Sunday, October 19, 2025

ಸತ್ಯ | ನ್ಯಾಯ |ಧರ್ಮ

ಕಾಲೇಜಿನಲ್ಲಿ ಬಟ್ಟೆ ಬದಲಿಸುತ್ತಿದ್ದ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್: ಎಬಿವಿಪಿ ನಾಯಕ ಸೇರಿ ಮೂವರ ಬಂಧನ

ಭೋಪಾಲ್: ಮಧ್ಯಪ್ರದೇಶದ ಸರ್ಕಾರಿ ಕಾಲೇಜೊಂದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಅಂಗಸಂಸ್ಥೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ABVP) ಸ್ಥಳೀಯ ನಾಯಕ ಸೇರಿದಂತೆ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಕ್ಯಾಂಪಸ್‌ನಲ್ಲಿ ನಡೆದ ಯುವ ಉತ್ಸವಕ್ಕೂ ಮುನ್ನ ಬಟ್ಟೆ ಬದಲಾಯಿಸುತ್ತಿದ್ದ ಮಹಿಳಾ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಮಾಡಿದ್ದಾರೆನ್ನುವ ಆರೋಪದ ಮೇಲೆ ಈ ಬಂಧನ ನಡೆದಿದೆ.

ಮಂದಸೌರ್ ಜಿಲ್ಲೆಯ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.

ಸಿಸಿಟಿವಿ ಆಧಾರದ ಮೇಲೆ ಬಂಧನ:

ಪ್ರದರ್ಶನಕ್ಕಾಗಿ ಸಿದ್ಧರಾಗುತ್ತಿದ್ದ ವಿದ್ಯಾರ್ಥಿನಿಯರ ಕೊಠಡಿಯೊಳಗೆ ನಾಲ್ವರು ಪುರುಷರು ನುಗ್ಗಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆಯುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂದೇಹಾಸ್ಪದ ಚಟುವಟಿಕೆಗಳನ್ನು ಗಮನಿಸಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಔಪಚಾರಿಕ ದೂರು ದಾಖಲಿಸಿದರು. ಮಂದಸೌರ್ ಪೊಲೀಸರ ಪ್ರಕಾರ, 20 ರಿಂದ 22 ವರ್ಷದೊಳಗಿನ ಉಮೇಶ್ ಜೋಶಿ, ಅಜಯ್ ಗೌಡ್ ಮತ್ತು ಹಿಮಾಂಶು ಬೈರಾಗಿ ಎಂಬ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ನಾಲ್ಕನೇ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಬಂಧಿತರಲ್ಲಿ ಒಬ್ಬನಾದ ಉಮೇಶ್ ಜೋಶಿಯು ಎಬಿವಿಪಿಯ ನಗರ ಕಾರ್ಯದರ್ಶಿಯಾಗಿದ್ದಾನೆ. ಘಟನೆ ಬೆಳಕಿಗೆ ಬಂದ ನಂತರ ಆತನನ್ನು ಸಂಘಟನಾ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ವರದಿಗಳು ಹೇಳಿವೆ.

ಸಂಶಯದ ಮೇರೆಗೆ ಪರಿಶೀಲನೆ’ ಎಂದ ಎಬಿವಿಪಿ ಸಮರ್ಥನೆ

ಈ ನಡುವೆ, ಎಬಿವಿಪಿ ತನ್ನ ಸದಸ್ಯರನ್ನು ಸಮರ್ಥಿಸಿಕೊಂಡಿದ್ದು, ಯಾವುದೇ ದುರ್ನಡತೆಯನ್ನು ನಿರಾಕರಿಸಿದೆ. ವಿದ್ಯಾರ್ಥಿಗಳು ಕೇವಲ “ಸಂಶಯದ ಮೇರೆಗೆ ಪರಿಶೀಲನೆ” ನಡೆಸುತ್ತಿದ್ದರು ಎಂದು ಸಮರ್ಥಿಸಿಕೊಂಡಿದೆ.

ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶಾಲಿನಿ ವರ್ಮಾ ಅವರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ಹೇಳಿಕೆಯಲ್ಲಿ, “ಈ ಸರಳ, ಅನುಮಾನಾಧಾರಿತ ಕೃತ್ಯವನ್ನು ಕೆಲವರು ತಪ್ಪಾಗಿ ಬಿಂಬಿಸಿದ್ದಾರೆ. ಕೆಲವು ವಿದ್ಯಾರ್ಥಿನಿಯರು ಫೋಟೋ ಅಥವಾ ವಿಡಿಯೋ ತೆಗೆದಿರಬಹುದು ಎಂದು ತಪ್ಪಾಗಿ ಭಾವಿಸಿ ಪ್ರಾಂಶುಪಾಲರಿಗೆ ಮಾಹಿತಿ ನೀಡಿದರು.

ಪ್ರಾಂಶುಪಾಲರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಪೊಲೀಸರಿಗೆ ತಿಳಿಸಿದರು. ನಂತರ, ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದು ಅವರ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಿದ್ದಾರೆ, ಆದರೆ ಯಾವುದೇ ಫೋಟೋ, ವಿಡಿಯೋ ಅಥವಾ ಯಾವುದೇ ಅನುಚಿತ ವಸ್ತು ಪತ್ತೆಯಾಗಿಲ್ಲ” ಎಂದು ತಿಳಿಸಿದ್ದಾರೆ.

ಈ ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

https://x.com/ishaliniverma/status/1978827465687720325

Related Articles

ಇತ್ತೀಚಿನ ಸುದ್ದಿಗಳು

You cannot copy content of this page