Friday, June 14, 2024

ಸತ್ಯ | ನ್ಯಾಯ |ಧರ್ಮ

ವಯಸ್ಸಿನ ತಾರತಮ್ಯ; ಸಾಮಾಜಿಕ ನ್ಯಾಯ!

ಯುವ ಜನರೆಂದರೆ ನಾಳೆಯ ಭವಿಷ್ಯ ಎಂದು ನಮ್ಮ ದೇಶದಲ್ಲಿ ಹೇಳುತ್ತಾ ಅವರ ಯೌವ್ವನವನ್ನೇ ಮಸುಕುಗೊಳಿಸಿ ಬಿಡುತ್ತಾರೆ. ಯುವಜನರು ನಾಳೆಯ ಭವಿಷ್ಯ ಹೌದೋ ಅಲ್ಲವೋ ಗೊತ್ತಿಲ್ಲ ಆದರೆ ಅವರು ಇಂದಿನ ಆಸ್ತಿ‌ ಅನ್ನೋದನ್ನು ಎಲ್ಲರೂ ಒಪ್ಪಿ ಅವರನ್ನು ನಿರ್ಣಾಯಕ ಜಾಗಕ್ಕೆ ಹೋಗಲು ಅವಕಾಶ ಮಾಡಿಕೊಡಬೇಕು. ಆದರೆ ಇದು ಆಗುತ್ತಿಲ್ಲ.


ಭಾರತದಲ್ಲಿ 15ರಿಂದ 29 ವಯಸ್ಸಿನೊಳಗಿನವರನ್ನು ಯುವಜನರು ಎನ್ನುತ್ತಾರೆ. ದೇಶದ ಒಟ್ಟು ಜನ ಸಂಖ್ಯೆಯ 27.3ರಷ್ಟು ಅಂದರೆ ಸುಮಾರು 37.14ಕೋಟಿ ಯುವಜನರಿದ್ದಾರೆ. 35 ವಯಸ್ಸಿನ ಒಳಗೆ ಶೇಕಡಾ 65ರಷ್ಟು ಜನರಿದ್ದಾರೆ.


ಬರೀ ಯುವಕರು ಎಂದು ಕರೆಯುವುದು ಲಿಂಗ ತಾರತಮ್ಯ ಆಗುತ್ತದೆ. ಹೀಗಾಗಿ ಯುವಕ ಮತ್ತು ಯುವತಿಯರಿಬ್ಬರನ್ನು ಉದ್ದೇಶಿಸಿ ಮಾತಾಡುವಾಗ “ಯುವಜನರೆಂದು” ಕರೆಯುವುದು ಸೂಕ್ತ.


ಸಮಾಜಶಾಸ್ತ್ರಜ್ಞರಾದ ಶಿವ ವಿಶ್ವನಾಥನ್, ನಮ್ಮ ದೇಶದಲ್ಲಿ ಯುವಜನರು ಬಹಳ ಅಸ್ಪಷ್ಟ ವರ್ಗಕ್ಕೆ ಸೇರುತ್ತಾರೆ. ಇದು ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಒಂದು ಹಂತವಾಗಿದೆ. ಆದರೆ ಕುತೂಹಲಕಾರಿಯಾಗಿ, ಯುವಜನರು ಈ ಎರಡೂ ವರ್ಗಗಳನ್ನು ಅತಿಕ್ರಮಿಸುತ್ತಾರೆ ಮತ್ತು ಆದ್ದರಿಂದ ಅದರ ವರ್ಗೀಕರಣವು ಮಸುಕಾಗಿದೆ ಎನ್ನುತ್ತಾರೆ.

ಭಾರತದ ದೇಶದಲ್ಲಿ, ವಯಸ್ಸಿನಲ್ಲಿನ ಹಿರಿಯರಿಗೆ ಹೆಚ್ಚು ಗೌರವ ಮತ್ತು ಪೂಜನೀಯ ಸ್ಥಾನಮಾನವನ್ನು ಭಾರತ ಪರಂಪರೆಯಲ್ಲಿ ನೀಡಲಾಗಿದೆ. ಇದು ಒಂದು ಹಂತದಲ್ಲಿ ಸರಿ ಇದ್ದಿರಬಹುದು. ಆದರೆ ಬದಲಾದ ಕಾಲದಲ್ಲಿ ಮತ್ತು ಮನುಷ್ಯನಿಗೆ ತಿಳುವಳಿಕೆ ಮಟ್ಟ ಹೆಚ್ಚಾದಂತೆ, ವಯಸ್ಸಿನ ಆಧಾರದ ಮೇಲೆ ಯಾವುದನ್ನೂ ಅಳೆಯಲು ಸಾಧ್ಯವಿಲ್ಲ.

ಮೊದಲು ವಯಸ್ಸಿನ ಅನುಭದ ಆಧಾರದ ಮೇಲೆ ಮನುಷ್ಯನ ದೊಡ್ಡತನ ಮತ್ತು ಸಂಪನ್ನ ವ್ಯಕ್ತಿತ್ವ ರೂಡಿಸಿಕೊಳ್ಳುತ್ತಾನೆಂಬ ನಂಬಿಕೆ ಇತ್ತು. ಕಾಲದ ಬದಲಾವಣೆ ಇದನ್ನು ಸುಳ್ಳು ಮಾಡುತ್ತಿದೆ. ವೇಗದ ಇಂಟರ್ ನೆಟ್ ಮುಕ್ತವಾದ ಕಲಿಕೆಗೆ ಎಲ್ಲ ವಯಸ್ಸಿನ ಜನರಿಗೆ ಇಂದು ಸಿಗುತ್ತಿದೆ. ಇಲ್ಲಿ ಅನೇಕ ಅನುಭವಗಳು ಹೊಂದಿದ ಜನರ ಅನುಭವನ್ನು ಅನುಭವಿಸಿದಂತೆ ಕಲಿಯಲು ಅವಕಾಶ ಕೂಡ ಇದೆ. ವ್ಯಕ್ತಿತ್ವ ನಿರ್ಮಾಣಕ್ಕೆ ವಯಸ್ಸು ಅವಶ್ಯವೇ ಅಲ್ಲ. ಅದಕ್ಕೆ ಮುಕ್ತವಾದ ಕಲಿಕೆಯ ವಾತಾವರಣ ಇದ್ದರೆ ಸಾಕು.

ಮನೆಯಲ್ಲಿನ ಕಿರಿಯರ ಸಲಹೆ ಸೂಚನೆಗಳಿಗೆ ಬೆಲೆಯೇ ಇರುವುದಿಲ್ಲ. ಅವನು/ಳು ಏನು ಓದಬೇಕು, ಏನು ಆಟ ಆಡಬೇಕು, ಏನು ತಿನ್ನಬೇಕು, ತೊಡಬೇಕು ಅನ್ನೋದನ್ನು ಬಹುತೇಕ ಮನೆಯಲ್ಲಿ, ಅವರಿಗೇನು ಗೊತ್ತಾಗುತ್ತೆ ಬಿಡಿ ಅಂತ ತಾವೇ ನಿರ್ಧಾರ ಮಾಡಿ ಬಿಡುತ್ತಾರೆ. ಕೆಲವೊಮ್ಮೆ ಕೆಲವು ಜಾತಿಯವರು ಮೇಲ್ಜಾತಿ ವ್ಯಕ್ತಿಯ ಹೆಸರಿಟ್ಟು ಕರೆದರೆ ಅದು ಮಹಾಪರಾಧ ಎಂದು ಒಪ್ಪಿದ ಮನುವಾದದ ಮನಸ್ಥಿಯ ತರಹ, ಪಿತೃಪ್ರಭುತ್ವದ ಮನಸ್ಥಿತಿ ವಯಸ್ಸಲ್ಲಿ ಚಿಕ್ಕವರು, ದೊಡ್ಡವರನ್ನು ಹೆಸರಿಟ್ಟು ಕರೆಯುವಂತಿಲ್ಲ. ಕರೆದರೆ ಘೋರ ಅಪರಾಧ ಎಂದು ಬಿಂಬಿಸುವ ಉದಾಹರಣೆಗಳು ಪ್ರತಿದಿನ ಕಾಣುತ್ತೇವೆ. ಯಾರೇ ಯಾರಿಗಾದರೂ ಗೌರವ ಪೂರ್ವಕವಾಗಿ ಹೆಸರಿಟ್ಟು ಕರೆಯುವುದು ಕೂಡ ಸಮಾನತೆಯ ಒಂದು ಭಾಗ.


ಇನ್ನೂ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ವಯಸ್ಸಿನ ಅಂತರ ತುಂಬಾ ಹೆಚ್ಚಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಬೆರಳೆಣಿಕೆಯಷ್ಟು ಯುವ ಜನರಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಿವೆ. ಅದರಲ್ಲಿ ಉಳ್ಳವರ ಕುಟುಂಬದ ಮಕ್ಕಳಿಗೆ ಅನ್ನಬಹುದು.


ಇಲ್ಲಿ ನನ್ನದೇ ಅನುಭವ ತಾಜಾ ಉದಾಹರಣೆ.

ನನ್ನ ವಯಸ್ಸು 27 ಇದ್ದಾಗ ನಾನು ಯಾವುದೇ ರಾಜಕೀಯ ಮತ್ತು ಸಾಮಾಜಿಕ, ಆರ್ಥಿಕ ಹಿನ್ನೆಲೆ ಇಲ್ಲದೆ ಇದ್ದಾಗಲೂ ಒಂದು ರಾಷ್ಟ್ರೀಯ ಪಕ್ಷದಿಂದ ಯಾರಿಗೂ,ಯಾವುದೇ ಬಕೆಟ್ ಹಿಡಿಯದೇ,ನನ್ನ ಕೆಲಸದ ಅಧಾರದ ಮೇಲೆಯೇ B ಫಾರಂ ಪಡೆದು ಕಳೆದ 2023ರ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಈ ಪ್ರೋಸೆಸ್ ಅಲ್ಲಿ ಸಂಪೂರ್ಣ ಮೆರಿಟ್ ಆಧಾರದ ಮೇಲೆ ನನಗೆ ಟಿಕೇಟ್ ಸಿಕ್ಕಿತ್ತು. ಯಾರನ್ನೂ ಬೇಡಿರಲಿಲ್ಲ.


ಈ ಸಂಧರ್ಭದಲ್ಲಿ ನನಗೆ ಅನೇಕ ಕಾರ್ಯಕ್ರಮಗಳಲ್ಲಿ ಆಹ್ವಾನ ಬರೋದು. ಕೆಲ ಕಾರ್ಯಕ್ರಮಗಳ ಸಂಯೋಜಕರು ಹಣ ಕೇಳೋರು ನನ್ನ ಹತ್ತಿರ ಇಲ್ಲ, ನನ್ನ ಉದ್ದೇಶ ಸಾಮಾಜಿಕ ಕಳಕಳಿ, ಹೀಗಿದೆ ಅಂದಾಗ ಮತ್ತೆ ಕರೆ ಬರುತ್ತಿರಲಿಲ್ಲ. ಇದನ್ನೇಕೆ ಹೇಳ್ತಾ ಇದೀನಿ ಅಂದರೆ ವಯಸ್ಸಿನ ಮೀರಿದ ಕೆಲಸ ಮಾಡಲು ಮುಂದಾದಾಗ ಈ ಸಮಾಜ ಒಪ್ಪುವುದಿಲ್ಲ. ಅನೇಕೆ ಪೂರ್ವಗ್ರಹಗಳು ಇಲ್ಲಿ ಆಕ್ಟಿವ್ ಆಗಿರುತ್ತವೆ.

ನಾನು ಹೋಗುತ್ತಿದ್ದ ಎಲ್ಲ ವೇದಿಕೆಯಲ್ಲಿ ನಾನೊಬ್ಬನೇ ಕಿರಿ ವಯಸ್ಸಿನ ಯುವಕನಾಗಿರುತ್ತಿದ್ದೆ. ಕೆಲವರು ಇದನ್ನು ಇರಿಸು ಮುರಿಸು ಮಾಡಿಕೊಂಡು ನನ್ನೊಂದಿಗೆ ಸಮಾನಾಗಿ ಕೂರಲು ಹಿಂದೆ ಮುಂದೆ ಮಾಡಿದ್ದುಂಟು. ಕೆಲವೊಮ್ಮೆ ನಂಗೂ ಒಂಥರಾ ಯಾಕಾದರೂ ಹೋಗಿದ್ದೆ ಅನಿಸೋದು.


ಒಮ್ಮೆ, ಸಾವಿರಾರು ಜನರು ಸೇರಿದ್ದ ಒಂದು ಸಾಮರಸ್ಯದ ಧಾರ್ಮಿಕ ಕಾರ್ಯಕ್ರಮ, ಅದರಲ್ಲಿ ಎಲ್ಲ ರಾಜಕೀಯ ನಾಯಕರ ಹೆಸರಿತ್ತು ನನ್ನ ಹೆಸರಿಲಿಲ್ಲ. ಕಾರಣ ನಾನು ದೇಣಿಗೆ ಕೊಟ್ಟಿರಲಿಲ್ಲ. ಆದರೆ ನಾನು ಕಾರ್ಯಕ್ರಮಕ್ಕೆ ಹೋಗಿದ್ದೆ. ವೇದಿಕೆಯ ಮುಂಭಾಗದ ಕುರ್ಚಿಯಲ್ಲಿ ಕೂತ ನನ್ನನ್ನು ಗಮನಿಸಿದ ಕೆಲ ಯುವಕರು ನಾನು ಬೇಡ ಅಂದರೂ, M.K ಸಾಹೇಬ್ ರನ್ನ ವೇದಿಕೆಗೆ ಕರೆಯಲೇ ಬೇಕೆಂದು ಸಂಯೋಜಕರಿಗೆ ಒತ್ತಾಯ ಮಾಡಿ ವೇದಿಕೆ ಹತ್ತಿಸಿದರು.

ಈ ವೇಳೆ ಎಲ್ಲರಿಗೂ ಮಾತಾಡುವ ಅವಕಾಶ ಮಾಡಿಕೊಟ್ಟರು. ಆದರೆ ನನಗೆ ಕೊಡಲಿಲ್ಲ. ಇದು ಹೊಟ್ಟೆ ಕಿಚ್ಚಿಂದ ಅಥವಾ ಅಹಂಕಾರದಿಂದ ಹೇಳ್ತಾ ಇಲ್ಲ. ಆದರೆ ಆ ವೇದಿಕೆಯಲ್ಲಿ ಬೇರೆ ರಾಜಕೀಯ ಪಕ್ಷದ ನಾಯಕರ ಸರಿ ಸಮಾನ ನಾನು ಕಾಲು ಮೇಲೆ ಕಾಲಕಿ ಕೂತಿರುವುದೇ ಬಹುತೇಕರಿಗೆ ಆಗ್ತಿರಲಿಲ್ಲ. ಕಾರಣ ಇಷ್ಟೇ ಇವ ಚಿಕ್ಕವನು ಅನ್ನುವ ಅಸಡ್ಡೆ. ಅವರಿಗೆ ಹೋಲಿಕೆ ಮಾಡಿದರೆ ನಾನು ಒಳ್ಳೆಯ ವಾಗ್ಮಿಯುೂ ಆಗಿದ್ದೆ.

ಅದೇ ನಾನು 50 ಸಾವಿರ ಒಂದು ಲಕ್ಷ ಹಣ ದೇಣಿಗೆ ಕೊಟ್ಟಿದ್ದರೆ ಮಾತಾಡಲು ಅವಕಾಶ ಮಾಡಿಕೊಟ್ಟು ನಾಲ್ಕೈದು ಘೋಷಣೆ ಕೂಡ ಹಾಕ್ತಾ ಇದ್ದರು ಅನಿಸುತ್ತೆ. ಇಲ್ಲಿ ಆರ್ಥಿಕ,ಸಾಮಾಜಿಕ ಸ್ಥಾನಮಾನದೊಂದಿಗೆ ವಯಸ್ಸು ತುಂಬಾ ಮುಖ್ಯ ಆಗುತ್ತೆ.

ಭಾರತದಲ್ಲಿ ಲಿಂಗ ತಾರತಮ್ಯ, ಅಸ್ಪೃಶ್ಯತೆ, ಜಾತಿವಾದ, ಕೋಮುವಾದ ಇದ್ದಂತೆಯೇ ವಯಸ್ಸಿನ ಹೆಸರಲ್ಲಿ ತುಂಬಾ ತಾರತಮ್ಯ ಮತ್ತು ದೌರ್ಜನ್ಯಗಳು ನಡೆಯುತ್ತಿದೆ. ಆದರೆ ಇದರ ಬಗ್ಗೆ ಯಾರು ಧ್ವನಿ ಎತ್ತುವುದಿಲ್ಲ.
ವಯಸ್ಸಿನ ತಾರತಮ್ಯ ಕೇವಲ ಸಾಂಪ್ರದಾಯಿಕ ಮನಸ್ಥಿತಿಯ ಜನರೇ ಮಾಡುತ್ತಾರೆಂದರೆ ಇಲ್ಲ. ಪ್ರಗತಿಪರ ಅಂದುಕೊಂಡ ಅದೆಷ್ಟೋ ಜನರು ತಮ್ಮ ಕಾರ್ಯಕ್ರಮಗಳಲ್ಲಿ ಎಲ್ಲ ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುತ್ತಾರೆ. ಅದನ್ನು ತಮ್ಮ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳುತ್ತಾರೆ ಆದರೆ ವಯಸ್ಸಿನ ತಾರತಮ್ಯ ಅವರ ಅರಿವಿಗೆ ಬರುವುದಿಲ್ಲ. ಯಾಕೆಂದರೆ ಇದು ಅನ್ಯಾಯ ಮತ್ತು ತಾರತಮ್ಯ ಎಂದು ಇನ್ನೂ ನಮ್ಮ ದೇಶದಲ್ಲಿ ಚರ್ಚೆಯ ಮುನ್ನಲೆಗೆ ಬಂದಿಲ್ಲ.

ದೊಡ್ಡ ದೊಡ್ಡ ಲೇಖಕರ, ಚಿಂತಕರ ಮಧ್ಯೆ ಯುವ ಲೇಖಕರು, ಚಿಂತಕರು ಇರುವುದಿಲ್ಲ ಅವರೇನಿದ್ದರು ವೇದಿಕೆಯ ಮುಂಭಾಗದಲ್ಲಿ ಮಾತ್ರ. ಅಗಾಂತ ಒತ್ತಾಯಪೂರ್ವಕವಾಗಿ ಯಾರನ್ನೋ ಕುಳ್ಳರಿಸಬೇಕು ಅಂತಲ್ಲ. ಯೋಗ್ಯತೆ ಮತ್ತು ಸಾಮರ್ಥ್ಯ ಇರುವ ಯುವಜನರನ್ನು ತೊಡಗಿಸಿಕೊಳ್ಳಬೇಕು.ನಿರ್ಣಾಯಕ ಸ್ಥಾನದಲ್ಲೂ ಅವಕಾಶ ಕೊಡಬೇಕು. ಆವಾಗಲೇ ಯುವಜನರ ಸಾಮಾಜಿಕ ನ್ಯಾಯ ಸ್ಥಾಪಿತವಾಗುವುದು.

ಅದೆಷ್ಟೋ ಬಾರಿ ಹಿರಿಯರ ಕೆಲ ವರ್ತನೆಗಳು ಕಿರಿಯರಿಗೆ ಮಾನಸಿಕ ಕೀಳರಿಮೆ ಉಂಟು ಮಾಡಿಸುತ್ತೆ. ಯುವ ಜನರ ಮೇಲಿನ ಪೂರ್ವಗ್ರಹಗಳನ್ನು ಹಿರಿಯರು, ಹಿರಿಯರ ಮೇಲಿನ ಪೂರ್ವಗ್ರಹಗಳನ್ನು ಕಿರಿಯರು ಕಡಿಮೆಗೊಳಿಸಿಕೊಂಡು ವಯಸ್ಸಿನ ತಾರತಮ್ಯವನ್ನು ಕಡಿಮೆಗೊಳಿಸಬೇಕು.
ಯುವಜನರು ಕೂಡ ತಮ್ಮ ಪ್ರಾತಿನಿಧ್ಯದ ಬಗ್ಗೆ ಧ್ವನಿ ಎತ್ತಬೇಕು. ವಯಸ್ಸಿನ ತಾರತಮ್ಯ ಕಡಿಮೆಗೊಳಿಸುವುದು ಕೂಡ ಸಾಮಾಜಿಕ ನ್ಯಾಯದ ತುರ್ತು ಆಗಿದೆ.

M.K ಸಾಹೇಬ್ ನಾಗೇಶನಹಳ್ಳಿ

Related Articles

ಇತ್ತೀಚಿನ ಸುದ್ದಿಗಳು