Home ಬ್ರೇಕಿಂಗ್ ಸುದ್ದಿ ಅಮೆರಿಕ-ಇರಾನ್ ಸಂಘರ್ಷ ಯುಎಸ್ ಯೋಧರ ಹತ್ಯೆ – ಮುಂದುವರೆದ ಸಂಘರ್ಷ

ಅಮೆರಿಕ-ಇರಾನ್ ಸಂಘರ್ಷ ಯುಎಸ್ ಯೋಧರ ಹತ್ಯೆ – ಮುಂದುವರೆದ ಸಂಘರ್ಷ

ಟೆಹರಾನ್: ಜೋರ್ಡಾನ್‌ನಲ್ಲಿ ನಡೆದ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ(Drone attack) ಇಬ್ಬರು ಅಮೆರಿಕ ಯೋಧರು(American soldiers) ಮೃತಪಟ್ಟಿದ್ದು, ಇದರೊಂದಿಗೆ ಅಮೆರಿಕ ಮತ್ತು ಇರಾನ್(Iran) ನಡುವಿನ ದಶಕಗಳ ಸಂಘರ್ಷ ಈಗ ಯುದ್ಧದ ರೂಪ ಪಡೆದುಕೊಂಡಿದೆ. ವಿಶ್ವದ ಅತ್ಯಂತ ಪ್ರಮುಖ ಹಾಗೂ ಸೂಕ್ಷ್ಮ ಜಲಮಾರ್ಗವಾದ ‘ಹರ್ಮುಜ್ ಜಲಸಂಧಿ’ಯಲ್ಲಿ (Strait of Hormuz) ಭಾರೀ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಅಂತರರಾಷ್ಟ್ರೀಯ ಸರಕು ಸಾಗಣೆ ಹಾಗೂ ಕಚ್ಚಾ ತೈಲ ಹೊತ್ತೊಯ್ಯುವ ಹಡಗುಗಳ ಸಂಚಾರಕ್ಕೆ ದೊಡ್ಡ ಧಕ್ಕೆ ಉಂಟಾಗಿದೆ.

ಜೋರ್ಡಾನ್‌ನಲ್ಲಿರುವ ಅಮೆರಿಕ ಮಿತ್ರಪಡೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸಿದೆ. ಕಳೆದ ನಾಲ್ಕು ತಿಂಗಳುಗಳಿಂದ ನಡೆಯುತ್ತಿರುವ ಈ ರಕ್ತಸಿಕ್ತ ಕದನದಲ್ಲಿ ಇದುವರೆಗೆ ಅಮೆರಿಕದ 16 ಯೋಧರು ಪ್ರಾಣ ಕಳೆದುಕೊಂಡಿದ್ದು, 430ಕ್ಕೂ ಹೆಚ್ಚು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರತೀಕಾರದ ಎಚ್ಚರಿಕೆ ಬೆನ್ನಲ್ಲೇ ಇರಾನ್ ಅಟ್ಟಹಾಸ
ಇರಾನ್‌ನ ಪರಮೋಚ್ಚ ನಾಯಕ ಮೊಡ್ತಾಬಾ ಖಮೇನಿ ಅವರು, ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಅಮೆರಿಕದ ವಿರುದ್ಧ ಕಠಿಣ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇತ್ತೀಚೆಗೆ ತೀವ್ರ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಜೋರ್ಡಾನ್‌ನಲ್ಲಿ ತಂಗಿರುವ ಅಮೆರಿಕದ ಸೈನಿಕರು ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಇರಾನ್ ಪಡೆಗಳು ಈ ಭೀಕರ ದಾಳಿ ನಡೆಸಿವೆ.

ಇರಾನ್ ರಕ್ಷಣಾ ನೆಲೆಗಳ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ!
ತನ್ನ ಯೋಧರ ಹತ್ಯೆಯಿಂದ ಕೆರಳಿರುವ ಅಮೆರಿಕ ಸೈನ್ಯವು ಭಾನುವಾರ ಇರಾನ್ ವಿರುದ್ಧ ಬೃಹತ್ ಪ್ರಮಾಣದ ವೈಮಾನಿಕ ದಾಳಿಯನ್ನು ಆರಂಭಿಸಿದೆ. ಹರ್ಮುಜ್ ಜಲಸಂಧಿ ಹಾಗೂ ಪರ್ಶಿಯನ್ ಕೊಲ್ಲಿಯ ಸುತ್ತಮುತ್ತಲಿನ ಇರಾನ್ ಪ್ರಾಂತ್ಯಗಳ ಮೇಲೆ ಅಮೆರಿಕದ ಯುದ್ಧ ವಿಮಾನಗಳು ಬಾಂಬ್‌ಗಳ ಮಳೆಗರೆದಿವೆ. ಇರಾನ್‌ನ ಕರಾವಳಿ ತೀರದ ಪ್ರಮುಖ ರಕ್ಷಣಾ ನೆಲೆಗಳು, ಮಿಲಿಟರಿ ಮೂಲಸೌಕರ್ಯ ಕೇಂದ್ರಗಳು, ವಾಯು ರಕ್ಷಣಾ ವ್ಯವಸ್ಥೆಗಳು (Air Defence Systems) ಹಾಗೂ ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿ ಸಂಗ್ರಹಾಗಾರಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಈ ವಿನಾಶಕಾರಿ ದಾಳಿ ನಡೆಸಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಭೀತಿ ಆವರಿಸಿದೆ.

You cannot copy content of this page

Exit mobile version