Friday, January 23, 2026

ಸತ್ಯ | ನ್ಯಾಯ |ಧರ್ಮ

ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಬಳಕೆ ದೇಗುಲ ಪರಂಪರೆಗೆ ಅವಮಾನ!

– ಕರಾವಳಿಯ ಯಾವ ಯಾವ ದೇವಸ್ಥಾನಕ್ಕೆ ಯಾವ ಧ್ವಜ ?
– ಧರ್ಮಸ್ಥಳ, ಕುಕ್ಕೆ, ಕಟೀಲು ದೇವಸ್ಥಾನದ ಧ್ವಜದ ಬಣ್ಣ ಯಾವುದು ಗೊತ್ತಾ?
ಪತ್ರಕರ್ತರಾದ ನವೀನ್ ಸೂರಿಂಜೆ ಬರಹದಲ್ಲಿ

‘ದೇವಸ್ಥಾನಗಳಲ್ಲಿ ಕೇಸರಿ ಧ್ವಜ ಬಳಸಬಾರದು’ ಎಂದು ಮಾಜಿ ಸಚಿವ ರಮಾನಾಥ ರೈಯವರು ಹೇಳಿದ್ದು ವಿವಾದ ಆಗಿತ್ತು.‌ ವಿವಾದದ ಬಳಿಕ ‘ನಾನು ಹೇಳಿದ್ದು ಹಾಗಲ್ಲ, ಹೀಗೆ’ ಎಂದು ಸ್ಪಷ್ಟನೆ ನೀಡಿದ್ದಾರೆ.‌ ವಾಸ್ತವವಾಗಿ ರಮಾನಾಥ ರೈಯವರು ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ. ಕರಾವಳಿಯ ಯಾವ ದೇವಸ್ಥಾನಗಳಿಗೂ ಕೇಸರಿ ಧ್ವಜಕ್ಕೂ ಸಂಬಂಧವೇ ಇಲ್ಲ. ದೇವಸ್ಥಾನದಲ್ಲಿ ಕೇಸರಿ ಧ್ವಜ ಹಾರಿಸೋದು ದೇವಸ್ಥಾನದ ಧ್ವಜ ಪರಂಪರೆಗೆ ಮಾಡುವ ಅಪಮಾನ ಆಗುತ್ತದೆ.

ಕರಾವಳಿಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ, ಕುಕ್ಕೇಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ ಸೇರಿದಂತೆ ಅನೇಕ ಪ್ರಸಿದ್ಧ ದೇವಸ್ಥಾನಗಳಿವೆ. ಈ ಎಲ್ಲಾ ದೇವಸ್ಥಾನಗಳಿಗೂ ತಮ್ಮದೇ ಆದ ಪ್ರತ್ಯೇಕ ಧ್ವಜಗಳಿವೆ. ಯಾವುದೇ ದೇವಸ್ಥಾನದಲ್ಲಿ ಜಾತ್ರೆ ಅಥವಾ ಉತ್ಸವ ಆರಂಭವಾಗಬೇಕಾದರೆ ಧ್ವಜಾರೋಹಣ ಅವಿಭಾಜ್ಯ ಆಚರಣೆ.
ದೇವಸ್ಥಾನದ ಧ್ವಜಾರೋಹಣ ಕ್ರಮ ಬಹಳ ಶಿಸ್ತಿನ ಮತ್ತು ಶುದ್ಧ ಸಂಪ್ರದಾಯಕ್ಕೆ ಒಳಪಟ್ಟಿದೆ. ತಾಮ್ರದ ಧ್ವಜವನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ, ದೇವಸ್ಥಾನಕ್ಕಿಂತ ಎತ್ತರದ ಧ್ವಜಸ್ತಂಭದಲ್ಲಿ ಆರೋಹಣ ಮಾಡಲಾಗುತ್ತದೆ. ಧ್ವಜಸ್ತಂಭದ ಕೆಳಗೆ ಪೂಜೆ ನೆರವೇರಿಸಿ, ಬಾಳೆಗಿಡ, ಎಳನೀರು, ಅಡಕೆ ಹೂಗೊಂಚಲುಗಳನ್ನು ಕಟ್ಟಿದ ನಂತರವೇ ಧ್ವಜಾರೋಹಣ ನಡೆಯುತ್ತದೆ. ಆದರೆ ಗಮನಾರ್ಹ ಅಂಶವೇನೆಂದರೆ – ಹಿಂದೂ ಧರ್ಮದ ಯಾವುದೇ ದೇವಸ್ಥಾನದ ಧ್ವಜಸ್ತಂಭದಲ್ಲೂ ಕೇಸರಿ ಧ್ವಜ ಬಳಸುವ ಸಂಪ್ರದಾಯವೇ ಇಲ್ಲ.

ಧ್ವಜಗಳ ಬಳಕೆ ಧಾರ್ಮಿಕವಾಗಿ ಕಾಣಿಸಿಕೊಳ್ಳುವುದು ದೇವರ ಮೆರವಣಿಗೆಯ ರಥಗಳಲ್ಲಿ. ಉದಾಹರಣೆಗೆ, ಧರ್ಮಸ್ಥಳ ಮಂಜುನಾಥೇಶ್ವರ ದೇಗುಲದ ರಥದಲ್ಲಿ ಕಡುಕೆಂಪು–ಹಸಿರು ಪಟ್ಟಿಯ ಧ್ವಜವಿದೆ. ಕುಕ್ಕೇಸುಬ್ರಹ್ಮಣ್ಯದ ರಥದಲ್ಲಿ ಮೇಲ್ಭಾಗದಲ್ಲಿ ಬಿಳಿ ಧ್ವಜದ ಮಧ್ಯೆ ಕೆಂಪು ಸೂರ್ಯ, ಕೆಳಭಾಗದಲ್ಲಿ ಕಡುಕೆಂಪು ಧ್ವಜದ ಮೇಲೆ ಸೂರ್ಯ–ಚಂದ್ರರ ಚಿಹ್ನೆಗಳಿವೆ. ಕಟೀಲು ದುರ್ಗಾಪರಮೇಶ್ವರಿ ದೇಗುಲದ ರಥದಲ್ಲೂ ಬಿಳಿ, ಕಡುಕೆಂಪು ಮತ್ತು ಹಳದಿ ಬಣ್ಣದ ಧ್ವಜಗಳಿವೆ. ಪುರಾಣ ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲದಲ್ಲಿ ಕೆಂಪು ಧ್ವಜವನ್ನೇ ಬಳಸಲಾಗುತ್ತದೆ. ಯಾವುದೇ ದೇವಸ್ಥಾನದ ರಥದ ಮೇಲೂ ಕೇಸರಿ ಧ್ವಜ ಹಾಕುವಂತಿಲ್ಲ.

ಕರಾವಳಿಯ ದೇವಸ್ಥಾನಗಳಲ್ಲಿ ಜಾತ್ರೆಯ ಸಂದರ್ಭದಲ್ಲಿನ ದೇವರ ಮೆರವಣಿಗೆಯನ್ನು ತುಳುವಿನಲ್ಲಿ “ಬಲಿ” ಎಂದು ಕರೆಯುತ್ತಾರೆ. ದೇವರನ್ನು ಪಲ್ಲಕ್ಕಿ ಅಥವಾ ರಥದಲ್ಲಿ ಮೆರವಣಿಗೆ ಮಾಡುವಾಗ ಮುಂಭಾಗದಲ್ಲಿ ದೇಗುಲದ ಧ್ವಜಗಳಿರುತ್ತವೆ. ಅವುಗಳು ಸಾಮಾನ್ಯವಾಗಿ ಕಡುಕೆಂಪು ಅಥವಾ ಬಿಳಿ ಬಣ್ಣದ್ದಾಗಿರುತ್ತವೆ. ದೇವಸ್ಥಾನದ ಆವರಣದಲ್ಲಿ ನಡೆಯುವ ಯಾವುದೇ ಧಾರ್ಮಿಕ ಮೆರವಣಿಗೆಯಲ್ಲೂ ಕೇಸರಿ ಧ್ವಜ ಬಳಕೆಯ ಸಂಪ್ರದಾಯ ಇಲ್ಲ.
ವಾಸ್ತವವಾಗಿ ಹಿಂದೂ ಧರ್ಮದಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವುದು ಬಿಳಿ ವಸ್ತ್ರಕ್ಕೆ. ಕರಾವಳಿಯ ಎಲ್ಲಾ ಅರ್ಚಕರು, ತಂತ್ರಿಗಳು, ಧಾರ್ಮಿಕ ಮುಖಂಡರು ಇಂದಿಗೂ ಬಿಳಿ ವಸ್ತ್ರಗಳನ್ನೇ ಧರಿಸುತ್ತಾರೆ. ಮಡಿಸ್ನಾನ, ಅರ್ಚನೆ, ಗಣಹೋಮ, ಸತ್ಯನಾರಾಯಣ ಪೂಜೆ ಎಲ್ಲಕ್ಕೂ ಬಿಳಿ ಪಂಚೆ–ಶಾಲುವೇ ಅನಿವಾರ್ಯ. ದೇವಾಲಯಗಳಲ್ಲಿ ಅರ್ಚಕರಿಗೆ ನೀಡುವ ದಾನವೂ ಬಿಳಿ ಪಂಚೆಯೇ.

ಆದರೆ ಕೇಸರಿ ಶಾಲು, ಕೇಸರಿ ಪಂಚೆ ಎಂಬುದು ಧಾರ್ಮಿಕ ಆಚರಣೆಗಳಲ್ಲಿ ಅಲ್ಲದೆ, ಉಚಿತ ಸೇವೆ, ಶ್ರಮದಾನ, ಪಾರ್ಕಿಂಗ್, ಸ್ವಚ್ಛತೆ, ಊಟ ಬಡಿಸುವಿಕೆ ಮೊದಲಾದ ಕೆಲಸಗಳಿಗೆ ಕೆಳವರ್ಗದ ಯುವಕರನ್ನು ಸಂಘಟಿಸಲು ಬಳಸಲ್ಪಟ್ಟಿತು. ಇದೇ ಗುಂಪುಗಳು ನಂತರ ಹಿಂದುತ್ವ ಸಂಘಟನೆಗಳಾಗಿ ರೂಪುಗೊಂಡವು.
ಭಾರತದ ಹಿಂದೂ ಧರ್ಮವು ಧ್ವೈತ ಮತ್ತು ಅದ್ವೈತ ಮುಂತಾದ ಕೆಲ ಸಿದ್ಧಾಂತಗಳ ಮೇಲೆ ನಿಂತಿದೆ. ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ಧ್ವಜವೇ ಶ್ವೇತ ವರ್ಣದ, ಎರಡು ಹಂಸಗಳನ್ನು ಒಳಗೊಂಡ ಧ್ವಜ. ಅಲ್ಲಿ ಎಲ್ಲಿಯೂ ಕೇಸರಿ ಧ್ವಜಕ್ಕೆ ಸ್ಥಾನವಿಲ್ಲ.

ಇತಿಹಾಸದ ದೃಷ್ಟಿಯಿಂದಲೂ ಕೇಸರಿ ಧ್ವಜ ಹಿಂದೂ ಧರ್ಮದ ಸಂಕೇತವಲ್ಲ. ಅದು ಶಿವಾಜಿ ಮತ್ತು ಮರಾಠ ಸೇನೆಯ ರಾಜಕೀಯ–ಸೈನಿಕ ಧ್ವಜವಾಗಿತ್ತು. ಇಂದು ಕೂಡ ಬೆಳಗಾವಿ ಗಡಿ ಭಾಗದಲ್ಲಿ ಕೇಸರಿ ಧ್ವಜವನ್ನು ಮರಾಠ ಮತ್ತು ಮಹಾರಾಷ್ಟ್ರ ರಾಜಕೀಯ ಸಂಕೇತವಾಗಿ ನೋಡಲಾಗುತ್ತದೆ. ಕನ್ನಡ ಧ್ವಜ ದಹನ, ಭಾಷಾ ಗಲಭೆಗಳ ಹಿನ್ನೆಲೆಯಲ್ಲಿಯೇ ಕೇಸರಿ ಧ್ವಜದ ರಾಜಕೀಯ ಸ್ವರೂಪ ಸ್ಪಷ್ಟವಾಗುತ್ತದೆ. ಶಿವಾಜಿ ಸಾಮ್ರಾಜ್ಯದ ಕೇಸರಿ ಧ್ವಜದ ಮಧ್ಯೆ ಓಂ ಅಥವಾ ಸ್ವಸ್ತಿಕ್ ಚಿಹ್ನೆಗಳನ್ನು ಸೇರಿಸಿ ಅದನ್ನು “ಭಗವಾಧ್ವಜ” ಎಂದು ರೂಪಿಸಿದ್ದು ಆರ್‌ಎಸ್‌ಎಸ್. ಆದರೆ ಹಿಂದೂ ಧರ್ಮಕ್ಕೂ, ಹಿಂದೂಗಳ ಧಾರ್ಮಿಕ ಆಚರಣೆಗಳಿಗೂ ಕೇಸರಿ ಧ್ವಜಕ್ಕೂ ಮೂಲಭೂತ ಸಂಬಂಧವೇ ಇಲ್ಲ.

ಒಟ್ಟಾರೆ ಹೇಳಬೇಕೆಂದರೆ, ಕೇಸರಿ ಧ್ವಜ ಮತ್ತು ಕೇಸರಿ ಶಾಲಿಗೆ ಹಿಂದೂ ಧರ್ಮದಲ್ಲಿ ಯಾವುದೇ ಧಾರ್ಮಿಕ ಮಹತ್ವವಿಲ್ಲ. ಅದು ಧರ್ಮದ ಹೆಸರಿನಲ್ಲಿ ರಾಜಕೀಯ ಸಂಘಟನೆ, ಶ್ರಮದ ಉಚಿತ ಬಳಕೆ ಮತ್ತು ಕೋಮುಗಲಭೆಗಳಿಗಾಗಿ ರೂಪುಗೊಂಡ ಸಂಕೇತ ಮಾತ್ರ. ದೇವಸ್ಥಾನದಲ್ಲಿ ಅಥವಾ ಧಾರ್ಮಿಕ ಆಚರಣೆಯಲ್ಲಿ ಕೇಸರಿ ಧ್ವಜ ಹಾರಿಸುವುದು ದೇವಸ್ಥಾನದ ಧ್ವಜ ಪರಂಪರೆಯ ವಿರುದ್ಧವಾದದ್ದು ಮತ್ತು ದೇವಸ್ಥಾನದ ಗೌರವಕ್ಕೆ ಅಪಮಾನವಾಗುವ ಕೃತ್ಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page