Home ದೇಶ ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಿದ ಕೇಂದ್ರ: ಎಷ್ಟು ಪ್ರತಿಶತ ಕಡಿತ? ಯಾರಿಗೆ ಅನ್ವಯ? ಇಲ್ಲಿದೆ...

ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಿದ ಕೇಂದ್ರ: ಎಷ್ಟು ಪ್ರತಿಶತ ಕಡಿತ? ಯಾರಿಗೆ ಅನ್ವಯ? ಇಲ್ಲಿದೆ ನಿಯಮಗಳ ವಿವರ

0

ಯುಪಿಐ ವಹಿವಾಟುಗಳ ಮೇಲೆ ವಿಧಿಸಲಾಗುವ ಶುಲ್ಕಗಳ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ₹2,000 ಮೇಲ್ಪಟ್ಟ ಯುಪಿಐ ವಹಿವಾಟುಗಳ ಮೇಲೆ ಶೇಕಡಾ 0.4 ರಷ್ಟು ಶುಲ್ಕ ವಿಧಿಸಲಾಗುವುದು ಎಂದು ಘೋಷಿಸಿದೆ.

ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂ‌ಡಿಆರ್) ಎಂದು ಕರೆಯಲಾಗುವ ಈ ಶುಲ್ಕವನ್ನು ವ್ಯಾಪಾರಿಗಳು ಮಾತ್ರ ಪಾವತಿಸಬೇಕಾಗುತ್ತದೆ. ಸಾಮಾನ್ಯ ಗ್ರಾಹಕರು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಾಗಿಲ್ಲ. ಈ ಕುರಿತು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಪ್ರಮುಖ ವಿವರಗಳನ್ನು ಹಂಚಿಕೊಂಡಿದೆ.

ಈ ಹೊಸ ನಿಯಮಗಳು ಅಕ್ಟೋಬರ್ 15 ರಿಂದ ಜಾರಿಗೆ ಬರಲಿವೆ. ಯುಪಿಐ ಮೂಲಕ ವ್ಯಾಪಾರಿಗಳಿಗೆ (ಮರ್ಚೆಂಟ್ಸ್‌) ಮಾಡುವ ಪಾವತಿಗಳಿಗೆ ಮಾತ್ರ ಈ ಎಂಡಿಆರ್ ಅನ್ವಯವಾಗುತ್ತದೆ. ಆದರೆ ಯುಪಿಐ ಮೂಲಕ ಬ್ಯಾಂಕ್ ಖಾತೆಗಳಿಗೆ ಅಥವಾ ಇತರ ವ್ಯಕ್ತಿಗಳ ಯುಪಿಐ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದು ಎಂದಿನಂತೆ ಉಚಿತವಾಗಿರುತ್ತದೆ. ನಿಯಮಗಳ ಅಡಿಯಲ್ಲಿ ಅರ್ಹತೆ ಹೊಂದಿರುವ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಇದು ಅನ್ವಯವಾಗಲಿದ್ದು, ಕೆಲವು ಸಣ್ಣ ವ್ಯಾಪಾರಗಳು, ನಿರ್ದಿಷ್ಟ ಮತ್ತು ತುರ್ತು ಸೇವೆಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಗ್ರಾಹಕರ ಮೇಲೆ ಯಾವುದೇ ರೀತಿಯ ಆರ್ಥಿಕ ಹೊರೆ ಇರುವುದಿಲ್ಲ. ₹2,000 ಮೀರಿದ ಪ್ರತಿ ವಹಿವಾಟಿಗೆ ಶೇ. 0.4 ರಷ್ಟು ಎಂಡಿಆರ್ ಅನ್ನು ವ್ಯಾಪಾರಿಗಳೇ ಭರಿಸಬೇಕಾಗುತ್ತದೆ.

ಈ ಶುಲ್ಕದ ಗರಿಷ್ಠ ಮಿತಿ ₹300 ಆಗಿರುತ್ತದೆ. ಉದಾಹರಣೆಗೆ, ₹3,000 ವಹಿವಾಟಿಗೆ ₹12, ₹50,000 ವಹಿವಾಟಿಗೆ ₹200 ಮತ್ತು ₹75,000 ವಹಿವಾಟಿಗೆ ₹300 ಶುಲ್ಕ ಬೀಳಲಿದೆ. ವಹಿವಾಟು ₹75,000 ಮೀರಿದರೂ ಸಹ ಗರಿಷ್ಠ ಶುಲ್ಕ ₹300 ಮಾತ್ರ ಇರುತ್ತದೆ. ಎನ್‌ಪಿಸಿಐ ಮಾಹಿತಿಯ ಪ್ರಕಾರ, ದೇಶದಲ್ಲಿ ನಡೆಯುವ ಶೇಕಡಾ 95 ರಷ್ಟು ಯುಪಿಐ ವಹಿವಾಟುಗಳು ₹2,000 ಕ್ಕಿಂತ ಕಡಿಮೆಯಿರುತ್ತವೆ. ಹೀಗಾಗಿ ಕೇವಲ ಶೇಕಡಾ 5 ರಷ್ಟು ವಹಿವಾಟುಗಳ ಮೇಲಷ್ಟೇ ಈ ಶುಲ್ಕದ ಪರಿಣಾಮ ಬೀರಲಿದೆ.

ಬೀದಿಬದಿ ವ್ಯಾಪಾರಿಗಳು ಮತ್ತು ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಪಿ2ಪಿಎಂ (P2PM) ಅಡಿಯಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಕ್ಯೂಆರ್ ಕೋಡ್ ಮೂಲಕ ತಿಂಗಳಿಗೆ ₹1 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುವವರ ಮೇಲಷ್ಟೇ ಎಂಡಿಆರ್ ವಿಧಿಸಲಾಗುತ್ತದೆ. ಸತತ ಮೂರು ತಿಂಗಳುಗಳ ಕಾಲ ಮಾಸಿಕ ₹1 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿದರೆ ಮಾತ್ರ ಅವರನ್ನು ದೊಡ್ಡ ವ್ಯಾಪಾರಿಗಳೆಂದು ಪರಿಗಣಿಸಿ ಈ ಶುಲ್ಕವನ್ನು ಅನ್ವಯಿಸಲಾಗುತ್ತದೆ.

You cannot copy content of this page

Exit mobile version