Tuesday, June 18, 2024

ಸತ್ಯ | ನ್ಯಾಯ |ಧರ್ಮ

ಉಶ್ಶಪ್ಪಾ ಎಂದ ಉತ್ತಪ್ಪ

ಹೊಸ ನೀರು ಬಂದಾದಮೇಲೆ ಹಳೆ ನೀರು ಹೋಗಲೇಬೇಕಂತೆ. ಹಾಗೆ, ಭಾರತ ಕ್ರಿಕೆಟ್ ತಂಡದಲ್ಲಿ ಹೊಸಬರ ಪ್ರವೇಶ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಹಳೆಯ ಬೇರುಗಳು ಒಂದೊಂದಾಗಿ ಮರೆಯಾಗುತ್ತಿವೆ. ಈಗ ಕರ್ನಾಟಕದ ರಾಬಿನ್ ಉತ್ತಪ್ಪ ಅವರ ಸರದಿ.

ವಾಕಿಂಗ್ ಅಸಾಸಿನ್ ಎಂದೇ ಹೆಸರಾಗಿದ್ದ ರಾಬಿನ್ ಉತ್ತಪ್ಪ, ಎಂಥದ್ದೇ ದೊಡ್ಡ ಬೌಲರ್ ಇರಲಿ ಎರಡು ಹೆಜ್ಜೆ ಮುಂದೆ ಬಂದು ಸಿಕ್ಸ್ ಹೊಡೆಯೋ ಸ್ಟೈಲ್ ಎಲ್ಲರಿಗೂ ಇಷ್ಟ ಆಗಿತ್ತು.

ರಾಬಿನ್ ಉತ್ತಪ್ಪ ಅವರ ಅಭಿಮಾನಿಗಳಿಗೆ ಇನ್ನೂ ಚೆನ್ನಾಗಿ ನೆನಪಿದೆ. ಅದು 2006 ಅಲ್ಲಿ ಅಣ್ಣಾವ್ರು, ಅಂದ್ರೆ, ಡಾ. ರಾಜ್ ಕುಮಾರ್ ಅವರು ತೀರಿಹೋದ ನಂತರ ಇಂಡಿಯಾ ಆಡಿದ ಮೊದಲ ಮ್ಯಾಚ್. ಅವತ್ತು ಇಂಗ್ಲೆಂಡ್ ಮೇಲೆ ರಾಹುಲ್ ದ್ರಾವಿಡ್ ರಾಬಿನ್ ಉತ್ತಪ್ಪ, ಈ ಇಬ್ಬರೂ ಕನ್ನಡಿಗರು ಕೈಗೆ ಕಪ್ಪು ಬಟ್ಟೆ ಕಟ್ಟಿ ಒಪನರ್ಸ್ ಆಗಿ ಬಂದು ಅದ್ಬುತ ಆಟ ಆಡಿದ್ದರು. ಹತ್ತಿರ ಹತ್ತಿರ 150 ರನ್ ಜೊತೆಯಾಟ ಆಡಿದ್ದರು. ಉತ್ತಪ್ಪ 86 ರನ್ ಇದ್ದಾಗ ದುರದೃಷ್ಠವಶಾತ್ ರನ್ ಔಟ್ ಆದರು. ಇಲ್ಲದಿದ್ದರೆ ತಮ್ಮ ಮೊದಲ ಮ್ಯಾಚ್ ನಲ್ಲೇ ಶತಕ ಗಳಿಸುತ್ತಿದ್ದರು ಉತ್ತಪ್ಪ. ಮತ್ತೆ ಅದೇ ಇಂಗ್ಲೆಂಡ್ ಮೇಲೆ ಉತ್ತಪ್ಪ ಇಂಗ್ಲೆಂಡ್ನಲ್ಲೇ,  ಚೇಸಿಂಗ್ ನಲ್ಲಿ ಒಂದು ಮ್ಯಾಚ್ ಫಿನಿಶ್ ಮಾಡಿದ್ದು, ಆದ್ರೆ ಓಪನರ್ ಆಗಿದ್ದ ಉತ್ತಪ್ಪ 6th ಡೌನ್ ಅಲ್ಲಿ ಬಂದಾಗ ಅಷ್ಟು ಚೆಂದದ ಆಟ ನೋಡೋಕೆ ಸಿಗಲಿಲ್ಲ. ಓಪನರ್ ಆಗಿದ್ದ ಒಳ್ಳೆ ಆಟಗಾರನನ್ನ 5th, 6th ಪ್ಲೇಸ್ ಅಲ್ಲಿ ಆಡ್ಸಿ ಹಾಳು ಮಾಡಿದ್ರು ಅನ್ನೋದು ಅವರ ಅಭಿಮಾನಿಗಳ ಬೇಸರ.

ರಾಬಿನ್ ಉತ್ತಪ್ಪ ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಮತ್ತು ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಪರ 46 ODIಗಳು ಮತ್ತು 13 T20I ಗಳಲ್ಲಿ 934 ಮತ್ತು 249 ರನ್ ಗಳಿಸಿದ ಬಲಗೈ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್, 2015 ರ ಜಿಂಬಾಬ್ವೆ ಪ್ರವಾಸದಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

36 ವರ್ಷ ವಯಸ್ಸಿನ ಉತ್ತಪ್ಪ ತಮ್ಮ ಶೋ ಕೇಸ್ ನಲ್ಲಿ ಹಲವಾರು ಟ್ರೋಫಿಗಳನ್ನಿಟ್ಟುಕೊಂಡು ತಮ್ಮ ವೃತ್ತಿಜೀವನವನ್ನು ಮುಗಿಸಿದ್ದಾರೆ. ಆದರೆ ಈ ಕರ್ನಾಟಕದ ಶೋ ಮ್ಯಾನ್ ಆಟಗಾರ ರಾಜ್ಯದ ಪರವಾಗಿ, ರಾಷ್ಟ್ರದ ಪರವಾಗಿ ಇನ್ನು ಮೈದಾನದಲ್ಲಿ ಕಾಣಿಸಿಕೊಳ್ಳೋದಿಲ್ಲ ಅನ್ನೋದು ಬೇಸರದ ಸಂಗತಿ. 2007 ರ ವಿಶ್ವ T20 ಪಂದ್ಯಾವಳಿಯಲ್ಲಿ ಅವರ ಶ್ರೇಷ್ಠ ಪ್ರದರ್ಶನ ಕಂಡುಬಂದಿತ್ತು. ಅವರು ಎರಡು ಐಪಿಎಲ್-ವಿಜೇತ ತಂಡಗಳ ಭಾಗವಾಗಿದ್ದರು (2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್). ಅವರು ಎರಡು ಬಾರಿ (2013-14 ಮತ್ತು 2014-15) ಕರ್ನಾಟಕದ ರಣಜಿ ಟ್ರೋಫಿ ವಿಜೇತ ತಂಡದ ಭಾಗವಾಗಿದ್ದರು. ಇದರ ಜೊತೆಗೆ ವಿಜಯ್ ಹಜಾರೆ ಟ್ರೋಫಿ (2013-14 ಮತ್ತು 2014-15) ಮತ್ತು ಇರಾನಿ ಕಪ್ (2013-14 ಮತ್ತು 2014-15) ಗೆದ್ದಿದ್ದಾರೆ ಉತ್ತಪ್ಪ.

ಅವರು 2014 ರ IPL ಸಮಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ಪರ ಆರೆಂಜ್ ಕ್ಯಾಪ್ ಅನ್ನು ಗೆಲ್ಲುವ ಹಾದಿಯಲ್ಲಿ 660 ರನ್‌ ಗಳಿಸಿದ್ದರು. 205 ಐಪಿಎಲ್ ಪಂದ್ಯಗಳಲ್ಲಿ 4,952 ರನ್ ಗಳಿಸಿರುವ ಉತ್ತಪ್ಪ ಈ ಪಂದ್ಯಾವಳಿಯಲ್ಲಿ ಒಂಬತ್ತನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 2007 ರ ವಿಶ್ವ T20 ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಚೊಚ್ಚಲ T20I ಗೆಲುವಿನಲ್ಲಿ ಅವರು ದೊಡ್ಡ ಪಾತ್ರವನ್ನು ವಹಿಸಿದ್ದರು.  ಟೈನಲ್ಲಿ ಕೊನೆಗೊಂಡ ಆಟದಲ್ಲಿ ನಂತರ ಬೌಲ್ ಔಟ್ ಕ್ಷಣದ ಭಾಗವಾಗುವುದರ ಹೊರತಾಗಿ, ಉತ್ತಪ್ಪ ಅವರು 39 ಎಸೆತಗಳಲ್ಲಿ 50 ರನ್ ಗಳಿಸಿ ಭಾರತ ನಿಗದಿತ 20 ಓವರ್‌ಗಳಲ್ಲಿ 141-9 ಗಳಿಸಲು ಸಹಾಯ ಮಾಡಿದ್ದರು.

142 ಪ್ರಥಮ ದರ್ಜೆ ಪಂದ್ಯಗಳಲ್ಲಿ 9,446 ರನ್ ಗಳಿಸಿದ್ದ ಉತ್ತಪ್ಪ, ಸತತ ಎರಡನೇ ಬಾರಿಗೆ ಕರ್ನಾಟಕ ರಣಜಿ ಟ್ರೋಫಿ ಗೆಲ್ಲುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಅವರು 2014-15 ರ ರಣಜಿ ಋತುವಿನಲ್ಲಿ 11 ಪಂದ್ಯಗಳಲ್ಲಿ 50.66 ರ ಸರಾಸರಿಯಲ್ಲಿ 912 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಮುಗಿಸಿದರು.

2013-14ರ ವಿಜಯ್ ಹಜಾರೆ ಟ್ರೋಫಿಯ ಸಮಯದಲ್ಲಿ ಕರ್ನಾಟಕದ ಈ ಆಟಗಾರ ತನ್ನ ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದರು. ಪಂದ್ಯಾವಳಿಯ ಎಂಟು ಪಂದ್ಯಗಳಲ್ಲಿ 76.57 ರ ಸರಾಸರಿಯಲ್ಲಿ 536 ರನ್ ಗಳಿಸಿ ಅತಿ ಹೆಚ್ಚು ರನ್ ಕಲೆ ಹಾಕಿದ್ದರು.

ಬುಧವಾರ ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸಿರುವ ಉತ್ತಪ್ಪ. “ನನ್ನ ದೇಶ ಮತ್ತು ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವುದು ನನಗೆ ದೊಡ್ಡ ಗೌರವವಾಗಿದೆ. ಹೇಗಾದರೂ, ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ಕೃತಜ್ಞತೆಯ ಭಾವದಿಂದ, ನಾನು ಭಾರತೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು,” ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ನಾನು ವೃತ್ತಿಪರ ಕ್ರಿಕೆಟ್ ಆಡಲು ಆರಂಭಿಸಿ 20 ವರ್ಷಗಳಾಗಿವೆ ಮತ್ತು ನನ್ನ ದೇಶ ಮತ್ತು ರಾಜ್ಯ, ಕರ್ನಾಟಕವನ್ನು ಪ್ರತಿನಿಧಿಸಿದ್ದು ಅತ್ಯಂತ ದೊಡ್ಡ ಗೌರವವಾಗಿದೆ. ಇದು ಏರಿಳಿತಗಳ ಅದ್ಭುತ ಪ್ರಯಾಣ; ಇದು ಮನುಷ್ಯನಾಗಿ ಬೆಳೆಯಲು ನನಗೆ ಅವಕಾಶ ಮಾಡಿಕೊಟ್ಟಿದೆ. ಹೇಗಾದರೂ, ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು, ನಾನು ನನ್ನ ಕುಟುಂಬದೊಂದಿಗೆ ಮಹತ್ವದ ಸಮಯವನ್ನು ಕಳೆಯಲಿದ್ದೇನೆ, ಜೀವನದಲ್ಲಿ ಹೊಸ ಹಂತವನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ಟಿಪ್ಪಣಿಯಲ್ಲಿ ಬರೆದಿದ್ದಾರೆ.

ಅವರು ತಮ್ಮ ಹಿಂದಿನ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪ್ರಸ್ತುತ ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಉತ್ತಪ್ಪ.

ಉತ್ತಪ್ಪ ಅವರು ಅವರು ODI ಮತ್ತು T20I ಗಳಲ್ಲಿ ಕ್ರಮವಾಗಿ 934 ಮತ್ತು 249 ರನ್ ಗಳಿಸಿದ್ದಾರೆ. ಅವರು 9446 ಪ್ರಥಮ ದರ್ಜೆ ಮತ್ತು 6534 ಲಿಸ್ಟ್ ಎ ರನ್‌ಗಳನ್ನು ಹೊಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು