Sunday, September 29, 2024

ಸತ್ಯ | ನ್ಯಾಯ |ಧರ್ಮ

ವೆಂಕಟಾಲ Chronicle – 2: ಎಲ್ಲಿಂದಲೋ ಬಂದವರು!

“..ಮಾದಿಗರು ತಮ್ಮ ಕೇರಿಗಳನ್ನು ಬಿಟ್ಟು, ಹೈವೇ ಪಕ್ಕಕ್ಕೆ ಬಂದರೆ ಜಾತಿ ಎಂಬ ದುಷ್ಟನ ಮೀಸೆ ಮಣ್ಣಾಗುತ್ತದಲ್ಲವ? ಇಲ್ಲೂ ಹಾಗೆಯೇ ಆಯಿತು. ಆಗ ಪಂಚಾಯ್ತಿಯ ಅಧ್ಯಕ್ಷ ಆಗಿದ್ದವನು ಛೇರ್ಮನ್ ವೆಂಕಟಪ್ಪ ಬೆಸ್ತರ ಜಾತಿಯವನು…” ವಿ.ಆರ್.ಕಾರ್ಪೆಂಟರ್ ಅವರ ಜೋಳಿಗೆಯಿಂದ..

ಇಂಡಿಯಾ ಒಕ್ಕೂಟದ ಮೇಲೆ ಇಂದಿರಾ ಗಾಂಧಿಯ ಕೇಂದ್ರ ಸರ್ಕಾರ ಹೇರಿದ್ದ ಎಮರ್ಜೆನ್ಸಿ ಆಗತಾನೇ ಮುಗಿಯುತ್ತಲಿತ್ತು. ಮುಳ್ಳುಕಟ್ಟಮ್ಮನನ್ನು ಕಂಕುಳಲ್ಲಿ ಇರುಕಿಕೊಂಡು, ತನ್ನ ಗಂಡ ಮಕ್ಕಳೊಡನೆ ಹೆಗ್ಗುಂದ ಬಿಟ್ಟ ಹನುಮಕ್ಕ ಎಮರ್ಜೆನ್ಸಿಗೆ ಬೆದರಿ ತನ್ನ ತಮ್ಮನ ಮನೆ ಸೇರಿದ್ದಳು. ದೊಡ್ಡ ಮನೆಯಲ್ಲಿ ಸ್ವಾವಲಂಬಿ ಬದುಕನ್ನು ನೋಡಿದ್ದ ಹನುಮಕ್ಕನಿಗೆ ತಮ್ಮನ ಮೇಲೆ ಅವಲಂಬಿತಳಾಗುವುದು ಸುತಾರಂ ಇಷ್ಟವಿರಲಿಲ್ಲ. ಯಾರದ್ದೋ ಪರಿಚಯದ ಮೂಲಕ ಯಲಹಂಕದಲ್ಲಿ ತೋಟದ ಕೆಲಸ ಗಿಟ್ಟಿಸಿಕೊಂಡು, ಯಲಹಂಕ ಹಾದಿ ಹಿಡಿದೇಬಿಟ್ಟಳು.

ಯಲಹಂಕದ ಅಮಾನಿಕರೆಯ ಪಕ್ಕದಲ್ಲಿದ್ದ ಹಾಲು ಸುಬ್ಬಣ್ಣನ ತೋಟದಲ್ಲಿ ಕೆಲಸ, ಅಲ್ಲೇ ಠಿಕಾಣಿ. ದಿನಕ್ಕೆ ನೂರು ಮುದ್ದೆ ತೊಳೆಸುತ್ತಿದ್ದ ಕೈ ಸುಬ್ಬಣ್ಣನ ಮನೆಯವರು ಕೊಡುತ್ತಿದ್ದ ಒಂದು ಮುದ್ದೆಗೆ ಕೈ ಒಡುತ್ತಿತ್ತು! ಒಕ್ಕಲಿಗರಾದ ಸುಬ್ಬಣ್ಣನ ಮನೆಯವರು ಮಾದಿಗರಾದ ಹನುಮಕ್ಕ, ಆಕೆಯ ಗಂಡ ಮಕ್ಕಳನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಬೆಳಿಗ್ಗೆ ಮತ್ತು ಮಧ್ಯಾಹ್ನ ಅವರ ಮನೆಯಿಂದಲೇ ಊಟ ಬರುತ್ತಿತ್ತು. ರಾತ್ರಿಯ ಹೊತ್ತಿಗೆ ಮಾತ್ರ ಹನುಮಕ್ಕ ಅಡುಗೆ ಮಾಡಬೇಕಿತ್ತು. ಬೆಳಿಗ್ಗೆ 6 ಗಂಟೆಗೆಲ್ಲಾ ತೋಟದ ಕೆಲಸಕ್ಕೆ ತೊಡಗಬೇಕಿದ್ದ ಕಾರಣ, ಬೆಳಗಿನ ಊಟವನ್ನೂ ಅವರೇ ಕೊಡುತ್ತಿದ್ದರು. ತೋಟದಲ್ಲಿ ಬೆಳೆಯುತ್ತಿದ್ದ ಮುತ್ತುಗದ ಎಲೆಯನ್ನೋ, ಇಸ್ತ್ರಿ ಎಲೆಯನ್ನೋ ತಟ್ಟೆಯಾಗಿ ಮಾಡಿಕೊಂಡು, ನೆಲಕ್ಕೆ ಕುಕ್ಕರುಬಡಿದರೆ ಆ ತಟ್ಟೆಗೆ ಒಂದೊಂದು ಕರಿಮುದ್ದೆ ಬೀಳುತ್ತಿತ್ತು. ಅದರ ಪಕ್ಕಕ್ಕೆ ಕಾಳು ಅಥವಾ ಸೊಪ್ಪಿನ ಸಾರು ಮುದ್ದೆಯ ತಳದಲ್ಲಾಡುತ್ತಿತ್ತು. ಎಲೆ ಸಿಗದಿದ್ದರೆ, ಮುದ್ದೆಯನ್ನೇ ಬಟ್ಟಲನ್ನಾಗಿ ರೂಪಿಸಿಕೊಂಡು, ಅದರೊಳಗೆ ಸಾರನ್ನು ಬಸಿದುಕೊಂಡು ತಿನ್ನುವ ಅದ್ಭುತ ಕಲೆಯನ್ನು ಜಾತೀಯತೆ ಎಂಬ ಜೀನ್ ಕಲಿಸಿಬಿಟ್ಟಿತ್ತು!

ಕೆಲವೊಮ್ಮೆ ಉಳಿದ ಮುದ್ದೆಗಳನ್ನು ಹನುಮಕ್ಕನ ಸೆರಗಿಗೆ ಸುರಿಯುತ್ತಿದ್ದರು. ಅದನ್ನು ಕಣ್ಣಿಗೊತ್ತಿಕೊಂಡು ತಂದು ತನ್ನ ಗುಡಿಸಿಲು ಮನೆಯಲ್ಲಿಡುತ್ತಿದ್ದ ಹನುಮಕ್ಕ ರಾತ್ರಿಗೆ ಸಾರು ಇಲ್ಲದಿದ್ದರೆ, ಹಸೆಕಲ್ಲಿನ ಮೇಲೆ ಹಸಿಮೆಣಸಿನ ಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಉಪ್ಪು ಹಾಕಿ ಅರೆದು ಅದರ ಮೇಲೆ ಮುದ್ದೆಗಳನ್ನಿಟ್ಟು ಚೆನ್ನಾಗಿ ಮಿದ್ದು, ಮಿದ್ದಿಟ್ಟು ಮಾಡಿ, ʻಇವತ್ತಿಗೆ ಇದೇ ಇರದು, ಕಡ್ಕಂಡು ತಿಂದು, ನೀರ್ ಕುಡ್ದು ಬಿದ್ಕಳಿʼ ಎಂದು, ತಾನೂ ಮುಷ್ಟಿ ಗಾತ್ರದ ಮುದ್ದೆ ತಿಂದು, ನೀರು ಕುಡಿದು ಮುಳ್ಳುಕಟ್ಟಮ್ಮನಿಗೆ ಕೈ ಮುಗಿದು, ಗವ್ವೆನ್ನುವ ತೋಟದಲ್ಲಿ, ಒಂಟಿಯಾಗಿದ್ದ ಗುಡಿಸಿಲಿನಲ್ಲಿ ಕಾಲ ತಳ್ಳುವ ಯತ್ನದಲ್ಲಿದ್ದಳು.

ಹೀಗಿರುವಾಗ, ಕೂಲಿ ಎಂದು ಸಿಗುತ್ತಿದ್ದ ನಾಲ್ಕಾಣೆ, ಎಂಟಾಣೆಗಳನ್ನು ಗಂಟಿಕ್ಕತೊಡಗಿದ ಹನುಮಕ್ಕನ ಮಗನಿಗೆ ಕೇರೆ ಹಾವೊಂದು ಕುಟುಕಿತು. ತೀರಾ ಪೊದೆ, ಪೊಟರೆಗಳಿರುವ ಆ ತೋಟದಲ್ಲಿ ಹಾವುಗಳು ಸಾಮಾನ್ಯ. ಕೇರೆ ಹಾವಿನ ಬದಲಿಗೆ ನಾಗರ ಹಾವೇನಾದರೂ ಕಚ್ಚಿದ್ದರೆ ಉಳಿದಿದ್ದ ಇಬ್ಬರು ಮಕ್ಕಳಲ್ಲಿ ಒಂದನ್ನು ಕಳೆದುಕೊಳ್ಳಬೇಕಿತ್ತು. ಆದ್ದರಿಂದ ಈ ತೋಟದ ಸಾವಾಸವೇ ಬೇಡ ಅನಿಸಿ, ಅಲ್ಲಿಂದ ಒಂದು ಮೈಲು ದೂರದಲ್ಲಿದ್ದ ವೆಂಕಟಾಲದ ಗುಡಿಸಿಲನ್ನು 60 ಪೈಸೆಗೆ ಬಾಡಿಗೆ ಪಡೆದು ನೆಲೆಸಿದರು. ವೆಂಕಟಾಲ ಅವಾಗ ಅನ್ಯ ಊರು, ಅಲ್ಲಿದ್ದ ಮಾದಿಗರು ಕೂಡಾ ಅನ್ಯರು. ಹನುಮಕ್ಕನ ಕೈ ಅಡುಗೆ ಕ್ರಮೇಣವಾಗಿ ಅನ್ಯರನ್ನು ಆಪ್ತರನ್ನಾಗಿಸಿತು.
*
ಗತಕಾಲದ ರೂಢಿಯಂತೆ ವೆಂಕಟಾಲಕ್ಕೆ ಬಂದಮೇಲೂ ಮುಳ್ಳುಕಟ್ಟಮ್ಮನಿಗೆ ವಾರ್ಷಿಕ ಪೂಜೆ ಮಾಡುವುದನ್ನು ಹನುಮಕ್ಕ ನಿಲ್ಲಿಸಲಿಲ್ಲ. ಯಲಹಂಕದಲ್ಲಿ ಕರಗ ಜರುಗುವ ಆಸುಪಾಸಿನ ಒಂದು ದಿನವನ್ನು ನಿಗದಿಪಡಿಸಿಕೊಳ್ಳುತ್ತಿದ್ದಳು. ಆ ದಿನ ಸಿಂಪಾಡಿಪುರದಿಂದ ಆಕೆ ತಮ್ಮ ತಳವಾರ್ ಆಂಜಿನಪ್ಪ ತನ್ನ ಕುಟುಂಬ ಸಮೇತ ಬರುತ್ತಿದ್ದ. ಬರುವಾಗಲೇ ತವರಿಗೆ ಪಾಲು ಎಂದು ಎರಡು ಕೋಳಿಗಳನ್ನೂ ತರುತ್ತಿದ್ದ. ಪೂಜೆಯ ದಿನ ವತ್ಲಂತೆ ಎದ್ದು, ಮಡಿಯಾಗಿ ದೊಡ್ಡದೊಂದು ಬಿದಿರಿನ ಮಂಕರಿಯನ್ನು ಹೊತ್ತು ಯಲಹಂಕಕ್ಕೆ ಹೋಗುತ್ತಿದ್ದರು. ಯಲಹಂಕದ ಕುಂಬಾರರ ಮನೆಗೆ ಹೋಗಿ, ಸಾಮಾನ್ಯ ಮನುಷ್ಯನ ಹೊಟ್ಟೆ ಗಾತ್ರದ ಎರಡು ಮಡಕೆಗಳನ್ನೂ, ನಾಲ್ಕು ಮುಷ್ಟಿಗಾತ್ರದ ಒಂದು ಕುಡಿಕೆ, ಅಂಗೈ ಗಾತ್ರದ ಹಣತೆ ಕೊಂಡುಕೊಂಡು, ಗ್ರಂದ್ಗೆ ಅಂಗಡಿಯಲ್ಲಿ ಕರ್ಪೂರ, ಊದುಬತ್ತಿ, ಧೂಪ ಇನ್ನಿತರ ಸಾಮಾನುಗಳನ್ನು ಕೊಳ್ಳುತಿದ್ದರು. ಅಲ್ಲಿಂದ ಸೀದಾ ಯಲಹಂಕದ ಓಲ್ಡ್ ಪೋಸ್ಟಾಫೀಸ್ ರೋಡಿನಲ್ಲಿದ್ದ ಆಚಾರಿಯ ಅಂಗಡಿಗೆ ಹೋಗಿ ದೇವರ ಕಣ್ಣು, ಹುಬ್ಬು, ಕೋರೆಹಲ್ಲು, ಮೀಸೆ ಎಲ್ಲವನ್ನೂ ಪಾಲೀಶ್ ಮಾಡಿಸಿ, ಗೌರ್ಮೆಂಟ್ ಆಸ್ಪತ್ರೆಯ ಎದುರಿಗಿದ್ದ ತಳ್ಳೋಗಾಡಿಯಲ್ಲಿ ಹಣ್ಣುಕಾಯಿ ತೆಗೆದುಕೊಂಡುಬಿಟ್ಟರೆ ಮಂಕರಿಯು ತುಂಬಿ ಅದರ ಮೇಲೊಂದು ಬೆಟ್ಟ ಏದ್ದೇಳುತ್ತಿತ್ತು. ಟವೆಲ್ ಅನ್ನು ಸುತ್ತಿ ಸಿಂಬೆ ಮಾಡಿಕೊಂಡು ದೇವರ ಪೂಜಾ ಸಾಮಾನುಗಳು ತುಂಬಿರುವ ಮಂಕರಿಯನ್ನು ಹೊತ್ತು ಮನೆಗೆ ಬರುವಷ್ಟರಲ್ಲಿ ಆಂಜಿನಪ್ಪ ಬೆವತುಹೋಗಿರುತ್ತಿದ್ದು.

ಊರಿನ ಆಚೆಯ ಹುಣಸೆ ಮರದ ಬುಡದಲ್ಲೋ, ಹೊಂಗೇ ಮರದ ಮಡಿಲಲ್ಲೋ ಮನುಷ್ಯನೊಬ್ಬ ಕುಕ್ಕರಗಾಲಲ್ಲಿ ಕುಳಿರತೂ ತಲೆ ತಗ್ಗಿಸಬಹುದಾದಷ್ಟು ಎತ್ತರದ ಹೊಂಗೆ ಚಪ್ಪರವನ್ನು ಹಾಕಿ, ಅದರೊಳಗೆ ಮಣ್ಣು ಮತ್ತು ಸಗಣಿ ಮಿಶ್ರಣದ ಸಣ್ಣದೊಂದು ಕಟ್ಟೆ ಕಟ್ಟಿ, ಅದರ ಮೇಲೆ ಕುಡಿಕೆಯನ್ನಿಟ್ಟು, ಆ ಕುಡಿಕೆಗೆ ಹುಣಸೇ ಹಣ್ಣಿನ ಸಹಾಯದಿಂದ ಕಣ್ಣು, ಹುಬ್ಬು, ಕೋರೆಹಲ್ಲು, ಮೀಸೆ ಧರಿಸಿ ಆಕಾರ ಕೊಟ್ಟು, ಕುಡಿಕೆಯ ಒಳಗೆ ಹೊಸನೀರು ತುಂಬಿ ವಿಳ್ಯೆದೆಲೆಗಳನ್ನು ಇಟ್ಟು ಅದ ಮೇಲೆ ತೆಂಗಿನ ಕಾಯಿಯನ್ನಿಟ್ಟುಬಿಟ್ಟರೆ ಕಳಸವೋ, ಮುಖವೋ, ಹೆಣ್ಣು ದೇವತೆಯೋ, ಗಂಡು ದೇವತೆಯೋ ಏನೋ ಒಂದು ಆಕಾರದಲ್ಲಿ ಕಾಣುತ್ತಿತ್ತು. ಅದರ ಪಕ್ಕದಲ್ಲೇ ಎರಡು ಗಟೆ (ಹೆಂಡ ತುಂಬಿದ ಸೀಸೆ)ಗಳನ್ನಿಟ್ಟು, ಅದರ ಮುಂದುಗಡೆಗೆ ಅಕ್ಕಿಹಿಟ್ಟಿನ ತಂಬಿಟ್ಟು ಇಟ್ಟು, ಹಣ್ಣು ಕಾಯಿಯಿಟ್ಟು, ಧೂಪ ಹಾಕಿ, ಊದುಬತ್ತಿಯನ್ನು ಹಚ್ಚಿ ಬಲಿ ಕೊಡುವ ಕೋಳಿಗಳನ್ನು ದೇವತೆಯ ಮುಂದಕ್ಕೆ ತಂದು ನಿಲ್ಲಿಸುತ್ತಿದ್ದರು. ಹನುಮಕ್ಕ ಅಲ್ಲೇ ಚಕ್ಕಳಮಕ್ಕಳ ಹಾಕಿ ಕೂತು, ದೇವತೆಯೊಂದಿಗೆ ಮಾತಿಗೆ ಇಳಿಯುತ್ತಿದ್ದಳು.

ಬಲಿ ಕೊಡುವ ಕೋಳಿಗಳಿಗೆ ಹರಿಶಿಣ ಕುಂಕುಮವನ್ನಿಟ್ಟು, ತಲೆಯ ಮೇಲೊಂದು ಹೂವನ್ನಿಟ್ಟು, ತೀರ್ಥವನ್ನು ಮೈಮೇಲೆ ಹಾಕಿ, ಅದು ಮೈ ಕೊಡುವುವದನ್ನೇ ಕಾಯುತ್ತಾ ಕೂತ ಹನುಮಕ್ಕ ಕೋಳಿಗಳು ಮೈ ಕೊಡವಲು ಲೇಟ್ ಮಾಡಿದರೆ ʻವರ ಕೊಡೇ ನನ್ನವ್ವ, ವರ್ಸ ವರ್ಸ ನಿನ್ ಪೂಜೆ ಮಾಡ್ಕಂಡು ಬತ್ತಿಲ್ವ? ನಿಂಗೇನ್ ಅನ್ಯಾಯ ಮಾಡಿದ್ದೀನಿ ನಾನು?ʼ ಎಂದು ವಿತೀತಳಾಗಿ ಬೇಡಿಕೊಳ್ಳುವಳು. ಅದಕ್ಕೂ ಬಗ್ಗದಿದ್ದರೆ, ʻವೋ ಏನ್ ನಿನ್ ಮನೆ ಆಸ್ತಿನಾ ನಾನು ವಡ್ಕಂಡಿದ್ದೀನ? ಮೂದೇವಿ ತರ ಅಂಗ್ ಕೂತಿದ್ದೀಯ, ನಾನಿಲ್ದಿದ್ರೆ ನಿನ್ ಯಾರೂ ಮೂಸ್ ನೋಡಲ್ಲ? ದರ್ಬೇಸಿ ಮುಂಡೆ ಮಾಡ್ಬುಡ್ತರೆ ನೋಡುʼ ಎಂದು ಥರಥರವಾಗಿ ಬೈದು ಬೆದರಿಸಲು ನೋಡುತ್ತಾಳೆ. ಅಷ್ಟರಲ್ಲಿ ಊದುಬತ್ತಿಯ ಸ್ಮೆಲ್ ತೆಗೆದುಕೊಳ್ಳುತ್ತಾ, ನಿಂತ ನಿಲುವಿನಲ್ಲೇ ನಿಂತು ಸಾಕಾಗಿದ್ದ ಕೋಳಿಗಳ ಮೈ ಕೊಡವಿದ್ದೇ ತಡ, ʻನನ್ನಮ್ಮಾ ತಾಯಿ, ನನ್ನ ಮಕ್ಳು ಮರಿಗಳನ್ನು ನೀನೇ ಕಾಪಾಡ್ಕಂಡು ಹೋಗ್ಬೇಕುʼ ಎಂದು ಕೃತಜ್ಞತೆಗಳನ್ನು ಸಲ್ಲಿಸಿ, ಕೋಳಿಗಳನ್ನು ಕೊಯ್ಯುವವರ ವಶಕ್ಕೆ ಒಪ್ಪಿಸಿ, ದೇವತೆಯ ಕುರಿತ ಹಾಡುಗಳನ್ನು ಹಾಡಲು ಶುರುವಿಟ್ಟುಕೊಳ್ಳುವಳು.

ಬಲಿಕೊಟ್ಟ ಕೋಳಿಗಳ ಮೆದುಭಾಗಗಳನ್ನು ಅಲ್ಲೇ ಬೇಯಿಸಿ, ದೇವತೆಗೆ ಎಡೆಯಿಟ್ಟು, ಎಡೆಯನ್ನವನ್ನು ಎಲ್ಲರಿಗೂ ಹಂಚಿ, ತಿಂದು, ಮನೆಗೆ ಬಂದು ಅಡುಗೆ ಮಾಡಿ, ಊರಿನವರಿಗೆ ಊಟ ಹಾಕಿ, ಮಲಗುವಷ್ಟರಲ್ಲಿ ಕಲ್ಲು ಕರಗುವ ವೇಳೆಯಾಗುತ್ತಿತ್ತು.
*
ವೆಂಕಟಾಲಕ್ಕೆ ವಲಸೆ ಬಂದ ಹನುಮಕ್ಕನ ಕುಟುಂಬ ಮೊದಲಿಗೆ ನೆಲೆಸಿದ್ದದ್ದು ನರಸಿಂಹಪ್ಪ ಎಂಬುವವರ ಮನೆಯಲ್ಲಿ, ಬಾಡಿಗೆ ಮನೆಯಲ್ಲಿದ್ದರೂ ನರಸಿಂಹಪ್ಪನ ಮನೆಯವರಿಗೆ ಇದೊಂದು ಹೋಟೆಲ್ ಆಗಿಬಿಟ್ಟಿತ್ತು. ನಾಲ್ಕು ಜನರಿಗೆ ಅಡುಗೆ ಮಾಡುವುದಲ್ಲದೆ, ನರಸಿಂಹಪ್ಪನ ಮನೆಯವರಿಗೂ ಅಡುಗೆ ಮಾಡಿ ಬಡಿಸಬೇಕಿತ್ತು. ಹೀಗಾದರೆ, ಕೂಡಿಡುವುದು ಎಲ್ಲಿಂದ? ಕೂಡಿಡದಿದ್ದರೆ ಎಲ್ಲಿಂದಲೋ ಬಂದವರಿಗೆ ಶಾಶ್ವತ ನೆಲೆಯಾದರೂ ಹೇಗೆ ಸಾಧ್ಯ?

ನೀರಿಗೆ ಮತ್ತೊಂದಕ್ಕೆ ಎಂದು ವೆಂಕಟಾಲದ ಮೂಲಜನರೊಂದಿಗೆ ಪೈಪೋಟಿಗೆ ನಿಲ್ಲಲು ಈ ಎಲ್ಲಿಂದಲೋ ಬಂದವರಿಗೆ ಸಾಧ್ಯವಾಗುತ್ತಿರಲಿಲ್ಲ. ಹೌದು, ಏನಾದರೂ ಜೋರು ಮಾಡಿದರೆ ಮುಗೀತು… ʻಎಲ್ಲಿಂದಲೋ ಬಂದ ನಿಮ್ಗೇ ಇಷ್ಟಿರಬೇಕಾದರೆ, ನಮಗೆಷ್ಟಿರಬೇಡʼ ಎಂಬ ಕೂಗನ್ನು ಕೇಳಿಸಿಕೊಂಡು ಸುಮ್ಮನಿರಬೇಕಾಗಿತ್ತು. ಹತ್ತಾರು ಆಳು-ಕಾಳುಗಳಿಂದ ಕೆಲಸ ಮಾಡಿಸಿಕೊಂಡು ಬೆಳೆದಿದ್ದವರು ಎಲ್ಲಿಗೋ ಹೋಗಿ, ಎಲ್ಲಿಂದಲೋ ಬಂದವರಾಗಿದ್ದರು. ಇಂಥ ದರ್ಪವನ್ನೂ ಮೀರಿದ್ದ ಹನುಮಕ್ಕ, ಆ ಕಷ್ಟಕೋಟಲೆಗಳ ನಡುವೆಯೂ ತನ್ನ ಮಗನಿಗೆ ಮದುವೆ ಮಾಡಿ ಮುಗಿಸಿದಳು.

ಇದರ ನಡುವೆ ಯಲಹಂಕದ ಜಿಕೆವಿಕೆ (ಗಾಂಧಿ ಕೃಷಿ ವಿಜ್ಞಾನ ಕೇಂದ್ರ)ಯಲ್ಲಿ ಕೃಷಿ ಕೆಲಸ ಮಾಡುವ ಆಳುಗಳಿಗೆ ಕೊರತೆ ಉಂಟಾಗಿತ್ತು. 1969ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಕೈನಿಂದ ಉದ್ಘಾಟನೆಗೊಂಡು, ಫೋರ್ಡ್ ಫೌಂಡೇಶನ್ನಿಂದ ಲಕ್ಷಾಂತರ ರೂಪಾಯಿ ಅನುದಾನ ಪಡೆದಿದ್ದ ಜಿಕೆವಿಕೆ ಕೆಲಸಗಾರರ ಕೊರತೆಯನ್ನು ಅನುಭವಿಸುತ್ತಿತ್ತು. ಅದಕ್ಕೆ ಕಾರಣ ಎಮರ್ಜೆನ್ಸಿ! ಎಮೆರ್ಜೆನ್ಸಿಯನ್ನು ವಿರೋಧಿಸಿ ಅಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಜನ ಅನಿರ್ಧಿಷ್ಟಾವಧಿ ರಜೆ ಘೋಷಿಸಿಕೊಂಡರೆ, ಕೆಲವರು ಜೈಲು ಸೇರಿದ್ದರು. ಹೀಗಿರುವಾಗ ಅಲ್ಲಿರುವ ಬೆಳೆ, ಪ್ರಾಣಿ, ಪಕ್ಷಿಗಳ ಆರ್ತನಾದವನ್ನು ಅರಿತು ಅಕ್ಕಪಕ್ಕದ ಊರಿನ ಜನ ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿಕೊಂಡರು. ಹಾಗೆ ಕೆಲಸಕ್ಕೆ ಸೇರಿದವರಿಗೆ ದುಪ್ಪಟ್ಟು ಸಂಬಳ ನಿಗದಿಯಾಗಿತ್ತು. ಅದಕ್ಕಾಗಿಯೇ ಹನುಮಕ್ಕ ತನ್ನ ಗಂಡ ಮಕ್ಕಳೊಡನೆ ಜಿಕೆವಿಕೆಯ ಕೆಲಸಕ್ಕೆ ನಿಂತಳು.

ಅಲ್ಲಿ ಪರಿಚಯವಾದವರೇ ಹುಚ್ಚಪ್ಪ ಮತ್ತು ಲಕ್ಷ್ಮಮ್ಮ. ಹುಚ್ಚಪ್ಪ ತಿಂಡ್ಲುವಿನ ನಿವಾಸಿ. ಆ ಹುಚ್ಚಪ್ಪನ ಲಕ್ಷ್ಮಮ್ಮನ ತಾಯಿಯ ಅಕ್ಕನ ಮಗಳ ಮಗಳು ಸಿದ್ದಗಂಗಮ್ಮಳನ್ನು, ಹನುಮಕ್ಕ ತನ್ನ ಮಗ ರಾಮಯ್ಯನಿಗೆ ಮದುವೆ ಮಾಡಿಕೊಂಡಳು. ಯಶವಂತಪುರದ ಕಿರ್ಲೋಸ್ಕರ್ ಕಂಪೆನಿಯ ಅಡುಗೆ ಕ್ಯಾಂಟೀನ್ನಲ್ಲಿ ದುಡಿಯುತ್ತಿದ್ದ ರಾಮಕ್ಕನ ಮಗಳು ಸಿದ್ದಗಂಗಮ್ಮ ತನ್ನ 16ನೇ ವಯಸ್ಸಿನಲ್ಲಿ ಮದುವೆಯಾಗಿ ವೆಂಕಟಾಲಕ್ಕೆ ಬಂದಳು. ಮದುವೆಯಾದ ಮಧುಮಕ್ಕಳನ್ನು ನೋಡಿ ʻನರಪೇತಲನಿಗೆ ರಾಕ್ಷಸಿನ ತಂದು ಕಟ್ಟವ್ಳೆ ಹನುಮಕ್ಕʼ ಎಂದು ಆಡಿಕೊಂಡದ್ದು ಹನುಮಕ್ಕನ ಕಿವಿಗೆ ಬಿದ್ದಿತ್ತು.

ಅಲ್ಲಿಂದ ಮೂರ್ನಾಲ್ಕು ಮನೆಗಳನ್ನು ಬದಲಾಯಿಸಿ ರೋಸಿಹೋಗಿದ್ದ ಹನುಮಕ್ಕ ಒಂದಷ್ಟು ಕಾಸು ಗಂಟಿಕ್ಕಿದ್ದಳು. ಇದೇ ವೆಂಕಟಾಲದಲ್ಲಿ ಶಾಶ್ವತವಾಗಿ ನೆಲೆಸಲು, ಒಂದು ಸೈಟು ತೆಗೆದುಕೊಳ್ಳುವ ತೀರ್ಮಾನಕ್ಕೆ ಬಂದಳು. ಗೂರಲು ಹತ್ತಿದ್ದ ಗಂಡ, ಸೋಮಾರಿ ಮಗ, ಆತನ ರಾಕ್ಷಸಿ ಹೆಂಡತಿ, ಕೃಶಕಾಯದ ಮಗಳನ್ನು ಕಟ್ಟಿಕೊಂಡು ರಾಷ್ಟ್ರೀಯ ಹೆದ್ದಾರಿ 7ರ (ಈಗ 44) ಮಗ್ಗುಲಲ್ಲೇ ಅಂದಿನ ಕಾಲಕ್ಕೆ (1979) ಸೈಟು ಕೊಂಡುಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. 70 ರೂಪಾಯಿ ಕೊಟ್ಟು ಹೈವೇ ಪಕ್ಕದಲ್ಲಿ ಸೈಟನ್ನು ಕೊಂಡುಕೊಂಡಿದ್ದೇನೋ ಆಯ್ತು. ಮನೆ ಕಟ್ಟಿಕೊಳ್ಳಬೇಕಲ್ಲ? ಮತ್ತೆ ಸಿಂಪಾಡಿಪುರದಿಂದ ಆಂಜಿನಪ್ಪ ಬಂದ. ಆಗ ವೆಂಕಟಾಲದ ಕೆರೆಯಲ್ಲಿ ಇಟ್ಟಿಗೆ ಕೊಯ್ಯುತ್ತಿದ್ದರು. ಅಲ್ಲಿಂದ ಎರಡು ಎತ್ತಿನ ಗಾಡಿ ಇಟ್ಟಿಗೆ ಕೊಯ್ದು ತಂದು ಸೊಂಟದ ಎತ್ತರಕ್ಕೆ ಗೋಡೆ ಕಟ್ಟಿದರು. ಗೊಡೆ ಎದ್ದದ್ದೇ ತಡ, ಅಲ್ಲಿನ ಜಾತಿ ಪ್ರಜ್ಞೆ ಜಾಗೃತವಾಗಿಬಿಡ್ತು.

ಮಾದಿಗರು ತಮ್ಮ ಕೇರಿಗಳನ್ನು ಬಿಟ್ಟು, ಹೈವೇ ಪಕ್ಕಕ್ಕೆ ಬಂದರೆ ಜಾತಿ ಎಂಬ ದುಷ್ಟನ ಮೀಸೆ ಮಣ್ಣಾಗುತ್ತದಲ್ಲವ? ಇಲ್ಲೂ ಹಾಗೆಯೇ ಆಯಿತು. ಆಗ ಪಂಚಾಯ್ತಿಯ ಅಧ್ಯಕ್ಷ ಆಗಿದ್ದವನು ಛೇರ್ಮನ್ ವೆಂಕಟಪ್ಪ ಬೆಸ್ತರ ಜಾತಿಯವನು. ತನ್ನ ದಂಡು ಕಟ್ಟಿಕೊಂಡು ಬಂದ ಆತ, ʻನಿಮ್ ಜನಾ ಇಲ್ಲೆಲ್ಲಾ ಇರಂಗಿಲ್ಲ, ನಿಮಗಾಗಿ ಹೊಸ ಬಡಾವಣೆ ಮಾಡಿದ್ದೀವಿ, ಅಲ್ಲಿಗೋಗಿʼ ಎಂದು ಕಟ್ಟಿದ್ದ ಗೋಡೆಯನ್ನು ಉರುಳಿಸಿ, ವಾರ್ನಿಂಗ್ ಮಾಡಿ, ವೆಂಕಟಾಲಕ್ಕೆ ಹೊಂದಿಕೊಂಡಿದ್ದ ಜನತಾ ಬಡಾವಣೆಗೆ ಬಿಸಾಡಿ ಹೋದ!
ಮುಂದುವರೆಯುವುದು…

Related Articles

ಇತ್ತೀಚಿನ ಸುದ್ದಿಗಳು

You cannot copy content of this page