Thursday, August 21, 2025

ಸತ್ಯ | ನ್ಯಾಯ |ಧರ್ಮ

ಹಿಂದೂಗಳ ತೆರಿಗೆಯನ್ನು ಹಿಂದೂಗಳಿಗೆ ಮಾತ್ರ ಬಳಸಿ: ವಿವಾದಾತ್ಮಕ ಪೋಸ್ಟ್‌ ಹಾಕಿದ ಬಿಜೆಪಿ ಶಾಸಕ ಪೂಂಜ

ಮಂಗಳೂರು: ಹಿಂದೂಗಳು ಜಾಸ್ತಿಜನ ಇದ್ದುದರಿಂದ ಹಿಂದೂಗಳಿಂದ ಜಾಸ್ತಿ ತೆರಿಗೆ ಸಂಗ್ರಹವಾಗುತ್ತದೆ. ಹಿಂದೂಗಳಿಂದ ಸಂಗ್ರಹವಾಗುವ ತೆರಿಗೆ ಹಣವನ್ನು ಹಿಂದೂಗಳ ಅಭಿವೃದ್ಧಿಗೆ ಮಾತ್ರ ಉಪಯೋಗಿಸಬೇಕು ಎಂದು ಎಂದು ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದು, ಅದೀಗ ವಿವಾದಕ್ಕೆ ಗ್ರಾಸವಾಗಿದೆ.
‘ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುವ ಮೂಲಕ ಕಾಂಗ್ರೆಸ್‌, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದೆ. ಈ ಕುರಿತು ಟಾಂಗ್‌ ಕೊಡಲು ಹೋಗಿ ಹರೀಶ್‌ ಪೂಂಜ್‌ ಎಡವಟ್ಟು ಹೇಳಿಕೆ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹಿಂದೂಗಳ ತೆರಿಗೆ ಹಣವನ್ನು ಬೇರೆ ಧರ್ಮಗಳ ಜನರಿಗೆ ಖರ್ಚು ಮಾಡುವುದು ಹಿಂದೂಗಳಿಗೆ ಅನ್ಯಾಯ ಮಾಡಿದಂತೆ. “ಹಿಂದೂಗಳ ತೆರಿಗೆ– ಹಿಂದೂಗಳ ಹಕ್ಕು”ಈ ನೀತಿ ಈ ಆರ್ಥಿಕ ವರ್ಷದಿಂದಲೇ ಜಾರಿಯಾಗಬೇಕು ಎಂದು ಹರೀಶ್ ಪೂಂಜ ಬರೆದುಕೊಂಡಿದ್ದಾರೆ.
ʼಶಾಸಕ ಹರೀಶ್ ಪೂಂಜ ಅವರ ಉದ್ದೇಶ ಬೇರೇನೇ ಇದೆ. ನಾವು ಮಾತನಾಡುವ ವಿಷಯದಲ್ಲಿ ಸತ್ಯಾಂಶ ಇದ್ದು, ಪೂಂಜ ಒಪ್ಪಿಕೊಳ್ಳೋದು ಬಿಡೋದು ಅವರಿಷ್ಟ. ಆದರೆ, ಅದು ಬಿಟ್ಟು ತರ್ಕರಹಿತವಾಗಿ ಮೊಂಡು ವಾದ ಮಾಡುತ್ತಿರುವುದು ಸರಿಯಲ್ಲʼ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಹರೀಶ್ ಪೂಂಜ ಪೋಸ್ಟ್ ಗೆ ಬೆಂಬಲ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ‘ಈ ದೇಶ ರಾಮರಾಜ್ಯ ಆಗಬೇಕು, ಎಲ್ಲರಿಗೂ ಸಮಾನತೆ ಸಿಗಬೇಕು. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರ ಎಲ್ಲವೂ ನಡೆಯಬೇಕು. ಈ ದೇಶದಲ್ಲಿ ಬಹು ಸಂಖ್ಯಾತ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಕಟ್ಟುತ್ತಿದ್ದಾರೆ. ಹಿಂದೂಗಳ ತೆರಿಗೆ ಹಣ ಬಳಸಿ ಅಲ್ಪಸಂಖ್ಯಾತರಿಗೆ ಕೋಟಿ ಕೋಟಿ ಹಣ ನೀಡುತ್ತಿರುವುದು ಸರಿಯಲ್ಲ. ಈ ಬಾರಿಯ ಬಜೆಟ್‌ನಲ್ಲಿ ₹ 10 ಸಾವಿರ ಕೋಟಿ ಹಣವನ್ನು ಮುಸ್ಲಿಮರ ಅಭಿವೃದ್ಧಿಗೆ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದು, ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ಉದ್ಯಮಿಗಳು, ಶ್ರೀಮಂತರು ಈ ದೇಶ ಮತ್ತು ರಾಜ್ಯ ಸರ್ಕಾರಗಳ ಸವಲತ್ತುಗಳನ್ನು ಹೆಚ್ಚೆಚ್ಚು ಪಡೆದುಕೊಂಡು ಮತ್ತು ದೇಶದಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚೆಚ್ಚು ದುಡ್ಡು ಮಾಡಿಕೊಳ್ಳುತ್ತಾರೆ. ಜೊತೆಗೆ ಸರ್ಕಾರಕ್ಕೆ ಹೆಚ್ಚೆಚ್ಚು ತೆರಿಗೆ ಸಹ ಕಟ್ಟುತ್ತಾರೆ. ಶ್ರೀಮಂತರ ತೆರಿಗೆ ಹಕ್ಕು ಶ್ರೀಮಂತರಿಗೆ ಮಾತ್ರ ಎಂಬ ತರ್ಕರಹಿತ ವಾದ ಕೇಳಿಬಂದರೆ ಈ ದೇಶದಲ್ಲಿನ ಜನ ಸಾಮಾನ್ಯರು ಉದ್ಧಾರ ಆಗುವುದು ಯಾವಾಗ? ಎಂಬ ಪ್ರಶ್ನೆಯನ್ನು ಪೂಂಜ ತಮಗೆ ತಾವೇ ಹಾಕಿಕೊಳ್ಳಬೇಕು ಎಂಬರ್ಥದ ಪ್ರತಿಕ್ರಿಯೆಗಳನ್ನು ಕೆಲವರು ಕಮೆಂಟಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page