Tuesday, June 18, 2024

ಸತ್ಯ | ನ್ಯಾಯ |ಧರ್ಮ

ಪ್ರೇಮಿಗಳ ದಿನದಂದು ʼಕೌ ಹಗ್‌ ಡೇʼ ಘೋಷಿಸಿದ ಭಾರತ ಸರ್ಕಾರದ ಪಶು ಕಲ್ಯಾಣ ಮಂಡಳಿ

ಇದುವರೆಗೆ ಹಾದಿಬೀದಿಯಲ್ಲಿ ನಡೆಯುತ್ತಿದ್ದ ಪ್ರೇಮಿಗಳ ದಿನಾಚರಣೆಯ ವಿರುದ್ಧದ ಹೋರಾಟ ಪ್ರಸ್ತುತ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ಸರಕಾರವೇ ಆ ದಿನವನ್ನು ʼದನವನ್ನು ತಬ್ಬಿಕೊಳ್ಳುವ ದಿನʼವಾಗಿ ಘೋಷಣೆ ಹೊರಡಿಸಿದೆ.

ಹೌದು ಈ ಬಾರಿ ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ ಈ ಕುರಿತು ಸುತ್ತೋಲೆ ಹೊರಡಿಸಿದ್ದು ಫೆಬ್ರವರಿ ಹದಿನಾಲ್ಕನೇ ತಾರೀಖನ್ನು ʼಕೌ ಹಗ್‌ ಡೇʼ ಎಂದು ಘೋಷಿಸಿದೆ. ಈ ಕುರಿತು ಹೊರಡಿಸಲಾಗಿರುವ ಸುತ್ತೋಲೆಯಲ್ಲಿʼ

“ಗೋವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ನಮಗೆಲ್ಲರಿಗೂ ತಿಳಿದಿದೆ, ನಮ್ಮ ಬದುಕನ್ನು ಕಾಪಾಡುತ್ತದೆ ಮತ್ತು ಪಶು ಸಂಪತ್ತು ಮತ್ತು ಜೀವವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಮನುಕುಲಕ್ಕೆ ಸಕಲ ಸಂಪತ್ತನ್ನು ನೀಡುವ ತಾಯಿಯಂತಹ ಪೋಷಣೆಯ ಸ್ವಭಾವದಿಂದಾಗಿ ಇದನ್ನು “ಕಾಮಧೇನು” ಮತ್ತು “ಗೋಮಾತಾ” ಎಂದು ಕರೆಯಲಾಗುತ್ತದೆ.

ಕಾಲಾನಂತರದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಗತಿಯಿಂದಾಗಿ ವೈದಿಕ ಸಂಪ್ರದಾಯಗಳು ಬಹುತೇಕ ಅಳಿವಿನ ಅಂಚಿನಲ್ಲಿವೆ. ಪಾಶ್ಚಿಮಾತ್ಯ ನಾಗರಿಕತೆಯ ಬೆರಗು ನಮ್ಮ ಭೌತಿಕ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹುತೇಕ ಮರೆತುಹೋಗುವಂತೆ ಮಾಡಿದೆ.

ಹಸು ನೀಡುವ ಅಪಾರ ಪ್ರಯೋಜನದ ದೃಷ್ಟಿಯಿಂದ, ಹಸುವನ್ನು ಅಪ್ಪಿಕೊಳ್ಳುವುದರಿಂದ ಭಾವನಾತ್ಮಕ ಶ್ರೀಮಂತಿಕೆ ಹೆಚ್ಚುತ್ತದೆ ಮತ್ತು ಇದು ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು ಹೆಚ್ಚಿಸುತ್ತದೆ.

ಆದ್ದರಿಂದ, ಎಲ್ಲಾ ದನಗಳ ಪ್ರೇಮಿಗಳು ಫೆಬ್ರವರಿ 14 ತಾರೀಖನ್ನು ʼಕೌ ಹಗ್ ಡೇʼ ಎಂದು ಆಚರಿಸಬಹುದು ಮತ್ತು ಈ ಮೂಲಕ ಗೋಮಾತೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಜೀವನವನ್ನು ಸಂತೋಷ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಿಸಬಹುದು.

ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ಮತ್ತು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದ ಮೇರೆಗೆ ಈ ಪ್ರಕಟಣೆ ಹೊರಡಿಸಲಾಗಿದೆ.

ಪ್ರಸ್ತುತ ಆದೇಶದಲ್ಲಿ ವ್ಯಾಲೆಂಟೈನ್ಸ್‌ ಡೇ ಕುರಿತು ಯಾವುದೇ ಉಲ್ಲೇಖವಿಲ್ಲವಾದರೂ ಹದಿನಾಲ್ಕನೇ ತಾರೀಖಿನಂದೇ ಇಂತಹದ್ದೊಂದು ದಿನದ ಆಚರಣೆಗೆ ಕರೆಕೊಟ್ಟಿರುವುದನ್ನು ಗಮನಿಸಿದಾಗ ಇದ ಹಿಂದಿನ ಉದ್ದೇಶ ಎಂತಹವರಿಗೂ ತಿಳಿಯುತ್ತದೆ.

ಸಾಮಾಜಿಕ ಜಾಲಾತಾಣದಲ್ಲಿ ಈ ಸುತ್ತೋಲೆಯು ಮಧ್ಯಾಹ್ನದಿಂದ ಓಡಾಡುತ್ತಿದ್ದು. ನೆಟ್ಟಿಗರ ನಡುವೆ ನಗೆಯ ಅಲೆಯನ್ನೇ ಸೃಷ್ಟಿಸುತ್ತಿದೆ. ಜನರು ಈ ಕುರಿತು ವ್ಯಂಗ್ಯವಾದ ಒಕ್ಕಣೆ ಬರೆದು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ

ಆದೇಶದ ಈ-ಪ್ರತಿಯನ್ನು ಇಲ್ಲಿ ನೋಡಬಹುದು: https://www.awbi.in/awbi-pdf/Cow%20Hug%20Day.pdf

Related Articles

ಇತ್ತೀಚಿನ ಸುದ್ದಿಗಳು