ಎಸ್‌ಐಆರ್‌ ಮ್ಯಾಜಿಕ್ | ಯುಪಿಯಲ್ಲಿ 84 ಲಕ್ಷದಷ್ಟು ಮತದಾರರ ಸೇರ್ಪಡೆ: ದೇಶದ ಇತರ ರಾಜ್ಯಗಳಲ್ಲಿ ಮತದಾರರ ಸಂಖ್ಯೆ ಕಡಿಮೆಯಾದರೆ ಇಲ್ಲಿ ಮಾತ್ರ ಹೆಚ್ಚಳ!

ಲಕ್ನೋ: ಕೇಂದ್ರ ಚುನಾವಣಾ ಆಯೋಗವು ಹಮ್ಮಿಕೊಂಡಿದ್ದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ದೇಶಾದ್ಯಂತ ಲಕ್ಷಾಂತರ ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ 90 ಲಕ್ಷ ಮಂದಿಯ ಹೆಸರುಗಳು ಪಟ್ಟಿಯಿಂದ ಮಾಯವಾಗಿವೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ 84 ಲಕ್ಷ ಮತದಾರರು ಹೆಚ್ಚುವರಿಯಾಗಿ ಪಟ್ಟಿಗೆ ಸೇರ್ಪಡೆಯಾಗಿರುವುದು ಗಮನಾರ್ಹವಾಗಿದೆ. ಉತ್ತರ ಪ್ರದೇಶದ ಎಸ್‌ಐಆರ್ ಅಂತಿಮ ಪಟ್ಟಿಯನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಅವರು ಶುಕ್ರವಾರ ಬಿಡುಗಡೆ ಮಾಡಿದರು.

ಲಕ್ನೋದ ಲೋಕಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡು ಪಟ್ಟಿಗಿಂತ ಅಂತಿಮ ಪಟ್ಟಿಯಲ್ಲಿ 84 ಲಕ್ಷಕ್ಕೂ ಹೆಚ್ಚು ಮತದಾರರು ಹೆಚ್ಚಾಗಿದ್ದು, ಒಟ್ಟು ಮತದಾರರ ಸಂಖ್ಯೆ 13.39 ಕೋಟಿಗೆ ತಲುಪಿದೆ ಎಂದು ತಿಳಿಸಿದರು. ಎಸ್‌ಐಆರ್ ಪ್ರಕ್ರಿಯೆಯು ಅಕ್ಟೋಬರ್ 7, 2025 ರಿಂದ ಏಪ್ರಿಲ್ 10, 2026 ರವರೆಗೆ ನಡೆದಿದ್ದು, ರಾಜ್ಯದ 75 ಜಿಲ್ಲೆಗಳ 403 ವಿಧಾನಸಭಾ ಕ್ಷೇತ್ರಗಳನ್ನು ಇದು ಒಳಗೊಂಡಿತ್ತು.

ಜನವರಿ 6, 2026 ರಂದು ರಿನ್ವಾ ಅವರು ಬಿಡುಗಡೆ ಮಾಡಿದ್ದ ಎಸ್‌ಐಆರ್ ಕರಡು ಪಟ್ಟಿಯಲ್ಲಿ 12,55,56,025 ಮತದಾರರಿದ್ದರು. ಇದರಲ್ಲಿ 6.88 ಕೋಟಿ ಪುರುಷರು, 5.67 ಕೋಟಿ ಮಹಿಳೆಯರು ಮತ್ತು 4,199 ತೃತೀಯ ಲಿಂಗಿ ಮತದಾರರಿದ್ದರು. 18-19 ವರ್ಷದ ಯುವ ಮತದಾರರ ಸಂಖ್ಯೆ 3,33,981 ಆಗಿತ್ತು. ಪ್ರತಿ ಸಾವಿರ ಪುರುಷರಿಗೆ 824 ಮಹಿಳಾ ಮತದಾರರಿದ್ದರು. ಆದರೆ, ಶುಕ್ರವಾರ ಬಿಡುಗಡೆಯಾದ ಅಂತಿಮ ಪಟ್ಟಿಯಲ್ಲಿ ಒಟ್ಟು ಮತದಾರರ ಸಂಖ್ಯೆ 13,39,84,792ಕ್ಕೆ ಏರಿಕೆಯಾಗಿದೆ. ಪುರುಷ ಮತದಾರರು 7,30,71,071 (ಶೇ. 54), ಮಹಿಳಾ ಮತದಾರರು 6,09,09,525 (ಶೇ. 45.46) ಮತ್ತು ತೃತೀಯ ಲಿಂಗಿ ಮತದಾರರು 4,206 ರಷ್ಟಿದ್ದಾರೆ. ಕರಡು ಪಟ್ಟಿಗಿಂತ ಅಂತಿಮ ಪಟ್ಟಿಯಲ್ಲಿ 18-19 ವರ್ಷದೊಳಗಿನ ಯುವಜನರ ಸಂಖ್ಯೆ 17,63,360 ಕ್ಕೆ ಏರಿಕೆಯಾಗಿದ್ದು, ಸುಮಾರು ಶೇ. 1.32 ರಷ್ಟು ಹೆಚ್ಚಳವಾಗಿದೆ. ಲಿಂಗಾನುಪಾತವೂ ಸುಧಾರಿಸಿದ್ದು, ಪ್ರತಿ ಸಾವಿರ ಪುರುಷರಿಗೆ ಮಹಿಳಾ ಮತದಾರರ ಸಂಖ್ಯೆ 824 ರಿಂದ 834 ಕ್ಕೆ ಅಂದರೆ ಹತ್ತು ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ.

ಕರಡು ಮತ್ತು ಅಂತಿಮ ಪಟ್ಟಿಯ ನಡುವೆ ಒಟ್ಟು 84,28,767 ಮತದಾರರು ಹೆಚ್ಚಾಗಿದ್ದಾರೆ. ಇವರಲ್ಲಿ 42,27,902 ಪುರುಷರು, 42,00,778 ಮಹಿಳೆಯರು ಮತ್ತು 87 ತೃತೀಯ ಲಿಂಗಿಗಳು ಸೇರಿದ್ದಾರೆ. ಒಟ್ಟಾರೆಯಾಗಿ 18-19 ವರ್ಷದೊಳಗಿನವರ ಸಂಖ್ಯೆ 1,42,39,379 ಕ್ಕೆ ತಲುಪಿದೆ ಎಂದು ಚುನಾವಣಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ವಿಶೇಷವಾಗಿ ಪ್ರಯಾಗ್‌ರಾಜ್‌ನಲ್ಲಿ 3,29,421, ಲಕ್ನೋದಲ್ಲಿ 2,85,961, ಬರೇಲಿಯಲ್ಲಿ 2,57,000, ಘಾಜಿಯಾಬಾದ್‌ನಲ್ಲಿ 2,43,666 ಮತ್ತು ಜೌನ್‌ಪುರದಲ್ಲಿ 2,37,590 ಮತದಾರರು ಹೆಚ್ಚಾಗಿದ್ದಾರೆ. ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳು ಮತ್ತು ಮತದಾರರ ನಡುವಿನ ಸಮನ್ವಯದಿಂದಾಗಿ ಈ ಎಸ್‌ಐಆರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಸಿಇಒ ರಿನ್ವಾ ತಿಳಿಸಿದರು.

ಈ ಬೃಹತ್ ಪ್ರಕ್ರಿಯೆಯಲ್ಲಿ 75 ಜಿಲ್ಲಾ ಚುನಾವಣಾಧಿಕಾರಿಗಳು (ಡಿಇಒ), 403 ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒ), 12,758 ಸಹಾಯಕ ಇಆರ್‌ಒಗಳು, 18,026 ಬಿಎಲ್‌ಒ ಮೇಲ್ವಿಚಾರಕರು, 1,77,516 ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತ್ತು 5,82,877 ಬೂತ್ ಮಟ್ಟದ ಏಜೆಂಟ್‌ಗಳು ಪಾಲ್ಗೊಂಡಿದ್ದರು ಎಂದು ಅವರು ವಿವರಿಸಿದರು. ಆದರೆ, ಎಸ್‌ಐಆರ್ ನಡೆದ ಇತರ ರಾಜ್ಯಗಳಲ್ಲಿ ಕಳೆದ ಚುನಾವಣೆಗಿಂತ ಲಕ್ಷಾಂತರ ಮತದಾರರನ್ನು ಕೈಬಿಡಲಾಗಿದ್ದು, ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮತದಾರರ ಸಂಖ್ಯೆ ಹೇಗೆ ಹೆಚ್ಚಾಯಿತು ಎಂದು ಹಲವು ಪಕ್ಷಗಳು ಪ್ರಶ್ನಿಸಿವೆ. ಚುನಾವಣಾ ಆಯೋಗವು ಬಿಜೆಪಿಯ ಆದೇಶದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.

Related Articles

ಇತ್ತೀಚಿನ ಸುದ್ದಿಗಳು