Wednesday, July 3, 2024

ಸತ್ಯ | ನ್ಯಾಯ |ಧರ್ಮ

ಹತ್ರಾಸ್ ಕಾಲ್ತುಳಿತ ದುರಂತ : FIR ನಲ್ಲಿ “ಬಾಬಾ” ಮತ್ತು ಆಯೋಜಕರ ಹೆಸರೇ ಮರೆಮಾಚಿದ UP ಪೊಲೀಸ್

ನಿನ್ನೆ ಸಂಜೆ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಕನಿಷ್ಠ 121 ಜನರು ಸಾವನ್ನಪ್ಪಿದ್ದಾರೆ. ಬೋಲೆ ಬಾಬಾ ಯಾನೆ ನಾರಾಯಣ ಸಾಕರ್ ಹರಿ ಅವರ ‘ಸತ್ಸಂಗ’ದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ಸತ್ಸಂಗದ ಕಾರ್ಯಕ್ರಮಕ್ಕೆ 80 ಸಾವಿರ ಜನಕ್ಕೆ ಅನುಮತಿ ಪಡೆಯಲಾಗಿತ್ತು. ಹಾಗೂ ಆ ಸ್ಥಳ ಕೂಡ ಹೆಚ್ಚೆಂದರೆ 1 ಲಕ್ಷ ಜನಕ್ಕಷ್ಟೇ ಸೀಮಿತ ಎನ್ನುವಂತಿತ್ತು. ಆದರೆ ಸತ್ಸಂಗದಲ್ಲಿ ಸುಮಾರು 2.5 ಲಕ್ಷ ಭಕ್ತಾದಿಗಳು ತುಂಬಿದ್ದ ಪರಿಣಾಮ ಜೊತೆಗೆ ಆಯೋಜಕರ ಅವ್ಯವಸ್ಥೆಯ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಯಂಘೋಷಿತ ದೇವಮಾನವನ ಆಪ್ತ ಸಹಾಯಕ ‘ಮುಖ್ಯ ಸೇವಾದಾರ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಭೋಲೆ ಬಾಬಾ ಅವರ ಮೂಲ ಹೆಸರು ಸೂರಜ್ ಪಾಲ್ ಸಿಂಗ್ ಅವರನ್ನು ಆರೋಪಿ ಎಂದು ಹೆಸರಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳೀಯ ಆಡಳಿತ ಮತ್ತು ಸಂಘಟಕರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 80,000 ಜನರಿಗೆ ಅನುಮತಿ ನೀಡಲಾಯಿತು. ಆದರೆ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಎಫ್‌ಐಆರ್ ತಿಳಿಸಿದೆ.

ಅನುಮತಿ ಕೋರುವಾಗ ಸತ್ಸಂಗಕ್ಕೆ ಬರುವ ಭಕ್ತರ ನಿಜವಾದ ಸಂಖ್ಯೆಯನ್ನು ಸಂಘಟಕರು ಮರೆಮಾಚಿದ್ದಾರೆ. ಸಂಚಾರ ನಿರ್ವಹಣೆಗೆ ಸಹಕರಿಸಲಿಲ್ಲ ಮತ್ತು ಕಾಲ್ತುಳಿತದ ನಂತರ ಸಾಕ್ಷ್ಯವನ್ನು ಮರೆಮಾಚಿದ್ದಾರೆ ಎಂದು ಎಫ್ಐಆರ್ ಆರೋಪಿಸಿದೆ.

ಇಷ್ಟಾಗಿಯೂ ಉತ್ತರ ಪ್ರದೇಶ ಪೊಲೀಸರು ಬೋಲೇ ಬಾಬಾ ಹೆಸರನ್ನು ಎಫ್‌ಐಆರ್ ನಲ್ಲಿ ದಾಖಲಿಸದೇ ಇರುವುದು ನೋಡಿದರೆ ಸರ್ಕರವೇ ನೇರವಾಗಿ ಸ್ವಯಂಘೋಷಿತ ಬಾಬಾ ನನ್ನು ರಕ್ಷಿಸಲು ಹೊರಟಂತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಅಷ್ಟೇ ಅಲ್ಲದೇ ಕಾರ್ಯಕ್ರಮದ ಮುಖ್ಯ ಭಾಗವೇ ಆಗಿರುವ ಸ್ವಯಂಘೋಷಿತ ಬಾಬಾ ಹೆಸರನ್ನೇ ಹಾಕದ ಪೊಲೀಸರ ಬಗ್ಗೆಯೂ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು