ಮುಂಬೈ: ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನದ ವೇಳೆ ಉಂಟಾದ ಗೊಂದಲಗಳ ಹಿನ್ನೆಲೆಯಲ್ಲಿ, ಫೆಬ್ರವರಿ 5, 2026 ರಂದು ನಡೆಯಲಿರುವ ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಗಳಲ್ಲಿ ಇವಿಎಂ (EVM) ಬದಲು ಬ್ಯಾಲೆಟ್ ಪೇಪರ್ (ಮತಪತ್ರ) ಬಳಸುವಂತೆ ಮಹಾರಾಷ್ಟ್ರ ಕಾಂಗ್ರೆಸ್ ಒತ್ತಾಯಿಸಿದೆ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರ ಕೈಗೆ ಹಚ್ಚಿದ ಶಾಯಿ ಸುಲಭವಾಗಿ ಅಳಿಸಿಹೋಗುತ್ತಿತ್ತು ಮತ್ತು ವಿವಿಪ್ಯಾಟ್ (VVPAT) ವ್ಯವಸ್ಥೆಯನ್ನು ಬಳಸಿರಲಿಲ್ಲ ಎಂಬ ವಿವಾದಗಳ ಬೆನ್ನಲ್ಲೇ ಕಾಂಗ್ರೆಸ್ ಈ ಬೇಡಿಕೆ ಮುಂದಿಟ್ಟಿದೆ. ಈ ಸಂಬಂಧ ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ರಾಜ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮಾರೆ ಅವರಿಗೆ ಪತ್ರ ಬರೆದಿದ್ದಾರೆ. “ಇತ್ತೀಚೆಗೆ ನಡೆದ 29 ಮಹಾನಗರ ಪಾಲಿಕೆಗಳ ಚುನಾವಣೆಗಳು ಚುನಾವಣಾ ವ್ಯವಸ್ಥೆಯ ಲೋಪಗಳನ್ನು ಬಯಲು ಮಾಡಿವೆ. ನಗರಗಳಲ್ಲಿ ಕಡಿಮೆ ಮತದಾನವಾಗಿರುವುದು ಕೇವಲ ಮತದಾರರ ನಿರಾಸಕ್ತಿಯಲ್ಲ, ಅದು ಚುನಾವಣಾ ಪ್ರಕ್ರಿಯೆಯ ಬಗ್ಗೆ ಜನರಿಗಿರುವ ನಂಬಿಕೆ ಕಡಿಮೆಯಾಗುತ್ತಿರುವುದರ ಸೂಚಕ,” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದೇಶದ ಹಲವು ರಾಜ್ಯಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುತ್ತಿವೆ. ವಿವಾದಗಳನ್ನು ತಪ್ಪಿಸಲು ಮಹಾರಾಷ್ಟ್ರದಲ್ಲೂ ಇದೇ ಮಾದರಿ ಅನುಸರಿಸಬೇಕು ಎಂದು ಪಟೋಲೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮಾತ್ರ ಇವಿಎಂ ಬಳಕೆಗೆ ಏಕೆ ಪಟ್ಟು ಹಿಡಿಯಲಾಗುತ್ತಿದೆ ಮತ್ತು ಇದು ಯಾರ ಲಾಭಕ್ಕಾಗಿ ಎಂದು ಮತದಾರರು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮತದಾರರ ಪಟ್ಟಿಯಲ್ಲಿನ ದೋಷಗಳು, ಮತಗಟ್ಟೆ ಹುಡುಕಲು ಜನರು ಪರದಾಡಿದ್ದು ಮತ್ತು ಪಾಲಿಕೆ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಸದ ಕಾರಣ ಮತದಾರರಿಗೆ ತಮ್ಮ ಮತದ ಖಾತ್ರಿ ಸಿಗದಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಬೆಳವಣಿಗೆಗಳಾಗಿವೆ. ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಗಳು ಪ್ರಜಾಪ್ರಭುತ್ವದ ಬೆನ್ನೆಲುಬಾಗಿದ್ದು, ಈ ಹಂತದಲ್ಲಿ ಅವ್ಯವಸ್ಥೆ ಮತ್ತು ಅಪನಂಬಿಕೆ ಮೂಡಿದರೆ ಪ್ರಜಾಪ್ರಭುತ್ವದ ಆರೋಗ್ಯ ಹದಗೆಡಲಿದೆ. ಹೀಗಾಗಿ ಜನರ ಭಾವನೆಗಳನ್ನು ಗೌರವಿಸಿ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
