Thursday, June 20, 2024

ಸತ್ಯ | ನ್ಯಾಯ |ಧರ್ಮ

ರಾಜಕೀಯ ಕುತಂತ್ರಗಳ ಗೆಲುವು, ಸಂವಿಧಾನದ ಸೋಲು

ಕಾನೂನು ಕಟ್ಟಳೆಗಳು ಆಳುವವರನ್ನು ರಕ್ಷಿಸುವ ಸಾಧನಗಳಾಗಿವೆ. ರಾಜಕೀಯ ದ್ವೇಷಕ್ಕೆ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರಕಾರ ಬಳಸಿ ಕೊಳ್ಳುತ್ತಿರುವುದೇ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಚಾರ. ಅದೇ ರೀತಿ ಕಾಂಗ್ರೆಸ್ ಸಹ ಆರೋಪಿಯನ್ನು ರಕ್ಷಿಸಲು ಆಡಳಿತಾಧಿಕಾರವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ಸಂವಿಧಾನಕ್ಕೆ ಮಾಡುವ ದ್ರೋಹ – ಶಶಿಕಾಂತ ಯಡಹಳ್ಳಿ

ಕಾಂಗ್ರೆಸ್ ಸರಕಾರ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರವರನ್ನು ಸಿಬಿಐ ಕುಣಿಕೆಯಿಂದ ಪಾರುಮಾಡಲು ಬಿಜೆಪಿ ಸರಕಾರ ಸಿಬಿಐ ತನಿಖೆಗೆ ಕೊಟ್ಟ ಅನುಮತಿಯನ್ನೇ ವಾಪಸ್ ಪಡೆಯಲು ನವೆಂಬರ್ 24 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಮಾಡಿದೆ. 

“ಡಿಕೆಶಿ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ಸಿಬಿಐ ತನಿಖೆಗೆ ವಹಿಸಿದ್ದರ ಹಿಂದೆ  ರಾಜಕೀಯ ದುರುದ್ದೇಶ ಹಾಗೂ ದ್ವೇಷವಿತ್ತು. ಅದು ರಾಜಕೀಯ ಪ್ರೇರಿತ ಸಂಚಾಗಿತ್ತು. ಕಾನೂನುಬಾಹಿರ ಕ್ರಮವಾಗಿದ್ದು ವಿರೋಧ ಪಕ್ಷವನ್ನು ಕಟ್ಟಿಹಾಕುವ ಷಡ್ಯಂತ್ರವಾಗಿತ್ತು. ಅದಕ್ಕಾಗಿ ಸಿಬಿಐಗೆ ಕೊಟ್ಟ  ತನಿಖಾ ಅನುಮತಿಯನ್ನೇ ಹಿಂಪಡೆಯಲು ನಿರ್ಧರಿಸಲಾಗಿದೆ” ಎಂದು ಸಿಎಂ ಆದಿಯಾಗಿ ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. 

ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಅಲಯನ್ಸ್ ನಾಯಕರು ಕಾಂಗ್ರೆಸ್ಸಿನ ತೀರ್ಮಾನದ ವಿರುದ್ದ ಮುಗಿಬಿದ್ದಿದ್ದಾರೆ. “ಐಟಿ ದಾಳಿಯಲ್ಲಿ ಪತ್ತೆಯಾದ ಹಣವನ್ನು ಆಧರಿಸಿ ಸಿಬಿಐ ತನಿಖೆ ನಡೆಸುತ್ತಿದೆ. ಜೊತೆಗೆ ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯೂ ಜಾರಿಯಲ್ಲಿದೆ. ಈ ಹಂತದಲ್ಲಿ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರಕಾರ ವಾಪಸ್ ಪಡೆಯುವ ನಿರ್ಧಾರ ಕಾನೂನು ಬಾಹಿರವಾಗಿದೆ. ಸಂವಿಧಾನ ವಿರೋಧಿಯಾಗಿದೆ, ಅಕ್ರಮವಾಗಿದೆ, ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಸವಾರಿ ಮಾಡುವ ಕ್ರಮವಾಗಿದೆ. ಇದರ ವಿರುದ್ಧ ಬಿಜೆಪಿ ಬೃಹತ್‌ ಪ್ರತಿಭಟನೆ ಮಾಡುತ್ತದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಗುಡುಗಿದ್ದಾರೆ. ಕುಮಾರಸ್ವಾಮಿಯವರು ಯಥಾಪ್ರಕಾರ ತಮ್ಮ ಸಾಂಪ್ರದಾಯಿಕ ರಾಜಕೀಯ ವಿರೋಧಿಯಾದ ಡಿಕೆಶಿ ಮೇಲೆ ಆರೋಪಗಳ ಅಸ್ತ್ರ ಪ್ರಯೋಗಿಸುತ್ತಲೇ ಇದ್ದಾರೆ. ಇಷ್ಟೆಲ್ಲಾ ಆದ ಮೇಲೆ ಗೋದಿ ಮೀಡಿಯಾಗಳು ಸುಮ್ಮನಿರಲು ಹೇಗೆ ಸಾಧ್ಯ? ಕಾಂಗ್ರೆಸ್ ನಿರ್ಣಯದ ವಿರುದ್ಧ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸುತ್ತಾ ತಮ್ಮ ಮಾಲೀಕರನ್ನು ಸಂತುಷ್ಟ ಪಡಿಸುತ್ತಿದ್ದಾರೆ.

ಎರಡೂ ಕಡೆಯವರ ವಾದಗಳಲ್ಲಿ ಸತ್ಯ ಹಾಗೂ ಸುಳ್ಳು ಎರಡೂ ಅಡಗಿವೆ. ಡಿಕೆ ಶಿವಕುಮಾರರವರ ಘೋಷಿತ ಆಸ್ತಿ ಅದು ಹೇಗೆ 1,400 ಕೋಟಿಗೆ ಏರಿಕೆ ಆಯ್ತು ಅನ್ನುವುದೇ  ನಾಡಿನ ಜನರಿಗೆ ವಿಸ್ಮಯಕಾರಿಯಾಗಿದೆ. ಅವರಿಗೆ ಸಂಬಂಧಿಸಿದ ದೆಹಲಿಯ ಫ್ಲಾಟಲ್ಲಿ 8 ಕೋಟಿಯಷ್ಟು ಲೆಕ್ಕಕ್ಕಿಲ್ಲದ ಹಣ ಐಟಿ ರೇಡಲ್ಲಿ ದೊರಕಿದೆ ಎನ್ನಲಾಗುತ್ತಿದೆ. ಡಿಕೆಶಿ ಮಾಡುವ ವ್ಯವಹಾರ ಅವ್ಯವಹಾರಗಳ ಬಗ್ಗೆ ಜನರಿಗೆ ಗುಮಾನಿ ಇದೆ. ಆದರೂ ಕಾಂಗ್ರೆಸ್ ಪಾಲಿಗೆ ಡಿಕೆಶಿ ಅನಿವಾರ್ಯವಾಗಿದ್ದಾರೆ. ಟ್ರಬಲ್ ಶೂಟರ್ ಆಗಿದ್ದಾರೆ. ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಎರಡೂ ಪಕ್ಷಗಳ ಕಣ್ಣೂ ಡಿಕೆಶಿ ಮೇಲಿದೆ. ಡಿಕೆ ಯವರನ್ನು ಹಗರಣಗಳಲ್ಲಿ ಸಿಕ್ಕಿಸಿ ಜೈಲು ಪಾಲು ಮಾಡಿದರೆ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಕೊಡಬಹುದು ಎಂದು ಬಿಜೆಪಿ ಸರ್ವ ಪ್ರಯತ್ನ ಮಾಡುತ್ತಲೇ ಬಂದಿದೆ. ಐಟಿ ಈಡಿ ಸಿಬಿಐ ಎನ್ನುವ ಕೇಂದ್ರ ಸರಕಾರದ ಅಧೀನದ ತನಿಖಾ ಸಂಸ್ಥೆಗಳನ್ನು ಡಿಕೆಶಿ ಯವರ ಹಿಂದೆ ಬೀಳಿಸಿದೆ. ಇದೆಲ್ಲದರಿಂದ ಹೆದರಿ ಡಿಕೆಶಿ ಬಿಜೆಪಿ ಸೇರಲಿ ಎನ್ನುವ ಒಳ ಆಸೆಯೂ ಬಿಜೆಪಿಯ ಕೇಂದ್ರ ನಾಯಕರಿಗಿದೆ. 

ಅದೇ ರೀತಿ ಡಿಕೆಶಿ ಯವರನ್ನು ಬಿಟ್ಟರೆ ಕಾಂಗ್ರೆಸ್ ಗೆ ಬೇರೆ ಗತಿ ಇಲ್ಲವಾಗಿದೆ. ಕಾಂಗ್ರೆಸ್ಸನ್ನು ಆರ್ಥಿಕವಾಗಿ, ಸಂಘಟನಾತ್ಮಕವಾಗಿ ಕಾಯುತ್ತಿರುವುದೇ ಡಿಕೆ ಶಿವಕುಮಾರ್ ಎನ್ನುವ ಸತ್ಯ ಕಾಂಗ್ರೆಸ್ ಹೈಕಮಾಂಡಿಗೆ ಗೊತ್ತಿದೆ. ಹೀಗಾಗಿ ಡಿಕೆಶಿ ಯವರನ್ನು ಈಡಿ ಸಿಬಿಐ ಇಕ್ಕಳದಿಂದ ಬಿಡಿಸಿಕೊಳ್ಳಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದೆ. ಸಿಬಿಐ ಗೆ ಕೊಟ್ಟ ತನಿಖಾ ಅನುಮತಿಯನ್ನು ವಾಪಸ್ ಪಡೆಯುತ್ತಿದೆ. ರಾಜ್ಯ ಪೋಲೀಸ್ ಅಥವಾ ಲೋಕಾಯುಕ್ತದಿಂದ ತನಿಖೆ ಮುಂದುವರೆಸುತ್ತೇವೆಂದು ಹೇಳಲಾಗುತ್ತಿದೆ. ಸ್ಪೀಕರ್ ಅನುಮತಿ ಇಲ್ಲದೇ, ಅಡ್ವೋಕೇಟ್ ಜನರಲ್ ರವರ ಅಭಿಪ್ರಾಯ ಪರಿಗಣಿಸದೇ ಸಿಬಿಐ ತನಿಖೆಗೆ ಬಿಜೆಪಿ ಸರಕಾರ ಅನುಮತಿ ಇತ್ತಿದ್ದೇ ಕಾನೂನು ಬಾಹಿರ ಎನ್ನುವ ಸಮರ್ಥನೆಯನ್ನೂ ಕಾಂಗ್ರೆಸ್ ಕೊಡುತ್ತಿದೆ. 

ಆದರೆ ಈ ಪ್ರಕರಣದಲ್ಲಿ ಬಿಜೆಪಿಗಾಗಲೀ ಕಾಂಗ್ರೆಸ್ಸಿಗಾಗಲೀ ನಿಜವಾದ ನ್ಯಾಯ ನಿರ್ಣಯ ಬೇಕಿಲ್ಲ. ಸಂವಿಧಾನಾತ್ಮಕ ರೀತಿ ರಿವಾಜುಗಳು ಲೆಕ್ಕಕ್ಕಿಲ್ಲ. ಕೇವಲ ರಾಜಕೀಯ ತಂತ್ರ ಕುತಂತ್ರಗಳೇ ಇಲ್ಲಿ ಮುಖ್ಯವಾಗಿವೆ. ಡಿಕೆಶಿ ಯವರು ಅಕ್ರಮ ಆಸ್ತಿ ಗಳಿಸಿದ್ದರೆ ಅದು ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಾಗಿದ್ದರೆ ಶಿಕ್ಷೆಗೆ ಒಳಗಾಗಬೇಕು ಅನ್ನುವುದು ನಾಡಿನ ಬಹುತೇಕ ಜನರ ಅಪೇಕ್ಷೆ. ಆದರೆ ನಿಷ್ಪಕ್ಷಪಾತ ತನಿಖೆ ಆಗುತ್ತದೆ ಎಂಬುದರ ಮೇಲೆ ಯಾರಿಗೂ ಇಲ್ಲಿ ನಂಬಿಕೆ ಇಲ್ಲ. ಯಾಕೆಂದರೆ ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳು ದೇಶವನ್ನಾಳುವ ಪ್ರಭುತ್ವದ ಆದೇಶದಂತೆ ನಡೆಯುತ್ತಿರುವ ಸಂಸ್ಥೆಗಳು ಎಂದು ಗೊತ್ತಿರುವ ಸಂಗತಿ. ಈಗಾಗಲೇ ದೇಶದ ಬಹುತೇಕ ವಿರೋಧ ಪಕ್ಷಗಳ ನಾಯಕರುಗಳ ಮೇಲೆ ಮಾತ್ರ ಈ ಸಂಸ್ಥೆಗಳು ದಾಳಿ ಮಾಡಿದ್ದೇ ಈ ಆರೋಪಕ್ಕೆ ಸಾಕ್ಷಿ. ಪ್ರಭುತ್ವದ ಗುಲಾಮರಂತೆ ವರ್ತಿಸುವ ಈ ತನಿಖಾ ಸಂಸ್ಥೆಗಳು ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡಿವೆ. ಹೀಗಾಗಿ ಸಮರ್ಥವಾಗಿ ಪ್ರಾಮಾಣಿಕವಾಗಿ ತನಿಖೆ ಮಾಡುತ್ತವೆ ಎಂಬುದರ ಬಗ್ಗೆ ಯಾರಿಗೂ ನಂಬಿಕೆ ಇಲ್ಲ.

ಉದಾಹರಣೆಗೆ, ಮಹಾರಾಷ್ಟ್ರದ ಅಜಿತ್ ಪವಾರ್ ಮೇಲೆ ಎಪ್ಪತ್ತು ಸಾವಿರ ಕೋಟಿ ರೂಪಾಯಿಗಳ ಅವ್ಯವಹಾರದ ಆರೋಪ ಹೊರೆಸಿ ತನಿಖೆ ಮಾಡುತ್ತಿದ್ದ ಇದೇ ಸಂಸ್ಥೆಗಳು ಯಾವಾಗ ಅಜಿತ್ ರವರು ಮಾತೃಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿ ಸೇರಿದರೋ ಆಗಿನಿಂದ ತನಿಖೆ ನಿಂತು ಅಪವಿತ್ರವಾಗಿದ್ದ ವ್ಯಕ್ತಿ ಪವಿತ್ರವಾದರು. ಇದೇ ಮಾನದಂಡ ಬಳಸಿ, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡ ಬಿಜೆಪಿ ಹಲವಾರು ಪಕ್ಷಗಳನ್ನು ಒಡೆದಿದೆ, ಆಪರೇಶನ್ ಕಮಲ ಮಾಡಿ ಸರಕಾರ ರಚಿಸಿದೆ, ವಿರೋಧಿ ಬಣದಲ್ಲಿರುವವರನ್ನು  ಹೆದರಿಸಿ ಪಕ್ಷಾತರ ಮಾಡಿಸಿ ಕೊಂಡಿದೆ.

ಹೀಗಾಗಿ ಮಹಾರಾಷ್ಟ್ರದಂತೆಯೇ ಕರ್ನಾಟಕದಲ್ಲಿ ಮತ್ತೊಬ್ಬ ಏಕನಾಥ ಶಿಂಧೆಯನ್ನೋ, ಅಜಿತ್ ಪವಾರನನ್ನೋ ಹುಟ್ಟು ಹಾಕಿ, ಆಡಳಿತಾರೂಢ ಕಾಂಗ್ರೆಸ್ಸನ್ನು ಇಬ್ಬಾಗವಾಗಿಸಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ತರುವ ಯೋಜನೆ ಬಿಜೆಪಿ ಹೈಕಮಾಂಡ್ ನಲ್ಲಿ ಜೀವಂತವಾಗಿದೆ. ಅದಕ್ಕೆ ಡಿಕೆ ಶಿವಕುಮಾರ್ ಸೂಕ್ತ ವ್ಯಕ್ತಿಯಾಗಿದ್ದಾರೆ. ಡಿಕೆಶಿಗೆ ಹೆದರಿಸಿ, ಆಮಿಷ ತೋರಿಸಿ, ಬ್ಲಾಕ್ಮೇಲಿಸಿ ಕರ್ನಾಟಕದಲ್ಲಿ ಏಕನಾಥ ಶಿಂಧೆ ಪಾತ್ರವನ್ನು ವಹಿಸುವಂತೆ ಮಾಡಲು ಬಿಜೆಪಿ ಈ ಎಲ್ಲಾ ರೀತಿಯ ಹರಸಾಹಸಗಳನ್ನು ಮಾಡುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿನ ಸಂಘಟನಾ ಶಕ್ತಿಯಾಗಿರುವ ಡಿಕೆಶಿಯವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಕಾರ್ಯತತ್ಪರವಾಗಿದೆ. ಡಿಕೆಶಿ ತಿಹಾರ ಜೈಲಿನಲ್ಲಿದ್ದಾಗ ಖುದ್ದು ಸೋನಿಯಾ ಗಾಂಧಿಯವರೇ ಹೋಗಿ ಸಾಂತ್ವನ ಹೇಳಿ ಬಂದಿದ್ದರು. ಈಗ ಡಿಕೆಶಿ ಅಕ್ರಮ ಆಸ್ತಿ ಪ್ರಕರಣ ಆರೋಪದ ಮೇಲೆ ತನಿಖೆ ಮಾಡುತ್ತಿದ್ದ ಸಿಬಿಐಗೆ ಇತ್ತ ಅನುಮತಿಯನ್ನೇ ವಾಪಸ್ ಪಡೆಯುವ ಮೂಲಕ ಡಿಕೆಶಿ ಯವರನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. 

ಎರಡೂ ರಾಷ್ಟ್ರೀಯ ಪಕ್ಷಗಳು ಅಸಂವಿಧಾನಾತ್ಮಕವಾಗಿಯೇ ವರ್ತಿಸುತ್ತಿವೆ. ಆದರೆ ತಮ್ಮದು ಸಂವಿಧಾನ ಬದ್ಧ ಕ್ರಮವೆಂದು ಸಮರ್ಥಿಸಿಕೊಳ್ಳುತ್ತಿವೆ. ರಾಜಕೀಯ ಮೇಲಾಟಕ್ಕೆ ಪ್ರಜಾತಂತ್ರ ಎನ್ನುವುದು ಆಟದ ಮೈದಾನವಾಗಿದೆ. ಕಾನೂನು ಕಟ್ಟಳೆಗಳು ಆಳುವವರನ್ನು ರಕ್ಷಿಸುವ ಸಾಧನಗಳಾಗಿವೆ. ರಾಜಕೀಯ ದ್ವೇಷಕ್ಕೆ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರಕಾರ ಬಳಸಿಕೊಳ್ಳುತ್ತಿರುವುದೇ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಚಾರ. ಅದೇ ರೀತಿ ಕಾಂಗ್ರೆಸ್ ಸಹ ಆರೋಪಿಯನ್ನು ರಕ್ಷಿಸಲು ಆಡಳಿತಾಧಿಕಾರವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ಸಂವಿಧಾನಕ್ಕೆ ಮಾಡುವ ದ್ರೋಹ. ಇದೇ ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳು ಆಡುವ ರಾಜಕೀಯದಾಟ. ಪ್ರಜೆಗಳಿಲ್ಲಿ ಕೇವಲ ಪ್ರೇಕ್ಷಕರು. ಅದಕ್ಕೆ ಹೇಳುವುದು ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಆಳುವ ಜನ ಹೆಚ್ಚು ಸಮಾನರು ಎಂದು.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ-ಮಾಧ‍್ಯಮ, ಪರ್ಯಾಯ ಮಾಧ್ಯಮ, ಹಿಡಿಯಬೇಕಾದ ಹಾದಿ, ಕೊನೆಯ ಮಾತು…

Related Articles

ಇತ್ತೀಚಿನ ಸುದ್ದಿಗಳು