Home Uncategorized ವಾಲ್ಮೀಕಿ ನಿಗಮದ ಹಗರಣ ಆರೋಪಿ ಮಾಜಿ ಸಚಿವ ನಾಗೇಂದ್ರ ನ್ಯಾಯಾಂಗ ಬಂಧನಕ್ಕೆ

ವಾಲ್ಮೀಕಿ ನಿಗಮದ ಹಗರಣ ಆರೋಪಿ ಮಾಜಿ ಸಚಿವ ನಾಗೇಂದ್ರ ನ್ಯಾಯಾಂಗ ಬಂಧನಕ್ಕೆ

0

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ₹95 ಕೋಟಿ ಮೊತ್ತವನ್ನು ಅಕ್ರಮವಾಗಿ ವರ್ಗಾವಣೆ ಪ್ರಕರಣದ ಆರೋಪಿಯಾಗಿ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕುರಿತಂತೆ ನಾಗೇಂದ್ರ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯಕ್ಕೆ (ಸಿಸಿಎಚ್-82) ಸೋಮವಾರ ಹಾಜರುಪಡಿಸಲಾಯಿತು. ನಾಗೇಂದ್ರ ಪರ ಹೈಕೋರ್ಟ್‌ನ ಹಿರಿಯ ವಕೀಲ ಎಂ.ಎಸ್.ಶ್ಯಾಮ್ ಸುಂದರ್‌ ವಾದ ಮಂಡಿಸಿದರು.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ಹಾಜರಾದ ಇ.ಡಿ ವಕೀಲ ಪಿ.ಪ್ರಸನ್ನ ಕುಮಾರ್ ಅವರು, ಪ್ರಕರಣದ ಮತ್ತೊಬ್ಬ ಆರೋಪಿಯಾದ ನ್ಯಾಯಾಂಗ ಬಂಧನದಲ್ಲಿರುವ ಹೈದರಾಬಾದ್‌ನ ಸತ್ಯನಾರಾಯಣ ವರ್ಮ ಅವರನ್ನು ಬಾಡಿ ವಾರಂಟ್ ಮುಖಾಂತರ ವಶಕ್ಕೆ ನೀಡುವಂತೆ ಕೋರಿದರು‌.

ಈ ಮನವಿಯನ್ನು ಮಾನ್ಯ ‌ಮಾಡಿದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಆರೋಪಿ ಸತ್ಯನಾರಾಯಣ ವರ್ಮ ಅವರನ್ನು ಮಂಗಳವಾರ (ಜು.23) ಕೋರ್ಟ್‌ಗೆ ಹಾಜರುಪಡಿಸುವಂತೆ ಆದೇಶಿಸಿದರು. ಅಂತೆಯೇ ನಾಗೇಂದ್ರ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.

You cannot copy content of this page

Exit mobile version