ಆದಿವಾಸಿಗಳಲ್ಲ, ಚಿತ್ರರಂಗದ ಬಗ್ಗೆಯೇ ಭಯ ಹುಟ್ಟಿಸುವ ‘ವಿಡಿಯೋ’!

“..ಈ ಸಿನಿಮಾವನ್ನು ನೋಡುತ್ತಿರುವಾಗ ಕಾಡಿನ ನಿವಾಸಿಗಳಾದ ಆದಿವಾಸಿಗಳನ್ನು ನರಭಕ್ಷಕರು, ಕ್ರೂರಿಗಳು ಎಂದು ತೋರಿಸಲಾಗಿದೆ. ಕ್ರೂರಿಗಳಂತೆ ಬಿಂಬಿಸಲು ‘ನಾಗರಿಕತೆ’ಯಿಂದ ದೂರವಿರುವ ಸಮುದಾಯಗಳೇ ಆಗಬೇಕೇ?..” ಪತ್ರಕರ್ತರಾದ ನವೀನ್ ಸೂರಿಂಜೆಯವರ ಬರಹದಲ್ಲಿ

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಅವುಗಳಲ್ಲಿ ಕೆಲವು ಪ್ರೇಕ್ಷಕರ ಗಮನ ಸೆಳೆಯುತ್ತವೆ. ಇನ್ನೂ ಕೆಲವು ಸದ್ದಿಲ್ಲದೆ ಬಂದು ಹೋಗುತ್ತವೆ. ಹೊಸ ಪ್ರಯತ್ನಗಳ ಸಾಲಿಗೆ ‘ವಿಡಿಯೋ’ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಯುವಕರೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ಈ ‘ವಿಡಿಯೋ’ ಸಿನಿಮಾದ ಬಗ್ಗೆ ಆಶಾವಾದವಿತ್ತು. ಆದರೆ ಸಿನಿಮಾದಲ್ಲಿ ಆದಿವಾಸಿಗಳನ್ನು ನರಭಕ್ಷಕರು, ಕ್ರೂರಿಗಳು, ಶಿಶುಹತ್ಯೆ ಮಾಡುವವರು ಎಂದು ಬಣ್ಣಿಸಿ ಕಾಡಿನ ನಿವಾಸಿಗಳ ಬಗ್ಗೆ ಪೂರ್ವಾಗ್ರಹ/ ತಪ್ಪು ಕಲ್ಪನೆಯನ್ನು ಬಿತ್ತಲಾಗಿದೆ. ಆದಿವಾಸಿ ಸಮುದಾಯವನ್ನೇ “ನರಭಕ್ಷಕರು” ಎಂದು ಸಾಮಾನ್ಯೀಕರಿಸಿ, ಅದು ಸಮುದಾಯದ ಗುಣಲಕ್ಷಣವೆಂಬ ರೀತಿಯಲ್ಲಿ ಚಿತ್ರಿಸಿದ್ದು, Scheduled Castes and Scheduled Tribes (Prevention of Atrocities) Act, 1989ನ ಸೆಕ್ಷನ್ 3(1)(u), BNS ಸೆಕ್ಷನ್ 196 ಬಗ್ಗೆ ಚಿತ್ರತಂಡಕ್ಕೆ ಅರಿವು ಇಲ್ಲದಂತಿದೆ. ಚಿತ್ರತಂಡ ಇಂತದ್ದೊಂದು ಸೆನ್ಸಿಟಿವಿಟಿಯನ್ನು ಬೆಳೆಸಿಕೊಳ್ಳಬೇಕಿದೆ.

ಶ್ರೀನಿಧಿ ಬೆಂಗಳೂರು ನಿರ್ದೇಶನದ ವಿಡಿಯೋ ಚಲನಚಿತ್ರವು ಹೊಸ ರೀತಿಯ ನಿರೂಪಣೆ, ಸಹಜ ಅಭಿನಯ, ನೈಜ ಶಬ್ದಗಳ ಬಳಕೆ, ಆ್ಯಂಬಿಯಂಟ್ ಸೌಂಡ್ ಮೂಲಕ ಭಯದ ವಾತಾವರಣ ನಿರ್ಮಿಸಿರುವುದು ಸೇರಿದಂತೆ ಹಲವು ಕಾರಣಗಳಿಂದ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಚಿತ್ರಕ್ಕೆ ನಟ ದೀಕ್ಷಿತ್ ಶೆಟ್ಟಿ ಬೆಂಬಲವಾಗಿ ನಿಂತಿದ್ದಾರೆ. ‘ದೀ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ಭರತ್, ಜೀವನ್ ಶಿವಕುಮಾರ್, ತೇಜಶ್, ಪ್ರಿಯಾ ಆಚಾರ ಮೊದಲಾದವರು ಅಭಿನಯಿಸಿದ್ದಾರೆ. ಹನ್ನೆರಡು ಆ್ಯಕ್ಷನ್ ಕ್ಯಾಮೆರಾಗಳನ್ನು ಬಳಸಿಕೊಂಡು ಚಿತ್ರೀಕರಿಸಿರುವುದು, ಸಾಂಪ್ರದಾಯಿಕ ಹಿನ್ನೆಲೆ ಸಂಗೀತಕ್ಕೆ ಬದಲಾಗಿ ಸುತ್ತಲಿನ ನೈಜ ಶಬ್ದಗಳನ್ನೇ ಭಯದ ಸಾಧನವಾಗಿ ಬಳಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಕಥೆಯೂ ಇಂದಿನ ಡಿಜಿಟಲ್ ಜಗತ್ತಿಗೆ ಹತ್ತಿರವಾದದ್ದು. ಜನಪ್ರಿಯ ವ್ಲಾಗರ್‌ಗಳು ಭಯಾನಕವೆಂದು ಹೇಳಲಾಗುವ ಪ್ರದೇಶವೊಂದಕ್ಕೆ ತೆರಳಿ, ಅಲ್ಲಿನ ಅನುಭವವನ್ನು ವ್ಲಾಗ್ ಮಾಡಿ ಪ್ರಸಿದ್ಧರಾಗಬೇಕು ಎಂಬ ಉದ್ದೇಶ ಹೊಂದಿರುತ್ತಾರೆ. ಆದರೆ ಆ ಸ್ಥಳಕ್ಕೆ ಹೋದ ನಂತರ ಎದುರಾಗುವ ಅನುಭವಗಳೇ ಸಿನಿಮಾದ ಕಥೆಯಾಗುತ್ತವೆ.

ಆದರೆ ಈ ಸಿನಿಮಾವನ್ನು ನೋಡುತ್ತಿರುವಾಗ ಕಾಡಿನ ನಿವಾಸಿಗಳಾದ ಆದಿವಾಸಿಗಳನ್ನು ನರಭಕ್ಷಕರು, ಕ್ರೂರಿಗಳು ಎಂದು ತೋರಿಸಲಾಗಿದೆ. ಕಾಡಿನೊಳಗಿನ ಆದಿವಾಸಿಗಳ ಪರಿಚಯವೇ ಇಲ್ಲದವರು ವಿಡಿಯೋ ಸಿನಿಮಾ ನೋಡಿದರೆ, ಆದಿವಾಸಿಗಳ ಮೇಲೆ ಭಯದಿಂದ ಹಲ್ಲೆ ಮಾಡುವ ಸಾಧ್ಯತೆ ಇದೆ. ಸಿನಿಮಾದಲ್ಲಿ ಭಯಾನಕತೆ ಎಂದರೆ ಕಾಡು, ಅನಾಮಿಕ ಜನರು ಮತ್ತು ‘ನಾಗರಿಕತೆ’ಯಿಂದ ದೂರವಿರುವ ಸಮುದಾಯಗಳೇ ಆಗಬೇಕೇ?

ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳನ್ನು ಚಿತ್ರಿಸುವಾಗ ಒಂದು ನಿರ್ದಿಷ್ಟ ರೀತಿಯ ಸಿನೆಮಾ ಭಾಷೆ ರೂಪುಗೊಂಡಿದೆ. ಕಾಡಿನೊಳಗೆ ವಾಸಿಸುವವರು ಎಂದರೆ ವಿಚಿತ್ರರು. ಅವರ ಭಾಷೆ ಎಂದರೆ ಅರ್ಥವಾಗದ ಕೂಗು. ಅವರ ಆಚರಣೆಗಳು ಎಂದರೆ ಮೂಢನಂಬಿಕೆ. ಅವರ ವೇಷಭೂಷಣ ಎಂದರೆ ಭಯ ಹುಟ್ಟಿಸುವ ಶೈಲಿ. ಅವರ ಬದುಕು ಎಂದರೆ ಮುಖ್ಯವಾಹಿನಿಯ ಸಮಾಜಕ್ಕೆ ವಿರುದ್ಧವಾದ ಯಾವುದೋ ‘ಅಪರಿಚಿತ’ ಜಗತ್ತು. ಅವರು ಮನುಷ್ಯರನ್ನೇ ತಿನ್ನುತ್ತಾರೆ, ಮನುಷ್ಯರನ್ನು ದೇವರಿಗೆ ಬಲಿ ಕೊಡುತ್ತಾರೆ ಎಂಬ ಚಿತ್ರಣವನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತದೆ. ವಿಡಿಯೋ ಸಿನಿಮಾವು ಅಂತಹ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ.

ಇದು ಕೇವಲ ವಿಡಿಯೋ ಸಿನಿಮಾದ ಸಮಸ್ಯೆಯಲ್ಲ. ಇಂತಹ ಚಿತ್ರಣಗಳು ಪದೇಪದೇ ಪುನರಾವರ್ತನೆಯಾದಾಗ, ಒಂದು ಸಮುದಾಯದ ಬಗ್ಗೆ ಸಮಾಜದ ಕಲ್ಪನೆಯನ್ನೇ ಅವು ರೂಪಿಸುತ್ತವೆ. ಹಾಗಾಗಿ ತಪ್ಪು ಕಲ್ಪನೆಯಿಂದ ಆದಿವಾಸಿಗಳ ಹತ್ಯೆಗಳು ಪದೇ ಪದೇ ನಡೆಯುತ್ತಿದೆ. ಊಟ ಕೇಳಲು ಬಂದ ಆದಿವಾಸಿಯನ್ನು ಕಳ್ಳನೆಂದು ಕೇರಳದಲ್ಲಿ ಹತ್ಯೆ ಮಾಡಿದ್ದೂ ಇಂತಹ ಪೂರ್ವಾಗ್ರಹಗಳ ಬಿತ್ತನೆಯಿಂದಲೇ ! ವಿಡಿಯೋ ಸಿನಿಮಾ ಕೂಡಾ ಇಂತದ್ದೇ ಕೃತ್ಯದ ಅದೃಶ್ಯ ಅರೋಪಿ !

ಆದಿವಾಸಿಗಳ ಕಾಡಿನೊಳಗಿನ ಶಾಲೆಗಳು ಮುಚ್ಚುತ್ತಿವೆ. ಕಾಡಿನೊಳಗಿನ ಅಂಗನವಾಡಿಗಳಿಗೆ ಶಿಕ್ಷಕರೇ ಬರುತ್ತಿಲ್ಲ. ಅಂಗನವಾಡಿ ಶಿಕ್ಷಕರನ್ನು ಒದಗಿಸಿ ಎಂದು ಕರ್ನಾಟಕದ ಆದಿವಾಸಿಗಳು ಮನವಿ ಕೊಡುತ್ತಲೇ ಇದ್ದಾರೆ ಎನ್ನುವುದು ವಾಸ್ತವ. ಆದರೆ ವಿಡಿಯೋ ಸಿನಿಮಾದಲ್ಲಿ ಕಾಡಿನೊಳಗಿನ ಶಾಲೆಯ ಪುಟ್ಟ ಮಕ್ಕಳನ್ನು ಆದಿವಾಸಿಗಳೇ ಬಲಿ ಕೊಟ್ಟು, ಅವರ ಮಾಂಸವನ್ನು ತಿನ್ನುತ್ತಾರೆ. ಶಾಲೆ ಎನ್ನುವುದು ಆದಿವಾಸಿಗಳಿಗೆ ಮಾಟ ಮಂತ್ರ, ನರಭಕ್ಷಣೆಯ ಸ್ಥಳ ಎಂದು ವಿಡಿಯೋ ಸಿನಿಮಾ ಪೂರ್ತಿ ಹೇಳುತ್ತಲೇ ಇರುತ್ತದೆ.

ಆದಿವಾಸಿಗಳಿಗೆ ಕಾಡು ಎಂಬುದು ಎಂದೂ ಭಯಾನಕ ಸ್ಥಳವಲ್ಲ. ಅದು ಅವರ ಮನೆ. ಬೆಟ್ಟ, ನದಿ, ಮರ, ಮಣ್ಣು, ಪ್ರಾಣಿ, ಹಕ್ಕಿ ಇವೆಲ್ಲ ಅವರ ಬದುಕಿನ ಭಾಗ. ಆದರೆ ನಗರದಿಂದ ಕಾಡಿಗೆ ಹೋಗುವ ಸಿನಿಮಾದ ಪಾತ್ರಗಳಿಗೆ ಅದು ‘ಹಾರರ್ ಲೊಕೇಶನ್’ ಆಗುತ್ತದೆ. ಪ್ರೇಕ್ಷಕರಿಗೆ ಭಯ ಹುಟ್ಟಿಸುವ ಸಲುವಾಗಿ ಆ ಭೂಭಾಗದ ಮೂಲ ನಿವಾಸಿಗಳ ಸಂಸ್ಕೃತಿ, ಆಚರಣೆ ಅಥವಾ ಗುರುತನ್ನು ಭಯದ ಸಂಕೇತವಾಗಿ ಬಳಸಿದರೆ, ಅಲ್ಲಿ ಕಲಾತ್ಮಕ ಸ್ವಾತಂತ್ರ್ಯ ಮತ್ತು ಪೂರ್ವಾಗ್ರಹದ ನಡುವಿನ ಗಡಿ ಮಸುಕಾಗುತ್ತದೆ.

ಭಾರತದ ಆದಿವಾಸಿ ಸಮುದಾಯಗಳು ಅಪಾಯಕ್ಕೆ ಸಿಲುಕಿದ ಅಪರಿಚಿತರಿಗೆ ಸಹಾಯಹಸ್ತಚಾಚುವ ಸಹಜ ತಾಯ್ತನದ ಗುಣವನ್ನು ಹೊಂದಿದೆ. ಆ ಕಾರಣಕ್ಕಾಗಿಯೇ ಆದಿವಾಸಿಗಳನ್ನು ನಕ್ಸಲ್ ಬೆಂಬಲಿಗರೆಂದು ಜೈಲಿಗೆ ಹಾಕಲಾಗುತ್ತದೆ. ಮನೆಗೆ ಬಂದವರಿಗೆ ಊಟ ಹಾಕಿದ್ದೇ ಆದಿವಾಸಿಗಳು ಮಾಡಿದ ಅಪರಾಧವಾಗಿ ನಕ್ಸಲ್ ಹಣೆಪಟ್ಟಿಯೊಂದಿಗೆ ಜೈಲಿಗೆ ಸೇರಿದ ನೂರಾರು ಉದಾಹರಣೆಗಳಿವೆ. ಆದರೆ ವಿಡಿಯೋ ಸಿನಿಮಾದಲ್ಲಿ ಸಹಾಯ ಕೇಳಿಕೊಂಡು ಬರುವ ನಗರದ ಯೂಟ್ಯೂಬರ್ ಗೆ ಸಹಾಯ ನೀಡುವ ಭರವಸೆ ನೀಡಿ ಕೊಲ್ಲಲಾಗುತ್ತದೆ. ಮಗುವನ್ನು ಕೊಂದು ತಿಂದರೆ ತನ್ನ ಲೈಂಗಿಕ ಶಕ್ತಿ ವೃದ್ದಿಯಾಗುತ್ತದೆ ಎಂಬ ನಂಬಿಕೆಯೂ ಆದಿವಾಸಿಗಳಲ್ಲಿ ಇದೆ ಎಂದು ಸಿನಿಮಾ ಹೇಳುತ್ತದೆ‌.

ಒಂದು ಸಮುದಾಯದ ಸಂಸ್ಕೃತಿಯನ್ನು ಕೇವಲ ಭಯ ಹುಟ್ಟಿಸುವ ಹಿನ್ನೆಲೆಯಾಗಿ ಬಳಸಿದರೆ, ಅವರ ನಿಜವಾದ ಬದುಕು ಕಾಣೆಯಾಗುತ್ತದೆ. ಅವರ ಇತಿಹಾಸ ಕಾಣೆಯಾಗುತ್ತದೆ. ಅವರ ಭೂಮಿಯ ಹಕ್ಕಿನ ಹೋರಾಟ ಕಾಣೆಯಾಗುತ್ತದೆ. ಅರಣ್ಯ ಹಕ್ಕುಗಳ ಪ್ರಶ್ನೆ ಕಾಣೆಯಾಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವ ಸ್ಥಳಾಂತರ ಕಾಣೆಯಾಗುತ್ತದೆ. ಗಣಿಗಾರಿಕೆ, ಅರಣ್ಯ ನಾಶ, ಭೂಸ್ವಾಧೀನ, ಬಡತನ, ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆಗಳು ಕಾಣೆಯಾಗುತ್ತವೆ. ಅದರ ಬದಲಿಗೆ ಅವರ ಮುಖಕ್ಕೆ ಭಯದ ಬಣ್ಣ ಬಳಿದುಬಿಟ್ಟರೆ, ಪ್ರೇಕ್ಷಕರಿಗೆ ಅವರ ಬಗ್ಗೆ ಉಳಿಯುವುದು ಭಯ ಮಾತ್ರ. ಬದುಕಿಗಾಗಿ, ಬದುಕಿನ ಹಕ್ಕಿಗಾಗಿ ಹೋರಾಡುತ್ತಿರುವ ಭಾರತದ/ಕರ್ನಾಟಕದ ಆದಿವಾಸಿಗಳ ಬಗ್ಗೆ ಇಂತದ್ದೊಂದು ಭಯವನ್ನು ಸೃಷ್ಟಿಸಲಾಗಿದೆ.

ಆದಿವಾಸಿ ಸಮುದಾಯದ ಬಗ್ಗೆ ಸಿನಿಮಾ ಮಾಡಬಾರದು ಎಂಬುದು ಇದರ ಅರ್ಥವಲ್ಲ. ಬದಲಾಗಿ, ಅವರ ಬಗ್ಗೆ ಸಿನಿಮಾ ಮಾಡುವಾಗ ಅವರ ದೃಷ್ಟಿಕೋನವೂ ಸಿನಿಮಾದೊಳಗೆ ಇರಬೇಕು ಎಂಬುದಷ್ಟೇ. ನಗರ ಯೂಟ್ಯೂಬರ್ ಗಳು ಕಾಡಿಗೆ ಹೋಗಿ ಅಲ್ಲಿ ಭಯಾನಕ ಅನುಭವ ಎದುರಿಸುವುದು ಒಂದು ಕಥೆ. ಅದೇ ಕಾಡಿನೊಳಗೆ ಬದುಕುತ್ತಿರುವ ವ್ಯಕ್ತಿಯ ದೃಷ್ಟಿಯಲ್ಲಿ ಆ ಕಾಡು ಹೇಗಿದೆ ಎಂಬುದು ಮತ್ತೊಂದು ಕಥೆ. ಈ ಎರಡೂ ಕಥೆಗಳು ಒಂದೇ ಅಲ್ಲ.

ಸಿನಿಮಾದ ತಾಂತ್ರಿಕ ಪ್ರಯೋಗಗಳನ್ನು ಮೆಚ್ಚುವುದರ ಜೊತೆಗೆ, ಸಿನಿಮಾ ಯಾರನ್ನು ಹೇಗೆ ಪ್ರತಿನಿಧಿಸುತ್ತದೆ ಎಂಬ ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ. ಕೇವಲ ಉತ್ತಮ ಕ್ಯಾಮೆರಾ, ಹೊಸ ನಿರೂಪಣೆ ಅಥವಾ ಭಯ ಹುಟ್ಟಿಸುವ ಶಬ್ದಗಳಿಂದ ಸಿನಿಮಾ ಹೊಸದಾಗುವುದಿಲ್ಲ. ಯುವ ಸಮುದಾಯದ ಪ್ರಯೋಗ ಎಂಬ ಕಾರಣವಷ್ಟೇ ಮುಖ್ಯವಾಗುವುದಿಲ್ಲ. ಅದರ ದೃಷ್ಟಿಕೋನವೂ ಸಂವೇದನೆಯಿಂದ ಕೂಡಿರಬೇಕು.

ಒಂದು ಸಮುದಾಯದ ಸಂಸ್ಕೃತಿ ನಮಗೆ ಅಪರಿಚಿತವಾಗಿದೆ ಎಂದರೆ ಅದು ಭಯಾನಕವಾಗುವುದಿಲ್ಲ. ನಮಗೆ ಅರ್ಥವಾಗುವುದಿಲ್ಲ ಎಂದರೆ ಅದು ಕ್ರೂರವಾಗಿರುವುದಿಲ್ಲ. ನಮ್ಮ ಜೀವನಶೈಲಿಗಿಂತ ಭಿನ್ನವಾಗಿದೆ ಎಂದರೆ ಅದು ವಿಚಿತ್ರವಾದುದಲ್ಲ ಎಂಬುದನ್ನು ಸಿನಿಮಾ ತಂಡ ಅರಿತುಕೊಳ್ಳಬೇಕು.

ಆದಿವಾಸಿಗಳ ಬದುಕು ‘ಹಾರರ್ ಕಂಟೆಂಟ್’ ಅಲ್ಲ. ಅದು ಭಾರತದ ಬಹುಸಾಂಸ್ಕೃತಿಕ ಬದುಕಿನ ಒಂದು ಭಾಗ. ಅವರ ಕಾಡು ನಮ್ಮ ಸಿನೆಮಾಕ್ಕೆ ಕೇವಲ ಭಯ ಹುಟ್ಟಿಸುವ ಲೊಕೇಶನ್ ಅಲ್ಲ. ಅದು ಅವರ ಮನೆ. ಅವರ ಸಂಸ್ಕೃತಿ ನಮ್ಮ ಮನರಂಜನೆಯ ವಸ್ತು ಮಾತ್ರವಲ್ಲ. ಅದು ಅವರ ಅಸ್ತಿತ್ವ.

ಆದ್ದರಿಂದ ‘ವಿಡಿಯೋ’ ಸಿನಿಮಾ ಗೆಲ್ಲುವುದಕ್ಕಿಂತಲೂ ದೊಡ್ಡ ಸವಾಲು ಮುಂದೆ ಇದೆ.

ಭಯಾನಕತೆಯನ್ನು ತೋರಿಸುವಾಗಲೂ, ಮನುಷ್ಯನನ್ನು ಅವನ ಪೂರ್ವಾಗ್ರಹಗಳಿಂದ ಮುಕ್ತವಾಗಿ ನೋಡುವ ಸಿನಿಮಾ ಭಾಷೆಯನ್ನು ರೂಪಿಸುವುದು ಮುಖ್ಯ. ಮುಂದಿನ ಸಿನಿಮಾದಲ್ಲಿ ವಿಡಿಯೋ ತಂಡ ಇಂತದ್ದೊಂದು ಅರಿವಿನೊಂದಿಗೆ ಯಶಸ್ವಿಯಾಗಲಿ.

Related Articles

ಇತ್ತೀಚಿನ ಸುದ್ದಿಗಳು