ಬೆಂಗಳೂರು ಜು.16: ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ದಿ ವೇದಿಕೆ ಆಶ್ರಯದಲ್ಲಿ ಇಂದು ಶಾಸಕರ ಭವನದ ಸಭಾಂಗಣದಲ್ಲಿ ಅಲೆಮಾರಿಗಳ ಮೇಲೆ ನಡೆಯುತ್ತಿರುವ ನಿರಂತರ ಅತ್ಯಾಚಾರ, ದೌರ್ಜನ್ಯ ಕೊಲೆಯಂತಹ ಗಂಭೀರ ವಿಚಾರಗಳ ಬಗ್ಗೆ ಮಾಜಿ ಸಚಿವ ಹೆಚ್.ಆಂಜನೇಯರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆ ನಡೆಸಲಾಯಿತು ಎಂದು ಅಲೆಮಾರಿಗಳ ಅಭ್ಯುದಯ ನಾಯಕ ಲೋಹಿತಾಕ್ಷ ಬಿ ಆರ್ ತಿಳಿಸಿದರು.
ಸಭೆಯಲ್ಲಿ ಮೊದಲಿಗೆ ದಿ: 09.07.2025 ರಂದು ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ತಾವರೆಕೆರೆಯಲ್ಲಿ ಕು. ಅರುಣಾ ಬಿನ್ ನಾಗಪ್ಪ ಶಿಳ್ಳೆಕ್ಯಾತ ಸಮುದಾಯದ 13ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅಮಾನವೀಯ ಘಟನೆಯನ್ನು ಖಂಡಿಸಿ ಮೃತ ಬಾಲಕಿಗೆ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಮಾಜಿ ಸಂಸದರಾದ ಬಿ.ಎಲ್.ಚಂದ್ರಪ್ಪ, ಕೆಪಿಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷ ಧರ್ಮಸೇನ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ಜಿ.ಸಿದ್ದರಾಮಯ್ಯ, ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜೆಗೆರೆ ಜಯಪ್ರಕಾಶ್, ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಮಣಯ್ಯ, ದಲಿತ ಸಾಹಿತಿ ವಡ್ಡಗೆರೆ ನಾಗರಾಜಯ್ಯ, ಡಾ.ಬಾಲಗುರುಮೂರ್ತಿ, ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಅಂಬಣ್ಣ ಆರೋಲಿಕರ, ಶ್ರೀ ಭೀಮಾಶಂಕರ್ ಹಾಗೂ ಅಲೆಮಾರಿ ಮುಖಂಡರಾದ ಶೇಷಪ್ಪ ಅಂದೋಳ್ ಮಾತನಾಡಿ, ಅಲೆಮಾರಿ ಸಮುದಾಯವು ಎದರಿಸುತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ವಿಶೇಷವಾಗಿ ವಿಷಯವನ್ನು ಮಂಡಿಸಿ, ಪರಿಹಾರಕ್ಕೆ ಸೂಕ್ತ ಸಲಹೆಗಳನ್ನು ಪಡೆಯಲಾಯಿತು.
ಸಭೆಯಲ್ಲಿ ಅಲೆಮಾರಿ ಸಮುದಾಯದ ಪ್ರಮುಖ ಮುಖಂಡರು ಚಾವಡೆ ಲೋಕೇಶ್, ಕೆ.ವೀರೇಶ್, ಸುಭಾಷ್ ಚವಾಣ್, ಶಾಂತರಾಜ್, ಶಿವಕುಮಾರ್ ಬಳ್ಳಾರಿ, ಹನುಮಂತು, ಬಸವರಾಜ್ ನಾರಾಯಣಕೆರೆ ಸೇರಿದಂತೆ ಮುಂತಾದವರು ಸದರಿ ಸಭೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಂದು ಲೋಹಿತಾಕ್ಷ ಪ್ರಕಟಣೆಯಲ್ಲಿ ತಿಳಿಸಿದರು.