ತಮಿಳುನಾಡಿನ ವೆಲ್ಲೂರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚ್ನ ಮೇಲ್ಛಾವಣಿ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ವೆಲ್ಲೂರು ಜಿಲ್ಲೆಯ ಕಾಟ್ಪಾಡಿ ಸಮೀಪದ ಮಂಡಿ ಕೃಷ್ಣಾಪುರಂನಲ್ಲಿ ಸಿಎಸ್ಐ (ಚರ್ಚ್ ಆಫ್ ಸೌತ್ ಇಂಡಿಯಾ) ಚರ್ಚ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಕಾರ್ಮಿಕರು ಚರ್ಚ್ನ ಮೇಲ್ಛಾವಣಿಗೆ ಕಾಂಕ್ರೀಟ್ ಹಾಕುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಸುಮಾರು 20 ಅಡಿ ಎತ್ತರದ ಉಕ್ಕಿನ ಸ್ಕ್ಯಾಫೋಲ್ಡಿಂಗ್ ಮತ್ತು ಆಧಾರ ರಚನೆಯು ಏಕಾಏಕಿ ಕುಸಿದುಬಿದ್ದ ಪರಿಣಾಮ, ಕಾರ್ಮಿಕರು ಕಾಂಕ್ರೀಟ್ ಅವಶೇಷಗಳಡಿ ಸಿಲುಕಿಕೊಂಡರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ 11 ಕಾರ್ಮಿಕರನ್ನು ತುರ್ತು ಆಂಬುಲೆನ್ಸ್ಗಳ ಮೂಲಕ ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಸಿಎಂಸಿ ಆಸ್ಪತ್ರೆ ಮತ್ತು ನೆರೆಯ ಆಂಧ್ರಪ್ರದೇಶದ ಚಿತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಗಾಗಿ ಅರಕ್ಕೋಣಂನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡ ಧಾವಿಸಿದ್ದು, ಜಿಲ್ಲಾಡಳಿತ, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿತು.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ ವೆಲ್ಲೂರು ಜಿಲ್ಲಾಧಿಕಾರಿ ಪಿ.ಎಸ್. ಲೀಲಾ ಅಲೆಕ್ಸ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಗಾಯಗೊಂಡವರ ಪೈಕಿ ಕನಿಷ್ಠ ಎಂಟು ಮಂದಿ ಕಾರ್ಮಿಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಚರ್ಚ್ ನಿರ್ಮಾಣದ ರಚನಾತ್ಮಕ ವೈಫಲ್ಯಕ್ಕೆ ನಿಖರ ಕಾರಣವೇನು ಮತ್ತು ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುಮತಿ ಹಾಗೂ ಪರವಾನಗಿಗಳನ್ನು ಪಡೆಯಲಾಗಿತ್ತೇ ಎಂಬುದರ ತನಿಖೆಗೆ ವಿಶೇಷ ಸಮಿತಿ ರಚಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
