Tuesday, July 2, 2024

ಸತ್ಯ | ನ್ಯಾಯ |ಧರ್ಮ

ಅಬ್ಬಾಸ್‌ ಅನ್ಸಾರಿ ಮತ್ತು ಯೋಗಿ, ಈಗ ಇಬ್ಬರೂ ಒಂದೇ ದೋಣಿಯ ಪಯಣಿಗರು

ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮತ ಕೊಯ್ಲಿನ ಇಳುವರಿ ಹೆಚ್ಚಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿವೆ. ಅದರ ಭಾಗವಾಗಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಪಕ್ಷಗಳ ಬಲಾಬಲ ಪ್ರದರ್ಶನದ ವೇದಿಕೆಗಳೂ ಸಿದ್ಧಗೊಂಡಿವೆ.

ರಾಷ್ಟ್ರೀಯ ಪಕ್ಷಗಳು ತಮ್ಮನ್ನು ತಾವು ಎಷ್ಟೇ ದೊಡ್ಡ ಪಕ್ಷಗಳೆಂದು ಕರೆದುಕೊಂಡು ಆನೆಯಂತೆ ಸಾಗಲು ಪ್ರಯತ್ನಿಸಿದರೂ ಅವು ಅಲ್ಲಲ್ಲಿ ಪ್ರಾದೇಶಿಕ ಪಕ್ಷಗಳು ತೋಡಿದ ಗುಂಡಿಗೆ ಬೀಳುವುದು ನಡೆಯುತ್ತಲೇ ಇರುತ್ತದೆ. ಈ ಬಾರಿಯ ಚುನಾವಣೆಯಲ್ಲಂತೂ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವುದರಿಂದಾಗಿ ಅದಕ್ಕೆ ಸ್ಥಳೀಯ ಪಕ್ಷಗಳ ಪ್ರಭಾವಿ ನಾಯಕರ ಅಗತ್ಯ ಎಂದಿಗಿಂತಲೂ ಹೆಚ್ಚಾಗಿ ಕಾಡುತ್ತಿದೆ.

ಈ ಹಿನ್ನಲೆಯಲ್ಲಿಯೇ ಅದು ಕಳೆದ ಬಾರಿ 24ರಷ್ಟಿದ್ದ ತನ್ನ ಮಿತ್ರ ಪಕ್ಷಗಳ ಸಂಖ್ಯೆಯನ್ನು ಈಗ 38 ಹೆಚ್ಚಿಸಿಕೊಳ್ಳುತ್ತಿದೆ. ಆದರೆ ಹೀಗೆ ಅದು ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸ್ಥಳೀಯ ಬಿಜೆಪಿ ನಾಯಕರಿಗೆ ಮುಜುಗರವನ್ನೂ ಸೃಷ್ಟಿಸುತ್ತಿದೆ.

ಈಗ ಉತ್ತರಪ್ರದೇಶದಲ್ಲಿಯೂ ಅಂತಹದ್ದೇ ಪರಿಸ್ಥಿತಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೂ ಎದುರಾಗಿದೆ. ಅವರ ಫೆವರೀಟ್‌ ಎದುರಾಳಿಗಳಲ್ಲಿ ಒಬ್ಬರಾಗಿದ್ದ, ಅವರ ದ್ವೇಷ ರಾಜಕಾರಣದ ಕಿಚ್ಚಿಗೆ ದೊಡ್ಡ ಕೊಳ್ಳಿಯಾಗಿಯೇ ಒದಗುತ್ತಿದ್ದ ಮುಖ್ತಾರ್‌ ಅನ್ಸಾರಿ ಮಗ ಅಬ್ಬಾಸ್‌ ಅನ್ಸಾರಿ ಈಗ ಎನ್‌ಡಿಎ ಮಿತ್ರಕೂಟದ ಭಾಗವಾಗಿದ್ದಾರೆ.

ಉತ್ತರಪ್ರದೇಶದ ರಾಜ್ಯಸರ್ಕಾರವು ಈ ಅಬ್ಬಾಸ್‌ ಅನ್ಸಾರಿಯ ಅಪ್ಪ ಮುಖ್ತಾರ್‌ ಅನ್ಸಾರಿಯ ವಿರುದ್ಧ ಹಲವು ಕೇಸುಗಳನ್ನು ಜಡಿದು ಒಳಗೆ ಕೂರಿಸಿದೆ. ಅದೇ ಸಮಯಕ್ಕೆ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದಿಂದ 2022ರ ವಿಧಾನಸಭಾ ಚುನಾವಣೆಯಲ್ಲಿ ಅಬ್ಬಾಸ್‌ ಅನ್ಸಾರಿ ಮಊ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿದ್ದಾರೆ. ಈ ಆ ಪಕ್ಷ ಬಿಜೆಪಿ ನೇತ್ರತ್ವದ NDA ಅಂಗವಾಗಿ ಹೊರಹೊಮ್ಮಿದೆ.

ರಾಜಕೀಯ ಪಂಡಿತರ ಪ್ರಕಾರ ಇದು ಮುಖ್ತಾರ್‌ ಅನ್ಸಾರಿಗೆ ಲಾಭ ತಂದುಕೊಡಲಿದ್ದು ಆತನ ವಿರುದ್ಧದ ಪ್ರಕರಣಗಳು ಸಡಿಲಗೊಂಡು ಆತ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಿದ್ದಾರೆ.

2020ರಲ್ಲಿ ತಾನು ಮುಖ್ತಾರ್‌ ಅನ್ಸಾರಿಯನ್ನು ಜೈಲಿಗೆ ಹಾಕುವುದರ ಮೂಲಕ ಯುಪಿಯ ಗೂಂಡಾ ಇತಿಹಾಸದ ಒಂದು ಪುಟವನ್ನು ಹರಿದೆಸೆದಿದ್ದೇನೆ ಎಂಬಂತೆ ಮಾತನಾಡಿದ್ದರು. ಈಗ ಈ ಬೆಳವಣಿಗೆನ್ನು ಹೇಗೆ ಸ್ವೀಕರಿಸಲಿದ್ದಾರೆನ್ನುವುದೇ ಕುತೂಹಲ.

ಇದೇ ವೇಳೆ ಸುಭಾಸಪ ರಾಷ್ಟ್ರೀಯ ಮುಖ್ಯ ವಕ್ತಾರ ಅರುಣ್ ರಾಜ್‌ಭರ್ ಮಾತನಾಡಿ, ಅಬ್ಬಾಸ್ ಅನ್ಸಾರಿ ಅವರು ನಮ್ಮ ಪಕ್ಷದ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಗೆದ್ದಿದ್ದಾರೆ, ಅವರು ನಮ್ಮ ಪಕ್ಷದ ಚುನಾಯಿತ ಜನಪ್ರತಿನಿಧಿ, ಅವರಿಗೆ ಯಾವುದೇ ಅಪರಾಧ ಇತಿಹಾಸವಿಲ್ಲ ಎಂದಿದ್ದಾರೆ. ಅತ್ತ ಅಲ್ಲಿನ ರಾಜ್ಯ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅಪರಾಧ ಮತ್ತು ಅಪರಾಧಿಗಳ ವಿಷಯದಲ್ಲಿ ಪಕ್ಷದ ನೀತಿ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಅಬ್ಬಾಸ್‌ ಅನ್ಸಾರಿ ಕಾಸ್ಗಂಜ್ ಜೈಲಿನಲ್ಲಿದ್ದಾರೆ.

ದ್ವೇಷ ಭಾಷಣ ಪ್ರಕರಣದಲ್ಲಿ ಅಬ್ಬಾಸ್‌ಗೆ ಸಿಜಿಎಂ ಜನಪ್ರತಿನಿಧಿ ನ್ಯಾಯಾಲಯ ಇತ್ತೀಚೆಗೆ ಪರಿಹಾರ ನೀಡಿತ್ತು. ಇದೇ ವೇಳೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣ ಜಾರಿಯಲ್ಲಿದೆ. ಶಸ್ತ್ರಾಸ್ತ್ರ ಅಬ್ಬಾಸ್ ವಿರುದ್ಧ ಪರವಾನಗಿಯಲ್ಲಿನ ನಿಯಮಗಳಿಗೆ ವಿರುದ್ಧವಾಗಿ ವಿದೇಶದಿಂದ ಹಲವಾರು ಮಾರಕಾಸ್ತ್ರಗಳನ್ನು ಖರೀದಿಸಿದ ಪ್ರಕರಣವೂ ನಡೆಯುತ್ತಿದೆ. ಇ ಡಿ ಕೂಡ ತನ್ನ ತನಿಖೆಯ ವ್ಯಾಪ್ತಿಗೆ ಸೇರಿಸಿದೆ. ಈ ಪ್ರಕರಣದಲ್ಲಿ ಎಸ್‌ಟಿಎಫ್ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

Related Articles

ಇತ್ತೀಚಿನ ಸುದ್ದಿಗಳು