Thursday, July 11, 2024

ಸತ್ಯ | ನ್ಯಾಯ |ಧರ್ಮ

ವಾಲ್ಮಿಕಿ ನಿಗಮದ ಅಕ್ರಮl ಇಡಿ ದಾಳಿ ಅಗತ್ಯ ಇರಲಿಲ್ಲ: ಡಿಕೆಶಿ

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ತನಿಖಾ ಸಂಸ್ಥೆ ಎಸ್‌ಐಟಿ ತನಿಖೆ ನಡೆಸುತ್ತಿರುವಾಗ ಇಡಿ ದಾಳಿ ನಡೆಸಿರುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿಪ್ರಾಯ ಪಟ್ಟಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಶಿವಕುಮಾರ್ ಅವರು,ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸವರಾಜ ದದ್ದಲ್ ವಿರುದ್ಧ ಈಡಿಗೆ ಯಾರೂ ದೂರು ನೀಡಿಲ್ಲ. ಆದರೂ ದಾಳಿ ನಡೆದಿದೆ ಎಂದರು.

ಈ ದಾಳಿಯ ಅಗತ್ಯವೇ ಇರಲಿಲ್ಲ. ಅಲ್ಲದೆ, ಈಡಿಯವರು ಯಾವ ರೀತಿ ತನಿಖೆ ಮಾಡುತ್ತಿದ್ದಾರೆ, ಯಾವ ಪ್ರಕ್ರಿಯೆ ಮೇಲೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆಯೂ ಏನೂ ಗೊತ್ತಿಲ್ಲ. ಈ ಪ್ರಕರಣದಲ್ಲಿ ವಂಚನೆ ನಡೆದಿರುವುದು ಸತ್ಯ. ಈ ಪ್ರಕರಣದ ಸಾಕಷ್ಟು ವಿವರಗಳು ನಮ್ಮ ಬಳಿ ಇವೆ. ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿ, ತನಿಖೆ ನಡೆಸುತ್ತಿದೆ. ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣವನ್ನು ಈಗಾಗಲೇ ವಶಪಡಿಸಿಕೊಳ್ಳುತ್ತಿದ್ದೇವೆ. ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದ ಅವ್ಯವಹಾರವಾದರೆ ಸಿಬಿಐಗೆ ತನಿಖೆ ಮಾಡುವ ಅಧಿಕಾರವಿದೆ. ಈ ಎಲ್ಲಾ ತನಿಖೆ ಮುಕ್ತಾಯದ ನಂತರ ಈ ತನಿಖೆಗೆ ಸರಿಯಾಗಿ ನಡೆದಿದೆಯೇ ಎಂದು ಈಡಿ ಪರಾಮರ್ಶನ ನಡೆಸಿ ಆಮೇಲೆ ಪ್ರವೇಶ ಪಡೆಯಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.

“ಎಸ್ಐಟಿ ತನಿಖೆ ಮುಕ್ತವಾಗಿ ನಡೆಯುತ್ತಿದೆ. ತನಿಖೆಗೆ ಅಡಚಣೆಯಾಗಬಾರದು ಎಂಬ ಉದ್ದೇಶಕ್ಕೆ ನಾಗೇಂದ್ರ ಅವರು ಮಂತ್ರಿ ಸ್ಥಾನಕ್ಕೆ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ನಾವು ಕೂಡ ಕ್ರಾಸ್ ಚೆಕ್ ಮಾಡಿದ್ದೇವೆ. ಸಚಿವರು ಯಾವುದೇ ಸಹಿ ಮಾಡಿಲ್ಲ ಮತ್ತು ಅವರ ಹಸ್ತಕ್ಷೇಪವಿಲ್ಲ. ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಈ ಮಧ್ಯೆ ಈಡಿ ದಾಳಿ ಯಾಕೆ ಮಾಡಬೇಕಿತ್ತು ಎಂದು ಅವರು ಪ್ರಶ್ನಿಸಿದರು.

ಚುನಾವಣೆ ಕುರಿತು ಆತ್ಮಾವಲೋಕನ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿ ಎಡವಿದೆ ಎಂದು ಪರಾಮರ್ಶನೆ ನಡೆಸುತ್ತಿದ್ದೇವೆ. ಕಳೆದ ಸಲ 1 ಸ್ಥಾನ ಹೊಂದಿದ್ದವರು ಈಗ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ನಾವು 14-15 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎಲ್ಲಿ ಎಡವಿದ್ದೇವೆ ಎಂದು ಎಐಸಿಸಿಯ ಸಮಿತಿ ಸಮ್ಮುಖದಲ್ಲಿ ಇಂದು ಪರಾಮರ್ಶನೆ ನಡೆಯಲಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶದೆಲ್ಲೆಡೆ ಈ ಪ್ರಕ್ರಿಯೆ ಮಾಡಲಾಗುತ್ತಿದೆ. ನಾನು ಕೂಡ ನಾಲ್ಕು ವಿಭಾಗಗಳ ವರದಿ ಕಳುಹಿಸಿಕೊಡಲಿದ್ದೇನೆ ಎಂದರು.

Related Articles

ಇತ್ತೀಚಿನ ಸುದ್ದಿಗಳು