Friday, December 6, 2024

ಸತ್ಯ | ನ್ಯಾಯ |ಧರ್ಮ

ಉತ್ತರಪ್ರದೇಶ: ಮುಸ್ಲಿಂ ಬಾಲಕನ ಕೆನ್ನೆಗೆ ಹೊಡೆಯಲು ಸೂಚಿಸಿದ ಶಿಕ್ಷಕಿಗೆ ಜಾಮೀನು ನಿರಾಕರಣೆ

ಮುಝಾಫ್ಫರ್ ನಗರ್: ಎರಡನೆ ತರಗತಿಯ ಮುಸ್ಲಿಂ ಬಾಲಕನ ಕೆನ್ನೆಗೆ ಹೊಡೆಯಲು ಆತನ ಸಹಪಾಠಿಗಳಿಗೆ ಸೂಚಿಸಿ, ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದ ಶಿಕ್ಷಕಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಈ ಪ್ರಕರಣ ಕಲೆದ ವರ್ಷ ನಡೆದಿತ್ತು.

ಶಿಕ್ಷಕಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಲು ನಿರಾಕರಿಸಿದ ನ್ಯಾ. ದೀಪಕ್ ವರ್ಮ ಅವರನ್ನೊಳಗೊಂಡಿದ್ದ ನ್ಯಾಯಪೀಠ, ಈ ಆದೇಶದ ಎರಡು ವಾರದೊಳಗೆ ಸಂಬಂಧಿತ ನ್ಯಾಯಾಲಯದೆದುರು ಶರಣಾಗಿ, ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತು ಎಂದು ಸಂತ್ರಸ್ತ ಬಾಲಕನ ಪರ ವಕೀಲರು ಮಾಹಿತಿ ನೀಡಿದ್ದಾರೆ.

“ಈಗಾಗಲೇ ಅಕ್ಟೋಬರ್ 16ರಂದು ಶಿಕ್ಷಕಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೆಳ ಹಂತದ ನ್ಯಾಯಾಲಯ ತಿರಸ್ಕರಿಸಿದ್ದು, ನವೆಂಬರ್ 23ರಂದು ಶಿಕ್ಷಕಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವ ಮೂಲಕ ಹೈಕೋರ್ಟ್ ಕೂಡಾ ಈ ನಿರ್ಧಾರವನ್ನು ಎತ್ತಿ ಹಿಡಿದಿದೆ” ಎಂದು ಸಂತ್ರಸ್ತ ಬಾಲಕನ ಪರ ವಕೀಲ ಕಮ್ರನ್ ಝೈದಿ ತಿಳಿಸಿದ್ದಾರೆ.

ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿ ತ್ರಿಪಾಠಿ ತ್ಯಾಗಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಾದ 323, 504, 295ಎ ಅಡಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಇದರೊಂದಿಗೆ ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75ರ ಅಡಿಯೂ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ವಕೀಲ ಕಮ್ರನ್ ಝೈದಿ ಹೇಳಿದ್ದಾರೆ.

ಖುಬ್ಬರ್ ಪುರ್ ಗ್ರಾಮದ ಸರಕಾರಿ ಶಾಲೆಯೊಂದರ ಶಿಕ್ಷಕಿಯಾದ ತ್ರಿಪಾಠಿ ತ್ಯಾಗಿ, ಎರಡನೆ ತರಗತಿಯ ಮುಸ್ಲಿಂ ವಿದ್ಯಾರ್ಥಿಯ ಕೆನ್ನೆಗೆ ಹೊಡೆಯುವಂತೆ ಆತನ ಸಹಪಾಠಗಳಿಗೆ ಸೂಚಿಸಿ, ಕೋಮು ಪ್ರಚೋದಕ ಹೇಳಿಕೆಗಳನ್ನು ನೀಡಿರುವ ವಿಡಿಯೊ ಆಗಸ್ಟ್ 2023ರಲ್ಲಿ ವೈರಲ್ ಆಗಿತ್ತು. ಇದರ ಬೆನ್ನಿಗೇ, ಈ ಘಟನೆಯ ಕುರಿತು ವ್ಯಾಪಕ ಸಾರ್ವಜನಿಕ ಖಂಡನೆ ವ್ಯಕ್ತವಾಗಿತ್ತು.

ಈ ಘಟನೆಯ ಸಂಬಂಧ ಮುಝಾಫ್ಫರ್ ನಗರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡರೆ, ಶಿಕ್ಷಣ ಇಲಾಖೆಯು ಶಾಲೆಗೆ ನೋಟಿಸ್ ಜಾರಿಗೊಳಿಸಿತ್ತು.

ಸಂತ್ರಸ್ತ ಬಾಲಕನ ಆಪ್ತ ಸಮಾಲೋಚನೆಗೆ ಸಂಸ್ಥೆಯೊಂದನ್ನು ನಿಯೋಜಿಸುವಂತೆ ತಾನು ನೀಡಿದ್ದ ಆದೇಶವನ್ನು ಪಾಲಿಸದ ಉತ್ತರ ಪ್ರದೇಶ ಸರಕಾರವನ್ನು ನವೆಂಬರ್ 10, 2023ರಂದು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಅಪರಾಧ ನಡೆದ ನಂತರ, ರಾಜ್ಯ ಸರಕಾರ ಏನು ಮಾಡಬೇಕಿತ್ತೊ, ಅದನ್ನು ಮಾಡದೆ ಇದ್ದುದರಿಂದಾಗಿಯೇ ಆ ಅಹಿತಕರ ಘಟನೆಯ ನಂತರದ ಬೆಳವಣಿಗೆಗಳು ನಡೆದದ್ದು ಎಂದು ಜನವರಿ 12ರಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page