“ಧಾರ್ಮಿಕ ಅಥವಾ ನಂಬಿಕೆಯ ಆಧಾರದ ಮೇಲೆ ‘ವಂದೇ ಮಾತರಂ’ ಗೀತೆಯನ್ನು ಹಾಡಲು ನಿರಾಕರಿಸುವ ವ್ಯಕ್ತಿಯ ವಿರುದ್ಧ ಯಾವುದೇ ಕ್ರಿಮಿನಲ್ ಅಥವಾ ಅಪರಾಧ ಕ್ರಮಗಳನ್ನು ಜರುಗಿಸಲಾಗುವುದಿಲ್ಲ” ಎಂದು ಸುಪ್ರೀಂಕೋರ್ಟ್ ಹೇಳಿದೆ” ಚಿಂತಕರಾದ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ
ಇಡೀ ದೇಶ ಸಂಕಷ್ಟದಲ್ಲಿರುವಾಗ, ಪ್ರಧಾನಿ ಮೋದಿ ಜನಪ್ರೀಯತೆ ಕಳೆಗುಂದಿದಾಗ, ಬೆಲೆ ಏರಿಕೆ ಜನರನ್ನು ಹೈರಾಣು ಮಾಡಿದಾಗ, ನಿರುದ್ಯೋಗ ಸಮಸ್ಯೆ ಬಿಗಡಾಯಿಸಿರುವಾಗ, ಜೆನ್ ಜೀ ಯುವಕರು ಪ್ರಭುತ್ವದ ವಿರುದ್ದ ತಿರುಗಿ ಬಿದ್ದಿರುವಾಗ ಆರೆಸ್ಸೆಸ್ ಬೆಚ್ಚಿಬಿದ್ದಿತು, ಮೋದಿ ಶಾ ಜೋಡಿಗೆ ಚಿಂತೆ ಶುರುವಾಯ್ತು. ಆಗ ದೇಶದ ಜನರ ಗಮನವನ್ನು ಭಾವನಾತ್ಮಕವಾಗಿ ಬೇರೆ ಕಡೆ ಸಳೆಯಲು, ಅಂಧಭಕ್ತರಲ್ಲಿ ದೇಶಭಕ್ತಿಯ ಅಮಲೇರಿಸಲು ಹೂಡಲಾದ ತಂತ್ರವೇ “ವಂದೇ ಮಾತರಂ”.
ಎರಡು ಚರಣಗಳಿಗೆ ಸೀಮಿತವಾಗಿದ್ದ ಈ ಗೀತೆಯ ಆರೂ ಚರಣಗಳನ್ನು ಜನಗಣಮನ ರಾಷ್ಟ್ರಗೀತೆಗಿಂತಲೂ ಮೊದಲು ಕಡ್ಡಾಯವಾಗಿ ಹಾಡಲೇ ಬೇಕು, ದೇಶವಾಸಿಗಳೆಲ್ಲರೂ ಎದ್ದು ನಿಂತು ಗೌರವ ಸಲ್ಲಿಸಲೇಬೇಕು ಎಂದು ಬಿಜೆಪಿಗರು ಸಂಸತ್ತಿನಲ್ಲಿ ಚರ್ಚೆ ಇಲ್ಲದೇ ಕಾನೂನು ಜಾರಿಗೆ ತಂದರು. ಪೂರ್ತಿ ವಂದೇ ಮಾತರಂ ಹಾಡದೇ ಇರುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಲಾಯ್ತು.
ಬಹುತ್ವದ ದೇಶದಲ್ಲಿ ಹಿಂದುತ್ವ ಜಾರಿ ಮಾಡುವ ತನ್ನ ಉದ್ದೇಶದ ಭಾಗವಾಗಿ ಆರೆಸ್ಸೆಸಿಗರು ವಂದೇ ಮಾತರಂ ವೈಭವೀಕರಿಸ ತೊಡಗಿದರು. ವಂದೇ ಮಾತರಂ ಹಾಡದೇ ಇರುವವರಿಗೆ ದೇಶದ್ರೋಹಿ ಪಟ್ಟ ಕಟ್ಟಲು ಸಂಘ ಪರಿವಾರ ಕಾರ್ಯಪ್ರವೃತ್ತವಾಯ್ತು. ಗೋದಿ ಮೀಡಿಯಾಗಳು ವಂದೇ ಮಾತರಂ ಎಂಬುದು ದೇಶಭಕ್ತಿಯ ಪ್ರತೀಕ ಎಂದು ಶಂಖ ಊದತೊಡಗಿದವು.
ಸೆಕ್ಯೂಲರ್ ಸಂವಿಧಾನ ವಾದಿಗಳು ಈ ಹೇರಿಕೆಯನ್ಜು ವಿರೋಧಿಸಿದರು. ವಿರೋಧ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿದವು. ಕೇರಳ ರಾಜ್ಯ ಕೇಂದ್ರದ ಈ ದಬ್ಬಾಳಿಕೆಯನ್ನು ನಿರಾಕರಿಸಿತು. ಕರ್ನಾಟಕವೂ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಮಾನ್ಯ ಮಾಡಿತು. ಕೇಂದ್ರ ಸರಕಾರ ಸಂವಿಧಾನ ವಿರೋಧಿ ಧೋರಣೆ ತಳೆದಾಗಲೆಲ್ಲಾ ಸುಪ್ರೀಂ ಕೋರ್ಟ್ ನತ್ತ ಪ್ರಜ್ಞಾವಂತರ ಚಿತ್ತ ಹರಿಯುತ್ತದೆ.
ಕೊನೆಗೂ ಕೇಂದ್ರ ಸರಕಾರ, ಬಿಜೆಪಿ, ಅರೆಸ್ಸೆಸ್ ಸಮೇತ ಅಂಧಭಕ್ತರ ಕೆನ್ನೆಗೆ ಬಾರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದಿದೆ. “ವಂದೇ ಮಾತರಂ’ ಹಾಡದಿದ್ದರೆ ಅಪರಾಧವಲ್ಲ, ಶಿಕ್ಷೆಯೂ ಇಲ್ಲ” ಎಂದು 2026, ಸೆಪ್ಟಂಬರ್ 22 ರಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. “ಧಾರ್ಮಿಕ ಅಥವಾ ನಂಬಿಕೆಯ ಆಧಾರದ ಮೇಲೆ ‘ವಂದೇ ಮಾತರಂ’ ಗೀತೆಯನ್ನು ಹಾಡಲು ನಿರಾಕರಿಸುವ ವ್ಯಕ್ತಿಯ ವಿರುದ್ಧ ಯಾವುದೇ ಕ್ರಿಮಿನಲ್ ಅಥವಾ ಅಪರಾಧ ಕ್ರಮಗಳನ್ನು ಜರುಗಿಸಲಾಗುವುದಿಲ್ಲ” ಎಂದ ಉನ್ನತ ನ್ಯಾಯಾಲಯ ಸಂವಿಧಾನದ ಆಶಯವನ್ನು ಎತ್ತಿ ಹಿಡಿದಿದೆ.
ಸಂಸತ್ತಿನಲ್ಲಿ ಬಹುಮತ ಇದೆ ಎಂದು ಏನು ಬೇಕಾದರೂ ಮಾಡಬಹುದು, ಎಂತಹ ಕಾಯಿದೆ ಬೇಕಾದರೂ ಜಾರಿಗೆ ತರಬಹುದು ಎನ್ನುವ ದುರಹಂಕಾರದಲ್ಲಿರುವ ಮೋದಿ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ಎಚ್ಚರಿಕೆಯ ಗಂಟೆಯಾಗಿದೆ. ಕೇಂದ್ರದಲ್ಲಿ ಯಾವುದೇ ಸರಕಾರ ಆಡಳಿತದಲ್ಲಿರಲಿ “ಸಂವಿಧಾನದ ಸ್ಟ್ರಕ್ಚರ್ ಬದಲಾಯಿಸುವಂತಿಲ್ಲ”. ಸಂವಿಧಾನವನ್ನೇ ಬದಲಾಯಿಸುವ ಹಿಡನ್ ಅಜೆಂಡಾ ಹೊಂದಿರುವ ಕೇಂದ್ರ ಸರಕಾರದ ಪ್ರಯತ್ನದ ಭಾಗವಾದ ವಂದೇ ಮಾತರಂ ಪ್ಲಾನ್ ಪ್ಲಾಪ್ ಆಗಿದೆ. ದೇಶಭಕ್ತಿಯ ಹೆಸರಲ್ಲಿ ಜನರನ್ನು ಭಾವನಾತ್ಮಕವಾಗಿ ಮರಳು ಮಾಡುವ ಆರೆಸ್ಸೆಸ್ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ” ಧಾರ್ಮಿಕ ಕಾರಣಗಳಿಂದ ವಿರೋಧಿಸುವವರ ವಿರುದ್ಧ ದಂಡನಾತ್ಮಕ ಕ್ರಮ ತೆಗೆದುಕೊಳ್ಳಬಾರದು ಮತ್ತು ವ್ಯಕ್ತಿ ಒಂದು ಅಥವಾ ಹೆಚ್ಚು ಚರಣಗಳನ್ನು ಹಾಡಬೇಕೇ ಎಂಬುದನ್ನು ತಾನೇ ನಿರ್ಧರಿಸಬೇಕು” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದೆ. “ಜನರಿಗೆ ಹಾಡುವ ಸ್ವಾತಂತ್ರ್ಯ ಇದೆ, ಹಾಡದೇ ಇರುವ ಸ್ವಾತಂತ್ರ್ಯವೂ ಇದೆ. ದೇಶಭಕ್ತಿಯನ್ನು ಬಲವಂತದಿಂದ ಹೇರಲಾಗುವುದಿಲ್ಲ. ಭವಿಷ್ಯದಲ್ಲಿ ಯಾವುದೇ ದಂಡನಾತ್ಮಕ ಕ್ರಮ ಅಥವಾ ಕಡ್ಡಾಯ ಮಾಡಿದರೆ ಮತ್ತೆ ನ್ಯಾಯಾಲಯಕ್ಕೆ ಬರಬಹುದು. ರಾಷ್ಟ್ರಗೀತೆಯಂತೆ ವಂದೇ ಮಾತರಂಗೆ ಕಡ್ಡಾಯ ಹಾಡುವ ನಿಯಮವಿಲ್ಲ” ಎನ್ನುವ ಚಾರಿತ್ರಿಕ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತೆಗೆದುಕೊಂಡಿದೆ.
ಮೋದಿ ಸರಕಾರ ತನ್ನ ವೈಪಲ್ಯಗಳನ್ನು ಮುಚ್ಚಿಕೊಳ್ಳಲು, ಜನಾಕ್ರೋಶವನ್ನು ಕಡಿಮೆ ಮಾಡಲು, ಜನರ ಗಮನವನ್ನು ದೇಶಪ್ರೇಮದತ್ತ ಸೆಳೆಯಲು ತಂದಿದ್ದ “ವಂದೇ ಮಾತರಂ” ಎನ್ನುವ ಭಾವನಾತ್ಮಕ ಅಸ್ತ್ರ ವಿಫಲವಾಗಿದೆ. ಬಹುತ್ವ ಭಾರತದ ಸಂವಿಧಾನಕ್ಕೆ ಗೆಲುವಾಗಿದೆ.
