ಬ್ರಾಹ್ಮಣ ಸಮುದಾದ ಒಡೆತನದ ಪತ್ರಿಕೆಗಳಿಗೆ ಪ್ರತಿ ತಿಂಗಳು ಎರಡು ಪುಟಗಳ ಜಾಹೀರಾತು ನೀಡಲು ವಾರ್ತಾ ಮತ್ತು ಪ್ರಚಾರ ಇಲಾಖೆ ಸುತ್ತೋಲೆ ಹೊರಡಿಸಿದೆ. ಆ ಮೂಲಕ ಸಾಮಾಜಿಕ ನ್ಯಾಯದ ಆಶಯವನ್ನೆ ಸರ್ಕಾರ ಬುಡಮೇಲು ಮಾಡಿದೆ. ಸರ್ಕಾರದ ವಿವೇಚನಾ ರಹಿತ ಈ ನಡೆ ಸಾರ್ವಜನಿಕ ವಲಯದಲ್ಲಿ ಅಸಾಮಾಧಾನವನ್ನು ಹುಟ್ಟುಹಾಕಿದ್ದು ಈ ಕುರಿತು ಪತ್ರಕರ್ತ ಎನ್.ರವಿಕುಮಾರ್ ಬರೆದಿದ್ದಾರೆ.
ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಸರ್ಕಾರಿ ಜಾಹೀರಾತು ವಿತರಣೆಯಲ್ಲೀಗ ‘ಜಾತಿ’ ಆಧಾರದ ಕೊಡುಗೆಯ ಆದೇಶಗಳು ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿವೆ.
ಇದುವರೆಗೂ ಎಸ್ಸಿ/ ಎಸ್ಟಿ ಗಳ ಮಾಲೀಕತ್ವದ ಪತ್ರಿಕೆಗಳಿಗೆ ಮಾತ್ರ ಪ್ರತಿ ತಿಂಗಳಿಗೊಮ್ಮೆ ನೀಡಲಾಗುತ್ತಿದ್ದ ವಿಶೇಷ ಜಾಹೀರಾತು ಮಾದರಿಯನ್ನು ಸರ್ಕಾರ ಇದೀಗ ನಿರ್ಧಿಷ್ಟವಾಗಿ ಬ್ರಾಹ್ಮಣ ಸಮುದಾಯಕ್ಕೂ ವಿಸ್ತರಿಸುವ ಮೂಲಕ ಸರ್ಕಾರವೆ ರೂಪಿಸಿದ “ಜಾಹೀರಾತು ನೀತಿ-2013” ನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಇದೇ ಕಾಲಕ್ಕೆ ಬಿಜೆಪಿ ಸರ್ಕಾರ ತನ್ನ ಸೈದ್ಧಾಂತಿಕ ಧೋರಣೆಯಂತೆ ಸಾಮಾಜಿಕ ನ್ಯಾಯದ ಆಶಯವನ್ನೆ ಬುಡಮೇಲು ಮಾಡಿದೆ.
ವಾರ್ತಾ ಇಲಾಖೆಯ ಮಾನ್ಯತೆ (Media list) ಪಡೆದ ಪತ್ರಿಕೆಗಳಿಗೆ ಸರ್ಕಾರಿ ಜಾಹೀರಾತು ಬಿಡುಗಡೆ ಮಾಡುವಲ್ಲಿ ತಾರತಮ್ಯ ವಾಗದಂತೆ ಮತ್ತು ಜಾಹೀರಾತು ವಿತರಣೆಯಲ್ಲಿ ಸ್ಪಷ್ಟವಾದ ಮಾರ್ಗ ಸೂಚಿಗಳ ಅವಶ್ಯಕತೆಯನ್ನು ಮನಗಂಡು 2013 ರಲ್ಲಿ ಅಂದಿನ ರಾಜ್ಯ ಸರ್ಕಾರ ” ಜಾಹೀರಾತು ನೀತಿ-2013″ ನ್ನು ಜಾರಿಗೆ ತಂದಿತು.
ಜಾಹೀರಾತು ನೀತಿ-2013
ಇದರನ್ವಯ ಮಾನ್ಯತೆ ಪಡೆದ ಜಿಲ್ಲಾ, ಪ್ರಾದೇಶಿಕ, ರಾಜ್ಯ, ರಾಷ್ಟ್ರ ಮಟ್ಟದ ಪತ್ರಿಕೆಗಳಿಗೆ ಸರ್ಕಾರಿ ಜಾಹೀರಾತು ವಿತರಣೆ, ಜಾಹೀರಾತು ದರ ನಿಗದಿ, ಮಾಧ್ಯಮ ಪಟ್ಟಿಗೆ ಸೇರ್ಪಡೆ ಇತ್ಯಾದಿ ಸ್ಪಷ್ಟ ಮಾರ್ಗ ಸೂಚಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಜಾಹೀರಾತು ನೀತಿ ಪರಿಷ್ಕೃತಗೊಂಡು ಮುಂದುವರೆಯಬೇಕಾಗಿರುತ್ತದೆ.
ಕಳೆದ 20 ವರ್ಷಕ್ಕೂ ಹೆಚ್ಚಿನ ಕಾಲದಿಂದ ಸಾಮಾಜಿಕ ನ್ಯಾಯದ ಆಶಯದಂತೆ ಪರಿಶಿಷ್ಟ ಜಾತಿ/ ವರ್ಗಗಳ ಮಾಲೀಕತ್ವದ ಪತ್ರಿಕೆಗಳಿಗೆ ಎಸ್ ಸಿ ಪಿ ಎಸ್/ ಟಿಎಸ್ಪಿ ಅನುದಾನದಡಿ ನೀಡುತ್ತಾ ಬರಲಾಗುತ್ತಿದ್ದ ವಿಶೇಷ ಜಾಹೀರಾತು ಪದ್ಧತಿಯನ್ನು ಮಾತ್ರ ಜಾಹೀರಾತು ನೀತಿಯೊಳಗೆ ಅಳವಡಿಸಲಾಗಿದೆ. ಉಳಿದಂತೆ ಜಾತಿ ಆಧಾರಿತವಾಗಿ ಯಾವುದೇ ಜಾತಿಗಳಿಗೆ ಜಾಹೀರಾತು ನೀಡುವ ಯಾವುದೇ ಪ್ರಸ್ತಾಪ ಇಲ್ಲ. ಇಂತಹ ಜಾಹೀರಾತು ನೀತಿ 2018 ಕ್ಕೆ ಪರಿಷ್ಕೃತ ಗೊಂಡಿದ್ದರೂ ಸರ್ಕಾರ ಅನುಷ್ಠಾನ ಗೊಳಿಸದೆ 2013 ರ ನೀತಿಯನ್ನೇ ಮುಂದುವರೆಸಿದೆ.
ಸಾಮಾಜಿಕ ನ್ಯಾಯದ ಆಶಯವನ್ನೆ ಸರ್ಕಾರ ಲೇವಡಿ ಮಾಡಿದೆ.
ಈ ಮಧ್ಯೆ ಓಬಿಸಿ ಗಳ ಮಾಲೀಕತ್ವದ ಪತ್ರಿಕೆಗಳಿಗೆ ಅದರಲ್ಲೂ ‘ಪ್ರವರ್ಗ 1 ‘ ಕ್ಕೆ ಸೇರಿದವರಿಗೆ ಆದ್ಯತೆ ಮೇರೆಗೆ ಎಸ್ಸಿ/ಎಸ್ಟಿ ಮಾದರಿ ವಿಶೇಷ ಜಾಹೀರಾತು ನೀಡುವ ಬಗ್ಗೆ ಮನವಿಗಳು ಸರ್ಕಾರದ ಮುಂದೆ ಬಂದಿದ್ದು ಹಿಂದಿನ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಯೋಜನೇತರ ವೆಚ್ಚಗಳಲ್ಲಿ ಈ ವರ್ಗಕ್ಕೆ ಜಾಹೀರಾತು ವಿತರಣೆಗೆ ನಿರ್ಧಾರ ಕೈಗೊಂಡಿದ್ದರೂ ಅದು ಜಾರಿಯಾಗಿರಲಿಲ್ಲ.
ಆದರೆ ಕಳೆದ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಓಬಿಸಿ ಇಲಾಖೆಯ ವೆಚ್ಚದಡಿ ಈ ಸಮುದಾಯಕ್ಕೆ ಜಾಹೀರಾತು ನೀಡುವ ನಿರ್ಧಾರವನ್ನು ಕೈಗೊಂಡು ಇತ್ತೀಚೆಗಷ್ಟೆ ಆದೇಶ ಮಾಡಿದೆ. ಓಬಿಸಿ ಪಟ್ಟಿಯಲ್ಲಿ ಆದಾಯ ಮಿತಿಗನುಗುಣವಾಗಿ ಮಾನದಂಡ ನಿಗದಿ ಪಡಿಸಲಾಗಿದೆ. ಇದರಲ್ಲಿ ಲಿಂಗಾಯಿತ, ಒಕ್ಕಲಿಗ ಸಮುದಾಯಗಳು ಸೇರಿದ್ದು ಆದಾಯ ಮಿತಿಯ ಮಾನದಂಡಕ್ಕನುಗುಣವಾಗಿ ಜಾಹೀರಾತು ಪಡೆಯಲು ಅರ್ಹತೆ ಪಡೆದಿದ್ದಾರೆ.
ಆದರೆ ಬಜೆಟ್ ನಲ್ಲಾಗಲಿ, ಜಾಹೀರಾತು ನೀತಿಯಲ್ಲಾಗಲಿ ಪ್ರಸ್ತಾಪವೇ ಇಲ್ಲದ ಬ್ರಾಹ್ಮಣರ ಒಡೆತನದ ಪತ್ರಿಕೆಗಳಿಗೆ ಸರ್ಕಾರ ಸದ್ದಿಲ್ಲದೆ ಜಾಹೀರಾತು ಆದೇಶವನ್ನು ನೀಡುವ ಮೂಲಕ ಜಾಹೀರಾತು ನೀತಿಯನ್ನು ಮತ್ತು ಅದಕ್ಕಿಂತ ಮುಖ್ಯವಾದ ಸಾಮಾಜಿಕ ನ್ಯಾಯದ ಆಶಯವನ್ನೆ ಲೇವಡಿ ಮಾಡಿದೆ.
ಮೇಲ್ಜಾತಿಗಳ ಲಾಬಿಗೆ ತಲೆಬಾಗಿದ ಸರ್ಕಾರ
ಪರಿಶಿಷ್ಟ ಜಾತಿ/ ವರ್ಗಗಳ ಮಾಲೀಕತ್ವದ 190 ಕ್ಕೂ ಹೆಚ್ಚಿನ ಪತ್ರಿಕೆಗಳಿದ್ದು ಅವುಗಳಿಗೆ ಇದುವರೆಗೂ ನೀಡುತ್ತಿರುವ ಒಂದು ಪುಟ (10 ವರ್ಷ ಪೂರೈಸಿದ ಪತ್ರಿಕೆಗಳಿಗೆ ಹೆಚ್ಚುವರಿ ಅರ್ಧಪುಟ) ಜಾಹೀರಾತನ್ನು ಎರಡು ಪುಟಕ್ಕೆ ಮತ್ತು ಅರ್ಧ ಪುಟವನ್ನು ಒಂದು ಪುಟಕ್ಕೆ ಹೀಗೆ ಪ್ರತಿ ತಿಂಗಳು ಮೂರು ಪುಟಗಳ ಜಾಹೀರಾತು ಬೇಡಿಕೆ ಈಡೇರಿಸಿಕೊಳ್ಳಲು ಪರಿಶಿಷ್ಟ ಜಾತಿ/ ವರ್ಗಗಳು ಕಳೆದ ನಾಲ್ಕು ವರ್ಷಗಳಿಂದ ಹೋರಾಟವನ್ನೇ ನಡೆಸುತ್ತಿವೆ. ಆದರೆ ಸರ್ಕಾರ ಈ ಬೇಡಿಕೆಯನ್ನು ಈಡೇರಿಸುವ ಮನಸ್ಸು ಮಾಡಿಲ್ಲ. ಆದರೆ ಕೇವಲ ಆರು ತಿಂಗಳ ಹಿಂದೆಯಷ್ಟೆ ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೂ ಎಸ್ಸಿ/ ಎಸ್ಟಿ- ಓಬಿಸಿ ಗಳಿಗೆ ನೀಡುವ ಮಾದರಿ ಜಾಹೀರಾತು ನೀಡಬೇಕೆಂದು ಸಲ್ಲಿಕೆಯಾದ ಮನವಿಯನ್ನು ಕಣ್ಣಿಗೊತ್ತಿಕೊಂಡ ಸರ್ಕಾರ ಸಲೀಸಾಗಿ ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ಎರಡು ಪುಟ ಜಾಹೀರಾತು ನೀಡುವ ಆದೇಶವನ್ನು ಹೊರಡಿಸುವ ಮೂಲಕ ಮೇಲ್ಜಾತಿಗಳ ಲಾಬಿಗೆ ತಲೆಬಾಗಿದೆ. ಎಸ್ಸಿ/ ಎಸ್ಟಿ ಮಾಲೀಕತ್ವದ ಪತ್ರಿಕೆಗಳಿನ್ನೂ ಒಂದು ಪುಟ ಜಾಹೀರಾತಿನಲ್ಲೆ ತೆವಳುತ್ತಾ ಎರಡು ಪುಟಕ್ಕೇರಿಸಬೇಕೆಂಬ ಬೇಡಿಕೆಯ ಕಡತ ವಾರ್ತಾ ಇಲಾಖೆಯಲ್ಲಿ ಧೂಳು ತಿನ್ನುತ್ತಿರುವಾಗ ಬ್ರಾಹ್ಮಣರ ಮಾಲೀಕತ್ವದ ಪತ್ರಿಕೆಗಳಿಗೆ ಎರಡು ಪುಟ ಜಾಹೀರಾತನ್ನು ಸರ್ಕಾರ ಉದಾತ್ತವಾಗಿ ದಾನ ಕೊಟ್ಟು ಕೃತಾರ್ಥವಾಗಿದೆ.
ಪರಿಶಿಷ್ಟ ಜಾತಿ-ಓಬಿಸಿ ಗಳ ಮಾಲೀಕತ್ವದ ಪತ್ರಿಕೆಗಳ ಇತಿಹಾಸ ಗರಿಷ್ಠವೆಂದರೆ 25 ವರ್ಷಗಳದು. ಈ ಸಮುದಾಯಗಳ ಮೊದಲ ತಲೆಮಾರು ಕೂಡ ಪತ್ರಿಕೋದ್ಯಮವನ್ನು ದಾಟಿಲ್ಲ. ಆದರೆ ಅದಕ್ಕಿಂತ ಹೆಚ್ಚಿನ ಕಾಲಾವಧಿಯಿಂದ ಪತ್ರಿಕೋದ್ಯಮವನ್ನು ಆಳುತ್ತಿರುವ ಮೇಲ್ಜಾತಿಗಳು ಸರ್ಕಾರಿ ಜಾಹೀರಾತುಗಳನ್ನು ತಿಂದು- ತೇಗುತ್ತಾ ದುಂಡಗಾಗಿವೆ. ಆದಾಗ್ಯೂ ಇತ್ತೀಚೆಗಷ್ಟೆ ಪರಿಶಿಷ್ಟ ಜಾತಿ/ವರ್ಗ- ಓಬಿಸಿಗಳಿಗೆ ಅವರದ್ದೆ ಅಭಿವೃದ್ಧಿಯ ಪಾಲಿನಿಂದ ನೀಡಲಾಗುತ್ತಿರುವ ಜಾಹೀರಾತು- ಇತರೆ ಸೌಲತ್ತುಗಳನ್ನು ಪ್ರಶ್ನೆ ಮಾಡುತ್ತಾ ಅದೇ ಮಾದರಿ ಸೌಲತ್ತುಗಳನ್ನು ಪಡೆಯುವಲ್ಲಿ ಲಾಬಿ ನಡೆಸಿವೆ.
ಸರ್ಕಾರ ಪ್ರಜ್ಞಾಪೂರ್ವಕವಾಗಿ ಇಂತಹ ಸಾಮಾಜಿಕ ಅನ್ಯಾಯವನ್ನು ನೆಲೆಗೊಳಿಸುವ ಮತ್ತು ಸಂವಿಧಾನದ ಆಶಯಗಳನ್ನು ಧಿಕ್ಕರಿಸುವ ಹೊಸ ಮಾದರಿಯನ್ನು ಮುಂದುವರೆಸಿದೆ.
ಎನ್.ರವಿಕುಮಾರ್
ಪತ್ರಕರ್ತರು