ಚಿಕ್ಕಮಗಳೂರು: ಲಿಂಗಾಯತ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸಬೇಕು ಎಂದು ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಆಗ್ರಹಿಸಿದೆ
ಈ ವಿಚಾರವಾಗಿ ನಗರದ ತಾಲ್ಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೂ ಮೆರವಣಿಗೆ ಏರ್ಪಡಿಸಲಾಗಿತ್ತು. ಆಜಾದ್ ಪಾರ್ಕ್‌ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ವೀರಶೈವ ಲಿಂಗಾಯತ ಸಮುದಾಯವು ಬಹುತೇಕ ಕೃಷಿ ಆಧಾರಿತ ಕಸುಬುಗಳನ್ನು ಅವಲಂಬಿಸಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಹಾಗಾಗಿ ಮಕ್ಕಳ ಶಿಕ್ಷಣ, ಉದ್ಯೋಗ, ಸಮುದಾಯದ ಸ್ಥಿತಿ-ಗತಿ ಪರಿಗಣಿಸಿ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಚಂದ್ರಶೇಖರ್, ವೀರಶೈವ–ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರವು ಶಿಫಾರಸು ಮಾಡಬೇಕು. ಈ ವಿಚಾರವಾಗಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನೆಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ವೀರಶೈವ–ಲಿಂಗಾಯತರನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸದಿರುವುದರಿಂದ ಸಮುದಾಯದ ಪ್ರತಿಭಾವಂತರು ಅವಕಾಶಗಳಿಂದ ವಂಚಿರಾಗುವಂತಾಗಿದೆ. ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವನಮಾಲಾ ಮೃತ್ಯುಂಜಯ ಆಗ್ರಹಿಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್ ರೂಪಾ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಬಿ.ಜಿ ಸೋಮಶೇಖರಪ್ಪ, ಜಿ. ವೀರೇಶ್, ಏಕಾಂತರಾಮು,
ಎಂ.ಸಿ ಬಸವರಾಜ್, ಗುರುಶಾಂತಪ್ಪ, ನಿರಂಜನ್, ಸತೀಶ್ ಮಹಡಿಮನೆ, ಸಿ.ಇ ಚೇತನ್, ಜಿ.ಬಿ ಪವನ್, ರೇಣುಕಾರಾಧ್ಯ, ಚಂದ್ರಮೌಳಿ, ಗೀತಾನಾಗೇಶ್, ಈಶ್ವರಪ್ಪ ಕೋಟೆ, ನಿಶಾಂತ್, ಮಮತಾ ಮತ್ತಿತರರು ಇದ್ದರು. ಈ ಪ್ರತಿಭಟನೆಯನ್ನು ಚಿಕ್ಕಮಗಳೂರು ಅಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಕೈಗೊಳ್ಳಲಾಗಿತ್ತು.