Home ರಾಜ್ಯ ಕೊಪ್ಪಳ ವಿಜಯೇಂದ್ರ ಪ್ರಧಾನಿ ಮೋದಿ ಮನೆ ಮುಂದೆ ಹೋಗಿ ಪ್ರತಿಭಟಿಸಲಿ: ಸಚಿವ ಶಿವರಾಜ್ ತಂಗಡಗಿ

ವಿಜಯೇಂದ್ರ ಪ್ರಧಾನಿ ಮೋದಿ ಮನೆ ಮುಂದೆ ಹೋಗಿ ಪ್ರತಿಭಟಿಸಲಿ: ಸಚಿವ ಶಿವರಾಜ್ ತಂಗಡಗಿ

0

ಕೊಪ್ಪಳ: ಯೂರಿಯಾ ಕೊರತೆ ಕುರಿತು ತುಮಕೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಧಾನಿ ಮೋದಿ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲಿ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಸವಾಲು ಹಾಕಿದ್ದಾರೆ.

ಮಂಗಳವಾರ (ಜುಲೈ 29) ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರಿಗೆ ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ? ಅವರು ತುಮಕೂರಿನಲ್ಲಿ ಪ್ರತಿಭಟನೆ ಮಾಡುವ ಬದಲು, ವಿಮಾನದಲ್ಲಿ ದೆಹಲಿಗೆ ಹೋಗಿ ಪ್ರಧಾನಿ ಅವರ ಬಳಿ ಕುಳಿತು ಕೇಳಲಿ. ನಮ್ಮ ಬಗ್ಗೆ ಮಾತನಾಡುವ ಬಿಜೆಪಿ ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ? ಯಾವ ಮುಖ ಇಟ್ಟುಕೊಂಡು ಅವರು ನಮ್ಮ ಬಗ್ಗೆ ಮಾತನಾಡುತ್ತಾರೆ?” ಎಂದು ವಾಗ್ದಾಳಿ ನಡೆಸಿದರು.

“ಬಿಜೆಪಿಗೆ ಸರ್ಕಾರದ ವ್ಯವಸ್ಥೆ ಗೊತ್ತಿಲ್ಲ. ಯೂರಿಯಾ ಪೂರೈಕೆ ಮಾಡುವುದು ಯಾರು? ರಾಜ್ಯ ಸರ್ಕಾರವೇ? ಕೇಂದ್ರ ಸರ್ಕಾರವೇ? ಕರ್ನಾಟಕದಲ್ಲಿ ಯೂರಿಯಾ ಉತ್ಪಾದನೆ ಇದೆಯಾ? ಈ ವರ್ಷ ರಾಜ್ಯದಲ್ಲಿ ಒಂದೂವರೆ ತಿಂಗಳು ಬಿತ್ತನೆ ಬೇಗ ಆಗಿದೆ. ಆಗಸ್ಟ್‌ನಲ್ಲಿ ಬರಬೇಕಾದ ಕೋಟಾ ಇನ್ನೂ ಇದೆ” ಎಂದು ತಂಗಡಗಿ ಸ್ಪಷ್ಟಪಡಿಸಿದರು.

“ಬಿಜೆಪಿ ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದೆ”

“ಬಿಜೆಪಿ ರಾಜ್ಯದ ಜನರನ್ನು ದಾರಿ ತಪ್ಪಿಸುವ, ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅವರು ಹೇಳಿದ್ದನ್ನು ನಂಬಬೇಡಿ, ಅವರು ಸುಳ್ಳು ಹೇಳಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿ ಮತ ಕದ್ದು ಅಧಿಕಾರಕ್ಕೆ ಬಂದಿದ್ದಾರೆ” ಎಂದು ತಂಗಡಗಿ ಆರೋಪಿಸಿದರು.

“ಮಳೆ ಬೇಗ ಬಂದಿದೆ, ಯೂರಿಯಾ ಬೇಕು ಎಂದು ವರದಿ ಕೊಟ್ಟರೂ ಪೂರೈಕೆ ಮಾಡಿಲ್ಲ. ರೈತರ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು. ನಾವು ರೈತರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತೇವೆ. ರೈತರಲ್ಲಿ ಮನವಿ ಮಾಡುತ್ತೇನೆ. ಒಂದು ದಿನ ತಡವಾದರೂ ರೈತರಿಗೆ ಗೊಬ್ಬರ ಕೊಡುತ್ತೇವೆ. ಜಿಲ್ಲೆಯ ಗೊಬ್ಬರ ಬೇಡಿಕೆ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ಎಲ್ಲಾ ರೈತರಿಗೂ ಗೊಬ್ಬರ ಕೊಡುವ ಕೆಲಸ ಮಾಡುತ್ತೇವೆ. ರೈತರು ಆತಂಕ ಪಡುವುದು ಬೇಡ. ಗೊಬ್ಬರದ ವಿಷಯ ಇಟ್ಟುಕೊಂಡು ರಾಜಕಾರಣ ಮಾಡುವುದು ಬಿಜೆಪಿಯವರು, ಸುಳ್ಳು ಹೇಳಿ ರಾಜಕಾರಣ ಮಾಡುತ್ತಿದ್ದಾರೆ” ಎಂದು ಅವರು ಹೇಳಿದರು.

ಕೊಪ್ಪಳ ಬಂದ್ ಕುರಿತು ಪ್ರತಿಕ್ರಿಯೆ

ಆಗಸ್ಟ್ 1 ರಂದು ಕೊಪ್ಪಳ ಬಂದ್ ವಿಚಾರವಾಗಿ ಮಾತನಾಡಿದ ಅವರು, “ಮಾಜಿ ಶಾಸಕ ಬಸವರಾಜ ದಡೆಸೂಗೂರು ಅವರಿಗೆ ಏನೂ ಗೊತ್ತಿದೆ? ತಮ್ಮ ಕಾರಿಗೆ ತಾವೇ ಕಲ್ಲು ಹೊಡೆದುಕೊಂಡು, ಕಲ್ಲು ಹೊಡೆದರು ಎಂದು ಹೇಳುತ್ತಾರೆ. ಗನ್‌ಮ್ಯಾನ್ ಕೊಡುವುದಕ್ಕೂ ಕೆಲವು ನಿಯಮಾವಳಿಗಳಿವೆ. ಅದನ್ನು ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ” ಎಂದು ತಿಳಿಸಿದರು.

You cannot copy content of this page

Exit mobile version