Wednesday, September 10, 2025

ಸತ್ಯ | ನ್ಯಾಯ |ಧರ್ಮ

2008 ಮಾಲೆಗಾಂವ್ ಸ್ಫೋಟ: ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಸಂತ್ರಸ್ತರು

ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಂತ್ರಸ್ತರ ಕುಟುಂಬ ಸದಸ್ಯರು ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಸ್ಫೋಟದಲ್ಲಿ ಮೃತಪಟ್ಟವರ ಆರು ಕುಟುಂಬ ಸದಸ್ಯರು ಸೋಮವಾರ ಈ ಮೇಲ್ಮನವಿ ಸಲ್ಲಿಸಿದ್ದಾರೆ.

ವಿಶೇಷ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸುವಂತೆ ನಿಸಾರ್ ಅಹ್ಮದ್ ಸಯ್ಯದ್ ಬಿಲಾಲ್ ಮತ್ತು ಇತರೆ ಐವರು ತಮ್ಮ ವಕೀಲರಾದ ಮತೀನ್ ಶೇಕ್ ಮೂಲಕ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ, ಮುಂಬೈನಿಂದ 200 ಕಿ.ಮೀ. ದೂರದಲ್ಲಿರುವ ಮಾಲೆಗಾಂವ್ ಪಟ್ಟಣದಲ್ಲಿರುವ ಮಸೀದಿಯ ಸಮೀಪ 2008ರ ಸೆಪ್ಟೆಂಬರ್ 29ರಂದು ಮೋಟರ್‌ಸೈಕಲ್‌ಗೆ ಅಳವಡಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿತ್ತು.

ಈ ಘಟನೆಯಲ್ಲಿ ಆರು ಜನರು ಮೃತಪಟ್ಟಿದ್ದರು ಮತ್ತು 101 ಜನರು ಗಾಯಗೊಂಡಿದ್ದರು. ಘಟನೆ ನಡೆದ 17 ವರ್ಷಗಳ ನಂತರ, ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿ, ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್, ಮಾಜಿ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ನಿರ್ದೋಷಿಗಳೆಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ನ್ಯಾಯಾಲಯವು ಜುಲೈ 31ರಂದು ತೀರ್ಪು ನೀಡಿತ್ತು.

ಈ ತೀರ್ಪಿನ ಬಗ್ಗೆ ಅನೇಕ ಸಾಮಾಜಿಕ ಮತ್ತು ರಾಜಕೀಯ ವಿಮರ್ಶಕರು ಅಸಮಾಧಾನ ವ್ಯಕ್ತಪಡಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page