Monday, June 17, 2024

ಸತ್ಯ | ನ್ಯಾಯ |ಧರ್ಮ

ಅಡವಿಯ ಬುಡಕಟ್ಟು ಮಕ್ಕಳ ‘ವನ ಚೇತನಾʼ

ಮಕ್ಕಳ ಜೊತೆ ನಾವು  ಮಕ್ಕಳಾದಾಗ  ಮಕ್ಕಳ  ಆಂತರ್ಯವನ್ನು  ಅರಿಯ ಬಹುದು. ಮಕ್ಕಳೆದುರು  ನಾವು  ದೊಡ್ಡವರಾದರೆ ನಾವೇ  ದಡ್ಡರಾಗಿ  ಬಿಡಬಹುದು.

ಇದು ನಾನು  ಕಳೆದ 15 ವರುಷಗಳಿಂದ  ಮಕ್ಕಳ ಜೊತೆ ಇದ್ದು, ಅವರೊಡನೆ  ಬೆರೆತು ಪಡೆದುಕೊಂಡ  ಅನುಭವ. ಮಕ್ಕಳ  ಮನಸು  ಅತೀ  ಸೂಕ್ಷ್ಮ  ಮತ್ತು ಅವರ  ವಯೋಮಿತಿಗೆ ತಕ್ಕಂತೆ  ಅವರು  ಬಹಳಷ್ಟು  ಗ್ರಹಣ ಶಕ್ತಿ  ಪಡೆದು ಕೊಂಡಿರುತ್ತಾರೆ. ಆದರೆ  ಕೆಲವೊಮ್ಮೆ ಮಕ್ಕಳ ಭವಿಷ್ಯವನ್ನು  ಪೋಷಕರೇ  ಹಾಳು  ಬಿಡುವುದೂ  ಉಂಟು. ಪೋಷಕರು  ಮಕ್ಕಳ  ಮೇಲೆ ಬಹಳಷ್ಟು  ನಿರೀಕ್ಷೆಗಳನ್ನು  ಇಟ್ಟುಕೊಂಡಿರುತ್ತಾರೆ. ನಮ್ಮ  ಮಕ್ಕಳು  ಎಲ್ಲದರಲ್ಲೂ  ಮುಂದೆ ಇದ್ದು ಸಕಲ ಕಲಾ  ವಲ್ಲಭ  ಆಗಿ  ಬಿಡಬೇಕು  ಎಂದು. ಆದರೆ  ಮಕ್ಕಳಿಗೆ  ಅವರ ಇತಿ, ಮಿತಿಗಳ  ವ್ಯಾಪ್ತಿಯಲ್ಲಿ ಒಂದಷ್ಟು  ಅಥವಾ ಒಂದಿಷ್ಟು ಸಾಧನೆ  ಮಾಡಬಹುದು ಅಷ್ಟೆ.

ಒಂದು ಬಾಳೆ  ಗಿಡದ  ಗೊನೆ 5 ಕೆಜಿ, 8 ಕೆಜಿ ಹೆಚ್ಚೆಂದರೆ  10 ಕೆಜಿ ಇರಬಹುದು…25 ಕೆಜಿ ಯಷ್ಟು ಗೊನೆ ಭಾರವಾದರೆ  ಬಾಳೆ ಗಿಡವೇ  ಮುರಿದು ಬಿದ್ದೀತು. ಅದೇ ರೀತಿ  ಇಂದು ( ಟಿವಿ ಯ  ರಿಯಾಲಿಟಿ ಶೋ ಗಳಿಂದ  ) ಮಕ್ಕಳ  ಮೇಲೆ ಒತ್ತಡ  ಜಾಸ್ತಿ ಆಗುತ್ತಿದ್ದು ಹೊರಲಾಗದ  ಹೊರೆಯನ್ನು ಹೊತ್ತು ಅಗೋಚರವಾಗಿ  ಮಾನಸಿಕ ಒತ್ತಡದ  ಚೌಕಟ್ಟಿನ ಒಳಗೆ  ಅವರು ಸಿಲುಕಿ ಕೊಂಡಿರುತ್ತಾರೆ. ಮಕ್ಕಳನ್ನು  ಕಲಿಕೆಯ ವಿಚಾರ  ಮತ್ತು ಪ್ರತಿಭೆಗಳ  ವಿಕಸನದಲ್ಲಿ ಅವರ  ಪಾಡಿಗೆ  ಅವರನ್ನು  ಬಿಟ್ಟು ಬಿಡಿ. ಅವರ  ಆಸಕ್ತಿ  ಮತ್ತು ಕಂಡು  ಕೊಂಡದ್ದನ್ನು ಅವರೇ  ಅರಿತು ಕೊಳ್ಳುತ್ತಾರೆ. ಇಂದು ಟಿವಿ, ಮೊಬೈಲ್ ಸಂಪರ್ಕದಿಂದ  ಮಕ್ಕಳು  ತುಂಬಾ ಬುದ್ಧಿವಂತರಾಗಿದ್ದಾರೆ. ಹಾಗಂತ  ಟಿವಿ, ಮೊಬೈಲ್ ನ್ನು ಅವರ  ಇಷ್ಟಕ್ಕೆ ಸಲೀಸಾಗಿ  ನೀಡಿ  ಬಿಟ್ಟರೂ  ದುಷ್ಪರಿಣಾಮ  ಬೀರುವ  ಸಾಧ್ಯತೆಗಳಿವೆ.

ಕಳೆದ  25 ವರುಷಗಳಿಂದ  ಪಶ್ಚಿಮ ಘಟ್ಟದ  ಕಾಡು  ಸುತ್ತುವ, ಬೆಟ್ಟ ಹತ್ತುವ  ಚಾರಣ  ಎಂಬ  ನನ್ನ  ಹವ್ಯಾಸದಿಂದ ಪಶ್ಚಿಮ ಘಟ್ಟ  ಸಂರಕ್ಷಣೆಯ ಜೊತೆಗೆ ಅಡವಿಯ  ನಡುವಿನ  ಬುಡಕಟ್ಟು  ಮಕ್ಕಳ ಜೊತೆ ಬೆರೆತ  ಕಾರಣ ಅವರ  ಪ್ರತಿಭೆ, ಆಸಕ್ತಿ,   ಶ್ರದ್ಧೆ ಬದ್ಧತೆಗಳನ್ನು  ಕಂಡು  ಎಲ್ಲೋ ಒಂದು ಕಡೆ  ಅವರ  ವಿದ್ಯೆಗೆ ಅಡಚಣೆ  ಆಗುವುದು, ಆರ್ಥಿಕ  ಸಮಸ್ಯೆ, ಶಾಲೆಗಳ ಸಮಸ್ಯೆಗಳನ್ನು  ಕಂಡು ‘ವನ ಚೇತನಾ (ಅಡವಿ ಮಕ್ಕಳ ವಿದ್ಯಾ ವಿಕಸನ ) ಎಂಬ  ಕಾರ್ಯಕ್ರಮವನ್ನು ಅಡವಿಯ  ಬುಡಕಟ್ಟು ಶಾಲೆಗಳಲ್ಲಿ  ಮಾಡುತ್ತಿದ್ದೇವೆ.  ವನ ಚೇತನಾ  ಅಂದರೆ  ಅಡವಿ  ಮಕ್ಕಳ  ಪ್ರತಿಭೆಗಳನ್ನು  ಗುರುತಿಸುವುದು, ಶಿಕ್ಷಣಕ್ಕೆ  ಸಂಬಂಧ ಪಟ್ಟ ವಿಚಾರಗಳನ್ನು ಆಟಗಳ  ಮೂಲಕ ಪಾಠವಾಗುವ  ರೀತಿಯಲ್ಲಿ  ತಿಳಿಸುವುದು, ನೃತ್ಯ, ಹಾಡು, ಅಕ್ಷರ  ವಿನ್ಯಾಸವನ್ನು  ಸುಂದರ ಗೊಳಿಸುವುದು, ಚಿತ್ರಕಲೆ, ಕ್ರಾಫ್ಟ್‌ ತರಬೇತಿ, ಕಾಡಿನ ಒಳಗೆ  ಕರೆದುಕೊಂಡು ಹೋಗಿ ಪರಿಸರ  ಜ್ಞಾನ  ಮೂಡಿಸುವುದು, ಆಮೇಲೆ ಆ  ಶಾಲೆಯಲ್ಲಿ  ಶಿಕ್ಷಣಕ್ಕೆ  ಅಗತ್ಯ  ಬೇಕಾದ ಸಲಕರಣೆ, ಸವಲತ್ತುಗಳ  ಬಗ್ಗೆ ಶಿಕ್ಷಕರಲ್ಲಿ ಮನವಿ  ಪತ್ರವನ್ನು  ಸ್ವೀಕರಿಸಿ ಅದನ್ನು ಕಾರ್ಪೋರೆಟ್ ಸಂಸ್ಥೆಗಳಲ್ಲಿ  ಕೇಳಿಕೊಂಡು ಶಾಲೆಗಳ  ಬೆಳವಣಿಗೆಗೆ ಸಹಕಾರ  ನೀಡುವುದು ವನ  ಚೇತನಾದ  ಮೂಲ ಉದ್ದೇಶ. ಅಡವಿ  ಮಕ್ಕಳು  ಕಾಡಿನ  ಮತ್ತು ವನ್ಯಜೀವಿಗಳ  ಬಗ್ಗೆ ಹುಟ್ಟಿನಿಂದಲೇ ಅರಿತಿರುವ  ಕಾರಣ  ಅವರಿಗೆ   ಪ್ರಕೃತಿಯ ಮಹತ್ವ  ಮತ್ತು ಅಗತ್ಯಗಳ  ಬಗ್ಗೆ ಮಾಹಿತಿ  ನೀಡುವುದು,  ಮುಂದೆ ಅವರು ಅರಣ್ಯವನ್ನು  ಸಂರಕ್ಷಿಸುವಂತೆ  ಪ್ರೇರಣೆ ನೀಡುವುದು, ಅರಣ್ಯ ಇಲಾಖೆಯ  ಹುದ್ದೆಗಳಲ್ಲಿ  ವೃತ್ತಿ ಸಾಗಿಸುವುದು…ಹೀಗೇ  ಹಲವಾರು  ಚಿಂತನೆಗಳ  ಮೂಟೆಯೇ  ವನ  ಚೇತನಾ.

ಎಲ್ಲಾಪುರ, ಜೋಯಿಡಾ, ಅಂಕೋಲಾ ಮುಂತಾದ  ಅಡವಿಗಳಲ್ಲಿ  ವಾಸಿಸುವ  ಸಿದ್ದಿ ಗೌಳಿ, ಹಾಲಕ್ಕಿ, ಕುಡುಬಿ ಬುಡಕಟ್ಟು  ಸಮುದಾಯದ  ಶಾಲೆಗಳಲ್ಲಿ ಈ  ವನ  ಚೇತನಾ  ಕಾರ್ಯಕ್ರಮ  ನಿರಂತರವಾಗಿ  ನಡೆಯುತ್ತಿದೆ. ಅಡವಿ  ಮಕ್ಕಳ  ಶಾಲೆ  ಅಷ್ಟೊಂದು ಸುಧಾರಣೆ ಆಗಿರದಿದ್ದರೂ  ಅಲ್ಲಿನ ಮಕ್ಕಳ ವಿದ್ಯೆಯ  ಆಸಕ್ತಿ, ಪ್ರತಿಭೆಗಳು ಬಹಳಷ್ಟಿರುತ್ತವೆ. ಶಾಲೆಯಲ್ಲಿ  ಸರಿಯಾದ  ಪೀಠೋಪಕರಣಗಳು ಇಲ್ಲದೇ ಇಂದಿಗೂ  ನೆಲದಲ್ಲೇ  ಕುಳಿತು ಓದಬೇಕಾದ ಶಾಲೆಗಳಿವೆ. ವನ  ಚೇತನಾ  ಸುಮಾರು 56 ಶಾಲೆಗಳಿಗೆ  ಪೀಠೋಪಕರಣಗಳನ್ನು, ಸುಮಾರು  36 ಶಾಲೆಗಳಿಗೆ  ಕಂಪ್ಯೂಟರ್ ಗಳನ್ನು  ನೀಡಿದೆ. ಇದರ  ಜೊತೆಗೆ 157 ಶಾಲೆಗಳಲ್ಲಿ  ವನ  ಚೇತನಾ  ಶಿಬಿರವನ್ನು  ಮಾಡಿದ್ದು ಬಹುತೇಕ  ಶಾಲೆಗಳಿಗೆ  ಶಿಕ್ಷಣ  ಸವಲತ್ತು, ಪರಿಕರಗಳನ್ನು  ನೀಡುತ್ತಾ  ಬಂದಿರುತ್ತದೆ. ಗಣಿತದ  ಸುಲಭ  ಕಲಿಕೆ, ಸ್ಮರಣ  ಜ್ಞಾನ, ರಾಜ್ಯದ ಜಿಲ್ಲೆಗಳ  ಬಗ್ಗೆ ತಿಳಿದುಕೊಳ್ಳಲು ಆಟದ  ಮೂಲಕ  ಪಾಠಗಳು, ವನ್ಯ ಜೀವಿಗಳ  ಬಗ್ಗೆ ಆಟದ ಮೂಲಕ  ಮಹತ್ವ ಗಳನ್ನು  ತಿಳಿಸುವುದು ಇತ್ಯಾದಿ.

ಮಕ್ಕಳು  ಶಾಲೆಗೆ  ಬರುವಾಗ  ವನ್ಯ ಜೀವಿಗಳ  ಮುಖಾಮುಖಿ, ಆನೆ, ಚಿರತೆ, ಕಾಡುಕೋಣ, ಕಡವೆ, ಜಿಂಕೆಗಳನ್ನು   ನೋಡಿಕೊಂಡು ಬರುವುದು, ಹುಲಿ ಶಾಲಾ  ಜಗುಲಿಯಲ್ಲಿ  ಬಂದು  ಮಲಗುವುದು, ಡೆಸ್ಕ್ ನ  ಒಳಗೆ  ಹೆಬ್ಬಾವು ಮಲಗಿರುವುದು..ಇಂತಹ ರೋಚಕ  ಅನುಭವಗಳನ್ನು  ಮಕ್ಕಳಿಂದ  ಕೇಳಿಸಿ ಕೊಳ್ಳುವುದೇ ಒಂದು ವಿಶಿಷ್ಟ  ಅನುಭವ.

ಅಮೇರಿಕಾದ  ವಾಸುದೇವ  ಐತಾಳರು  ವನ  ಚೇತನಾದ  ಮೂಲ  ಪ್ರಾಯೋಜಕರು. ಮಂಗಳೂರಿನ  MCF ಬೆಂಗಳೂರಿನ  HAL, ಬೆಂಗಳೂರಿನ  ಸಾಫ್ರಾನ್ ಟೆಕ್ನಾಲಜಿ  ಹಾಗೂ  ನಮ್ಮ  ಸಮಾನ  ಮನಸ್ಕ ಚಾರಣಿಗರು, ಪರಿಸರ  ಮಿತ್ರರು ವನ  ಚೇತನಾ  ಈ  ಹಂತಕ್ಕೆ  ಬೆಳೆಯಲು  ಕಾರಣವಾಗಿರುತ್ತದೆ.

ಮಕ್ಕಳ ದಿನಾಚರಣೆಯ ಈ ಹೊತ್ತು ಅಡವಿಯ ಬುಡಕಟ್ಟು ಮಕ್ಕಳ  ವಿದ್ಯಾ ವಿಕಸನಕ್ಕೆ ಸಹಕರಿಸುತ್ತಿರುವ ಎಲ್ಲರನ್ನೂ ಪ್ರೀತಿಯಿಂದ ನೆನೆಯುತ್ತೇನೆ.

ದಿನೇಶ್ ಹೊಳ್ಳ.

ಪರಿಸರ ಪ್ರೇಮಿ, ಚಾರಣಿಗ, ಕಲಾವಿದ.

Related Articles

ಇತ್ತೀಚಿನ ಸುದ್ದಿಗಳು