Friday, June 14, 2024

ಸತ್ಯ | ನ್ಯಾಯ |ಧರ್ಮ

ವಡ್ಗಾಂ: ಜಿಗ್ನೇಶ್‌ ಮೇವಾನಿಗೆ ರೋಚಕ ಗೆಲುವು

ವಡ್ಗಾಂ: ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಅನುಭವಿಸುತ್ತಿದ್ದರೂ, ಪಕ್ಷದ ಅಭ್ಯರ್ಥಿ, ದಲಿತ ನಾಯಕ ಜಿಗ್ನೇಶ್‌ ಮೇವಾನಿ ವಡ್ಗಾಂ ಕ್ಷೇತ್ರದಿಂದ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ.

ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಣಿಭಾಯ್‌ ವಘೇಲಾ ಅವರನ್ನು ತುರುಸಿನ ಸ್ಪರ್ಧೆಯಲ್ಲಿ ಸೋಲಿಸಿದ ಜಿಗ್ನೇಶ್‌ ಮೇವಾನಿ, ಬೆಳಿಗ್ಗೆಯಿಂದ ಹಾವು-ಏಣಿ ಆಟದಂತಿದ್ದ ಪೈಪೋಟಿಯಲ್ಲಿ ಅಂತಿಮವಾಗಿ ಗೆಲುವಿನ ನಗೆ ಬೀರಿದ್ದಾರೆ.

2017ರಲ್ಲಿ ನಡೆದ ಚುನಾವಣೆಯಲ್ಲಿ ಜಿಗ್ನೇಶ್‌ ಮೇವಾನಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಎಎಪಿ ಪಕ್ಷಗಳು ಮೇವಾನಿ ಅವರನ್ನು ಬೆಂಬಲಿಸಿದ್ದವು. ಈ ಬಾರಿಯ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷ ಸೇರಿಕೊಂಡಿದ್ದ ಮೇವಾನಿ, ಪಕ್ಷದಿಂದಲೇ ಟಿಕೆಟ್‌ ಪಡೆದು ಸ್ಪರ್ಧಿಸಿದ್ದರು.

ಭಾರತೀಯ ಜನತಾ ಪಕ್ಷದ ಕಟುಟೀಕಾಕಾರರಾದ ಜಿಗ್ನೇಶ್‌ ಮೇವಾನಿ ಗುಜರಾತ್‌ನ ಊನಾದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವುದರೊಂದಿಗೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿದ್ದರು. ಊನಾದಲ್ಲಿ ಸತ್ತ ರಾಸುಗಳ ಚರ್ಮ ತೆಗೆಯುತ್ತಿದ್ದ ದಲಿತರ ಮೇಲೆ ಸ್ವಯಂ ಘೋಷಿತ ಗೋರಕ್ಷಕರು ತೀವ್ರವಾಗಿ ದೌರ್ಜನ್ಯ ಎಸಗಿದ್ದರು. ಘಟನೆಯನ್ನು ಖಂಡಿಸಿ ಜಿಗ್ನೇಶ್‌ ಮೇವಾನಿ ʻರಾಷ್ಟ್ರೀಯ ದಲಿತ ಅಧಿಕಾರ ಮಂಚ್‌ʼ ಸ್ಥಾಪಿಸಿ ಅಹಮದಾಬಾದ್‌ನಲ್ಲಿ ದಲಿತ ಮಹಾಸಭಾ ಆಯೋಜಿಸಿದ್ದರು.

42 ವರ್ಷ ವಯಸ್ಸಿನ ದಲಿತ ಹೋರಾಟಗಾರ, ಕಾನೂನು ಪದವೀಧರ ಜಿಗ್ನೇಶ್‌ ಮೇವಾನಿ ತಮ್ಮ ಸಮುದಾಯದಲ್ಲಿ ಮತ್ತು ಸಮುದಾಯದಿಂದ ಹೊರಗೂ ಸಹ ಜನಪ್ರಿಯರಾಗಿದ್ದರು. ಹೀಗಾಗಿ ವಡ್ಗಾಂ ವಿಧಾನಸಭಾ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ಜಯ ಗಳಿಸಿದ್ದರು.

ಕಳೆದ ವರ್ಷ ಏಪ್ರಿಲ್‌ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ಮಾಡಲಾಗಿದ್ದ ಟ್ವೀಟ್‌ ಗಳ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸರು ಜಿಗ್ನೇಶ್‌ ಮೇವಾನಿಯವರನ್ನು ಬಂಧಿಸಿದ್ದರು. ಬಡಜನರ ಪರವಾಗಿ ಹೋರಾಡುವ ನಾಯಕನ ವಿರುದ್ಧ ನಡೆದ ಗಂಭೀರ ದೌರ್ಜನ್ಯವಿದು ಎಂದು ಅಸ್ಸಾಂ ಪೊಲೀಸರ ನಡೆಯನ್ನು ದೇಶಾದ್ಯಂತ ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು