ವಾಷಿಂಗ್ಟನ್: ನೈಜೀರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಅಮೆರಿಕಾ ಭೀಕರ ದಾಳಿಗಳನ್ನು ಆರಂಭಿಸಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ನೈಜೀರಿಯಾದಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ನಿರಂತರ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಈ ಕುರಿತು ತಮ್ಮ ‘ಟ್ರೂತ್ ಸೋಶಿಯಲ್’ (Truth Social) ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಅವರು, “ನೈಜೀರಿಯಾದಲ್ಲಿ ಐಸಿಸ್ ಭಯೋತ್ಪಾದಕರ ಮೇಲೆ ಅಮೆರಿಕಾ ಪ್ರಬಲ ದಾಳಿಗಳನ್ನು ಆರಂಭಿಸಿದೆ. ಮುಗ್ಧ ಕ್ರೈಸ್ತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹತ್ಯಾಕಾಂಡವನ್ನು ನಿಲ್ಲಿಸದಿದ್ದರೆ ನರಕ ತೋರಿಸುವುದಾಗಿ ನಾನು ಈ ಹಿಂದೆಯೇ ಎಚ್ಚರಿಸಿದ್ದೆ. ನನ್ನ ಎಚ್ಚರಿಕೆಯನ್ನು ಅವರು ಗಂಭೀರವಾಗಿ ಪರಿಗಣಿಸಲಿಲ್ಲ, ಈಗ ಅದರ ಫಲವನ್ನು ಅನುಭವಿಸುತ್ತಿದ್ದಾರೆ. ನಾನು ತೀವ್ರಗಾಮಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ಸಹಿಸುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಟ್ರಂಪ್ ಅವರು ಹತರಾದ ಉಗ್ರಗಾಮಿಗಳು ಸೇರಿದಂತೆ ಎಲ್ಲರಿಗೂ ‘ಕ್ರಿಸ್‌ಮಸ್ ಶುಭಾಶಯ’ ಕೋರಿರುವುದು ಚರ್ಚೆಗೆ ಗ್ರಾಸವಾಗಿದೆ. ಕ್ರೈಸ್ತರ ಮೇಲಿನ ಹತ್ಯಾಕಾಂಡ ಮುಂದುವರಿದರೆ ಅಮೆರಿಕಾದ ದಾಳಿಗಳೂ ಮುಂದುವರಿಯಲಿವೆ ಎಂದು ಅವರು ಎಚ್ಚರಿಸಿದ್ದಾರೆ. ನೈಜೀರಿಯಾ ಸರ್ಕಾರದ ಮನವಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದ್ದು, ಹಲವು ಉಗ್ರರನ್ನು ಮಟ್ಟಹಾಕಲಾಗಿದೆ ಎಂದು ಅಮೆರಿಕಾ ಸೇನಾಧಿಕಾರಿಗಳು ದೃಢಪಡಿಸಿದ್ದಾರೆ.
ನೈಜೀರಿಯಾವು ಐಸಿಸ್ ಅಂಗಸಂಸ್ಥೆಗಳು ಮತ್ತು ‘ಬೊಕೊ ಹರಾಮ್’ ಎಂಬ ಉಗ್ರಗಾಮಿ ಸಂಘಟನೆಗಳಿಂದ ದೊಡ್ಡ ಭದ್ರತಾ ಸವಾಲನ್ನು ಎದುರಿಸುತ್ತಿದೆ. 2020ರಲ್ಲಿ ಅಮೆರಿಕಾ ಮೊದಲ ಬಾರಿಗೆ ನೈಜೀರಿಯಾವನ್ನು ‘ವಿಶೇಷ ಆತಂಕಕಾರಿ ದೇಶಗಳ’ ಪಟ್ಟಿಗೆ ಸೇರಿಸಿತ್ತು. ಕ್ರೈಸ್ತರ ಮೇಲಿನ ದೌರ್ಜನ್ಯ ತಡೆಯಲು ಮಿಲಿಟರಿ ಕ್ರಮ ಕೈಗೊಳ್ಳುವಂತೆ ನವೆಂಬರ್‌ನಲ್ಲಿ ಟ್ರಂಪ್ ಅವರು ಪೆಂಟಗನ್‌ಗೆ ಸೂಚನೆ ನೀಡಿದ್ದರು.
ಇದೇ ವೇಳೆ, ನೈಜೀರಿಯಾದ ಈಶಾನ್ಯ ಭಾಗದ ಮೈದುಗುರಿಯಲ್ಲಿರುವ ಮಸೀದಿಯೊಂದರ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ಐವರು ಸಾವನ್ನಪ್ಪಿದ್ದು, 35 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾತ್ರಿ ಪ್ರಾರ್ಥನೆ ನಡೆಯುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
