫ್ ಮಾಡಿ ನಿಮ್ಮ ನಿಮ್ಮಲ್ಲೇ ಚರ್ಚಿಸಿಕೊಳ್ಳಿ. ಕದ್ದ ಹಣವನ್ನು ಮರಳಿ ತಂದಿಡಿ, ಶ್ರೀರಾಮ ನಿಮ್ಮನ್ನು ಖಂಡಿತ ಕ್ಷಮಿಸುತ್ತಾನೆ,” ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಅಲ್ಲದೆ, ಮತ್ತೊಂದು ಪೋಸ್ಟ್‌ನಲ್ಲಿ “ಈ ಇಡೀ ಪಿತೂರಿಯ ಬೇರುಗಳು ಎಲ್ಲೋ ದೂರದಲ್ಲಿಲ್ಲ, ಅತ್ಯಂತ ಹತ್ತಿರದಲ್ಲೇ ಇವೆ. ಆದ್ದರಿಂದ ಸತ್ಯವನ್ನು ಹೊರತರಲು ಪೊಲೀಸರಿಗೆ ಸಾಧ್ಯವಾಗದಿದ್ದರೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ,” ಎಂದು ಕಟುವಾಗಿ ವ್ಯಂಗ್ಯವಾಡಿದ್ದಾರೆ.

ಟ್ರಸ್ಟ್ ಮತ್ತು ಬಿಜೆಪಿ ನಾಯಕರ ಪ್ರತಿಕ್ರಿಯೆ: ಈ ಎಲ್ಲಾ ಗಂಭೀರ ಆರೋಪಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಳ್ಳಿಹಾಕಿದ್ದಾರೆ. ಮಂದಿರದ ಆಂತರಿಕ ಆಡಿಟ್ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದ್ದು, ಹಣ ನಾಪತ್ತೆಯಾಗಿರುವ ಬಗ್ಗೆ ಯಾವುದೇ ಪುರಾವೆಗಳು ಇನ್ನು ಲಭ್ಯವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಟ್ರಸ್ಟ್‌ನ ಪ್ರತಿನಿಧಿಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಧಿಕಾರಿಗಳು ಜಂಟಿಯಾಗಿ ನಿಯತಕಾಲಿಕವಾಗಿ ಲೆಕ್ಕಪರಿಶೋಧನೆ ನಡೆಸುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಪರಿಶೀಲನೆಯಲ್ಲಿ ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೆ, ಈ ವಿವಾದವು ಬಿಜೆಪಿ ಒಳಗೆಯೇ ಭಿನ್ನಮತ ಮೂಡಿಸಿದೆ. ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು, ಮಂದಿರದ ದೇಣಿಗೆ ಹಣ ದುರುಪಯೋಗವಾಗುತ್ತಿರುವುದು ತಮಗೆ ಮೊದಲೇ ತಿಳಿದಿತ್ತು ಎಂದು ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರಾದರೂ, ಅದರ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ನಾಯಕ ರಜನೀಶ್ ಸಿಂಗ್ ಅವರು ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ರಾಮಮಂದಿರ ಟ್ರಸ್ಟ್‌ನ ಒಟ್ಟು ಹಣಕಾಸು, ಆಸ್ತಿಪಾಸ್ತಿ, ಬಂದಿರುವ ದೇಣಿಗೆ, ಖರ್ಚು ವೆಚ್ಚಗಳು, ಬ್ಯಾಂಕ್ ಖಾತೆಗಳು ಮತ್ತು ಭೂ ವಹಿವಾಟುಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ (Public Disclosure) ಒತ್ತಾಯಿಸಿದ್ದಾರೆ.

You cannot copy content of this page

Exit mobile version