Thursday, March 12, 2026

ಸತ್ಯ | ನ್ಯಾಯ |ಧರ್ಮ

ಇರಾನ್ ‘ಸೂಸೈಡ್‌ ಬೋಟ್’ ದಾಳಿ: ಯುಎಸ್‌ ತೈಲ ಟ್ಯಾಂಕರ್ ಧ್ವಂಸ : ಭಾರತೀಯ ಪ್ರಜೆ ಸಾವು

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗಲ್ಫ್ ಪ್ರದೇಶದ ಜಲಪ್ರದೇಶಗಳಲ್ಲಿ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳು ಜಾಗತಿಕ ಆತಂಕಕ್ಕೆ ಕಾರಣವಾಗಿವೆ. ವಿಶೇಷವಾಗಿ ಹೊರ್ಮುಜ್‌ ಜಲಸಂಧಿ ಸುತ್ತಮುತ್ತ ಸಾಗುವ ತೈಲ ಸಾಗಣೆ ಹಡಗುಗಳು ಹೆಚ್ಚಾಗಿ ಗುರಿಯಾಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಇದರ ಮಧ್ಯೆ, ಇರಾಕ್ ಕರಾವಳಿ ಪ್ರದೇಶದ ಸಮೀಪ ಅಮೆರಿಕಕ್ಕೆ ಸಂಬಂಧಿಸಿದ ತೈಲ ಟ್ಯಾಂಕರ್ ಮೇಲೆ ಇರಾನ್‌ ಆತ್ಮಹತ್ಯಾ ದೋಣಿ (ಸೂಸೈಡ್‌ ಬೋಟ್) ಮೂಲಕ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಈ ದಾಳಿಯಲ್ಲಿ ಹಡಗಿನಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಇದೀಗ 13ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಇರಾನ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ (IRGC) ಹೊರ್ಮುಜ್‌ ಜಲಸಂಧಿಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವುದಾಗಿ ಹೇಳಿಕೊಂಡಿದ್ದು, ಅಲ್ಲಿಂದ ಅಮೆರಿಕಕ್ಕೆ ಸಂಬಂಧಿಸಿದ ಒಂದು ಲೀಟರ್‌ ತೈಲವೂ ಸಾಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು. ಈ ಬೆದರಿಕೆಯ ಬಳಿಕ ಮೊದಲ ಬಾರಿಗೆ ಇರಾಕ್ ಕರಾವಳಿಯ ಅಲ್ ಫಾ ಬಂದರು ಸಮೀಪ ಅಮೆರಿಕಾ ಧ್ವಜ ಹೊಂದಿದ್ದ ‘ಸೇಫ್‌ ಸಿ ವಿಷ್ಣು’ (Safesea Vishnu) ಎಂಬ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿದೆ.

ದಾಳಿಯ ಪರಿಣಾಮ ಹಡಗಿನಲ್ಲಿ ಭಾರೀ ಸ್ಫೋಟ ಸಂಭವಿಸಿ ಬೆಂಕಿಯ ಕೆನ್ನಾಲಿಗೆಗಳು ಆಕಾಶಕ್ಕೇ ಚಿಮ್ಮಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಸಮುದ್ರದ ಮಧ್ಯದಲ್ಲೇ ಬೆಂಕಿ ವ್ಯಾಪಕವಾಗಿ ಹೊತ್ತಿಕೊಂಡಿರುವುದು ಹಡಗಿನಿಂದ ತೈಲ ಸೋರಿಕೆಯಾಗಿದೆ ಎಂಬ ಅನುಮಾನಕ್ಕೂ ಕಾರಣವಾಗಿದೆ.

ಜಾಗತಿಕ ಹಡಗು ಟ್ರ್ಯಾಕಿಂಗ್‌ ವೆಬ್‌ಸೈಟ್‌ಗಳ ಪ್ರಕಾರ, ಈ ಟ್ಯಾಂಕರ್‌ನಲ್ಲಿ ಸುಮಾರು 4 ಲಕ್ಷ ಬ್ಯಾರೆಲ್‌ಗಳಷ್ಟು ಇರಾಕಿ ಕಚ್ಚಾ ತೈಲ ಸಾಗಿಸಲಾಗುತ್ತಿತ್ತು ಎಂದು ಅಂದಾಜಿಸಲಾಗಿದೆ.

ಇದೇ ವೇಳೆ ದಾಳಿಯ ಸಂದರ್ಭದಲ್ಲಿ ಹಡಗಿನಲ್ಲಿ ಇದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಆದರೆ ಮೃತರ ಗುರುತು ಸೇರಿದಂತೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಹಡಗಿನಲ್ಲಿ ಇದ್ದ ಉಳಿದ 27 ಮಂದಿ ನಾವಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಿ ದಕ್ಷಿಣ ಇರಾಕ್‌ನ ಬಸ್ರಾ ನಗರಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page