Friday, June 14, 2024

ಸತ್ಯ | ನ್ಯಾಯ |ಧರ್ಮ

ವೈದಿಕರು ಬೌದ್ಧ ಜೈನರಿಂದ ಮೂರ್ತಿ ಪೂಜೆಯನ್ನು ಪಡೆದರೆ?

ದೇವರ ಕಲ್ಪನೆ ಇಲ್ಲದ ನಾಸ್ತಿಕ ಧರ್ಮಗಳಾದ ಬೌದ್ಧ ಮತ್ತು ಜೈನ ಧರ್ಮಗಳೇ  ಹಿಂದೂ ಧರ್ಮಕ್ಕೆ ಚಿತ್ರ ವಿಚಿತ್ರ ದೇವರ ವಿಗ್ರಹಗಳನ್ನು ಹಾಗೂ ಅವತಾರದ ಕಲ್ಪನೆಗಳನ್ನು ಕೊಟ್ಟಿರುವುದು! ಆದುದರಿಂದ ನಾವು ಮತ್ತೆ ಸ್ಥಾವರ ತೊರೆದು ಜಂಗಮದತ್ತ ಹೋಗಬೇಕಿದೆ ಎನ್ನುತ್ತಾರೆ ತೆರೆಮರೆಯಲ್ಲೇ ಉಳಿದ ಬರಹಗಾರ ಪ್ರವೀಣ್‌ ಎಸ್‌ ಶೆಟ್ಟಿ 

ದಸರೆ, ದೀಪಾವಳಿ, ತುಳಸಿ ಹಬ್ಬಗಳ ಹಿಂದೆ ಹಲವು ಪುರಾಣ ಕಥೆಗಳಿವೆ, ಭಾರತೀಯ ಸಂಪ್ರದಾಯ, ಸಂಸ್ಕೃತಿ, ಇತಿಹಾಸಗಳಿವೆ ಎಂದು ಹೇಳುತ್ತಾರೆ. ಆದರೆ ದಸರೆ, ದೀಪಾವಳಿಯನ್ನು ಮೂಲತಃ ಶುರು ಮಾಡಿದ ಅಶೋಕನ ಹೆಸರನ್ನೇ ಯಾರೂ ಈಗ ಉಲ್ಲೇಖಿಸುವುದಿಲ್ಲ. ದೀಪಾವಳಿ ಮೂಲತಃ ಬೌದ್ಧರ ಒಂದು ಹಬ್ಬ. ಅದರ ಮೂಲ ಹೆಸರು “ದೀಪ ದಾನೋತ್ಸವ”. ಕಾರ್ತಿಕ ಮಾಸದಲ್ಲಿ ಹಿರಿಯ ಬೌದ್ಧ ಭಿಕ್ಷುಗಳು ತಮ್ಮ ಶಿಷ್ಯರಿಗೆ,  ಹಾಗೂ ಸಂಸಾರಸ್ಥ ಕುಟುಂಬದ ಹಿರಿಯರು ತಮ್ಮ ಮನೆಯ ಕಿರಿಯರಿಗೆ ಸಾಂಕೇತಿಕವಾಗಿ ಬೆಳಗಿದ ದೀಪಗಳನ್ನು ಹಸ್ತಾಂತರಿಸಿ “ಧಮ್ಮ ಜ್ಞಾನವನ್ನು” ಒಬ್ಬರಿಂದೊಬ್ಬರಿಗೆ ಹಂಚಿಕೊಳ್ಳುವ ಪದ್ಧತಿ ಅಶೋಕನ ಕಾಲದಲ್ಲಿ ಸುರುವಾಯಿತು. ಇದಕ್ಕೆ ಪಾಲಿ ಭಾಷೆಯಲ್ಲಿ ‘ದೀಪ್ ದಾನೋತ್ಸವ್’ ಅಥವಾ “ದೀಪ್ ಪರ್ವ್” ಎಂದು ಕರೆದರು. ನಮ್ಮ ರಾಷ್ಟ್ರಧ್ಜಜದಲ್ಲಿ ಇರುವ ಅಶೋಕ ಚಕ್ರವೇ ಬೌದ್ಧರ ʼಧಮ್ಮ ಜ್ಞಾನ ಚಕ್ರʼ. ಆದರೆ, ಕೊನೆಯ ಬೌದ್ಧ ಅರಸ ಬ್ರಹದೃತ ಮೌರ್ಯನನ್ನು ಮೋಸದಿಂದ ಹತ್ಯೆ ಮಾಡಿ ಅಧಿಕಾರಕ್ಕೆ ಬಂದ ವೈದಿಕ ಪುಷ್ಯಮಿತ್ರ ಶುಂಗನು ಎಲ್ಲಾ ಬೌದ್ಧ ಹಬ್ಬಗಳನ್ನು ವೈದಿಕ ಹಬ್ಬಗಳನ್ನಾಗಿ ಪರಿವರ್ತಿಸಿ ಈ ಹಬ್ಬಗಳಿಗೆ ದೇವರ ಕಾಲ್ಪನಿಕ ಅವತಾರ ಮತ್ತು ವೈದಿಕ ಪುರಾಣ ಕಥೆಗಳನ್ನು ಜೋಡಿಸಿದನು.

ನಾವು ಈಗ ಆಚರಿಸುವ ಪ್ರತಿಯೊಂದು ಹಿಂದೂ ಹಬ್ಬದ ಹಿಂದೆಯೂ ಒಂದೋ ಬೌದ್ಧ ಹಬ್ಬ ಅಥವಾ ಕೃಷಿ ಆಧಾರಿತ ಭಾರತದ ಮೂಲ ನಿವಾಸಿಗಳ ಹಬ್ಬದ ಹಿನ್ನೆಲೆ ಇದ್ದೇ ಇದೆ. ಸಾಮ್ರಾಟ ಅಶೋಕ ಭಾರತದೆಲ್ಲೆಡೆ 84 ಸಾವಿರ ಬೌದ್ಧ ವಿಹಾರಗಳನ್ನು ಹಾಗೂ ದೀಪ ಸ್ತಂಭಗಳನ್ನು ಸ್ಥಾಪಿಸಿ ಬೌದ್ಧ ಧರ್ಮದ ಪ್ರಸಾರಕ್ಕೆ ಅನುವು ಮಾಡಿಕೊಟ್ಟನು. (ಅದರಲ್ಲಿ ಒಂದು ಈಗಲೂ ನಮ್ಮ ಮಂಗಳೂರಿನ ಕದ್ರಿಯಲ್ಲಿರುವ ಮಂಜುನಾಥ ದೇವಳ (ಮಂಜುಶ್ರಿ ವಿಹಾರ) ಮತ್ತು ಅದರ ಎದುರಿಗಿರುವ 2250 ವರ್ಷ ಹಳೆಯ ದೀಪ ಸ್ತಂಭ!). ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯ ಸ್ಥಳದಲ್ಲಿ ಮೊದಲು ಇದ್ದಿದ್ದು ‘ಸಾಕೇತ್’ ಎಂಬ ಬೌದ್ಧ ವಿಹಾರವೇ ಆಗಿತ್ತಂತೆ! ಕಾರ್ತಿಕ ಅಮಾವಾಸ್ಯೆಯಂದು ಬೌದ್ಧರು ದೇಶದೆಲ್ಲೆಡೆ ದೀಪದಾನೋತ್ಸವ ಆಚರಿಸುತ್ತಿದ್ದರು ಹಾಗೂ ಎಲ್ಲ ಎಂಬತ್ತ ನಾಲ್ಕು ಸಾವಿರ ವಿಹಾರ ಮತ್ತು ದೀಪಸ್ತಂಭಗಳಲ್ಲಿ ಆ ದಿನ ಸಂಜೆ ದೀಪಗಳನ್ನು ಬೆಳಗಿಸಿ ಪರ್ವ ಆಚರಿಸುತ್ತಿದ್ದರು. ಪಾಲಿ & ಪ್ರಾಕೃತ ಭಾಷೆಯ “ಪರ್ವ” ಎಂಬ ಶಬ್ದವೇ ಅಪಭ್ರಂಶಗೊಂಡು ತುಳುವಲ್ಲಿ “ಪರ್ಬ” ಎಂದಾಗಿದೆ. ಅದೇ ದಿನ ಗೌತಮ ಬುದ್ಧನ ಹೆತ್ತ ತಾಯಿ ಮಾಯಾ ಮತ್ತು ಸಾಕು ತಾಯಿ ಗೌತಮಿಯನ್ನೂ ಬೌದ್ಧರು ಪೂಜಿಸುತ್ತಿದ್ದರು (ಮಾಯಾ ಹೆಸರಿನ ಹಿಂದೆ ವೈದಿಕ ಶಬ್ಧ ‘ದೇವಿ’ ತಾಗಿಸುವುದು ಬೌದ್ಧರಿಗೆ ವರ್ಜ್ಯ). ತಾಯಿ ಮಾಯಾಳ ಪೂಜೆಯೇ ನಂತರ ವೈದಿಕರ ಲಕ್ಷ್ಮಿ ಪೂಜೆಯಾಗಿ ಪರಿವರ್ತನೆ ಹೊಂದಿ ದೀಪಾವಳಿಯಂದು ಆಚರಣೆಗೆ ಬಂತು. ಅಶೋಕನ ಕಾಲದಲ್ಲಿ ಮೊಟ್ಟ ಮೊದಲು ತಾಯಿ ಮಾಯಾ ಕಮಲದ ಮೇಲೆ ಕುಳಿತ ಭಂಗಿಯಲ್ಲಿ ಹಾಗೂ ಎರಡು ಆನೆಗಳು ಅವಳ ಮೇಲೆ ನೀರು ಹನಿಸುವಂತೆ ಚಿತ್ರಿಸಲಾಯಿತು.

ಈ ಶಿಲ್ಪ 2200 ವರ್ಷ ಹಳೆಯ ಮಧ್ಯಪ್ರದೇಶದ ಸಾಂಚಿ ಸ್ತೂಪದ ದ್ವಾರದ ಮೇಲೆ ಈಗಲೂ ಇದೆ. ಆ ಕಾಲದಲ್ಲಿ ಇನ್ನೂ ಲಕ್ಷ್ಮೀದೇವಿಯ ಕಲ್ಪನೆ ಹುಟ್ಟಿರಲೇ ಇಲ್ಲ. ಬುದ್ಧನ ಕಾಲದಿಂದಲೂ ಕಮಲದ ಹೂವು ಬೌದ್ಧರಿಗೆ ಪವಿತ್ರ ಪುಷ್ಪ. ನಮ್ಮ ಕದ್ರಿಯ ಮಂಜುನಾಥ ದೇವಸ್ಥಾನದಲ್ಲಿ ಇರುವ ಬೌದ್ಧರ ಯಕ್ಷ ತ್ರಿಲೋಕೇಶ್ವರ (ಅವಲೋಕಿತೇಶ್ವರ) ಮತ್ತು ಮಂಜುಶ್ರೀ ಪ್ರತಿಮೆಗಳ ಕೈಯಲ್ಲಿ ಕಮಲದ ಮೊಗ್ಗು ಇರುವುದನ್ನು ಗಮನಿಸಬೇಕು.

ವೈದಿಕ ದೇವರ ಕಲ್ಪನೆ ಹುಟ್ಟಿಕೊಂಡದ್ದು ಯಾವಾಗ?

ಸಾಮ್ರಾಟ ಅಶೋಕನ ಕಾಲದಲ್ಲಿ ಲಕ್ಷ್ಮೀ, ಶಾರದೆ, ವಿಷ್ಣು, ಬ್ರಹ್ಮ, ದುರ್ಗೆ ಅಥವಾ ಇತರ ನೂರಾರು ವೈದಿಕ ಹೆಣ್ಣು-ಗಂಡು ದೇವರ ಕಲ್ಪನೆ ಇನ್ನೂ ಹುಟ್ಟಿರಲೇ ಇಲ್ಲ. ಹಿಂದೂ ದೇವರ ವಿವಿಧ ಮೂರ್ತ ಸ್ವರೂಪದ ಕಲ್ಪನೆಗಳೆಲ್ಲಾ ವೈದಿಕ ಅರಸನಾದ ಶುಂಗ ವಂಶೀಯರ ಆಡಳಿತ ಕಾಲದಲ್ಲಿ ಹುಟ್ಟಿ ಕೊಂಡವುಗಳು.ಎಲ್ಲಾ ವೈದಿಕ ದೇವರುಗಳ ಮೂರ್ತಿ ಸ್ವರೂಪಗಳಿಗೆ ಪ್ರೇರಣೆ ಆಗಿದ್ದು 2600 ವರ್ಷ ಹಳೆಯ ಜೈನ ಮತ್ತು ಬೌದ್ಧ ಧರ್ಮಿಯರ “ಯಕ್ಷ-ಯಕ್ಷಿಣಿಯರ” ಕಲ್ಪನೆಗಳು. ಯಕ್ಷ-ಯಕ್ಷಿಣಿಯರೆಂದರೆ ಜೈನ ತೀರ್ಥಂಕರರ ಮತ್ತು ಬೌದ್ಧ ಭಿಕ್ಷುಗಳ ರಕ್ಷಣೆಗೆ ಇದ್ದ ಅಲೌಕಿಕ ಶಕ್ತಿಗಳು. ಹಾಗಾಗಿ ಅವುಗಳಿಗೆ ಅನೇಕ ಕೈ ಮತ್ತು ಹಲವು ತಲೆಗಳು ಇರುವಂತೆ ಚಿತ್ರಿಸಲಾಗುತ್ತಿತ್ತು. (ಮೂಲತಃ ಜೈನ ಮತ್ತು ಬೌದ್ಧರಲ್ಲಿ ದೇವರ ಕಲ್ಪನೆ ಇಲ್ಲ!).

ಇವೇ ಯಕ್ಷ-ಯಕ್ಷಿಣಿಗಳು ನಂತರ ವೈದಿಕ ದೇವರಾಗಿ ಬಡತಿ ಹೊಂದಿ ಇಂದು ನಮ್ಮಿಂದ ಪೂಜೆಗೊಳ್ಳುತ್ತಿರುವುದು. (ಹೆಚ್ಚಿನ ವಿವರಕ್ಕಾಗಿ ಗೂಗಲ್ಸ್ ನಲ್ಲಿ  ಜೈನ್-ಬುದ್ಧಿಸ್ಟ್-ಹಿಂದೂ ಯಕ್ಷ-ಯಕ್ಷಿ ಎಂದು ಟೈಪ್ ಮಾಡಿ ನೋಡಿ). ಜೈನರ ಯಕ್ಷ ಕುಬೇರ ಸಂಪತ್ತಿನ ಅಧಿಪತಿ. ರಾಮಾಯಣದ ಪ್ರಕಾರ ಕುಬೇರ ರಾವಣನ ಅಣ್ಣ. ಜೈನರೆಲ್ಲಾ ತಮ್ಮ ಮನೆಯಲ್ಲಿ ಕುಬೇರನ ಪೂಜೆ ಮಾಡುವುದರಿಂದಾಗಿಯೇ ಅವರು ಧನಿಕರಾಗಿರುವುದು ಎಂಬ ನಂಬಿಕೆ ಗುಜರಾತ್ & ರಾಜಸ್ತಾನದ ಜೈನ ವ್ಯಾಪಾರಿಗಳಲ್ಲಿ ಈಗಲೂ ಇದೆ. ಜತೆಗೆ ನಾಗಸರ್ಪದ ರೂಪದಲ್ಲಿ ಪದ್ಮಾವತಿ ಮತ್ತು ಧರಣೇಂದ್ರ ಎಂಬ ಯಕ್ಷರನ್ನೂ ಕರ್ನಾಟಕದ ಜೈನರು ಈಗಲೂ ಪೂಜಿಸುತ್ತಾರೆ. ಎಲ್ಲಾ ತೀರ್ಥಂಕರರ ತಲೆಯ ಮೇಲೆ ಐದು ಅಥವಾ ಏಳು ಹೆಡೆಯ ಶೇಷನಾಗ ಹೆಡೆ ಚಾಚಿ ರಕ್ಷಿಸುತ್ತಿರುವ ಪುರಾತನ ಶಿಲ್ಪಗಳನ್ನು ನಾವು ಎಲ್ಲೆಡೆ ಕಾಣುತ್ತೇವೆ. ಸರ್ಪರೂಪದ ಕಾರ್ತಿಕೇಯ ಸಹಾ ಮೂಲತಃ ಜೈನರ ಯಕ್ಷ! ನಂತರ ಈ ಯಕ್ಷನೇ ಹಿಂದೂಗಳ ಸುಬ್ರಹ್ಮಣ್ಯನಾಗಿ ಬಡತಿ ಹೊಂದಿದ್ದು.

ನಮ್ಮ ತುಳುನಾಡಿನಲ್ಲಿ ನಾಗಪೂಜೆ ಶುರುವಾಗಲು ಜೈನರ ನಾಗರೂಪದ ಯಕ್ಷ ಪೂಜೆಯೇ ಮೂಲ ಕಾರಣ ಎನ್ನಲಾಗುತ್ತದೆ. ಒಟ್ಟಾರೆ ಜೈನರ ಮತ್ತು ಬೌದ್ಧರ ಯಕ್ಷ ಪೂಜೆಯೇ ವೈದಿಕರಲ್ಲಿ ನೂರಾರು ದೇವರುಗಳ ಕಲ್ಪನೆಗೆ ಮೂಲ ಕಾರಣವಾಗಿದ್ದು. ಶೈವರ ಲಿಂಗ ಪೂಜೆ ಸುರುವಾಗಿದ್ದು ಬೌದ್ಧರ ಸ್ತೂಪ ಪೂಜೆಯಿಂದ ಎಂದು ಹೇಳಲಾಗುತ್ತದೆ. 4,500 ವರ್ಷ ಹಳೆಯ ಸಿಂಧೂಘಾಟಿ (ಮೊಹೆಂಜೊದಾರೊ-ಹರಪ್ಪಾ) ಸಂಸ್ಕೃತಿಯಲ್ಲಿ ಲಿಂಗ ರೂಪ, ಮನುಷ್ಯ ರೂಪ ಅಥವಾ ಅರೆಪ್ರಾಣಿ ರೂಪದ ದೇವರ ಆಕೃತಿಗಳು ಸಂಶೋಧಕರಿಗೆ ಎಲ್ಲಿಯೂ ಕಂಡು ಬಂದಿಲ್ಲ! ವೈದಿಕರ ಪ್ರಕಾರ ರಾಮನು ರಾವಣನನ್ನು ಕೊಂದು ಸೀತೆಯೊಂದಿಗೆ ಅಯೋಧ್ಯೆಗೆ ಹಿಂತಿರುಗಿದ ಖುಷಿಯಲ್ಲಿ ಎಲ್ಲಾ ಅಯೋಧ್ಯಾವಾಸಿಗಳು ತಮ್ಮ ಮನೆಗಳ ಮುಂದೆ ದೀಪ ಬೆಳೆಗಿದ್ದೇ ದೀಪಾವಳಿ ಹಬ್ಬಕ್ಕೆ ನಾಂದಿಯಾಯಿತಂತೆ. ಆದರೆ ರಾಮಾಯಣದಲ್ಲಿ ಉಲ್ಲೇಖಿಸಿರುವ ಕಾಲಗಣನೆಯ ಪ್ರಕಾರ ರಾಮನು ರಾವಣನನ್ನು ಕೊಂದಿದ್ದು ಫಾಲ್ಗುಣ ಮಾಸದಲ್ಲಿ (ಫೆಬ್ರವರಿಯಲ್ಲಿ) ಮತ್ತು ವಿಭೀಷಣನ ಪಟ್ಟಾಭಿಷೇಕ ಮುಗಿಸಿ ರಾಮ ಅಯೋಧ್ಯೆಗೆ ಮರಳಿ ಬಂದಿದ್ದು ಚೈತ್ರ (ಮಾರ್ಚ್-ಏಪ್ರಿಲ್) ಮಾಸದಲ್ಲಿ. ಆದರೆ ದೀಪಾವಳಿ ಯಾವಾಗಲೂ ಬರುವುದು ಕಾರ್ತಿಕ ಮಾಸದಲ್ಲಿ (ಅಕ್ಟೋಬರ್-ನವಂಬರಿನಲ್ಲಿ).

ಮನೋವೇಗದಲ್ಲಿ ಒಂದೇ ಕ್ಷಣದಲ್ಲಿ ಎಲ್ಲಿ ಬೇಕಾದರೂ ಹಾರಿ ಹೋಗಬಹುದಾಗಿದ್ದ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಬರಲು ರಾಮನಿಗೆ ಏಳೆಂಟು ತಿಂಗಳು ಹಿಡಿಯಿತು ಅನ್ನುವುದು ಅಸಂಬದ್ಧ ಎಂದು ಸ್ವತಃ ರಾಮಯಣದಲ್ಲಿರುವ ಪಂಚಾಂಗದಿಂದಲೇ ಸಾಬೀತಾಗುತ್ತದೆ. ಹಾಗಾಗಿ   ರಾಮನ ಲಂಕಾ ವಿಜಯಕ್ಕೂ ದೀಪಾವಳಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ.

    
ಮೂರ್ತಿ ಪೂಜೆಯನ್ನು ಬೌದ್ಧ- ಜೈನ ಧರ್ಮಗಳಿಂದ ಎರವಲು ಪಡೆದಿರುವುದೇ?

2200 ವರ್ಷಕ್ಕೆ ಮುಂಚೆ ವೈದಿಕರು ಅಗ್ನಿ ಪೂಜೆಯ ಮೂಲಕ ಕೇವಲ ದೇವೇಂದ್ರನಿಗೆ ಹವಿಸ್ಸು ಕೊಟ್ಟು ಯಜ್ಞಯಾಗ ಮಾತ್ರ ಮಾಡುತ್ತಿದ್ದರು. ಆಗೆಲ್ಲಾ ವೈದಿಕರು ಕೇವಲ ಪ್ರಕೃತಿ ಪೂಜೆ ಮಾಡುತ್ತಿದ್ದರೇ ವಿನಹ ಮೂರ್ತಿ ಪೂಜೆ ಮಾಡುತ್ತಿರಲಿಲ್ಲ. ಹಿಂದೂಗಳಲ್ಲಿ ಮೂರ್ತಿ ಪೂಜೆ ಸುರುವಾಗಿದ್ದು ಜೈನ-ಬೌದ್ಧರ ಯಕ್ಷ ಪೂಜೆಯ ಅನುಕರಣೆಯಿಂದ ಹಾಗೂ ದೇವಸ್ಥಾನ ಕಟ್ಟುವ ಪದ್ಧತಿ ಕೂಡಾ ಸುರುವಾಗಿದ್ದು ಜೈನ-ಬೌದ್ಧರ ಬಸದಿ-ವಿಹಾರಗಳ ಅನುಕರಣೆಯಿಂದ. ಆದರೆ ದುರಾದೃಷ್ಟದಿಂದ ಅದು ಈಗ ವಿಕಾರವಾಗಿ ಬೆಳೆದು ರಾಜಕೀಯ ಪಕ್ಷಗಳ ಕೈಯಲ್ಲಿ ಕೋಮು ದ್ವೇಷದ ಅಸ್ತ್ರವಾಗಿ ಪಾವಿತ್ರ್ಯತೆ ಹೊರಟು ಹೋಗಿದೆ. ಮೂಲತಃ ಕೇವಲ ಪ್ರಕೃತಿ ಪೂಜೆ ಮಾಡುತ್ತಿದ್ದ ವೈದಿಕ ಧರ್ಮವು ಜೈನ-ಬೌದ್ಧ ಧರ್ಮಗಳಿಗಿಂತ ಹೆಚ್ಚು ಹಳೆಯದಾಗಿರಬಹುದು. ಆದರೆ ಈಗ ನಾವು ಅನುಸರಿಸುತ್ತಿರುವ ಮೂರ್ತಿ ಪೂಜೆಯುಳ್ಳ ಹಿಂದೂ ಧರ್ಮದ ಆಚರಣೆಗಳೆಲ್ಲಾ ಪೂರ್ಣವಾಗಿ ಬೌದ್ಧ- ಜೈನ ಧರ್ಮಗಳಿಂದ ಎರವಲು ಪಡೆದಿರುವುದು! (ಹಾಗಾಗಿಯೇ ಭಾರತದಲ್ಲಿ ಎಲ್ಲಿಯೂ ಎರಡು ಸಾವಿರ ವರ್ಷಗಳಿಗಿಂತ ಹೆಚ್ಚು ಹಳೆಯ ಯಾವುದೇ ವೈದಿಕ ದೇವರ ಮೂರ್ತಿಗಳು ಲಭ್ಯವಾಗಿಲ್ಲ).  

ವೈದಿಕ ವೇದ ಉಪನಿಷತ್ತು ಗಳೆಲ್ಲಾ ಇರುವುದು ಸಂಸ್ಕೃತ ಭಾಷೆಯಲ್ಲಿ. ಆದರೆ ಸಂಸ್ಕೃತ ಭಾಷೆಗೆ ಸಾಮ್ರಾಟ ಅಶೋಕನ ಕಾಲದವರೆಗೂ ವ್ಯಾಕರಣ ಮತ್ತು ಲಿಪಿ ಇರಲಿಲ್ಲ. ಅಶೋಕನ ಮಗ ಕುಣಾಲನ ಕಾಲದಲ್ಲಿ ಪಾಣಿನಿ ಎಂಬವನು ಸಂಸ್ಕೃತ ಭಾಷೆಗೆ ಸರಿಯಾದ ವ್ಯಾಕರಣ ರಚಿಸಿದ್ದು ಹಾಗೂ ನಾಗರಿ ಲಿಪಿ ಅಳವಡಿಸಿದ್ದು. ಆದರೆ ಅದು ಕ್ಲಿಷ್ಟವಾಗಿತ್ತಂತೆ. ಹಾಗಾಗಿ ನಂತರ ಪತಾಂಜಲಿ ಎಂಬವನು ಆ ಸಂಸ್ಕೃತ ವ್ಯಾಕರಣವನ್ನು ಸರಳಿಕರಿಸಿ ಸಾಮಾನ್ಯ ಜನರಲ್ಲಿ ಜನಪ್ರಿಯಗೊಳಿಸಿದ್ದು.

ಗುಡಿ ಗುಂಡಾರಗಳನ್ನು ತೊರೆದು ನಡೆದರೆ?

ವಿಪರ್ಯಾಸವೆಂದರೆ  ದೇವರ ಕಲ್ಪನೆ ಇಲ್ಲದ ನಾಸ್ತಿಕ ಧರ್ಮಗಳಾದ ಬೌದ್ಧ ಮತ್ತು ಜೈನ ಧರ್ಮಗಳೇ  ಹಿಂದೂ ಧರ್ಮಕ್ಕೆ ಚಿತ್ರ ವಿಚಿತ್ರ ದೇವರ ವಿಗ್ರಹಗಳನ್ನು ಹಾಗೂ ಅವತಾರದ ಕಲ್ಪನೆಗಳನ್ನು ಕೊಟ್ಟಿರುವುದು! ಆದುದರಿಂದ ನಾವು ಮತ್ತೆ ಸ್ಥಾವರ ತೊರೆದು ಜಂಗಮದತ್ತ ಹೋಗಬೇಕಿದೆ, ಅಂದರೆ ಗುಡಿ ಗುಂಡಾರಗಳನ್ನು ತೊರೆದು ಭಾರತದ ಮೂಲನಿವಾಸಿಗಳ ಪ್ರಕೃತಿ ಪೂಜೆಯತ್ತ ನಡೆದರೆ ದೇಶಕ್ಕೆ ಒಳಿತಾಗಬಹುದೆನೋ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲಾ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ)

ಪ್ರವೀಣ್‌ ಎಸ್‌ ಶೆಟ್ಟಿ 
ತೆರೆಮರೆಯಲ್ಲಿ ಉಳಿದು ಸಾಹಿತ್ಯ ಕೃಷಿ ಮಾಡುತ್ತಿರುವ ಇವರು ಸಾಮಾಜಿಕ ಕಾರ್ಯಕರ್ತರೂ ಹೌದು.

Related Articles

ಇತ್ತೀಚಿನ ಸುದ್ದಿಗಳು