ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಅಕ್ರಮ ಮರಳು ದಂಧೆ ತಡೆಯಲು ಮುಂದಾದ ಮಹಿಳಾ ಅಧಿಕಾರಿಯೊಬ್ಬರಿಗೆ ಶಾಸಕರ ಪುತ್ರನಿಂದ ಅವಾಚ್ಯ ಪದ ಬಳಸಿ ನಿಂದನೆ ಮಾಡಿದ ಆರೋಪ ಎದುರಾಗಿದೆ. ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರ ಪುತ್ರ ಬಸವೇಶ್, ಮಹಿಳಾ ಅಧಿಕಾರಿಯನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಭದ್ರಾವತಿ ಬಳಿಯ ಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಗಣಿ ಇಲಾಖೆಯ ವಿಜ್ಞಾನಿ ಜ್ಯೋತಿ ಅವರು ಮಧ್ಯರಾತ್ರಿ ದಾಳಿ ನಡೆಸಿದ್ದರು. ಈ ವೇಳೆ ಶಾಸಕರ ಪುತ್ರ ಮೊಬೈಲ್ ನಲ್ಲಿ, ಅಧಿಕಾರಿ ಜ್ಯೋತಿ ಅವರಿಗೆ ಅವಾಚ್ಯವಾಗಿ ನಿಂದಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
“ಇಲ್ಲಿ ಅವಾಚ್ಯವಾಗಿ ನಿಂದನೆ ಮಾಡಿ ಬೆದರಿಕೆ ಹಾಕಿರುವ ಕೊಳಕ ಭದ್ರಾವತಿಯ ಶಾಸಕ ಸಂಗಮೇಶರ ಮಗ ಬಸವೇಶ್ ಎನ್ನುವ ಮಾಹಿತಿ ಇದೆ. ಬಸವೇಶ್ ಆಗಲಿ ಅಥವಾ ಜ್ಯೋತಿ ಎನ್ನುವ ಆ ಶೋಷಿತ ಅಧಿಕಾರಿಯಾಗಲಿ ಇದನ್ನು ನಿರಾಕರಿಸಬೇಕು ಅಥವ ಖಚಿತಪಡಿಸಬೇಕು” ಎಂದು KRS ಪಕ್ಷದ ಮುಖಂಡ ರವಿಕೃಷ್ಣಾ ರೆಡ್ಡಿ ಆಗ್ರಹಿಸಿದ್ದಾರೆ.
“ಈಗಾಗಲೇ ವೈರಲ್ ಆಗಿರುವ ಈ ವಿಡಿಯೋದ ಆಧಾರದ ಮೇಲೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಈ ಕೂಡಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಇಲ್ಲವಾದಲ್ಲಿ DC, SP ಮತ್ತು ಬೈಗುಳ ತಿಂದ ಅಧಿಕಾರಿಯ ವಿರುದ್ಧ KRS ಪಕ್ಷದವರು ಲೋಕಾಯುಕ್ತದಲ್ಲಿ ಕರ್ತವ್ಯಲೋಪದ ಅಡಿಯಲ್ಲಿ ದೂರು ದಾಖಲಿಸಲು ನಾನು ಈ ಮೂಲಕ ಶಿವಮೊಗ್ಗ ಜಿಲ್ಲೆಯ KRS ಪಕ್ಷದ ಮುಖಂಡರಿಗೆ ಸೂಚಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಜಿಲ್ಲೆಯ ಜೆಡಿಎಸ್ ಮತ್ತು ಬಿಜೆಪಿ ನಾಯಕರೂ ಸಹ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.