Monday, January 6, 2025

ಸತ್ಯ | ನ್ಯಾಯ |ಧರ್ಮ

ಹಿರಿಯ ಸಾಹಿತಿ ನಾ ಡಿಸೋಜ ವಿಧಿವಶ

ಹಿರಿಯ ಸಾಹಿತಿ ನಾ. ಡಿಸೋಜ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಜನವರಿ 5ರಂದು ಸಂಜೆ 7:30ಕ್ಕೆ ಅನಾರೋಗ್ಯದ ಕಾರಣ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪೂಜ್ಯ ತಂದೆ ದೈವಾಧೀನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ನಾಳೆ ಮಧ್ಯಾಹ್ನ ಸಾಗರದ ಅವರ ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು ಎಂದು ಅವರ ಪುತ್ರ ನವೀನ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ..

ನಾ. ಡಿಸೋಜ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ೧೯೩೭ರ ಜೂನ್ ೬ರಂದು ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ.ತಂದೆ ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಕಲಿಯುವುದರ ಮೂಲಕ ಡಿಸೋಜ ಅವರ ಸಾಹಿತ್ಯಾಸಕ್ತಿ ಮೊಳಕೆಯೊಡೆಯತೊಡಗಿತ್ತು. ಜೊತೆಗೆ ತಾಯಿ ಹೇಳುತ್ತಿದ್ದ ಜನಪದ ಗೀತೆಗಳು, ಕಥೆಗಳು ಡಿಸೋಜರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ಹೈಸ್ಕೂಲಿನಲ್ಲಿದ್ದಾಗಲೇ ಇವರ ಸಾಹಿತ್ಯಾಸಕ್ತಿಯನ್ನು ಗಮನಿಸಿ, ಬೆಳೆಸಿದವರು ಗೊರೂರು ನರಸಿಂಹಾಚಾರ್ಯರರು.ಶಿವಮೊಗ್ಗದಲ್ಲಿ ಇಂಟರ್‌ಮೀಡಿಯೇಟ್ ಕಾಲೇಜು(ಈಗಿನ ಸಹ್ಯಾದ್ರಿ ಕಾಲೇಜು) ಸೇರಿದರಾದರೂ ಇವರು ಪ್ರತಿಭೆ ತೋರಿಸಿದ್ದು ಕನ್ನಡ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ. ಮೈಸೂರಿಗೆ ಹೋಗಿ ಕಾಲಕಳೆದದ್ದೆಲ್ಲಾ ಸಾರ್ವಜನಿಕ ಪುಸ್ತಕ ಭಂಡಾರಗಳಲ್ಲಿ. ಮಾಸ್ತಿ, ಕುವೆಂಪು, ಅ.ನ.ಕೃ., ಕಾರಂತರು, ಗೋಕಾಕ್, ಗೊರೂರು ಇವರುಗಳಲ್ಲದೆ ಪರ್ಲ್‌ಬಕ್, ಸಾಮರ್ ಸೆಟ್ ಮಾಮ್, ಡಿಕನ್ಸ್ ಮುಂತಾದವರ ಕೃತಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದರು. ಡಿಸೋಜ ಅವರು ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು ಅವರ ವೃತ್ತಿ ಬದುಕಿಗೊಂದು ಆಸರೆಯಾಯಿತು.

ನಾ. ಡಿಸೋಜರವರು ಉದ್ಯೋಗಕ್ಕೆ ಸೇರಿದ್ದು ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಮತ್ತು ದ್ವಿತೀಯ ದರ್ಜೆ ಗುಮಾಸ್ತನಾಗಿ. ನಂತರ ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ ಕಾರ್ಗಲ್, ಮಾಸ್ತಕಟ್ಟೆ, ತೀರ್ಥಹಳ್ಳಿ ಮುಂತಾದೆಡೆಗಳಲ್ಲಿ ಕಾರ್ಯನಿರ್ವಹಿಸಿ ೧೯೯೫ರಲ್ಲಿ ನಿವೃತ್ತಿಹೊಂದಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page