“ಅಕ್ರಮ ಕಟ್ಟಡ” ಹೆದ್ದಾರಿಯ ಅಗಲೀಕರಣಕ್ಕೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಆಡಳಿತವು ಡಿಸೆಂಬರ್ 10 ರಂದು ಫತೇಪುರ್‌ನಲ್ಲಿರುವ 185 ವರ್ಷಗಳಷ್ಟು ಹಳೆಯದಾದ ಮಸೀದಿಯ ಒಂದು ಭಾಗವನ್ನು ಕೆಡವಿದೆ. ನೂರಿ ಮಸೀದಿಯ ಒಂದು ಭಾಗವನ್ನು ಕೆಡವಲು ಫತೇಪುರ್ ಆಡಳಿತ ತೆಗೆದುಕೊಂಡಿರುವ ಈ ನಿರ್ಧಾರವು ಅಲಹಾಬಾದ್ ಉಚ್ಚ ನ್ಯಾಯಾಲಯವು ಧ್ವಂಸಗೊಳಿಸುವ ಉದ್ದೇಶಿತ ಯೋಜನೆಗಳನ್ನು ಪ್ರಶ್ನಿಸಿ ಮಸೀದಿಯ ಉಸ್ತುವಾರಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಕೇವಲ ಮೂರು ದಿನಗಳ ಮೊದಲು ನಡೆದಿದೆ.
ಈ “ಅತಿಕ್ರಮಣ” ವನ್ನು ಕೆಡವಿಹಾಕುವ ಮೊದಲು ಮಸೀದಿಗೆ ಮುಂಚಿತವಾಗಿ ನೋಟಿಸ್ ನೀಡಿದ್ದೇವೆ ಎಂದು ಫತೇಪುರ್ ಆಡಳಿತ ತಿಳಿಸಿದೆ.
“ನಾವು ಮಸೀದಿಯನ್ನು ಕೆಡವಲಿಲ್ಲ,” ರಸ್ತೆ ವಿಸ್ತರಣೆಗೆ “ಅಡಚಣೆ”ಯಾಗಿದ್ದ ಕಟ್ಟಡದ ಒಂದು ಭಾಗವನ್ನು ಮಾತ್ರ ಕೆಡವಲಾಗಿದೆ ಎಂದು ಫತೇಪುರ್‌ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ತ್ರಿಪಾಠಿ ಹೇಳಿದ್ದಾರೆ.
ಈ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ಪಡೆದ ನಂತರ ಮಸೀದಿಯ ಆಡಳಿತ ಮಂಡಳಿ ಕೆಲವು ಅಂಗಡಿಗಳನ್ನು ಸ್ಥಳದಿಂದ ತೆಗೆದುಹಾಕಿದೆ ಎಂದು ಅವರು ಹೇಳಿದರು.
“ಇದನ್ನುಕೆಡವುದು ಅನಿವಾರ್ಯವಾಗಿತ್ತು. ಏಕೆಂದರೆ ಇದು ರಸ್ತೆಯ ಜೋಡಣೆಯ ಮಧ್ಯೆ ಬರುತ್ತಿತ್ತು ಮತ್ತು ಇತ್ತೀಚಿನ ವರ್ಷಗಳಲ್ಲಿ ಈ ನಿರ್ಮಾಣವನ್ನು ಕೈಗೊಳ್ಳಲಾಯಿತು, ”ಎಂದು ತ್ರಿಪಾಠಿ ಹೇಳಿದ್ದಾರೆ.
ಕಟ್ಟಡವನ್ನು ಏಕಾಏಕಿ ಕೆಡವಲಾಗಿದೆ ಎಂದು ಮಸೀದಿಯವರು ಆರೋಪ ಮಾಡಿದ್ದು, ಆಗಸ್ಟ್‌ನಲ್ಲಿ ಪಿಡಬ್ಲ್ಯೂಡಿ ಇಲಾಖೆ ತಮಗೆ ನೋಟಿಸ್ ನೀಡಿತ್ತು ಎಂದು ಆಡಳಿತ ತಿಳಿಸಿದೆ. ರಸ್ತೆಯ ಅಲೈನ್‌ಮೆಂಟ್‌ನಲ್ಲಿ ಬಿದ್ದಿರುವ “ಅಕ್ರಮ ಕಟ್ಟಡದ” ಕಾಮಗಾರಿಯನ್ನು ತೆಗೆದುಹಾಕುವಂತೆ 139 ಜನರಿಗೆ ನೋಟಿಸ್ ನೀಡಲಾಗಿದೆ ಎಂದು ತ್ರಿಪಾಠಿ ಹೇಳಿದರು.
ಸೆಪ್ಟೆಂಬರ್‌ನಲ್ಲಿ ಅವರು ರಸ್ತೆ ಬದಿಯಲ್ಲಿ ಬಂದಿರುವ ಅಂಗಡಿಗಳು ಮತ್ತು ಮನೆಗಳನ್ನು ತೆಗೆದುಹಾಕುವ ಕಾರ್ಯಾಚರಣೆಯನ್ನು ನಡೆಸಿದ್ದರು ಎಂದು ಅಧಿಕಾರಿ ಹೇಳಿದರು. ತಮ್ಮ ಆಕ್ಷೇಪಣೆಗಳನ್ನು ಹೈಕೋರ್ಟ್‌ನಲ್ಲಿ ವಿಚಾರಣೆ ಆಗುವ ಮೊದಲೇ ಆಡಳಿತವು ನಿರ್ಮಾಣವನ್ನು ಕೆಡವಲು ಬಂದಿತು ಎಂದು ಮಸೀದಿ ಮಾಡಿರುವ ಆರೋಪಗಳಿಗೆ ಎಡಿಎಂ ತ್ರಿಪಾಠಿ, “ನೋಟಿಸ್ ನೀಡಿದ ನಂತರ ಅವರಿಗೆ ಸಾಕಷ್ಟು ಸಮಯವನ್ನು ನೀಡಲಾಗಿದೆ,” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನೂರಿ ಮಸೀದಿ ಸಲ್ಲಿಸಿದ ಅರ್ಜಿಯು ಡಿಸೆಂಬರ್ 6 ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ಆಗಬೇಕಿತ್ತು ಆದರೆ ನಂತರ ಅದನ್ನು ಡಿಸೆಂಬರ್ 13 ಕ್ಕೆ ಪಟ್ಟಿ ಮಾಡಲಾಯಿತು.
ಪಿಡಬ್ಲ್ಯುಡಿ ಅಧಿಕಾರಿಗಳು ನೋಟಿಸ್ ನೀಡಿದ ನಂತರ ಮಸೀದಿಯ ಉಸ್ತುವಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಎಂದು ತ್ರಿಪಾಠಿ ಹೇಳಿದರು. ”ಜಿಲ್ಲಾಡಳಿತವು ಸಾಕಷ್ಟು ಸಮಯಾವಕಾಶದೊಂದಿಗೆ ಅವರಿಗೆ ಪೂರ್ವ ಸೂಚನೆ ನೀಡಿದೆ. ಅವರಿಗೆ ಮೊದಲಿನಿಂದಲೂ ಈ ವಿಷಯದ ಸಂಪೂರ್ಣ ಅರಿವಿತ್ತು,” ಎಂದಿದ್ದಾರೆ.
ಮಸೀದಿಯ ಐತಿಹಾಸಿಕ ಉಪಗ್ರಹ ಚಿತ್ರಗಳ ವಿಶ್ಲೇಷಣೆಯು ಕಳೆದ ಎರಡು-ಮೂರು ವರ್ಷಗಳಲ್ಲಿ ಹೆಚ್ಚುವರಿ ನಿರ್ಮಾಣಕ್ಕೆ ಬಂದು ರಸ್ತೆಯನ್ನು ಅತಿಕ್ರಮಿಸಿರುವುದು ಕಂಡುಬಂದಿದೆ ಎಂದು ತ್ರಿಪಾಠಿ ಹೇಳಿದರು.
ಭಾರೀ ಪೊಲೀಸ್ ಪಡೆ ನಿಯೋಜನೆಯ ನಡುವೆ ಧ್ವಂಸಗೊಳಿಸಲಾಗಿದೆ ಎಂದು ಫತೇಪುರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಶಂಕರ್ ಮಿಶ್ರಾ ಹೇಳಿದ್ದಾರೆ. ಐದು ವೃತ್ತ ಅಧಿಕಾರಿಗಳು, 10 ಠಾಣಾಧಿಕಾರಿಗಳು, 200 ಕಾನ್‌ಸ್ಟೆಬಲ್‌ಗಳು, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿಯ ಒಂದು ಕಂಪನಿ ಮತ್ತು ಗಲಭೆ ನಿಗ್ರಹ ಕ್ಷಿಪ್ರ ಕಾರ್ಯಾಚರಣೆ ಪಡೆಯ ಒಂದು ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.