Home ದೇಶ ಯುಪಿಐ ವಹಿವಾಟು ಶುಲ್ಕದಿಂದ ಅಮೆರಿಕನ್ ಕಂಪನಿಗಳಿಗೆ ಭಾರಿ ಲಾಭ: ಜಿಟಿಆರ್‌ಐ ವರದಿ ಬಹಿರಂಗ

ಯುಪಿಐ ವಹಿವಾಟು ಶುಲ್ಕದಿಂದ ಅಮೆರಿಕನ್ ಕಂಪನಿಗಳಿಗೆ ಭಾರಿ ಲಾಭ: ಜಿಟಿಆರ್‌ಐ ವರದಿ ಬಹಿರಂಗ

0

2,000 ರೂಪಾಯಿಗಿಂತ ಹೆಚ್ಚಿನ ಯುಪಿಐ (UPI) ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸುವ ಕೇಂದ್ರ ಸರ್ಕಾರದ ತೀರ್ಮಾನವು ಭಾರತೀಯ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯದ ಮೂಲಕ ಅಮೆರಿಕ ಮೂಲದ ದೈತ್ಯ ಕಂಪನಿಗಳಿಗೆ ಭಾರಿ ಆದಾಯ ತಂದುಕೊಡಲಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (GTRI) ವಿಶ್ಲೇಷಿಸಿದೆ.

ದೇಶದ ಒಟ್ಟು ಯುಪಿಐ ವಹಿವಾಟುಗಳಲ್ಲಿ ಶೇಕಡಾ 80 ಕ್ಕಿಂತ ಹೆಚ್ಚಿನ ಪಾಲನ್ನು ವಾಲ್‌ಮಾರ್ಟ್ ಮಾಲೀಕತ್ವದ ‘ಫೋನ್ ಪೇ’ (ಸುಮಾರು ಶೇ. 45) ಹಾಗೂ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ಗೆ ಸೇರಿದ ‘ಗೂಗಲ್ ಪೇ’ (ಶೇ. 35-40) ನಿರ್ವಹಿಸುತ್ತಿವೆ. ಹೊಸ ಶುಲ್ಕ ನೀತಿ ಜಾರಿಗೆ ಬಂದರೆ, ವರ್ಷಕ್ಕೆ ಅಂದಾಜು 16,000 ಕೋಟಿಯಿಂದ 20,000 ಕೋಟಿ ರೂಪಾಯಿಗಳಷ್ಟು ಆದಾಯದ ನಿಧಿ ಸೃಷ್ಟಿಯಾಗಲಿದ್ದು, ಇದರಲ್ಲಿ ಸಿಂಹಪಾಲು ಈ ಎರಡು ವಿದೇಶಿ ಆ್ಯಪ್‌ಗಳು ಮತ್ತು ಬ್ಯಾಂಕುಗಳ ಪಾಲಾಗಲಿದೆ. ಇದು ಶೀಘ್ರದಲ್ಲೇ ಐಪಿಒ (IPO) ಪ್ರವೇಶಿಸಲಿರುವ ಫೋನ್‌ಪೇ ಮೌಲ್ಯವನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜತೆಗೆ, ಯುಪಿಐ ಮೇಲಿನ ಶುಲ್ಕವು ಅಂತರರಾಷ್ಟ್ರೀಯ ಕಾರ್ಡ್ ನೆಟ್‌ವರ್ಕ್‌ಗಳಾದ ವೀಸಾ ಮತ್ತು ಮಾಸ್ಟರ್‌ಕಾರ್ಡ್‌ಗಳ ಸ್ಪರ್ಧಾತ್ಮಕತೆಗೆ ಪರೋಕ್ಷವಾಗಿ ಅನುಕೂಲ ಮಾಡಿಕೊಡಲಿದೆ ಎಂದು ವರದಿ ಹೇಳಿದೆ. ಇದುವರೆಗೆ ಉಚಿತವಾಗಿದ್ದ ಯುಪಿಐ ಹಾಗೂ ರುಪೇ ವ್ಯವಸ್ಥೆಯಿಂದಾಗಿ ಹಿನ್ನಡೆ ಅನುಭವಿಸಿದ್ದ ಈ ಜಾಗತಿಕ ಕಂಪನಿಗಳ ಕಳವಳವನ್ನು ಕಡಿಮೆ ಮಾಡುವ ಪ್ರಯತ್ನ ಇದಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಅಮೆರಿಕದ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಆರೋಪವನ್ನು ಹಣಕಾಸು ಸಚಿವಾಲಯ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆಯ ದೀರ್ಘಕಾಲೀನ ಸ್ಥಿರತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಈ ಶುಲ್ಕವನ್ನು ವ್ಯಾಪಾರಿಗಳೇ ಭರಿಸಬೇಕಿದ್ದು ಗ್ರಾಹಕರ ಮೇಲೆ ಬೀಳುವುದಿಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ, ವಾಸ್ತವದಲ್ಲಿ ವ್ಯಾಪಾರಿಗಳು ಈ ಹೊರೆಯನ್ನು ಗ್ರಾಹಕರ ಮೇಲೆಯೇ ವರ್ಗಾಯಿಸುವ ಅಥವಾ ನಗದು ವ್ಯವಹಾರಕ್ಕೆ ಮರಳುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಪೆಟ್ರೋಲ್ ಪಂಪ್ ಡೀಲರ್‌ಗಳ ಸಂಘವು 2,000 ರೂ. ಗಿಂತ ಹೆಚ್ಚಿನ ಯುಪಿಐ ಪಾವತಿಗಳನ್ನು ಸ್ವೀಕರಿಸದಿರಲು ಈಗಾಗಲೇ ನಿರ್ಧರಿಸಿದೆ.

You cannot copy content of this page

Exit mobile version