“ಊರಿದ್ದೆಡೆ ಹೊಲಸಿರುತ್ತದೆ” ಎಂಬ ಗಾದೆಯು “ಊರಿದ್ದೆಡೆ ಹೊಲೆಯರು ಇರುತ್ತಾರೆ” ಎಂದು ಯಾವಾಗ ಬದಲಾಯ್ತು!? ಏಕೆ ಬದಲಾಯ್ತು!? ಯಾರು ಬದಲಿಸಿದರು!? ಇದೆಲ್ಲದರ ಅಧ್ಯಯನ ಮಾಡಬೇಕಲ್ವೇ? ಆಗ ತಿಳಿಯುತ್ತೆ ಹಿಂದೆ ಅಕ್ಷರದ ಗುತ್ತಿಗೆ ಹಿಡಿದಿದ್ದ ನಿಮ್ಮವರ ಹಿಕ್ಮತ್ತು! ಗಾದೆಗಳನ್ನು ಹೆಣೆದ, ಗಾದೆಗಳನ್ನು ತಿರುಚಿದ ನಿಮ್ಮವರ ಶಾಣ್ಯತನ ಆಗ ತಿಳಿಯುತ್ತೆ – ಡಾ.ಚಮರಂ, ಲೇಖಕ/ಚಿತ್ರನಿರ್ದೇಶಕ
“ಊರಿದ್ದ ಕಡೆ ಹೊಲಗೇರಿ ಇದ್ದೇ ಇರುತ್ತೆ” ಎನ್ನುವ ತನ್ನ ಮಾತಿನಿಂದ ಜಾತಿನಿಂದನೆಯ ವಿವಾದಕ್ಕೊಳಗಾಗಿರುವ ವಿಲಕ್ಷಣ ನಟ-ನಿರ್ದೇಶಕ ಉಪೇಂದ್ರ, ದಲಿತ ಸಮುದಾಯ ಜಾಲತಾಣದಲ್ಲಿ ರುಬ್ಬುತ್ತಿದ್ದಂತೆ “ಬಾಯಿತಪ್ಪಿ ಆಡಿದ ಮಾತದು ಕ್ಷಮೆಯಿರಲಿ” ಎಂದು ಒಂದು ಉಡಾಫೆಯ ಕ್ಷಮೆ ಬಿಸಾಡಿದ್ದಾನೆ. ಆದರೂ ನೆಟ್ಟಿಗರು “ಬಾಯಿ ತಪ್ಪಿ ಬಂದ ಮಾತಲ್ಲ ಅದು. ಮೆದುಳಲ್ಲಿ ಇರುವ ಧೋರಣೆ, ಬಹಿರಂಗವಾಗಿ ಕ್ಷಮೆ ಯಾಚಿಸು ಇಲ್ಲವೇ ಅಟ್ರಾಸಿಟಿ ಕೇಸ್ ಎದುರಿಸು” ಎನ್ನುತ್ತಿದ್ದಂತೆ…”ಕ್ಷಮೆ ಕೇಳಿದ ಮೇಲೆ ಅದನ್ನು ನೀಡುವ ದೊಡ್ಡತನವಿರಬೇಕು, ಇಂದು ಮಾತಾಡುತ್ತಿರುವ ಯಾರೂ 50 ವರ್ಷದ ಕೆಳಗೆ ಹುಟ್ಟೇ ಇರಲಿಲ್ಲ, ನನ್ನ ಬಡತನ ಗೊತ್ತಾ?” ಎಂಬ ಉದ್ದಟತನದ ಮಾತುಗಳಿಂದ ಮತ್ತೆ ದಲಿತರನ್ನು ಕೆರಳಿಸಿದ್ದಾನೆ.
ಉಪೇಂದ್ರ ತನ್ನನ್ನು ತಾನು ಬಹಳ ಬ್ರಿಲ್ಲಿಯೆಂಟ್ ಎಂದೇ ಭ್ರಮಿಸಿದ್ದಾನೆ. ಅದನ್ನೇ ತನ್ನ ಚಿತ್ರಗಳಲ್ಲಿ ಸರಕಾಗಿಸಿ ತಾನು ಹೇಳುವುದೇ ವೇದ ಎಂಬ ದಾರ್ಷ್ಟ್ಯವನ್ನೇ ರಸವತ್ತಾಗಿ ಹೇಳಿ ನೋಡುಗರ ಅಭಿರುಚಿಯನ್ನು ಹಾಳುಗೆಡವಿದ ಕೀರ್ತಿ ಈ ನಟ ಕಂ ನಿರ್ದೇಶಕನಿಗೇ ಸಲ್ಲಬೇಕು.
ಗುರು ಕಾಶಿನಾಥ್ ಚಿತ್ರಗಳಿಗೆ ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಬರೆಯುತ್ತಿದ್ದ ಈತ ಸ್ವತಂತ್ರವಾಗಿ ಮೊದಲು ಕತೆ ಬರೆದು ನಿರ್ದೇಶನ ಮಾಡಿದ ಚಿತ್ರ “ತರ್ಲೆ ನನ್ಮಗ” ಎಂಬ ಕೀಳು ಅಭಿರುಚಿಯ ಚಿತ್ರ. ಈ ಚಿತ್ರದಲ್ಲಿ ಈತ ಹೆಣ್ಣನ್ನು ಬಹಳ ಕೀಳಾಗಿ ಚಿತ್ರಿಸಿದ್ದಲ್ಲದೆ ಹೆಣ್ಣನ್ನು “ಡಗಾರ್” ಎಂದನು. ಇದು ಪ್ರತಿಯೊಬ್ಬರ ಪ್ರತಿದಿನದ ಮಾತಾಯಿತು. ನಾಲ್ಕಾರು ಹುಡುಗರ ಜೊತೆ ಬೆರೆವ ಹೆಣ್ಣನ್ನು ಜನ ಡಗಾರ್ ಎಂದೇ ಕರೆಯಲಾರಂಭಿಸಿದರು. ಅದಾದ ನಂತರ ಈತನ “A” ಎಂಬ ಸಿನಿಮಾ ಮೂಲಕ ಪ್ರೀತಿ ಪ್ರೇಮ ಎಂಬುದೆಲ್ಲಾ ಪುಸ್ತಕದ ಬದನೇಕಾಯಿ ಎಂಬುದನ್ನು ತೇಲಿಬಿಟ್ಟ. ಅಲ್ಲಿಗೆ ಈತನ ವಿಲಕ್ಷಣ ನಿಲ್ಲಲಿಲ್ಲ “ಉಪೇಂದ್ರ” ಎಂಬ ತನ್ನದೇ ಹೆಸರಿನ ಚಿತ್ರ ಮಾಡಿದ ಅದರಲ್ಲಿ ಹೆಣ್ಣು ಕೇವಲ ಭೋಗದ ವಸ್ತು ಎಂದ. “ಇದೇ ಪ್ರತಿಯೊಬ್ಬರ ತಲೆಯಲ್ಲೂ ಇದೆ ನಾನು ಓಪನ್ ಆಗಿ ಹೇಳ್ತಿನಿ ಬೇರೆಯವರು ಹೇಳಲ್ಲ ಅಷ್ಟೆ” ಎನ್ನುತ್ತಾ ತನ್ನ ಹುಚ್ಚಾಟವನ್ನು ಇಡೀ ಜಗದ ಹುಚ್ಚಾಟವಾಗಿಸಿದ! “ಉಪ್ಪಿಗಿಂತ ರುಚಿ ಬೇರೆ ಇಲ್ಲ ಒಪ್ಪಿಕೊಂಡೋರು ದಡ್ಡರಲ್ಲ” ಎಂದು ತನ್ನನ್ನೇ ತಾನು ವಿಜೃಂಭಿಸಿಕೊಳ್ಳುವ ಹಾಡನ್ನು ತಾನೇ ಕಿರುಚುತ್ತಾ ಹಾಡಿದ. ಕಿರುಚುವುದೇ ಹಾಡಾಗಿಸಿದ. H2O ಎಂಬ ಚಿತ್ರದ ಮೂಲಕ ಕಾವೇರಿ ನದಿ ವಿವಾದಕ್ಕೆ ಪರಿಹಾರ ಕೊಡುತ್ತೇನೆಂದು ಮಕಾಡೆ ಮಲಗಿದ. “ಸೂಪರ್ ಸ್ಟಾರ್” ಎಂಬ ಚಿತ್ರದಲ್ಲಿ ಹೆಣ್ಣನ್ನು ಟಾರ್ಚರ್ ಮಾಡಿ, ತಾನು ಇಷ್ಟ ಪಟ್ಟ ಮೇಲೆ ನೀನೂ ಇಷ್ಟ ಪಡಲೇಬೇಕು ಎಂಬ ಹುಚ್ಚುತನ ಕಲಿಸಿದ…

“ಅಂತ” ಎಂಬ ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್ ಎನ್ನಬಹುದಾದ ಚಿತ್ರದ ಮುಂದುವರೆದ ಭಾಗ ಮಾಡುತ್ತೇನೆಂದು “ಆಪರೇಷನ್ ಅಂತ” ಎಂದು ಮಾಡಿ ಜನರೇ ಅಪರಾಧಗಳ ವಿರುದ್ದ ಕಾನೂನನ್ನು ಕೈಗೆತ್ತಿಕೊಂಡು ಶಿಕ್ಷಿಸಬೇಕು ಎಂಬ ಸಂದೇಶ ನೀಡಿದ. ಅದೇ ಮಾಬ್ ಲಿಂಚಿಂಗ್ ಐಡಿಯಾ!
ಈತನ ಈ ತರದ ಐಡಿಯಾಗಳ ಫ್ಯಾಕ್ಟರಿ ಯಾವುದು ಎಂಬುದನ್ನು ನೀವೇ ಊಹಿಸಿ.
“ಸೂಪರ್” ಚಿತ್ರದಲ್ಲಿ ತನಗೆ ಅಧಿಕಾರ ಸಿಕ್ಕರೆ ಭಾರತವನ್ನು ಭೂಸ್ವರ್ಗವಾಗಿಸಿ ನಮ್ಮೆದುರು ಇತರೆ ದೇಶಗಳು ಭಿಕ್ಷೆ ಬೇಡುವಂತೆ ಮಾಡುವ ಅಸಾಧ್ಯತೆಯನ್ನು ತೋರಿದ….
“ಉಪ್ಪಿ2” ಚಿತ್ರದಲ್ಲಿ ಯಾರೇ ಸತ್ತರೂ ತನ್ನಷ್ಟಕ್ಕೆ ತಾನಿದ್ದುಬಿಡುವುದೇ ಜೀವನದ ಪರಮ ಧ್ಯೇಯ ಎಂಬ ತಿಕ್ಕಲು ತನ ತೋರಿದ. ಇದೀಗ “ಮೂರು ನಾಮ” ಎಂಬ ಚಿತ್ರದ ಬಗ್ಗೆ ಮಾತಾಡುತ್ತಾ ಪತ್ರಕರ್ತರೊಬ್ಬರು ಇದು ಅಶೋಕನ ಕಾಲದ ಚಿತ್ರವೇ? ಎಂದು ಕೇಳಿದ್ದಕ್ಕೆ “ಯಾವ ಅಶೋಕ? ನನಗೆ ಯಾವ ಅಶೋಕನೂ ಗೊತ್ತಿಲ್ಲ” ಎಂಬ ಉಡಾಫೆಯ ಮಾತಾಡಿದ್ದ. ಆಗಲೂ ದಲಿತರಿಂದ ಟ್ರೋಲ್ ಗೆ ಒಳಗಾಗಿದ್ದ.
ಇನ್ನುಳಿದಂತೆ ತನ್ನ ವಿಲಕ್ಷಣತೆಗೆ ಮ್ಯಾಚ್ ಆಗುವಂತಹ ಚಿತ್ರಗಳಾದ “ಬುದ್ಧಿವಂತ”, “ಪ್ರೀತ್ಸೆ”, “ನಾಗರಹಾವು” “ರಕ್ತಕಣ್ಣೀರು” ಎಂಬ ರೀಮೇಕ್ ಚಿತ್ರಗಳನ್ನು ಮಾಡಿದ್ದಷ್ಟೇ. ಈಗ ಈತನ ತಲೆ ಪೂರಾ ಖಾಲಿ ಎಂಬುದನ್ನು ಇತ್ತೀಚಿನ ಚಿತ್ರಗಳೇ ಹೇಳುತ್ತವೆ.
ಸಾಮಾನ್ಯ ಜನರನ್ನು ತಿಕ್ಕಲು ಉನ್ಮಾದಗಳಿಂದ ಹುಚ್ಚೆಬ್ಬಿಸಿ ತಾವು ಮಾತ್ರ ಆರಾಮವಾಗಿ, ಸೇಫಾಗಿ ಇರುವ ಮನುವಾದಿ ಕಲೆ ಇವನದು. ಅದನ್ನೇ ತನ್ನ ಚಿತ್ರಗಳಲ್ಲಿ ಈತ ಮಾಡಿದ್ದು. ಆದರೆ ನೋಡಿದವರೆಲ್ಲಾ ಬಹುತೇಕ ದಲಿತರೇ!! ಈತನ ಬಡತನವನ್ನು ತೊಲಗಿಸಿ ಈತನನ್ನು ಇಷ್ಟು ಸಿರಿವಂತನಾಗಿ ಸೂಪರ್ ಸ್ಟಾರ್ ಆಗಿ ಸೃಷ್ಟಿಸಿದವರೇ ದಲಿತ ಪ್ರೇಕ್ಷಕರು!
ಇಂದು ಅದೇ ಅಮಾಯಕರನ್ನು ಲೇವಡಿ ಮಾಡುವ ಮಟ್ಟಕ್ಕೆ ಈತ ಬೆಳೆದು ನಿಂತಿದ್ದಾನೆ! ಅದಲ್ಲದೆ ನಾನು ಚಿತ್ರರಂಗಕ್ಕೆ ಬಂದಾಗ ನೀವ್ಯಾರೂ ಹುಟ್ಟಿರಲೇ ಇಲ್ಲ ಎಂಬ ಕೊಬ್ಬಿನ ಮಾತುಗಳನ್ನು ಆಡುತ್ತಿದ್ದಾನೆ. ಈತನ ಸಮುದಾಯ ಸಿನಿಮಾ ನೋಡುಗರೇ ಅಲ್ಲ. ಅದರಲ್ಲೂ ಈತನ ವಿಲಕ್ಷಣ ಚಿತ್ರಗಳನ್ನಂತು ನೋಡುವುದೇ ಇಲ್ಲ. ನೋಡಿದರೂ ಇರೋದು 3%. ಅವರಿಂದ ಈತ ಈ ಪರಿ ಬೆಳೆಯಲಾದೀತೆ?
ಈತನ ಅಸಲಿಯತ್ತನ್ನು ನಾವು ಬಹುಜನ ಚಳವಳಿಯ ಆರಂಭದ ದಿನಗಳಲ್ಲೇ ಗುರ್ತಿಸಿದ್ದೆವು. ಈತನ ಚಿತ್ರಗಳ ಒಳಮರ್ಮವನ್ನು ನಮ್ಮ “ಸಮಾಜ ಪರಿವರ್ತನ” ಪತ್ರಿಕೆಯಲ್ಲಿ 25 ವರ್ಷಗಳ ಹಿಂದೆಯೇ ಬಯಲು ಮಾಡಿದ್ದೇವೆ. ನಮ್ಮ ಚಳವಳಿಯ ಯುವಜನರಿಗೆ ಈತನ ಹುಚ್ಚಾಟಗಳನ್ನು ಬೆಂಬಲಿಸದಂತೆ ಜಾಗೃತಗೊಳಿಸಿದ್ದೆವು. ಅದರ ಪರಿಣಾಮವಾಗಿ ನಮ್ಮ ಬಹುಜನರು ಈತನ ಚಿತ್ರಗಳನ್ನು ಸೈಲೆಂಟಾಗಿ ಸೈಡ್ ಸರಿಸಿ ತಿರಸ್ಕರಿಸಿದರು. ಹಾಗಾಗಿಯೇ ಈತನ ಬಹುತೇಕ ಚಿತ್ರಗಳು ಆರಂಭದ ಚಿತ್ರಗಳಂತೆ ಸೂಪರ್ ಹಿಟ್ ಆಗಲೇ ಇಲ್ಲ! ಈ ತರ ಅವರ ಕೊಬ್ಬನ್ನು ಇಳಿಸಬೇಕು. ಇಂದು ಸಿರಿವಂತಿಕೆ ಬಂದಾಗ ಹೋಟೆಲ್ ಉದ್ಯಮಿಯಾಗಿ, ಬೃಹತ್ ಬಂಗಲೆಗಳನ್ನು ಕಟ್ಟಿ ಐಷಾರಾಮಿ ಬದುಕು ಬರುತ್ತಿದ್ದಂತೆ ಈತನಿಗೆ ಸಾಮಾಜಿಕವಾದ ಸ್ಟೇಟಸ್ ಬಂದಿದೆ.
ಆದರೆ ದಲಿತರಿಗೆ? ಅವರು ಎಷ್ಟೇ ಬುದ್ಧಿವಂತರಿರಲಿ, ಎಷ್ಟೇ ನ್ಯಾಯಬದ್ದವಾಗಿರಲಿ, ಎಂಥದೇ ಹುದ್ದೆಗೇರಲಿ, ಎಷ್ಟೇ ದಕ್ಷರಾಗಿರಲಿ ಅವರಿಗೆ ಅಂಟಿರುವ ಜಾತಿಯತೆ ಎಂಬುದು ಮಾತ್ರ ನಾಶವಾಗುವುದಿಲ್ಲ! ಇದೇ ಜಾತಿ ತಾರತಮ್ಯಕ್ಕೂ, ಬಡತನಕ್ಕೂ ಇರುವ ವ್ಯತ್ಯಾಸ. ಈ ವ್ಯತ್ಯಾಸ ತಿಳಿಯದ ಉಪೇಂದ್ರ ಯಾವ ಸೀಮೆ ನಿರ್ದೇಶಕ? ಯಾವ ಸೀಮೆ ಕಥೆಗಾರ? ಯಾವ ಸೀಮೆ ಬುದ್ಧಿವಂತ??
ತನ್ನ ಬಡತನವೇ ದೊಡ್ಡದು ತನಗಿದ್ದ ಬಡತನ ಲೋಕದಲ್ಲಿ ಯಾರಿಗೂ ಇರಲಿಲ್ಲ. ಇಂತಹ ಸ್ಥಿತಿಯನ್ನು ನೋಡಿ ಬೆಳೆದ ನನಗೆ ಕಷ್ಟಗಳ ಅರಿವಿದೆ. ಈ ಕಷ್ಟಗಳನ್ನು ಮೀರಲು ನಾನು ಜೀವನವನ್ನು ಒತ್ತೆಯಿಟ್ಟು ದುಡಿದಿದ್ದೇನೆ ಎಂಬ ಮಾತುಗಳಿಂದ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ನಾಟಕ ಆಡುತ್ತಿರುವ ಈತನಿಗೆ ಜಾತಿಯತೆ ಎಂಬುದು ಒಂದು ಬಡತನಕ್ಕಿಂತಲೂ ಕ್ರೂರವಾದ ಸಾಮಾಜಿಕ ಪಿಡುಗು. ಇದರಿಂದ ಭಾರತದ ನೂರಾರು ಸಮುದಾಯಗಳು ಮಾನಸಿಕ ಖಿನ್ನತೆಯಿಂದ, ದೈಹಿಕ ದೌರ್ಜನ್ಯದಿಂದ, ಹಸಿವು ಹಾಹಾಕಾರದಿಂದ ನರಳುತ್ತಿದ್ದಾರೆ ಎಂಬುದರ ಅರಿವಿಲ್ಲವೇ? ಈತನ ಓದಿಗೆ ಅದು ದಕ್ಕಿಲ್ಲವೇ? ಈತ ಸಮಾಜದಲ್ಲಿ ಅದನ್ನೆಲ್ಲಾ ನೋಡಿಲ್ಲವೇ? ಅದಕ್ಕೆ ಕಾರಣ ತನ್ನ ಸಮುದಾಯ ಸೃಷ್ಟಿಸಿದ ಜಾತಿವ್ಯವಸ್ಥೆ ಕಾರಣ ಎಂಬುದರ ಅರಿವಿಲ್ಲವೇ?
ವಿನಾಕಾರಣ ದಲಿತರ ಮೇಲೆ ಈತನ ಸಮುದಾಯ ಸಾಮಾಜಿಕ ಕಟ್ಟಳೆಗಳನ್ನು ಅಮಾನುಷವಾಗಿ ಹೇರಿ ಸಾವಿರಾರು ವರ್ಷಗಳಿಂದ ಅಕ್ಷರ, ಅಧಿಕಾರ, ಆಸ್ತಿ ಸಂಪಾದನೆಯಿಂದ ದೂರವಿರಿಸಿರುವ ಕತೆ ತಿಳಿಯದೇ??
50 ವರ್ಷದ ಅನುಭವವಿರುವ ಉಪೇಂದ್ರನಿಗೆ ಸಮಾಜದಲ್ಲಿ ನಡೆಯುತ್ತಿರುವ ತಾರತಮ್ಯ ತಿಳಿಯದೇ? ಜಾತಿಯತೆ ಕಾಣದೆ? ಜಾತಿಯಾಧಾರಿತ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಕೊಲೆ, ಮರ್ಯಾದೆ ಹತ್ಯೆ ಇವ್ಯಾವೂ ತಿಳಿಯದೇ? ಜಾತಿಯ ಕ್ರೌರ್ಯದ ಅರಿವೇ ಇಲ್ಲವೇ??
ಈತನ ಯಾವ ಚಿತ್ರದಲ್ಲೂ ಈ ಅಂಶಗಳು ಕಾಣುವುದಿಲ್ಲ. ಚಿತ್ರರಂಗದಲ್ಲಿರುವ ಈತನಿಗೆ ತಮಿಳು, ಮಲಯಾಳಂ, ಮರಾಠಿ ಚಿತ್ರರಂಗಗಳು ಅಡ್ರೆಸ್ ಮಾಡುತ್ತಿರುವ ಚಿತ್ರಕತೆಗಳ ವಿನ್ಯಾಸದ ಅರಿವಿಲ್ಲವೇ?
ಸಮಕಾಲೀನ ಚಿತ್ರಜಗತ್ತಿನ ವಸ್ತು ವಿಷಯಗಳ ಅರಿವಿಲ್ಲವೇ? ಕನಿಷ್ಟ ತಮಿಳಿನ ಕರ್ಣನ್, ಅಸುರನ್, ಪರಿಯೇರಂ ಪೆರುಮಾಳ್, ಕಾಲಾ,ಕಬಾಲಿ, ಸಾರ್ಪಟ್ಟ ಪರಂಪರೈ, ಚಿತ್ರಗಳು ಏಕೆ ಸದ್ದು ಮಾಡಿದವೆಂಬುದಾದರೂ ಗೊತ್ತೇ? ಹೋಗಲಿ ಇತ್ತೀಚೆಗೆ ಬಂದ “ಮಾಮನ್ನನ್” ಚಿತ್ರ ಯಾಕಾಗಿ ಗಮನ ಸೆಳೆಯಿತು ಗೊತ್ತಿದೆಯೇ? ಇದರ ಕುರಿತು ಜಾಲತಾಣದಲ್ಲಿ ಬಂದ ವಿಮರ್ಶೆಗಳಾದರೂ ಕಣ್ಣಿಗೆ ಬಿದ್ದವೇ!??
ಇದ್ಯಾವುದರ ಪರಿವೆಯೇ ಇಲ್ಲದಿದ್ದರೆ ಈತ ಯಾವ ಸೀಮೆ ಚಿತ್ರಕರ್ಮಿ?? ಮತ್ತೆ ನಮ್ಮ ಯುವಜನರು ಕೇಳಬೇಕು 50 ವರ್ಷದ ಔಟ್ ಡೇಟೆಡ್ ತಲೆ ನಿನ್ನದು. ಈಗಿನ ಕಾಲಕ್ಕೆ ಅಪ್ ಡೇಟ್ ಆಗೋ ದಡ್ಡ ಎಂದು ಕೇಳಬೇಕು…
50 ವರ್ಷದ ಹಿಂದೆ ಇದ್ದಂತಿಲ್ಲ ಈಗಿನ ದಲಿತರು, ಬಹಳ ಜ್ಞಾನಿಗಳಾಗಿದ್ದಾರೆ…ಧೈರ್ಯವಂತರಾಗಿದ್ದಾರೆ… ಪ್ರಶ್ನೆ ಮಾಡುವಷ್ಟು ಬೆಳೆದಿದ್ದಾರೆ… ಸಂಘಟಿತರಾಗಿದ್ದಾರೆ…ತಪ್ಪು ಮಾಡಿದರೆ ಜಾಡಿಸಿ ಕೇಳುತ್ತಾರೆ ಎಂಬ ಭಯವಾದರೂ ಇರಬೇಕಲ್ವಾ ಮಿ.ಉಪೇಂದ್ರ?
“ಊರಿದ್ದೆಡೆ ಹೊಲಸಿರುತ್ತದೆ” ಎಂಬ ಗಾದೆಯು “ಊರಿದ್ದೆಡೆ ಹೊಲೆಯರು ಇರುತ್ತಾರೆ” ಎಂದು ಯಾವಾಗ ಬದಲಾಯ್ತು!? ಏಕೆ ಬದಲಾಯ್ತು!? ಯಾರು ಬದಲಿಸಿದರು!? ಇದೆಲ್ಲದರ ಅಧ್ಯಯನ ಮಾಡಬೇಕಲ್ವೇ? ಆಗ ತಿಳಿಯುತ್ತೆ ಹಿಂದೆ ಅಕ್ಷರದ ಗುತ್ತಿಗೆ ಹಿಡಿದಿದ್ದ ನಿಮ್ಮವರ ಹಿಕ್ಮತ್ತು! ಗಾದೆಗಳನ್ನು ಹೆಣೆದ, ಗಾದೆಗಳನ್ನು ತಿರುಚಿದ ನಿಮ್ಮವರ ಶಾಣ್ಯತನ ಆಗ ತಿಳಿಯುತ್ತೆ.
ಈ ಅಪಭ್ರಂಶಗೊಂಡ ಗಾದೆಯಿಂದ ಹೊರಡುವ ಮಾತಿನ ಅರ್ಥ ಈಗ ಏನಾಗುತ್ತದೆ? ಅದರ ಪರಿಣಾಮ ಏನಾಗುತ್ತದೆ? ಯಾರಿಗೆ ನೋವಾಗುತ್ತದೆ? ಯಾವ ಸಂದೇಶ ರವಾನೆಯಾಗುತ್ತದೆ? ಎಂಬ ಕಾಮನ್ ಸೆನ್ಸ್ ಇಲ್ಲದ ನೀವೆಲ್ಲಾ ರಾಜಕೀಯ ಮಾಡಬೇಕೆಂದು ಹೇಗೆ ಬರ್ತೀರಿ? ಸಮಾಜದ ಸಂರಚನೆಯೇ ತಿಳಿಯದ ನೀವೆಲ್ಲಾ ಪಕ್ಷ ಬೇರೆ ಕಟ್ಟುತ್ತೀರಿ…!
ಇತಿಹಾಸ ಓದಪ್ಪ 50 ವರ್ಷದ ಉಪೇಂದ್ರ.
ಈತನ ಚಿತ್ರಗಳನ್ನು ಬಾಯ್ಕಾಟ್ ಮಾಡೋಣ ಬಂಧುಗಳೇ…ಇದೇ ನಾವು ಅವನಿಗೆ ಕಲಿಸಬಹುದಾದ ದೊಡ್ಡ ಪಾಠ. ನಮಗೆ ಹೀರೋ ಮಾಡೋದು ಗೊತ್ತು…ಝೀರೋ ಮಾಡೋದು ಗೊತ್ತು…!
ಡಾ.ಚಮರಂ
ಲೇಖಕ/ಚಿತ್ರನಿರ್ದೇಶಕ
ಇದನ್ನೂ ಓದಿ-ತಳಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ : ಉಪೇಂದ್ರ ಬಗ್ಗೆ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದೇನು?